ಭಟ್ಕಳ: 100 ಬೆಡ್ಡಿನ ಸರಕಾರಿ ಆಸ್ಪತ್ರೆಯಲ್ಲಿ ಬೆಡ್ಡು ಇದೆ ಕೋಣೆ ಇಲ್ಲ! ಮೀಟಿಂಗ್ ಹಾಲ್‍ನಲ್ಲಿ ರೋಗಿಗಳು ; ಕಟ್ಟಡಕ್ಕಾಗಿ ದಾನಿಗಳತ್ತ ಮುಖ

ಭಟ್ಕಳ: ತಾಲೂಕಿನ ಸರಕಾರಿ ಆಸ್ಪತ್ರೆ ಸುಧಾರಣೆ ಕಾಣುತ್ತಿದ್ದಂತೆಯೇ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಕ್ಕಪಕ್ಕದ ತಾಲೂಕುಗಳಿಂದಲೂ ರೋಗಿಗಳು ಭಟ್ಕಳ ಸರಕಾರಿ ಆಸ್ಪತ್ರೆಯತ್ತ ಮುಖ ಮಾಡಿದ್ದು, ಆಸ್ಪತ್ರೆ ಹೌಸ್‍ಫುಲ್ ಆಗಿದೆ.
ಭಟ್ಕಳ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿ 12-13 ವರ್ಷಗಳೇ ಕಳೆದು ಹೋಗಿವೆ. 100 ಬೆಡ್‍ಗಳಿಗೆ ಕೊರತೆ ಇಲ್ಲದಂತೆ ಆಸ್ಪತ್ರೆ ಬೆಳೆದು ನಿಂತಿದೆ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಆಸ್ಪತ್ರೆಗೆ ಹೊಸತನವನ್ನು ನೀಡಿದ್ದಾರೆ. ಬಹಳಷ್ಟು ದಾನಿಗಳು, ಸಂಘ ಸಂಸ್ಥೆಗಳು ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ವೆಂಟಿಲೇಟರ್,
ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಒಳರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಡ್ ಇತರೇ ಸೌಲಭ್ಯಗಳನ್ನು ಹೇಗಾದರೂ ನಿಭಾಯಿಸಬಹುದು, ಆದರೆ ಕೋಣೆಗಳ ಕೊರತೆಯನ್ನು ನಿಭಾಯಿಸುವುದು ಹೇಗೆ? ಡಾ.ಸವಿತಾ ಕಾಮತ್, ವೈದ್ಯಾಧಿಕಾರಿಗಳು |
ಆಕ್ಸಿಜನ್, ರಕ್ತಪರೀಕ್ಷೆ ಸೇರಿದಂತೆ ಆಸ್ಪತ್ರೆಗೆ ಅಗತ್ಯ ಇರುವ ಆಧುನಿಕ ಸಲಕರಣೆಗಳು ಆಸ್ಪತ್ರೆಯನ್ನು ಸೇರಿಕೊಂಡಿವೆ. ರೋಗಿಗಳಿಗೆ ಹವಾನಿಯಂತ್ರಿತ ಸೌಲಭ್ಯದ ಕೊಠಡಿ, 3-4 ಡೀಲಕ್ಷ್ ಕೊಠಡಿಗಳ ಜೊತೆಗೆ 25ಕ್ಕೂ ಹೆಚ್ಚು ವಿಶೇಷ ಕೊಠಡಿಗಳ ಸೌಲಭ್ಯವನ್ನು ಒದಗಿಸಲಾಗಿದೆ. ಡಾ.ಲಕ್ಷ್ಮೀಶ, ಡಾ.ಅರುಣ (ಸರ್ಜನ್), ಡಾ.ಸತೀಶ, ಡಾ.ಸುರಕ್ಷಿತರನ್ನು ಒಳಗೊಂಡ ಉತ್ತಮ ವೈದ್ಯರ ತಂಡ ಆಸ್ಪತ್ರೆಗೆ ಸಿಕ್ಕಿದೆ. ಆಸ್ಪತ್ರೆಯ ಒಳಗಿನಿಂದ ಹಣದ ಬೇಡಿಕೆಯ ದುರ್ನಾತ ಇತ್ತೀಚಿನ ವರ್ಷಗಳಲ್ಲಿ ಬಹಳ ಕಡಿಮೆಯಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಇದೆ. ಅಲ್ಲದೇ ತಾಲೂಕಿನ ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸೌಲಭ್ಯಗಳನ್ನು ಭಟ್ಕಳ ಸರಕಾರಿ ಆಸ್ಪತ್ರೆಯೊಂದಿಗೆ ತುಲನೆ ಮಾಡಿಕೊಳ್ಳುತ್ತಿರುವ ಜನರು ಸದ್ಯದ ಮಟ್ಟಿಗೆ ಸರಕಾರಿ ಆಸ್ಪತ್ರೆಯೇ ಒಳ್ಳೆಯದು ಎನ್ನುತ್ತಿದ್ದಾರೆ. ಇದರಿಂದಾಗಿ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸದಾ ಜನ ಜಂಗುಳಿ!
