ಉಡುಪಿ: ಪಡುಬಿದ್ರೆ ಯುಪಿಸಿಎಲ್ ಯೋಜನೆ ಪರಿಸರ, ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ; ಚೆನ್ನೈ ಹಸಿರು ಪೀಠಕ್ಕೆ ವರದಿ ಸಲ್ಲಿಸಿದ ಎನ್‌ಜಿಟಿ ತಜ್ಞರ ಸಮಿತಿ

Source: VB | By S O News | Published on 10th March 2021, 12:57 PM | Coastal News | State News |

ಉಡುಪಿ: ಪಡುಬಿದ್ರೆ ಸಮೀಪದ ಎಲ್ಲೂರಿನಿಂದ ಕಾರ್ಯಾಚರಿಸುತ್ತಿರುವ ಗೌತಮ್ ಅದಾನಿ ಮಾಲಕತ್ವದ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಸಿಎಲ್) ನಿಂದ ಇದುವರೆಗೆ ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾಗೂ ಜನರ ಆರೋಗ್ಯದ ಮೇಲಾಗಿರುವ ದುಷ್ಪರಿಣಾಮಗಳ ಮರು ಪರಿಶೀಲನೆಗಾಗಿ ರಾಷ್ಟ್ರೀಯ ಹಸಿರು ಪೀಠದ ನಿರ್ದೇಶನದಂತೆ ಕಳೆದ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಗೆ ಆಗಮಿಸಿದ ಮೂವರು ತಜ್ಞರ ಸಮಿತಿ(ಎನ್‌ಜಿಟಿ) ತನ್ನ ವರದಿಯನ್ನು ಮಾ.1ರಂದು ರಾ.ಹಸಿರು ಪೀಠದ ಚೆನ್ನೈನ ದಕ್ಷಿಣ ಪೀಠಕ್ಕೆ ಒಪ್ಪಿಸಿದೆ.

ಹೆಚ್ಚಿನ ವಿಷಯಗಳಲ್ಲಿ ಯೋಜನೆಗೆ ಗ್ರೇಸ್‌ಮಾರ್ಕ್

ಎನ್‌ಜಿಟಿ ತಜ್ಞರ ಸಮಿತಿ ವರದಿಯಲ್ಲಿ ಆರೋಗ್ಯ  ವಿಷಯವನ್ನು ಹೊರತು ಪಡಿಸಿದರೆ ಉಳಿದಂತೆ ಹೆಚ್ಚಿನ ವಿಷಯಗಳಲ್ಲಿ ಯುಪಿಸಿಎಲ್‌ಗೆ ಗ್ರೇಸ್ ಮಾರ್ಕ್ ನೀಡಲಾಗಿದೆ. ಯೋಜನಾ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ  
(ಮುದರಂಗಡಿ, ಅದಮಾರು, ಹೆಜಮಾಡಿ, ಇನ್ನಾಗಳಲ್ಲಿ ಪರೀಕ್ಷೆ)ದ ಬಗ್ಗೆ ಯಾವುದೇ ದೋಷ ಕಂಡುಬಂದಿಲ್ಲ. ಗಾಳಿಯಲ್ಲಿ ಗಂಧಕ ಹಾಗೂ ಎಲ್ಲಾ ಅನಿಲಗಳ ಮಟ್ಟ ಪರಿಮಿತಿಯೊಳಗಿದೆ ಎಂದು ವರದಿ ತಿಳಿಸಿದೆ. ಪರಿಸರದ ತೆರೆದ ಬಾವಿಗಳಲ್ಲಿ ಯಾವುದೇ ವಿಷಕಾರಿ ವಸ್ತುಗಳು ಸೇರಿಲ್ಲ, ಯಾವುದೇ ಬೆಳೆ ಹಾನಿ, ತೋಟಗಾರಿಕೆ ಬೆಳೆ ಹಾನಿಯಾಗಿಲ್ಲ. ಪರಿಸರದಲ್ಲಿ ಯಾವುದೇ ದನ ಸೇರಿದಂತೆ ಇತರ ಸಾಕು ಪ್ರಾಣಿಗಳು ಸಾವನ್ನಪ್ಪಿದ ವರದಿ ಬಂದಿಲ್ಲ ಎಂದು ಆಯಾ ಇಲಾಖೆಗಳು ನೀಡಿರುವ ವರದಿ ತಿಳಿಸಿದೆ ಎಂದು ತಜ್ಞರ ಸಮಿತಿ ಹೇಳಿದೆ.

ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ

ಗೌತಮ್ ಅದಾನಿ ಮಾಲಕತ್ವದ ಯುಪಿಸಿಎಲ್, ಕೇಂದ್ರ ಸರಕಾರದ ಬೆಂಬಲದೊಂದಿಗೆ ಎಲ್ಲಾ 'ಅಡೆತಡೆಗಳನ್ನು ನಿವಾರಿಸಿಕೊಂಡು 2010ರ ನ.11ರಂದು 600 ಮೆಗಾವ್ಯಾಟ್‌ನ ಮೊದಲ ಘಟಕವನ್ನೂ, 2012ರ ಆಗಸ್ಟ್ 19ರಂದು ಎರಡನೇ ಘಟಕವನ್ನೂ ಕಾರ್ಯಾರಂಭಗೊಳಿಸಿತ್ತು. ಬಳಿಕ ತಲಾ 800 ಮೆಗಾವ್ಯಾಟ್‌ನ ಇನ್ನೂ ಎರಡು ಘಟಕಗಳ ಪ್ರಾರಂಭಕ್ಕೆ ಕೇಂದ್ರ ಸರಕಾರದಿಂದ ಅನುಮತಿಯನ್ನೂ ಪಡೆದು ಹೆಚ್ಚುವರಿಯಾಗಿ 720 ಎಕರೆ ಪ್ರದೇಶದ ಭೂಸ್ವಾಧೀನಕ್ಕೆ ಬೇಕಾದ ಸಿದ್ಧತೆ ನಡೆಸಿತ್ತು. ಆದರೆ ವಿವಿಧ ತಾಂತ್ರಿಕ ಕಾರಣಗಳಿಗಾಗಿ ಯುಪಿಸಿಎಲ್‌ನ ವಿಸ್ತರಣೆಯ ಕನಸು ಇನ್ನೂ ನನಸಾಗಿಲ್ಲ.

ಈ ನಡುವೆ 2017-18ರ ಬಳಿಕ ಯುಪಿಸಿಎಲ್ ವಿದ್ಯುತ್‌ಗೆ ಬೇಡಿಕೆ ತೀವ್ರವಾಗಿ ಕುಸಿದಿದೆ. ಇದಕ್ಕೆ ಇಲ್ಲಿನ ದರಕ್ಕಿಂತ ಕಡಿಮೆ ದರದಲ್ಲಿ ಬೇರೆ ವಿದ್ಯುತ್‌ ಕರ್ನಾಟಕಕ್ಕೆ ಲಭ್ಯವಾಗಿರುವುದು ಕಾರಣ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ. 2020-21ರ ಅವಧಿಯ ಡಿಸೆಂಬರ್‌ವರೆಗೆ ಮೊದಲ ಯುನಿಟ್ 80ದಿನ ಹಾಗೂ ಎರಡನೇ ಯುನಿಟ್ 81 ದಿನ ಕೆಲಸ ಮಾಡಿದ್ದು ಒಟ್ಟು 1,672.31ಮಿಲಿಯನ್ ಯುನಿಟ್ (ಎಂಯು) ವಿದ್ಯುತ್ ಉತ್ಪಾದನೆ ಮಾಡಿತ್ತು ಎಂದು ಸಮಿತಿಯ ಅಂಕಿಅಂಶಗಳು ತಿಳಿಸಿವೆ.

2015-16ರಲ್ಲಿ ಒಟ್ಟು 8,097.5ಎಂಯು ವಿದ್ಯುತ್ ಉತ್ಪಾದನೆಯಾಗಿದ್ದರೆ ಮೊದಲ ಯುನಿಟ್ 316 ಹಾಗೂ ಎರಡನೇ ಯುನಿಟ್ 313 ದಿನ ವಿದ್ಯುತ್ ಉತ್ಪಾದಿಸಿತ್ತು. 2016-17ರಲ್ಲಿ ಒಟ್ಟು 7,875.72ಎಂಯು ವಿದ್ಯುತ್ ಉತ್ಪಾದನೆಯಾಗಿದ್ದು ಕ್ರಮವಾಗಿ 345 ಹಾಗೂ 281 ದಿನಗಳ ಕಾಲ ಎರಡು ಯುನಿಟ್‌ಗಳು ವಿದ್ಯುತ್ ಉತ್ಪಾದಿಸಿದ್ದವು ಎಂದು ವರದಿ ತಿಳಿಸಿದೆ. ವರದಿಯಲ್ಲಿ ಆ ಬಳಿಕ ಉತ್ಪಾದನೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ.

