ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ ನಾಲ್ಕನೇ ಸ್ಥಾನ

Source: so news | By MV Bhatkal | Published on 2nd May 2019, 12:28 AM | Coastal News |


ಕಾರವಾರ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೆ 4 ನೇ ಸ್ಥಾನ ಪಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ಸ್ಥಾನ ಕುಸಿತ ಕಂಡಿದೆ. ಆದರೆ, ಜಿಲ್ಲೆಯ ಕುಮಟಾದ ವಿದ್ಯಾರ್ಥಿನಿ ನಾಗಾಂಜಲಿ ನಾಯ್ಕ ಪೂರ್ಣಾಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷ.

ಒಟ್ಟಾರೆ ಪರೀಕ್ಷೆಗೆ ಕುಳಿತ 9,651 ವಿದ್ಯಾರ್ಥಿಗಳಲ್ಲಿ 8107 (ಶೇ. 88.12)ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಯೂ ಇಷ್ಟೇ ಪ್ರಮಾಣದ ಫಲಿತಾಂಶ ಬಂದಿತ್ತು. ಆದರೆ, ಸ್ಥಾನದಲ್ಲಿ ಮಾತ್ರ ವ್ಯತ್ಯಾಸವಾಗಿದೆ. ಜಿಲ್ಲೆಯ 11 ಸರ್ಕಾರಿ, 6 ಅನುದಾನಿತ ಹಾಗೂ 8 ಅನುದಾನ ರಹಿತ ಶಾಲೆಗಳು ಶೇ. 100 ರಷ್ಟು ಫಲಿತಾಂಶ ಪಡೆದಿವೆ.

ಅಂಕೋಲಾ ಪ್ರಥಮ: ಅಂಕೋಲಾ ತಾಲೂಕಿನ ಶೇ. 87.92 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ. ಶೇ. 86.50 ಫಲಿತಾಂಶ ಪಡೆದ ಕಾರವಾರ ಎರಡನೆಯ ಹಾಗೂ ಶೇ.86.14 ಫಲಿತಾಂಶ ಪಡೆದ ಹೊನ್ನಾವರ ಮೂರನೇ ಸ್ಥಾನದಲ್ಲಿದೆ. ಕುಮಟಾದ ಶೇ. 84.05 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಭಟ್ಕಳದ ಶೇ. 77.07 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ನಾಗಾಂಜಲಿಗೆ ಶಾಸಕರಿಂದ ಸನ್ಮಾನ 
ಕುಮಟಾ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ನಾಗಾಂಜಲಿ ನಾಯ್ಕ ಕುಮಟಾದ ಕೀರ್ತಿಯನ್ನು ರಾಜ್ಯಾದ್ಯಂತ ಪಸರಿಸಿದ್ದಾಳೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ತಾಲೂಕಿನ ಕಾಗಾಲದಲ್ಲಿ ವಿದ್ಯಾರ್ಥಿನಿ ನಾಗಾಂಜಲಿ ನಾಯ್ಕ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಕುಮಟಾ ಕ್ಷೇತ್ರ ಶೈಕ್ಷಣಿಕವಾಗಿ ಸಾಕಷ್ಟು ಉತ್ತಮ ಸಾಧನೆ ಮಾಡುತ್ತಲೇ ಬಂದಿದೆ. ಎಸ್​ಎಸ್​ಎಲ್​ಸಿಯಲ್ಲಿ ಕುಮಟಾದ ವಿದ್ಯಾರ್ಥಿನಿಯೊಬ್ಬರು ಮೊದಲ ರ್ಯಾಂಕ್ ಗಳಿಸಿದ್ದು ನಮ್ಮೆಲ್ಲರಿಗೂ ಖುಷಿ ಹಾಗೂ ಹೆಮ್ಮೆಯ ಸಂಗತಿ. ನಾಗಾಂಜಲಿಯ ಪ್ರಯತ್ನಶೀಲತೆ ಹಾಗೂ ಸರಳ ವ್ಯಕ್ತಿತ್ವ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದರು.

