ದಕ ಜಿಲ್ಲೆಯ ಮೂಡುಕೊಣಾಜೆಯಲ್ಲಿ ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ಪತ್ತೆ

Source: SO News | Published on 12th September 2023, 10:06 PM | Coastal News | Don't Miss |

ಮೂಡುಬಿದರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ಸಮೀಪ ಇರುವ ಮೂಡುಕೊಣಾಜೆಯ ಬೃಹತ್ ಶಿಲಾಯುಗದ ನಿವೇಶನದಲ್ಲಿನ ಕಲ್ಮನೆ ಸಮಾಧಿಗಳ ಒಳಭಾಗದಲ್ಲಿ ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ಪತ್ತೆಯಾಗಿವೆ. 

ಹರಪ್ಪಾ ನಾಗರೀಕತೆ ಅಥವಾ ತಾಮ್ರ ಶಿಲಾಯುಗ ಸಂಸ್ಕತಿಯ ನಂತರ, ಬೃಹತ್ ಶಿಲಾಯುಗದ ಪದರೀಕೃತ ಸನ್ನಿವೇಶದಲ್ಲಿ ದೊರೆತ ಈ ಶಿಲ್ಪಗಳು ಭಾರತೀಯ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನದ ಮಹತ್ವಪೂರ್ಣ ಪ್ರಾಚ್ಯಾವಶೇಷಗಳಾಗಿವೆ ಹಾಗೂ ತುಳುನಾಡಿನ ಮಾತೃಮೂಲೀಯ ಸಾಮಾಜಿಕವ್ಯವಸ್ಥೆಯ ಹಾಗೂ ದೈವಾರಾಧನೆಯ ಪ್ರಾಚೀನತೆಯ ಅತ್ಯಂತ ವಿಶ್ವಾಸಾರ್ಹ ದಾಖಲೆಗಳಾಗಿವೆ ಎಂದು ಪ್ರೊ. ಟಿ. ಮುರುಗೇಶಿ, ನಿವೃತ್ತ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ವಿಭಾಗ, ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು, ಶಿರ್ವ, ತಿಳಿಸಿದ್ದಾರೆ.

ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ, ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಕಾಮಧೇನು ಅಥವಾ ಮಾತೃದೇವತೆಯ ಎರಡು ಶಿಲ್ಪಗಳು ಪತ್ತೆಯಾಗಿವೆ. ಕೈಯಿಂದ ತಯಾರಿಸಿದ ಈ ಶಿಲ್ಪಗಳು, ಮಾನವ ದೇಹ ಮತ್ತು ನಂದಿಯ ಮುಖವನ್ನು ಹೊಂದಿವೆ. ಅವುಗಳ ಸ್ತ್ರೀತತ್ವದ ಸಂಕೇತವಾಗಿ ಎರಡು ಮೊಲೆಗಳನ್ನು ಅಂಟಿಸಲಾಗಿದೆ. ಇಂತಹ ಏಕೈಕ ಶಿಲ್ಪ ಕೇರಳದ ಮಲಪ್ಪುಜದ ಬೃಹತ್ ಶಿಲಾಯುಗದ ಕುಂಭ ಸಮಾಧಿಯಲ್ಲಿ ದೊರೆತಿದೆ. ಇದರ ಹೊರತು ಭಾರತದ ಯಾವುದೇ ನಿವೇಶನದಲ್ಲಿ ಇಂತಹ ಶಿಲ್ಪಗಳು ಪತ್ತೆಯಾಗಿಲ್ಲ. ಆದರೆ, ಇಂತಹ ಶಿಲ್ಪಗಳು ಈಜಿಪ್ಟ್ ನಲ್ಲಿ ವ್ಯಾಪಕವಾಗಿ ಕಂಡುಬಂದಿವೆ.

ಈ ಶಿಲ್ಪಗಳ ಜೊತೆಯಲ್ಲಿ ಒಂದು ಮಾತೃದೇವತೆಯ ಶಿಲ್ಪ, ಎರಡು ನವಿಲಿನ ಶಿಲ್ಪಗಳು, ಒಂದು ಮಾತೃ ದೇವತೆಯ ಕೈಯ ಭಾಗ ಹಾಗೂ ಒಂದು ಕುದುರೆ? ಮತ್ತು ಒಂದು ಖಚಿತವಾಗಿ ಗುರುತಿಸಲಾಗದ ವಸ್ತು ಕಂಡು ಬಂದಿದೆ. ಇವುಗಳ ಜೊತೆಯಲ್ಲಿ ಕಬ್ಬಿಣದ ತುಣುಕುಗಳು ಮತ್ತು ಎಲುಬಿನ ಚೂರುಗಳು ಪತ್ತೆಯಾಗಿವೆ. ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ದೊರೆತಿರುವ ಈ ಶಿಲ್ಪಗಳು ಕರ್ನಾಟಕ ಮತ್ತು ಕೇರಳದಲ್ಲಿನ ಮಾತೃಮೂಲೀಯ ಸಂಸ್ಕೃತಿಯ ಪ್ರಬಲ ಸಾಕ್ಷ್ಯಗಳಾಗಿವೆ. ಈ ಶಿಲ್ಪ ಲಕ್ಷಣಗಳು ಇಲ್ಲಿನ ದೈವಾರಾಧನೆಯ ಶಿಲ್ಪಗಳ ಅತ್ಯಂತ ಪ್ರಾಚೀನ ಪುರಾವೆಗಳಾಗಿವೆ. ಈ ಶಿಲ್ಪಗಳ ಕಾಲಮಾನವನ್ನು ಕನಿಷ್ಠ ಕ್ರಿ,ಪೂ 800 ಅಥವಾ 700 ಎಂದು ನಿರ್ಧರಿಸಬಹುದಾಗಿದ್ದು, ಇದು ಇಲ್ಲಿನ ದೈವಾರಾಧನೆಯ ಪ್ರಾಚೀನತೆಗೂ ಸಾಕ್ಷಿಯಾಗಿದೆ.
ಈ ಮಹತ್ತರ ಸಂಶೋಧನೆಯಲ್ಲಿ ಭಾಗವಹಿಸಿದ ಶ್ರೇಯಸ್ ಮಣಿಪಾಲ್, ಗೌತಮ್ ಬೆಳ್ಮಣ್, ಶ್ರೇಯಸ್ ಬಂಟಕಲ್, ರವೀಂದ್ರ ಕುಶ್ವಾ, ಕಾರ್ತೀಕ್, ಕು.ಅಕ್ಷತಾ ಮತ್ತು ಪ್ರಜ್ಞಾ ಸಹಕರಿಸಿದ್ದಾರೆ.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...