ಕನ್ನಡ ಭಾಷಾಭಿಮಾನ ಓಕೆ; ಉರ್ದುವಿನ ಮೇಲೆ ದುರಾಭಿಮಾನ ಏಕೆ?; ಭಟ್ಕಳ ಪುರಸಭಾ ಕಟ್ಟಡ ನಾಮಫಲಕದಲ್ಲಿ ಕನ್ನಡ ಇಂಗೀಷ್ ನೊಂದಿಗೆ ಉರ್ದು ಅಕ್ಷರ ಅಳವಡಿಕೆ ವಿವಾದವೇಕೆ?

ಭಟ್ಕಳ: ಭಟ್ಕಳದ ಹಳೆ ಪುರಸಭಾ ಕಟ್ಟಡದ ನಾಮಫಲಕವನ್ನೊಮ್ಮೆ ನೀವು ನೋಡಿದರೆ ಅದರಲ್ಲಿ ‘ಭಟ್ಕಳ ಪುರಸಭೆ’ ಎಂದು ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದ್ದು ಕೆಳಗೆ ಅತಿ ಸಣ್ಣ ಅಕ್ಷರದಲ್ಲಿ ಉರ್ದು ಭಾಷೆಯಲ್ಲೋ ಬರೆಯಿಸಲಾಗಿದೆ. ಇದು ಇಲ್ಲಿನ ಬಹುಸಂಖ್ಯಾತ ಉರ್ದು ಭಾಷಿಗರ ಅನುಕೂಲಕ್ಕೆ ಅಳವಡಿಸಲಾಗಿದ್ದು ಕಳೆದ ನೂರು ವರ್ಷಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ.
ಕಾಲ ಬದಲಾದಂತೆ ಹಳೆಯ ಪುರಸಭಾ ಕಟ್ಟಡವನ್ನು ಹೊಸಕಟ್ಟಡಕ್ಕೆ ಸ್ಥಳಾಂತರಿಸಿ ಈಗಾಗಲೇ ಹಲವು ವರ್ಷಗಳೇ ಕಳೆದಿವೆ. ಕಟ್ಟಡಕ್ಕೆ ಸ್ಟೆನ್ ಲೆಸ್ ಸ್ಟೀಲ್ ಅಕ್ಷರಗಳಲ್ಲಿ ನಾಮಫಲಕ ಹಾಕಲಾಗುತ್ತಿದ್ದು ಕನ್ನಡ ಇಂಗ್ಲಿಷ್ ಜೊತೆಗೆ ಕೆಳಗಡೆ ಉರ್ದು ಭಾಷೆಯಲ್ಲೂ ಅಳವಡಿಸುವ ಪ್ರಕ್ರಿಯೆ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದು ಇದೀಗ ಅದು ವಿವಾದದ ಕೇಂದ್ರಬಿAದುವಾಗಿದೆ.
ಕೆಲವರು ಸಂಘಪರಿವಾರದ ಪ್ರಯೋಜಕತ್ವದಲ್ಲಿ ಭುವನೇಶ್ವರಿ ಕನ್ನಡ ಸಂಘ ಎಂಬ ಬ್ಯಾನರ್ ನಡಿ ಕನ್ನಡ ಶಾಲು ಹಾಕಿಕೊಂಡು ಬಂದ ಪುರಸಭಾ ಕಟ್ಟಡದ ನಾಮಫಲಕದಲ್ಲಿ ಕನ್ನಡ ಇಂಗ್ಲಿಷ್ ಜೊತೆಗೆ ಉರ್ದು ಅಕ್ಷರಗಳನ್ನು ಅಳವಡಿಸುವ ಸಂದರ್ಭ ವಿರೋಧ ವ್ಯಕ್ತಪಡಿಸಿ ದಾಂಧಲೆ ಎಬ್ಬಿಸಿದ್ದು ಪೊಲೀಸರು ಮದ್ಯಪ್ರವೇಶಸಿ ವಾತವರಣ ತಿಳಿಸಿಗೊಸಿದ್ದಾರೆ. ಇನ್ನೊಂದು ಬದಿಯ ಒಂದಿಷ್ಟು ಯುವಕರು ಸೇರಿ ಕನ್ನಡ ಪ್ರೇಮದೊಂದಿಗೆ ತಮ್ಮ ಉರ್ದು ಪ್ರೇಮವನ್ನೂ ಪ್ರಕಟಪಡಿಸಿದ್ದು, ಪುರಸಭಾಕಟ್ಟದ ನಾಮಫಲಕದಲ್ಲಿ ಕನ್ನಡಕ್ಕೆ ಮೊದಲೆ ಆದ್ಯತೆ ನೀಡಲಾಗಿದೆ. ಉರ್ದು ಅಕ್ಷರಗಳನ್ನು ಯಾಕೆ ಅಳವಡಿಸಲಾಗಿದೆ ಎಂದರೆ ಇಲ್ಲಿನ ಬಹುಸಂಖ್ಯಾತರು ಉರ್ದು ಮಾತನಾಡುವವರು ಆಗಿದ್ದರಿಂದ ಉರ್ದು ಅಕ್ಷರಗಳನ್ನು ಅಳವಡಿಸಿದರೆ ತಪ್ಪೇನು? ಯಾವುದೇ ಕಾರಣಕ್ಕೂ ನಾವು ಉರ್ದು ಅಕ್ಷರಗಳನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂಬ ವಾದವನ್ನು ಮಂಡಿಸುತ್ತಿದ್ದಾರೆ.
