ಭಟ್ಕಳ: ಕೊರೊನಾ ಮಾರ್ಗಸೂಚಿ ಅನುಷ್ಠಾನದಲ್ಲಿ ತಾರತಮ್ಯ ಆರೋಪ; ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿರುವ ಅಂಗಡಿಕಾರರು; ಎಲ್ಲರಿಗೂ ನಿಯಮ ಒಂದೇ ಆಗಿರಲಿ

Source: S O News service | By V. D. Bhatkal | Published on 27th April 2021, 1:36 PM | Coastal News |

ಭಟ್ಕಳ: ಕೊರೊನಾ ತಡೆ ಮಾರ್ಗಸೂಚಿಯಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದ ಅಂಗಡಿಕಾರರು, ಇದೀಗ ಅದೇ ಮಾರ್ಗಸೂಚಿ ಅನುಷ್ಠಾನದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ. 

 ಸರಕಾರದ ಮಾರ್ಗಸೂಚಿಯ ಪ್ರಕಾರ ದಿನಸಿ, ಕೃಷಿ ಸಂಬಂಧಿದ ಉಪಕರಣಗಳು ಇತ್ಯಾದಿ ಅವಶ್ಯಕ ವಸ್ತುಗಳ ಮಾರಾಟಕ್ಕಷ್ಟೇ ಅವಕಾಶ ನೀಡಲಾಗಿದ್ದು, ಬಟ್ಟೆಬರೆ, ಚಪ್ಪಲಿ, ಮೊಬೈಲ್ ಅಂಗಡಿ ಇತ್ಯಾದಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಆದರೆ ಭಟ್ಕಳ ಪಟ್ಟಣ ವ್ಯಾಪ್ತಿಯಲ್ಲಿಯೇ 100ಕ್ಕೂ ಅಧಿಕ ಬಟ್ಟೆ ಅಂಗಡಿಗಳಿದ್ದು, ಕೊರೊನಾ ಮಾರ್ಗಸೂಚಿ ಬಟ್ಟೆ ಅಂಗಡಿ ಮಾಲಕರಿಗೆ ಬರೆ ಎಳೆದಂತಾಗಿದೆ.

ಕಿರಾಣಿ ಅಂಗಡಿ, ಬ್ಯಾಂಕು, ವಾಹನಗಳಲ್ಲಿ ಕೋವಿಡ್ ನಿಯಮವನ್ನು ಗಾಳಿ ತೂರಿ ಹೆಚ್ಚಿನ ಜನರು ಸೇರುತ್ತಿದ್ದಾರೆ. ಅಲ್ಲಿ ಇರದ ಕಾನೂನು ಬಟ್ಟೆ, ಚಪ್ಪಲಿ ಅಂಗಡಿಗಳಿಗೆ ಏಕೆ?
  - ಆಫಾಕ್ ಚಾಮುಂಡಿ, ಅಂಗಡಿಕಾರರು

ಅಲ್ಲದೇ ಮದುವೆ, ಹಬ್ಬದ ಪ್ರಯುಕ್ತ ತರೇವಾರಿ ಉಡುಪುಗಳು ಭಟ್ಕಳಕ್ಕೆ ರಾಶಿಯಾಗಿ ಬಂದು ಬಿದ್ದಿದ್ದು, ಮಾರಾಟ ಮಾಡದೇ ಬದುಕು ನಡೆಸುವುದೇ ಕಷ್ಟ ಎಂಬಂತಾಗಿದೆ. ಈ ನಡುವೆ ಕಳೆದ ವಾರ ಕೆಲ ವ್ಯಾಪಾರಿಗಳು ಕದ್ದುಮುಚ್ಚಿ ವ್ಯಾಪಾರ ವಹಿವಾಟು ನಡೆಸಿದ್ದರು. ಆದರೆ ವಾರಾಂತ್ಯದ ಕಫ್ರ್ಯೂ ಅದಕ್ಕೂ ತಡೆ ನೀಡಿತು. ಆದರೆ ಸೋಮವಾರ ಬಟ್ಟೆಬರೆ ವ್ಯಾಪಾರಕ್ಕೆ ದಿನದಲ್ಲಿ ಒಂದೆರಡು ಗಂಟೆಯ ಅವಧಿಯವರೆಗಾದರೂ ಅವಕಾಶ ಸಿಗಲಿದೆ ಎಂದುಕೊಂಡೇ ಹಲವರು ಅಂಗಡಿ ಬಾಗಿಲನ್ನು ತೆರೆಯಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ತಡೆ ನೀಡಿದ್ದು, ಬಟ್ಟೆ ಅಂಗಡಿ ಮಾಲಕರ ಆಕ್ರೋಶ ಭುಗಿಲೆದ್ದಿದೆ.

