ಅಭಿವ್ಯಕ್ತಿ ಸ್ವಾತಂತ್ರ ದಮನಗಳ್ಳುತ್ತಿದೆ- ಮುಖ್ಯಮಂತ್ರಿ 

Source: sonews | By Staff Correspondent | Published on 24th November 2017, 5:17 PM | State News | Don't Miss |

 

 

ಮೈಸೂರು: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಲ್ಲಿಗೆ ನಗರ ಮೈಸೂರಿನಲ್ಲಿ ಆದ್ದೂರಿ ಯಾಗಿ ಚಾಲನೆ ದೊರಕಿತು.

 ಮೈಸೂರಿನ ಮಹಾರಾಜ ಕಾಲೇಜು ಮೈದಾನದ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ಕನ್ನಡ ನುಡಿಹಬ್ಬವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಾಹಿತ್ಯ, ಸಂಗೀತ, ಚಿತ್ರಕಲೆ, ಮಾಧ್ಯಮ ಎಲ್ಲವೂ ಈ ಅಭಿವ್ಯಕ್ತಿ ಸ್ವಾತಂತ್ರದ ವಿಭಿನ್ನ ಮುಖಗಳು. ಅಭಿಪ್ರಾಯಗಳು ರೂಪುಗೊಳ್ಳುವುದೇ ಮುಕ್ತವಾದ ಅಭಿವ್ಯಕ್ತಿ ಮೂಲಕ. ಪ್ರಜಾಪ್ರಭುತ್ವ ಗಟ್ಟಿಗೊಳ್ಳುವುದು ಕೂಡಾ ಇದರಿಂದಲೇ. ಆದರೆ ಇತ್ತೀಚೆಗೆ ಈ ಅಭಿವ್ಯಕ್ತಿ ಸ್ವಾತಂತ್ರವನ್ನು ದೇಶ ಭಕ್ತಿ, ಧರ್ಮ ಭಕ್ತಿ, ರಾಷ್ಟ್ರೀಯತೆ ಮೊದಲಾದವುಗಳ ಹೆಸರಲ್ಲಿ ದಮನ ಮಾಡುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ ಎಂದರು.

ಹಿರಿಯ ಸಾಹಿತಿ, ಚಿಂತಕ ಪ್ರೊ. ಚಂದ್ರಶೇಖರ ಪಾಟೀಲ ಅವರು ಸಮ್ಮೇಳನಾಧ್ಯಕ್ಷ ವಹಿಸಿದ್ದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್, ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವ ಡಾ ಎಂ.ಸಿ.ಮೋಹನ್ ಕುಮಾರಿ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಮೊದಲಾದವರು ವೇದಿಕೆಯಲ್ಲಿದ್ದರು.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸಮ್ಮೇಳನದ ಪ್ರಧಾನ ವೇದಿಕೆಯವರೆಗೆ ಸಾಗಿದ ಮೆರವಣಿಗೆ ಆಕರ್ಷಕವಾಗಿತ್ತು. ಬಳಿಕ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಎಚ್.ಸಿ.ಮಹದೇವಪ್ಪ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ನಾಡ ಧ್ವಜಾರೋಹಣಗೈದರು.

ಎಂಭತ್ತಮೂರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಭಾಷಣದ ಯಥಾಪ್ರತಿ.

24-11-2017 / ಮಹಾರಾಜ ಕಾಲೇಜು ಮೈದಾನ, ಮೈಸೂರು

ಈ ಸಮ್ಮೇಳನಾಧ್ಯಕ್ಷರಾದ ಪ್ರೊ ಚಂದ್ರಶೇಖರ ಪಾಟೀಲ್ ಅವರೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ ಬರಗೂರು ರಾಮಚಂದ್ರಪ್ಪ ಅವರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ, ಲೋಕೋಪಯೋಗಿ ಸಚಿವರಾದ ಡಾ ಹೆಚ್. ಸಿ.ಮಹದೇವಪ್ಪ ಅವರೆ,

ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಉಮಾಶ್ರೀ ಅವರೆ,

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ತನ್ವೀರ್ ಸೇಠ್ ಅವರೆ,

ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರಾದ ಡಾ ಎಂ.ಸಿ. ಮೋಹನ್ ಕುಮಾರಿ ಅವರೆ,

