ಎಸ್‌ಬಿಐಗೆ ಮತ್ತೆ ಸುಪ್ರೀಂ ಕೋರ್ಟ್ ಚಾಟಿ; ಮಾ.21ರೊಳಗೆ ಚುನಾವಣಾ ಬಾಂಡ್‌ಗಳ ಕ್ರಮಸಂಖ್ಯೆ ಸೇರಿದಂತೆ ಎಲ್ಲ ವಿವರಗಳ ಬಹಿರಂಗಕ್ಕೆ ಆದೇಶ

Source: Vb | By I.G. Bhatkali | Published on 20th March 2024, 1:05 AM | National News |

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಸೋಮವಾರ ಎಸ್‌ಬಿಐ ವಿರುದ್ಧ ಮತ್ತೆ ಚಾಟಿ ಬೀಸಿರುವ ಸರ್ವೋಚ್ಚ ನ್ಯಾಯಾಲಯವು, ವಿಶಿಷ್ಟ ಆಲ್ಫಾನ್ಯೂಮರಿಕ್ (ಅಕ್ಷರಸಂಖ್ಯಾಯುಕ್ತ) ಸಂಖ್ಯೆಗಳು ಸೇರಿದಂತೆ ತನ್ನ ಬಳಿ ಲಭ್ಯವಿರುವ ಬಾಂಡ್‌ಗಳ ಎಲ್ಲ ವಿವರಗಳನ್ನು ಮಾ.21ರೊಳಗೆ ಬಹಿರಂಗಗೊಳಿಸುವಂತೆ ಅದಕ್ಕೆ ಆದೇಶಿಸಿದೆ.

2019 ಎ 12ರಿಂದ 2024, ಫೆ.15 ರವರೆಗೆ ಸಂಪೂರ್ಣ ಪ್ರಕ್ರಿಯೆಯಲ್ಲಿ ಖರೀದಿಸಲಾದ ಚುನಾವಣಾ ಬಾಂಡ್‌ಗಳು ಮತ್ತು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಎಲ್ಲ ವಿವರಗಳನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ಎಸ್‌ಬಿಐಗೆ ತಾಕೀತು ಮಾಡಿತು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಚುನಾವಣಾ ಬಾಂಡ್‌ಗಳ ಆಯ್ದ ವಿವರಗಳನ್ನಷ್ಟೇ ಬಹಿರಂಗಗೊಳಿಸಿರುವ ಎಸ್‌ಬಿಐನ ಪ್ರವೃತ್ತಿಯ ವಿರುದ್ದ ಎಚ್ಚರಿಕೆ ನೀಡಿತು.

ಚುನಾವಣಾ ಬಾಂಡ್‌ಗಳ ಸಂಖ್ಯೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿದ ಸರ್ವೋಚ್ಚ ನ್ಯಾಯಾಲಯವು, ಬ್ಯಾಂಕಿನಿಂದ ಈ ಸಂಖ್ಯೆಗಳನ್ನು ಸ್ವೀಕರಿಸಿದ ಬಳಿಕ ಎಲ್ಲ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ತಕ್ಷಣ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೂ ಆದೇಶಿಸಿತು.

ಈ ವಿಷಯದಲ್ಲಿ ಇನ್ನಷ್ಟು ತೊಡಕುಗಳು, ಅನುಮಾನಗಳು ಅಥವಾ ಸಮಸ್ಯೆಗಳು ಉದ್ಭವಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಲು ಗುರುವಾರ, ಮಾ.21ರಂದು ಸಂಜೆ ಐದು ಗಂಟೆಯೊಳಗೆ ಪಾಲನಾ ವರದಿಯನ್ನೊಳಗೊಂಡ ವಿವರವಾದ ಅಫಿಡವಿಟ್ ಸಲ್ಲಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಸೂಚಿಸಿತು.

ಆದಾಗ್ಯೂ ಇನ್ನೊಂದು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು 2019,ಎ.12ರ ಮೊದಲು ಖರೀದಿಸಲಾದ ಮತ್ತು ನಗದೀಕರಿಸಿದ ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿಯನ್ನೂ ಬಹಿರಂಗಗೊಳಿಸುವಂತೆ ಎಸ್‌ಬಿಐಗೆ ಆದೇಶಿಸಲು ನಿರಾಕರಿಸಿತು.

ಎಸ್‌ಬಿಐ ಚುನಾವಣಾ ಬಾಂಡ್‌ಗಳ ಸಂಖ್ಯೆಗಳನ್ನು ಏಕೆ ಬಹಿರಂಗಗೊಳಿಸಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೋರಿದ್ದ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿತು.

'ಎಲ್ಲ ವಿವರಗಳನ್ನು ಬಹಿರಂಗಗೊಳಿಸುವಂತೆ ನಮ್ಮ ತೀರ್ಪಿನಲ್ಲಿ ನಾವು ಎಸ್‌ಬಿಐಗೆ ಸೂಚಿಸಿದ್ದೆವು ಮತ್ತು ಚುನಾವಣಾ ಬಾಂಡ್‌ಗಳ ಸಂಖ್ಯೆಗಳು ಈ ವಿವರಗಳಲ್ಲಿ ಸೇರಿದ್ದವು' ಎಂದು ಸೋಮವಾರ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...