106 ಪುಟಗಳ ಈ ವರದಿಯಲ್ಲಿ ಸಮಿತಿ 1,200 ಮೆಗಾವ್ಯಾಟ್ ಸಾಮರ್ಥ್ಯದ ಯುಪಿಸಿಎಲ್ ಸ್ಥಾವರದಿಂದ ಯೋಜನಾ ಪ್ರದೇಶದ 10 ಕಿ.ಮೀ. ವ್ಯಾಪ್ತಿಯಲ್ಲಿ ಜನರ ಆರೋಗ್ಯದ ಮೇಲಾಗಿರುವ ಭೀಕರ ಪರಿಣಾಮಗಳ ಕುರಿತು ಬೆಳಕು ಚೆಲ್ಲಿದೆ. ಯೋಜನೆ ಪ್ರಾರಂಭಗೊಂಡ ಬಳಿಕ (2010ರ ನ.11) ಅದರಲ್ಲೂ ವಿಶೇಷವಾಗಿ ಎರಡನೇ ಘಟಕ (2012ರ ಆ.19ರಿಂದ) ಕಾರ್ಯಾರಂಭಗೊಂಡ ಬಳಿಕ ಈ ಪ್ರದೇಶದಲ್ಲಿ ಗಾಳಿಯಿಂದ ಹರಡುವ ಕಾಯಿಲೆಗಳಲ್ಲಿ ಮುಖ್ಯವಾಗಿ ಅಸ್ತಮಾ, ತೀವ್ರ ಉಸಿರಾಟ ಸೋಂಕು (ಎಆರ್‌ಐ), ಬ್ರಾಂಕೈಟಿಸ್ (ಶ್ವಾಸನಾಳ ಒಳಪೊರೆ ಉರಿಯೂತ) ಹಾಗೂ ಕ್ಯಾನ್ಸರ್ ಪೀಡಿತರ ಸಂಖ್ಯೆಯಲ್ಲಾದ ಹಠಾತ್ ಹೆಚ್ಚಳದ ಬಗ್ಗೆ ಕಳವಳಕರ
ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿ ನೀರಿನಿಂದ ಹರಡುವ ರೋಗಗಳಲ್ಲೂ ಮೂತ್ರಪಿಂಡಕ್ಕೆ (ರೀನಲ್) ಸಂಬಂಧಿಸಿದ ಕಾಯಿಲೆ ಹಾಗೂ ಕ್ಯಾನ್ಸರ್‌ನಲ್ಲೂ ತೀವ್ರ ಏರುಗತಿಯನ್ನು ಕಾಣಿಸಲಾಗಿದೆ.

ತಜ್ಞರ ಸಮಿತಿಯ ವರದಿಯಂತೆ ಯುಪಿಸಿಎಲ್ ಯೋಜನಾ ಪ್ರದೇಶದ 10ಕಿ. ಮೀ. ವ್ಯಾಪ್ತಿಯಲ್ಲಿ ಬರುವ 15 ಗ್ರಾಮಗಳಲ್ಲಿ 2008-09ನೇ ಸಾಲಿನಿಂದ 2019-2020ನೇ ಸಾಲಿನವರೆಗೆ ಅಸ್ತಮಾ ಕಾಯಿಲೆಯಲ್ಲಿ ಶೇ.17, ಎಆರ್‌ಐನಲ್ಲಿ ಶೇ.171 ಹಾಗೂ ಕ್ಯಾನ್ಸರ ರೋಗಿಗಳ ಸಂಖ್ಯೆಯಲ್ಲಿ ಶೇ.293ರಷ್ಟು ಹೆಚ್ಚಳ ಗುರುತಿಸಲಾಗಿದೆ. ಅದೇ ರೀತಿ ನೀರಿನಿಂದ ಹರಡುವ ಮೂತ್ರಪಿಂಡ ಕಾಯಿಲೆಯಲ್ಲಿ ಶೇ.55 ಹಾಗೂ ಕ್ಯಾನ್ಸರ್‌ನಲ್ಲಿ ಶೇ.109ರ ಹೆಚ್ಚಳವನ್ನು ವರದಿ ಎತ್ತಿ ತೋರಿಸಿದೆ.