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ಮನು ಬಳಿಗಾರ್ ಅವರೆ,

ಸಂಸದ, ಶಾಸಕ ಮಿತ್ರರೆ, ಕನ್ನಡ ಸಾರಸ್ವತ ಲೋಕದ ದಿಗ್ಗಜರೆ, ವೇದಿಕೆಯ ಮೇಲಿನ ಎಲ್ಲಾಗಣ್ಯರೆ, ಮಾಧ್ಯಮದ ಸ್ನೇಹಿತರೆ, ನುಡಿ ಹಬ್ಬಕ್ಕೆ ಸಾಕ್ಷಿಯಾಗಲು ಆಗಮಿಸಿರುವ ಕನ್ನಡದ ಎಲ್ಲಾ ಸೋದರ-ಸೋದರಿಯರೆ,

1. ಕರ್ನಾಟಕದ ಸಾಂಸ್ಕೃತಿಕ ನಗರ ಎಂದೇ ಪ್ರಸಿದ್ಧವಾಗಿರುವ ಮೈಸೂರು ನಗರದಲ್ಲಿ ಆಯೋಜಿಸಿರುವ ಎಂಭತ್ತ ಮೂರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅಭಿಮಾನದಿಂದ ಹಾಗೂ ಸಂತೋಷದಿಂದ ಉದ್ಘಾಟಿಸಿದ್ದೇನೆ. ಇದು ನನ್ನ ಬದುಕಿನ ಸಾರ್ಥಕ ಕ್ಷಣ ಗಳಲ್ಲೊಂದು. ಇದಕ್ಕೆ ಹಲವಾರು ಕಾರಣಗಳಿವೆ.

2. ಮೊದಲನೆಯದಾಗಿ, ನನ್ನ ಹುಟ್ಟೂರು ಮೈಸೂರು. ನನಗೆ ಕನ್ನಡದ ದೀಕ್ಷೆಯನ್ನು ಕೊಟ್ಟ ನೆಲ ಮೈಸೂರು. ಇದೇ ಕನ್ನಡ ಕರ್ಮಭೂಮಿಯ ಗರಡಿಯಲ್ಲಿ ಕನ್ನಡ ಪ್ರಜ್ಞೆಯನ್ನು ಬೆಳೆಸಿಕೊಂಡವನು ನಾನು. ಕನ್ನಡ ನಾಡು-ನುಡಿಯ ಬಗ್ಗೆ ನನ್ನಲ್ಲಿರುವ ಬದ್ಧತೆಗೆ, ಮೈಸೂರಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು, ಕನ್ನಡದ ಹೋರಾಟಗಾರರು ಮತ್ತು ಕನ್ನಡ ಪ್ರೇಮಿಗಳು ಇಲ್ಲಿ ನಿರ್ಮಿಸಿರುವ ಕನ್ನಡದ ವಾತಾವರಣ ಕಾರಣ ಎಂದು ಹೇಳಲು ನನಗೆಹೆಮ್ಮೆಯಾಗುತ್ತಿದೆ.

3. ಎರಡನೆಯದಾಗಿ, ಕನ್ನಡ ಸಾಹಿತ್ಯ ಪರಿಷತ್ಸ್ಥಾಪನೆಯ ರೂವಾರಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ಹುಟ್ಟಿದ ನೆಲವೂ ಮೈಸೂರು. ಒಡೆಯರ್ ಅವರು ಸಾಮಾಜಿಕ ನ್ಯಾಯದ ಹರಿಕಾರರು ಮಾತ್ರವಲ್ಲ, ಅಪ್ಪಟ ಕನ್ನಡ ಪ್ರೇಮಿಯೂ ಹೌದು. ನುಡಿ ಬೆಳೆಯಬೇಕಾದರೆ ನಾಡು ಅಭಿವೃದ್ಧಿಯಾಗಬೇಕು ಎಂಬ ಕನಸು ಕಂಡವರು.

4. ಭಾರತದಲ್ಲಿ ಪ್ರಜಾಪ್ರಭುತ್ವವು ಚಿಗುರೊಡೆಯುವ ಮುನ್ನವೇ, ಮೈಸೂರು ಪ್ರಜಾಪ್ರತಿನಿಧಿ ಸಭೆಯ ಹೆಸರಿನಲ್ಲಿ ಪ್ರಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಮೇರು ಪರಿಕಲ್ಪನೆಯನ್ನು ಪರಿಚಯಿಸಿದ ಶ್ರೀ ಚಾಮರಾಜೇಂದ್ರ ಒಡೆಯರ್ ಅವರ ಸದಾಶಯಗಳನ್ನು ಮುಂದುವರೆಸಿ ಪ್ರಭುವಾಗಿದ್ದರೂ ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಆಡಳಿತ ನಡೆಸಿದವರು ಶ್ರೀಕೃಷ್ಣರಾಜ ಒಡೆಯರ್ ಅವರು.