ಎಲ್ಲರಿಗೂ ಒಂದೇ ನಿಯಮ ಮಾಡಿ:
ಕೊರೊನಾ ಮಾರ್ಗಸೂಚಿ ಅನುಷ್ಠಾನದ ನಡುವೆ ಶಿರಾಲಿ, ಮುರುಡೇಶ್ವರ, ಸರ್ಪನಕಟ್ಟೆ ಭಾಗಗಳಲ್ಲಿ ಬಟ್ಟೆ ಅಂಗಡಿಗಳು ಬಾಗಿಲು ತೆರೆದುಕೊಂಡು ವ್ಯಾಪಾರ ನಡೆಸಿವೆ. ಕೆಲವು ಕಡೆ ಈಗಲೂ ಹಿಂಬಾಗಿಲ ವ್ಯವಹಾರ ನಡೆಯುತ್ತಲೇ ಇದೆ. ಆದರೆ ಅಧಿಕಾರಿಗಳು ಭಟ್ಕಳ ಪಟ್ಟಣವನ್ನಷ್ಟೇ ಕೇಂದ್ರೀಕರಿಸಿಕೊಂಡು ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ, ದಿನಸಿ ಅಂಗಡಿಗಳನ್ನೂ ಸೇರಿಸಿ ಲಾಕ್‍ಡೌನ್ ಹೇರುವುದಾದರೂ ನಮ್ಮ ಅಭ್ಯಂತರ ಏನೂ ಇಲ್ಲ, ಕಿರಾಣಿ ಅಂಗಡಿ, ಬ್ಯಾಂಕು, ವಾಹನಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಜನರು ಒಂದೆಡೆ ಸೇರುತ್ತಿದ್ದಾರೆ. ಅಲ್ಲಿ ಇರದ ಕಾನೂನು ಬಟ್ಟೆ, ಚೆಪ್ಪಲಿ ಅಂಗಡಿಗಳಿಗೆ ಏಕೆ, ನಾವು ಸಾಲ ಮಾಡಿಕೊಂಡು ವ್ಯಾಪಾರಕ್ಕೆ ಇಳಿದಿದ್ದೇವೆ, ಕೋವಿಡ್ ಹೆಸರಿನಲ್ಲಿ ನಮ್ಮನ್ನು ಮಾತ್ರ ನಿರ್ಬಂಧಿಸುವುದು ಸರಿಯಲ್ಲ, ಕೊರೊನಾ ತಡೆ ಮಾರ್ಗಸೂಚಿ ಎಲ್ಲರಿಗೂ ಒಂದೇ ಆಗಿರಲಿ ಎಂದು ವ್ಯಾಪಾರಿಗಳು ಆಕ್ರೋಶವನ್ನು ಹೊರ ಹಾಕಿದರು. ಸ್ಥಳದಲ್ಲಿ ಜನರು ಜಮಾವಣೆಯಾಗುತ್ತಿದ್ದಂತೆಯೇ ಸಿಪಿಐ ದಿವಾಕರ, ಎಸೈ ಸುಮಾ ಸಿಬ್ಬಂದಿಗಳೊಡನೆ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಆಗಮಿಸಿ ಗುಂಪನ್ನು ಚೆದುರಿಸಿದರು. ನಂತರ ಮಾತನಾಡಿದ ಸಿಪಿಐ ದಿವಾಕರ, ಕೋವಿಡ್ ತಡೆಯ ದೃಷ್ಟಿಯಿಂದ ಸಾಮಾಜಿಕ ಅಂತರ ಪಾಲನೆ ಮಾಡಬೇಕಾದ ಅಗತ್ಯ ಇದ್ದು, ಸಾರ್ವಜನಿಕರು ಸಹಕಾರ ನೀಡಬೇಕು, ನಿಯಮ ಮೀರಿ ರಸ್ತೆಗೆ ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಭಟ್ಕಳ ಪುರಸಭಾ ಮುಖ್ಯಾಧಿಕಾರಿ ದೇವರಾಜ ಉಪಸ್ಥಿತರಿದ್ದರು.  

 

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...