ಭಾಷೆ ಇರುವುದು ಸಂಪರ್ಕ ಸಾಧನೆಗಾಗಿ ಸಂಘರ್ಷಕ್ಕಾಗಿ ಅಲ”್ಲ ಎಂದು ಹೇಳುವುದರ ಮೂಲಕ ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ ಸಮಯೋಚಿತ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಸ್ಥಳೀಯ ಸಂಸ್ಥೆಗಳಿಗೆ ಆಯಾ ಪ್ರದೇಶದ ಭಾಷೆಯನ್ನು ನಾಮಫಲಕದಲ್ಲಿ ಅಳವಡಿಸಲು ಕಾನೂನು ಅವಕಾಶ ನೀಡುತ್ತದೆ ಎಂದು ತಿಳಿಸಿರುವ ಇಲ್ಲಿನ ಪುರಸಭೆ ಅಧ್ಯಕ್ಷ ಪರ್ವೇಝ್ ಕಾಶಮಜಿ, ಇದಕ್ಕೆ ಕಲಬುರ್ಗಿ ಮಹಾನಗರ ಪಾಲಿಕೆಯ ನೂತನ ಕಟ್ಟಡದಲ್ಲಿ ಕನ್ನಡ ಇಂಗ್ಲಿಷ್ ನೊಂದಿಗೆ ಉರ್ದು ಭಾಷೆಯ ಅಕ್ಷರಗಳನ್ನೂ ಅಳವಡಿಸಿದ್ದನ್ನು ಉಲ್ಲೇಖಿಸುತ್ತಾರೆ. ಒಂದು ವೇಳೆ ಕಾನೂನು ಇದಕ್ಕೆ ಅವಕಾಶ ಮಾಡಿಕೊಡದೆ ಇದ್ದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಟ್ಕಳದಲ್ಲಿ ಇದುವರೆಗೂ ಭಾಷೆಯ ವಿಷಯದಲ್ಲಿ ಯಾವುದೇ ಗೊಂದಲ, ವಿವಾದಗಳು ಉಂಟಾಗಿರಲಿಲ್ಲ. ಹಳೆಯ ಪುರಸಭೆಯ ಕಟ್ಟಡದಲ್ಲಿ ನಮ್ಮ ತಾತಮುತ್ತಾಂದಿರು ಉರ್ದು ಭಾಷೆಯನ್ನು ಅಳವಡಿಸಿದ್ದನ್ನೂ ನೋಡುತ್ತಲೇ ಬಂದಿದ್ದಾರೆ. ಅವರೆಂದಿಗೂ ಈ ಕುರಿತು ಗೊಂದಲ ಸೃಷ್ಟಿಸಲಿಲ್ಲ. ಆದರೆ ಈಗ ಕೆಲ ರಾಜಕೀಯ ಪ್ರೇರಿತ ಮನಸ್ಸುಗಳು ಬೇಕೆಂದೇ ವಿವಾದ ಸೃಷ್ಟಿಸಿ ಇಲ್ಲಿನ ಭಾಷಾ ವೈವಿದ್ಯತೆ, ಭಾಷಾ ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವ್ಯವಹಾರದ ಭಾಷೆಯನ್ನಾಗಿ ಕನ್ನಡಕ್ಕೆ ಆಧ್ಯತೆಯನ್ನು ನೀಡಿದ್ದೇವೆ. ಕನ್ನಡದ ಅಸ್ಮಿತೆಗೆ ಧಕ್ಕೆಯಾದರೆ ನಾವು ಕೂಡ ಸುಮ್ಮನೆ ಕೂಡುವುದಿಲ್ಲ. ಬಹುಸಂಖ್ಯಾತರ ಮಾತನಾಡುವ ಸ್ಥಳಿಯ ಭಾಷೆಯ ಮಾಹಿತಿ ನೀಡುವು ಕಟ್ಟಡಗಳು ಇರುವುದು ಇದು ಮೊದಲೇನಲ್ಲ. ಭಟ್ಕಳದ ಹೊಸ ಮೀನುಮಾರುಕಟ್ಟೆಯ ನಾಮಫಲಕದಲ್ಲೂ ಕನ್ನಡ ಭಾಷೆಯೊಂದಿಗೆ ಉರ್ದು ಭಾಷೆಯನ್ನೂ ಅಳವಡಿಸಿಸಲಾಗಿದೆ. ವಿಶೇಷವೆಂದರೆ ಇದನ್ನು ಬಿಜೆಪಿ ಶಾಸಕ ಸುನಿಲ್ ನಾಯ್ಕ ರೇ ಉದ್ಘಾಟಿಸಿದ್ದಾರೆ. ಈಗ ಅದೇ ಸುನಿಲ್ ನಾಯ್ಕ ಪುರಸಭಾ ಕಟ್ಟಡದ ಉರ್ದು ಅಕ್ಷರಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸವಾಗಿದೆ ಎಂದು ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝರ‍್ರಹ್ಮಾನ್ ನದ್ವಿ ರುಕ್ನುದ್ದೀನ್ ಹೇಳುತ್ತಾರೆ.
ತಾಲೂಕಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಕಾನೂನು ಚೌಕಟ್ಟಿನಲ್ಲಿ ಇದನ್ನು ಬಗೆಹರಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದೆ.
ಒಟ್ಟಿನಲ್ಲಿ ಪರಸ್ಪರ ಸಂಪರ್ಕಕ್ಕೆ ಸಾಧನವಾಗಬೇಕಿದ್ದ ಭಾಷೆಯೊಂದು ಸಂಘರ್ಷಕ್ಕೆಡೆ ಮಾಡಿ ಗೊಂದಲ ಸೃಷ್ಟಿಗೆ ಕಾರಣವಾಗಿದ್ದು ಮಾತ್ರ ಉತ್ತಮ ಬೆಳವಣೆಗೆಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.