5. ಪ್ರಜೆಗಳ ಬಗ್ಗೆ ಅವರಿಗಿದ್ದ ಕಾಳಜಿ ಮತ್ತುದೂರದೃಷ್ಟಿ ರಾಜಕಾರಣಿಗಳಾಗಿರುವ ನಮಗೆಲ್ಲಾ ಮಾದರಿ. ಕನ್ನಂಬಾಡಿ ಜಲಾಶಯವನ್ನು ನಿರ್ಮಿಸಲು ಅರಮನೆಯ ಆಭರಣಗಳನ್ನುಮಾತ್ರವಲ್ಲ, ಮಹಾರಾಣಿಯವರ ಮೈ ಮೇಲಿನ ಒಡವೆಗಳನ್ನೂ ಮಾರಾಟ ಮಾಡಿದ್ದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರಿಗೆ ನಾವೆಲ್ಲರೂ ಸದಾಕಾಲ ಋಣಿಯಾಗಿರಬೇಕು. ಈ ಸಮ್ಮೇಳನವು ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರಿಗೆನಾವು ಸಲ್ಲಿಸುವ ಗೌರವವೂ ಹೌದು.

6. ಮೂರನೆಯದಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಹುಟ್ಟಿದ ಊರಿನಲ್ಲಿಯೇ ಸಮ್ಮೇಳನವನ್ನು ಉದ್ಘಾಟಿಸುವ ಭಾಗ್ಯ ನನ್ನದು.

7. ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಪ್ರೊ.ಚಂದ್ರಶೇಖರ ಪಾಟೀಲ್ ಅವರನ್ನು ಆಯ್ಕೆ ಮಾಡಿರುವುದು ಹೆಮ್ಮೆ ಹಾಗೂ ಗೌರವದ ವಿಚಾರ. ಮೊದಲಿಗೆ ಅವರಿಗೆ ಅಭಿನಂದನೆಗಳು.

8. ಕರ್ನಾಟಕದ ಮತ್ತೊಂದು ಸಾಂಸ್ಕೃತಿಕ ನಗರವಾದ ಧಾರವಾಡದಲ್ಲಿ ತಮ್ಮ ವೃತ್ತಿಜೀವನವನ್ನು ನಡೆಸಿದರೂ ನಿಜವಾದ ನಾಡೋಜನಾಗಿ ಚಂಪಾ ಅವರು ಇಡೀ ರಾಜ್ಯದಲ್ಲಿ ಕನ್ನಡದ ಯುವ ಮನಸ್ಸುಗಳನ್ನು ಬೆಳೆಸಿದವರು. ತಮ್ಮ ಸಂಕ್ರಮಣ ಪತ್ರಿಕೆಯ ಮೂಲಕ ಕನ್ನಡದ ಸಾಕ್ಷಿ ಪ್ರಜ್ಞೆ ಯಾಗಿ ದುಡಿದವರು. ಕನ್ನಡ ಕನ್ನಡ ಬರ್ರಿ ನಮ್ಮಸಂಗಡಎಂದು ಇಡೀ ಕರ್ನಾಟಕದ ಮಹಾಮನಸ್ಸುಗಳನ್ನು ಕನ್ನಡದ ಸೇವೆಗೆ ಕಂಕಣಬದ್ಧರಾಗಿಸಿದವರು. ಚಂಪಾ ಅವರಿಗೆ ಮತ್ತೊಮ್ಮೆ ನನ್ನ ಅಭಿನಂದನೆಗಳು.

