ಬಾಳೆಹೊನ್ನೂರು: ಭೌತಿಕ ಬದುಕು ಸಮೃದ್ಧಿಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಲಿ- ಶ್ರೀ ರಂಭಾಪುರಿ ಜಗದ್ಗುರುಗಳು

Source: balanagoudra | By Arshad Koppa | Published on 30th August 2016, 8:00 AM | State News |

ರಂಭಾಪುರಿ ಪೀಠ (ಬಾಳೆಹೊನ್ನೂರು) ಆಗಸ್ಟ್- 29: ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಸಂಸ್ಕೃತಿ ಸಂಸ್ಕಾರದಿಂದ ದೂರ ಇರುವಂತಾಗಬಾರದು. ಸತ್ಯದ ತಳಹದಿಯ ಮೇಲೆ ಸೈದ್ಧಾಂತಿಕ ನಿಲುವು ಗಟ್ಟಿಗೊಂಡಾಗ ಆಂತರಿಕ ಬದುಕು ಪರಿಶುದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
    ಅವರು ಶ್ರಾವಣ ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ(ರಿ) ಪ್ರಸಾರಾಂಗದಿಂದ ಆಯೋಜಿಸಿದ ಶ್ರಾವಣ ವಿಶೇಷ ಉಪನ್ಯಾಸ ಮಾಲೆ ಸಮಾರಂಭದ ಸಾನ್ನಿಧ್ಯ  ವಹಿಸಿ ಆಶೀರ್ವಚನ ನೀಡುತ್ತಿದ್ದರು.
    ಜಗತ್ತಿನ ಒಳಿತಿಗೆ ಹಿಂದಿನ ಇತಿಹಾಸದ ಅರಿವು ಇರಬೇಕು. ವರ್ತಮಾನ ಭವಿಷ್ಯತ್ತುಗಳಿಗೆ ಹಿಂದಿನ ಇತಿಹಾಸ ದಾರಿದೀಪ. ಅತಿಶತ್ರುಗಳನ್ನು ಹೇಗಾದರೂ ನಿಯಂತ್ರಿಸಬಹುದು. ಆದರೆ ಮತಿಶತ್ರುಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ. ಅಧಿಕಾರ ದಾಹ, ಸಂಪತ್ತಿನ ಅಮಲು ಮತ್ತು ಅಹಂಕಾರ ಇವು ಮೂರು ಮನುಷ್ಯನನ್ನು ದಾರಿ ತಪ್ಪಿಸುತ್ತದೆ. ಈ ಸಂದರ್ಭದಲ್ಲಿ ಜಾಗೃತಿಯಿಂದ ಹೆಜ್ಜೆ ಹಾಕಿದಾಗ ಶಾಂತಿಯ ಬದುಕು ಪಡೆಯಲು ಸಾಧ್ಯವಾಗುತ್ತದೆ. ಮಾಡುವ ಕೆಲಸ ಕಾರ್ಯಗಳು ಬೆಟ್ಟದಷ್ಟಿವೆ ಮೂಲ ನಂಬಿಕೆಗಳನ್ನು ಮೂಢ ನಂಬಿಕೆಗಳೆಂದು ಜರಿಯದೇ ಸದ್ವರ್ತನೆಯಿಂದ ನಡೆಯುವುದು ಸುಖ ಸಂತೋಷದ ಜೀವನಕ್ಕೆ ಹೆದ್ದಾರಿ. ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರ. ಧರ್ಮ ಸಂವಿಧಾನಗಳು ಭಾರತೀಯರ ಬದುಕಿಗೆ ಸಜ್ಜನಿಕೆಯ ಜೀವ ತುಂಬಿವೆ ಎಂದರು. 
    ತೆಂಡೆಕೆರೆ ಬಾಳೆಹೊನ್ನೂರು ಖಾಸಾಮಠದ ಗಂಗಾಧರ ಶಿವಾಚಾರ್ಯ ಸ್ವಾಮಿಗಳು “ಶ್ರೀ ಜಗದ್ಗುರು ರೇಣುಕಾಚಾರ್ಯರ ಸತ್ಕ್ರಾಂತಿ”ಯ ಚಿಂತನಗಳನ್ನು ಮನವರಿಕೆ ಮಾಡಿದರು. ವಿದ್ವಾನ್ ರಾಜಶೇಖರ ಕುಲಕರ್ಣಿ ಅವರು ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಆದಿ ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿ ಎಲ್ಲ ಕ್ರಾಂತಿಗಳಿಗೆ ಮೂಲ ಗಂಗೋತ್ರಿಯಾಗಿದೆ ಎಂದರು. ಶ್ರಾವಣ ಮಾಸದ ಅಂಗವಾಗಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಅದರಲ್ಲಿ ಉತ್ತೀರ್ಣರಾದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಪ್ಟಂಬರ್ 2016 “ರಂಭಾಪುರಿ ಬೆಳಗು” ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಮತ್ತು ಪ್ರಾರ್ಥನಾ ಗೀತೆ ಜರುಗಿತು. ಕುಮಾರ ಪಂಚಾಕ್ಷರ ಗವಾಯಿಗಳು ಸಂಗೀತ ಸುಧೆ ಹರಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. 
 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...