ಸಮಿತಿ ನೀಡಿರುವ ವರದಿಗೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ)ಗಳ ಮೂಲಕ ಸ್ಥಳೀಯ ಪಿಎಚ್‌ಸಿ ಸೇರಿದಂತೆ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆಯನ್ನು ಆಧಾರವಾಗಿಟ್ಟು ಕೊಳ್ಳಲಾಗಿದೆ. ಈ ಪ್ರದೇಶ ವ್ಯಾಪ್ತಿಯ ರೋಗಿಗಳು ಮಂಗಳೂರು, ಉಡುಪಿ, ಮಣಿಪಾಲ ಸೇರಿದಂತೆ ಜಿಲ್ಲೆ ಹಾಗೂ ಹೊರಗೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಕಾಯಿಲೆಗಳಿಗಾಗಿ ಪಡೆದ ಚಿಕಿತ್ಸೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇದಕ್ಕಾಗಿ10 ಕಿ.ಮೀ. ವ್ಯಾಪ್ತಿಯ 15 ಗ್ರಾಮಗಳ ಮನೆ ಮನೆ ಸರ್ವೇ ನಡೆಸಿ ಮಾಹಿತಿಯನ್ನು ಕಲೆಹಾಕುವಂತೆ ಸಲಹೆಯನ್ನೂ ವರದಿಯಲ್ಲಿ ನೀಡಲಾಗಿದೆ.

ತೀವ್ರ ದುಷ್ಪರಿಣಾಮ

ಇದರೊಂದಿಗೆ ಯುಪಿಸಿಎಲ್‌ನಿಂದ ಯೋಜನಾ ಪ್ರದೇಶದ ಜನರ ಆರೋಗ್ಯದ ಮೇಲಾಗಿರುವ ದುಷ್ಪರಿಣಾಮಗಳಿಗೆ ಯುಪಿಸಿಎಲ್ ಒಟ್ಟು 70,04,10,828 ರೂ. ಪರಿಹಾರವಾಗಿ ನೀಡುವಂತೆ ತಜ್ಞರ ಸಮಿತಿ ತಿಳಿಸಿದೆ. ಇದು ಯೋಜನಾ ಪ್ರದೇಶದ 10ಕಿ.ಮೀ. ವ್ಯಾಪ್ತಿಯಲ್ಲಿರುವ 15 ಗ್ರಾಮಗಳ 2010 ಮತ್ತು 2020ರ ನಡುವೆ ಅನಾರೋಗ್ಯ ಪೀಡಿತರಿಗೆ ನೀಡುವ ಪರಿಹಾರ ಮೊತ್ತವಾಗಿದೆ.

ಸಮಿತಿ ಪ್ರತಿ ಅಸ್ತಮಾ ರೋಗಿಗೆ 8,280ರಂತೆ ಒಟ್ಟು 99.65 ಲಕ್ಷ ರೂ., ಎಆರ್‌ಐ ರೋಗಕ್ಕೆ 4248ರೂ.ನಂತೆ 24,201 ಮಂದಿಗೆ 1028.06 ಲಕ್ಷ ರೂ., ಬ್ರಾಂಕೈಟಿಸ್‌ಗೆ 9,446ರಂತೆ ಒಟ್ಟು 60,000 ಮಂದಿಗೆ 5,667.60 ಲಕ್ಷ ರೂ. ಹಾಗೂ ಕ್ಯಾನ್ಸರ್ ಪೀಡಿತರಿಗೆ ತಲಾ 1,20,000ರೂ.ನಂತೆ 174 ಮಂದಿಗೆ 208.80 ಲಕ್ಷ ರೂ. ಸೇರಿದಂತೆ ಒಟ್ಟು 70.04 ಕೋಟಿ ರೂ. ಪರಿಹಾರ ಮೊತ್ತವನ್ನು ನೀಡುವಂತೆ ತಿಳಿಸಿದೆ.