ಈ ವೇಳೆ ನಾಗಾಂಜಲಿಯ ತಂದೆ ಪರಮೇಶ್ವರ ನಾಯ್ಕ, ತಾಯಿ ಚೇತನಾ ನಾಯ್ಕ, ವಿನೋದ ಪ್ರಭು-ಹೆಗಡೆ, ಕುಮಾರ ಮಾರ್ಕಾಂಡೆ ಗೋಕರ್ಣ, ಜಗನ್ನಾಥ ನಾಯ್ಕ ಬಾಡ, ಗ್ರಾಮದ ಜನತೆ ಇದ್ದರು.

ಜಿಲ್ಲೆಯ ಟಾಪರ್​ಗಳು

ಕುಮಟಾ ಕಲಬಾಗ ಸಿವಿಎಸ್​ಕೆ ಹೈಸ್ಕೂಲ್​ನ ನಾಗಾಂಜಲಿ ಪರಮೇಶ್ವರ ನಾಯ್ಕ (ಶೇ.100), ಸಿ.ವಿ.ನಮೃತಾ, ಸೇಂಟ್ ಮೈಕಲ್ ಕಾನ್ವೆಂಟ್​ನ ಪ್ರಜಕ್ತಾ ನಿಖಿಲ್ ಶೇಣ್ವಿ(ಶೇ.99.52),ಭಟ್ಕಳ ಆನಂದಾಶ್ರಮ ಕಾನ್ವೆಂಟ್​ನ ಚೈತಾಲಿ ಎಲ್.ಮೊಗೇರ(ಶೇ.99.36), ಕಾರವಾರ ಬಾಲಮಂದಿರ ಹೈಸ್ಕೂಲ್​ನ ಸ್ನೇಹಾ ಅಪ್ಪಾಸಾಹೇಬ ಕಾಳೆ(ಶೇ.99.20), ಕುಮಟಾ ನಿರ್ಮಲಾ ಕಾನ್ವೆಂಟ್​ನ ಗ್ರೀಷ್ಮಾ ಪಾಂಡುರಂಗ, ಸಿವಿಎಸ್​ಕೆಯ ತೇಜಸ್ವಿನಿ ಕೃಷ್ಣಾನಂದ ಶಾನಬಾಗ(ಶೇ.00.04), ಆನಂದಾಶ್ರಮದ ಶ್ರದ್ಧಾ ವಿನೋದ ಪ್ರಭು, ಸಿವಿಎಸ್​ಕೆಯ ಸುದಿತಿ ಗಣೇಶ ಕಾಮತ್, ವಸುಧಾ ರಾಧಾಕೃಷ್ಣ ಪ್ರಭು, ಪ್ರಮೋದ ಲಿಂಗರಾಜ ನಾಯ್ಕ, ಕುಮಟಾ ಚಿತ್ರಗಿ ಮಹಾತ್ಮಾಗಾಂಧಿ ಹೈಸ್ಕೂಲ್​ನ ಪ್ರೀತಿ ರವಿರಾಜ ಕಡ್ಲೆ, ಆನಂದಾಶ್ರಮದ ಅಂಕಿತಾ ಗಣಪತಿ ಭಟ್ (ಶೇ. 98.88).

12ನೇ ಸ್ಥಾನಕ್ಕೇರಿದ ಶಿರಸಿ ಶೈಕ್ಷಣಿಕ ಜಿಲ್ಲೆ

ಶಿರಸಿ: ಕಳೆದ ವರ್ಷ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ 21ನೇ ಸ್ಥಾನಕ್ಕೆ ಕುಸಿದಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆ ಈ ವರ್ಷ ಶೇ. 84.67 ಉತ್ತೀರ್ಣದೊಂದಿಗೆ 12ನೇ ಸ್ಥಾನಕ್ಕೇರಿದೆ. ಕಳೆದ ವರ್ಷದ ಅವಮಾನವನ್ನು ಗಂಭೀರವಾಗಿ ಪರಿಗಣಿಸಿ ಕೈಗೊಂಡ ಕ್ರಮಗಳು ಸ್ವಲ್ಪ ಮಟ್ಟಿಗೆ ಪರಿಣಾಮ ನೀಡಿವೆ.