ಒಳರೋಗಿಗಳ ಸಂಖ್ಯೆಯಲ್ಲಿ ಏರಿಕೆ:
ಭಟ್ಕಳ ಸರಕಾರಿ ಆಸ್ಪತ್ರೆಯನ್ನು ಉನ್ನತೀಕರಿಸಲು ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ. ಹೊಸ ಕಟ್ಟಡ ಕಟ್ಟಿಕೊಡಲು ದಾನಿಗಳು ಮುಂದೆ ಬಂದಿದ್ದಾರೆ. ಸರಕಾರದ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು - ಸುನಿಲ್ ನಾಯ್ಕ, ಶಾಸಕರು, ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ |
ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಹೊತ್ತು ಮೂಡುತ್ತಿದ್ದಂತೆಯೇ ಹೊರ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ಕೆಲವು ಕಡೆಗಳಲ್ಲಿಯಂತೂ ರೋಗಿಗಳ ನೂಕು ನುಗ್ಗಲು! ರಾತ್ರಿ ಹೊತ್ತಿನಲ್ಲಿಯೂ ತುರ್ತು ಚಿಕಿತ್ಸೆಯ ಕೊಠಡಿಯಲ್ಲಿ ರೋಗಿಗಳಿಗೆ ಕೊರತೆ ಇಲ್ಲ. ಹೊರ ರೋಗಿಗಳು ಎಷ್ಟೇ ಬಂದರೂ ಲಭ್ಯ ಇರುವ ವೈದ್ಯರು, ಸಿಬ್ಬಂದಿಗಳು ನಿಭಾಯಿಸುತ್ತಿದ್ದರಾದರೂ ಒಳ ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳ ವೈದ್ಯರಿಗೆ ತಲೆ ನೋವನ್ನು ತಂದಿದೆ. ಪ್ರತಿ ನಿತ್ಯ ಸರಾಸರಿ 70-75 ರೋಗಿಗಳು ಒಳ ರೋಗಿಗಳಾಗಿ ಕೋಣೆಯ ಕದ ತಟ್ಟುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ರೋಗಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಬೆಡ್ಡುಗಳಿವೆ, ಆದರೆ ಕೋಣೆ ಇಲ್ಲ ಎಂಬ ಉತ್ತರ ಆಸ್ಪತ್ರೆಯ ಸಿಬ್ಬಂದಿಗಳಿಂದ ಬರುತ್ತಿದೆ. ಈ ಹಿಂದೆ ಸಭೆ ನಡೆಸಲು ಉಪಯೋಗಿಸುತ್ತಿದ್ದ ಕೋಣೆಯಲ್ಲಿಯೂ ಈಗ ಬೆಡ್ ಅಳವಡಿಸಿ ರೋಗಿಗಳಿಗೆ ನೀಡಿದ್ದರೂ, ಜಾಗ ಕಡಿಮೆಯೇ! ಹೆಚ್ಚುವರಿ ಕೊಠಡಿಗಳಿಗಾಗಿ ಸರಕಾರದತ್ತ ಮುಖ ಮಾಡಲಾಗಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಬೇಡಿಕೆ ಈಡೇರುವ ಸಾಧ್ಯತೆ ಇಲ್ಲ. ಮತ್ತೊಮ್ಮೆ ಆಸ್ಪತ್ರೆಯನ್ನು ಕಾಪಾಡಲು ದಾನಿಗಳೇ ಮುಂದೆ ಬರಬೇಕಾಗಿದೆ.