ಒಟ್ಟಾರೆ 74.93 ಕೋಟಿ ರೂ.ಪರಿಹಾರ: ಸಮಿತಿ ಒಟ್ಟಾರೆಯಾಗಿ ಯುಪಿಸಿಎಲ್ ನೀಡಬೇಕಾಗಿರುವ ಪರಿಸರ ಪರಿಹಾರ ಮೊತ್ತವನ್ನು 74.93 ಕೋಟಿ ರೂ. ಎಂದು ಪರಿಗಣಿಸಿದೆ. ಇವುಗಳಲ್ಲಿ ಉಳಿದ 4.89 ಕೋಟಿ ರೂ. 2019ರ ಜೂನ್ ತಿಂಗಳಲ್ಲಿ ಹಸಿರು ಪೀಠದ ನಿರ್ದೇಶನದಂತೆ ಯುಪಿಸಿಎಲ್‌ನಿಂದಾದ ಪರಿಸರ ಹಾನಿಯ ಕುರಿತಂತೆ ವರದಿ ನೀಡಲು ರಚಿಸಲಾದ ಮೊದಲ ತಜ್ಞರ ಸಮಿತಿ    ಶಿಫಾರಸು ಮಾಡಿದ ಪರಿಹಾರ ಮೊತ್ತವಾಗಿದೆ. ಇದರ ವಿರುದ್ದವೇ ಹಸಿರು ಪೀಠದ ಮುಂದೆ ಪರಿಸರ ಹಾನಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದ ನಂದಿಕೂರು ಜನಜಾಗೃತಿ ಸಮಿತಿಯ ಬಿ.ಬಾಲಕೃಷ್ಣ ಶೆಟ್ಟಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಪುರಸ್ಕರಿಸಿದ ಗ್ರೀನ್ ಟ್ರಿಬ್ಯೂನಲ್ ಪರಿಸರ ಹಾಗೂ ಜನರ ಆರೋಗ್ಯದ ಮೇಲಾಗಿ ರುವ ಪರಿಣಾಮಗಳ ಮರು ಪರಿಶೀಲನೆಗೆ ಸಮಿತಿಯನ್ನು ರಚಿಸಿತ್ತು.

ಬೆಂಗಳೂರಿನಲ್ಲಿರುವ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ದಕ್ಷಿಣದ ಪ್ರಾದೇಶಿಕ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಜಿ.ತಿರುಮೂರ್ತಿ ನೇತೃತ್ವದ ಸಮಿತಿಯಲ್ಲಿ ಬೆಂಗಳೂರು ಐಎಸ್‌ಇಸಿ, ಸಿಇಎಸ್‌ಪಿಯ ಪ್ರಾಧ್ಯಾಪಕ ಡಾ.ಕೃಷ್ಣರಾಜ್‌, ಬೆಂಗಳೂರು ಎನ್‌ಐಎಎಸ್‌ನ ಡೀನ್ ಮತ್ತು ಪ್ರೊಫೆಸರ್ ಡಾ.ಆರ್.ಶ್ರೀಕಾಂತ್‌ ಸದಸ್ಯರಾಗಿದ್ದರು. ಈ ತಂಡ ಕಳೆದ ಡಿ.7ರಿಂದ 9ರವರೆಗೆ ಮೂರು ದಿನಗಳ ಕಾಲ ಯುಪಿಸಿಎಲ್ ಪರಿಸರದ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿತ್ತಲ್ಲದೆ, ಯುಪಿಸಿಎಲ್ ಗೂ ಭೇಟಿ ನೀಡಿ ಸ್ಥಾವರದ ಕಾರ್ಯಾಚರಣೆಯನ್ನು ಪರಿಶೀಲಿಸಿ ಮಾಹಿತಿಗಳನ್ನು ಕಲೆ ಹಾಕಿತ್ತು. ಜಿಲ್ಲಾಡಳಿತ ಹಾಗೂ ಆರೋಗ್ಯ, ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಗಳಿಂದ ಯೋಜನಾ ಪ್ರದೇಶದ 2010-2020ರ ಅವಧಿಯ ವಿವಿಧ ಮಾಹಿತಿಗಳನ್ನು ಸಹ ಕಲೆ ಹಾಕಿತ್ತು.

ಪಡುಬಿದ್ರೆ ಪರಿಸರದಲ್ಲಿ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಯ ವಿರುದ್ಧ ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ಅವಿರತ ಹೋರಾಟ ನಡೆಸುತ್ತಾ ಬಂದಿರುವ ನಂದಿಕೂರು ಜನಜಾಗೃತಿ ಸಮಿತಿಯ ಈಗಿನ ಅಧ್ಯಕ್ಷ ಅನಿವಾಸಿ ಉದ್ಯಮಿ ಬಾಲಕೃಷ್ಣ ಶೆಟ್ಟಿ ಅವರು ಮೊದಲು ನಾಗಾರ್ಜುನ ಬಳಿಕ ಯುಪಿಸಿಎಲ್ ವಿರುದ್ಧ ವಿದೇಶದಲ್ಲಿದ್ದೇ ಕಾನೂನು ಹೋರಾಟ ನಡೆಸುತ್ತಿದ್ದಾರೆ.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...