ಒಟ್ಟು 9523 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7726 ವಿದ್ಯಾರ್ಥಿಗಳು ಉತ್ತೀರ್ಣ, 1797 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶೇ.84.07, ಇಂಗ್ಲಿಷ್ ಮಾಧ್ಯಮದಲ್ಲಿ ಶೇ.92.83, ಉರ್ದು ಮಾಧ್ಯಮ ಶೇ.64.57 ಹಾಗೂ ಮರಾಠಿ ಮಾಧ್ಯಮ ಶೇ.72.58ರಷ್ಟು ಫಲಿತಾಂಶ ಲಭಿಸಿದೆ. ಸರ್ಕಾರಿ ಶಾಲೆಗಳ ಫಲಿತಾಂಶ ಶೇ. 84.65, ಅನುದಾನಿತ ಶಾಲೆಗಳ ಫಲಿತಾಂಶ ಶೇ.84.47 ಹಾಗೂ ಅನುದಾನರಹಿತ ಶಾಲೆಗಳ ಫಲಿತಾಂಶ ಶೇ.87.21 ಆಗಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ 171 ಪ್ರೌಢಶಾಲೆಗಳಲ್ಲಿ 20 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ನಿತ್ಯಾ ಮಹೇಶ ಭಟ್ ಹಾಗೂ ಸಿದ್ಧಿವಿನಾಯಕ ಪ್ರೌಢಶಾಲೆಯ ಅವನಿ ಶಶಿಭೂಷಣ ಹೆಗಡೆ ಶೇ. 99.68 ರ ಸಾಧನೆಯೊಂದಿಗೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ. ಹಳಿಯಾಳ ತಾಲೂಕಿನಲ್ಲಿ ಶೇ.82.53, ಜೊಯಿಡಾ ತಾಲೂಕಿನಲ್ಲಿ ಶೇ.75.15, ಮುಂಡಗೋಡ ತಾಲೂಕಿನಲ್ಲಿ ಶೇ.79.62, ಸಿದ್ದಾಪುರ ತಾಲೂಕಿನಲ್ಲಿ ಶೇ.94.31, ಶಿರಸಿ ತಾಲೂಕಿನಲ್ಲಿ ಶೇ.84.09 ಹಾಗೂ ಯಲ್ಲಾಪುರ ತಾಲೂಕಿನಲ್ಲಿ ಶೇ.87.44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಳೆದ ವರ್ಷ ಫಲಿತಾಂಶ ಕುಸಿಯುತ್ತಿ ದ್ದಂತೆಯೇ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಗಳ ಸಾಧನೆಯನ್ನು ಪರೀಕ್ಷೆಗಳ ಮೂಲಕ ಅವಲೋಕನ ಮಾಡಿದ್ದಾರೆ. ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನು ಅರಿತು ಪ್ರತ್ಯೇಕ ತರಗತಿಗಳು, ರಾತ್ರಿ ಶಾಲೆಗಳನ್ನೂ ನಡೆಸಿದ್ದರು. ಪ್ರತಿ ಭಾಷಾ ವಿಷಯಕ್ಕೆ ಸಂಬಂಧಿಸಿ ಶಿಕ್ಷಕರ ಸಭೆ ನಡೆಸಿ ಪರಸಪರ ಅಭಿಪ್ರಾಯ ಹಂಚಿಕೆಗೆ ಅವಕಾಶ ಮಾಡಿಕೊಟ್ಟಿದ್ದರು.

ಪರೀಕ್ಷೆಯ ದಿನಗಳು ಬಂದಂತೆ ವಿಶೇಷ ಕಾಳಜಿ ಮೂಲಕ ಹೆಚ್ಚಿನ ತರಗತಿ ನಡೆಸಿದ್ದರು. ಈ ಎಲ್ಲ ಯತ್ನಗಳ ಫಲ ಈಗ ಲಭಿಸಿದೆ. ಆದರೆ, 12ನೇ ಸ್ಥಾನ ಲಭಿಸುವ ಮೂಲಕ ಯತ್ನ ಇನ್ನೂ ಸಾಲದು ಎಂಬ ಸೂಚನೆಯೂ ದೊರೆತಂತಾಗಿದೆ.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...