9. ಮೈಸೂರು ಅನೇಕ ಸಾಹಿತಿಗಳ ತವರು. ಬಿಎಂಶ್ರೀ, ತೀನಂಶ್ರೀ, ಕುವೆಂಪು, ಡಿ. ಎಲ್. ನರಸಿಂಹಾಚಾರ್ ಅವರಿಂದ ಮೊದಲ್ಗೊಂಡು ದೇಜಗೌ, ಹಾ ಮಾ ನಾಯಕ್, ಜಿ. ಎಸ್. ಶಿವರುದ್ರಪ್ಪ, ಡಾ ಪ್ರಭುಶಂಕರ, ಸು ಜ ನಾ, ಡಾಟಿ. ವಿ. ವೆಂಕಟಾಚಲ ಶಾಸ್ತ್ರಿ, ಎಸ್. ಎಲ್. ಬೈರಪ್ಪ, ದೇವನೂರ ಮಹಾದೇವ, ಆಲನಹಳ್ಳಿ ಕೃಷ್ಣ, ಹೆಚ್. ಜೆ. ಲಕ್ಕಪ್ಪ ಗೌಡ, ಹಿ. ಚಿ. ರಾಮಚಂದ್ರಗೌಡ, ಸಿ. ಪಿ. ಕೃಷ್ಣ ಕುಮಾರ್, ಪ್ರಧಾನ್ ಗುರುದತ್, ಜಿ. ಹೆಚ್. ನಾಯಕ್, ಚ. ಸರ್ವಮಂಗಳ ಅವರವರೆಗೆ ಹಲವು ವಿದ್ವತ್ ಜನರಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡ ನಗರ ಇದಾಗಿದೆ.

10. ಈ ಮಹನೀಯರೇ ನಮಗೆ ವೈಚಾರಿಕ ಸ್ಪಷ್ಟತೆಯನ್ನು, ಮುಂದಿನ ಗುರಿಯನ್ನು, ಸಾಗಬೇಕಾದ ದಾರಿಯನ್ನು ತೋರಿಸಿಕೊಟ್ಟವರು. ಇದನ್ನು ಹೇಳುವಾಗ ರಾಷ್ಟ್ರಕವಿ ಕುವೆಂಪು ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ರಾಜ್ಯ-ಕೇಂದ್ರಗಳ ಸಂಬಂಧದ ಬಗ್ಗೆ ಆಡಿರುವ ಮಾತುಗಳು ನನಗೆ ನೆನಪಾಗುತ್ತದೆ.

11. ಕುವೆಂಪು ಅವರು ಹೇಳುತ್ತಾರೆ : ಭರತಖಂಡವು ಒಂದು ಜನಾಂಗವೂ ಅಲ್ಲ, ಅನೇಕ ಜನಾಂಗಗಳೂ ಅಲ್ಲ; ಅದು ಅನೇಕ ಜನಾಂಗಗಳ ಒಂದು ಜನಾಂಗ. ಆದ್ದರಿಂದಲೇ ಭರತ ಮಾತೆಯನ್ನು ಎಷ್ಟರ ಮಟ್ಟಿಗೆ ಆರಾಧಿಸುತ್ತಿದ್ದೇವೆಯೋ ಅಷ್ಟರ ಮಟ್ಟಿಗೆ ಕರ್ನಾಟಕ ಮಾತೆಯನ್ನು ಪೂಜಿಸಲು ನಮಗೆ ಸಾಧ್ಯವಾಗಿದೆ.

12. ತನ್ನ ಸಂಸಾರವನ್ನು ಪ್ರೀತಿಸಿದ ಮಾತ್ರದಿಂದಲೇ ಯಾರೂ ಸಮಾಜಕ್ಕೆ ವೈರಿಯಾಗಲಾರನು, ಸಮಾಜವೆಂದರೇನು ? ಅಂತಹ ಅಸಂಖ್ಯ ಸಮಾಜದ ಸುಖ, ಎಲ್ಲಾ ಪ್ರಾಂತಗಳ ಅಂಗ ಸೌಂದರ್ಯದಿಂದ ತಾನೇ ಭರತ ಮಾತೆ ಸರ್ವಾಂಗ ಸುಂದರಿಯಾಗುತ್ತಾಳೆ. ಆದುದರಿಂದ ಪ್ರಾಂತ-ಪ್ರಾಂತಗಳ ಹಿತಾಸಕ್ತಿ ರಕ್ಷಣೆಯ ಸ್ವಾತಂತ್ರ್ಯವು ಭರತ ಖಂಡದ ಪೂರ್ಣ ಸ್ವಾತಂತ್ರ್ಯದಷ್ಟೇ ಅವಶ್ಯವಾದುದು.

13. ಪ್ರತಿಯೊಂದು ಪ್ರಾಂತ್ಯಕ್ಕೂ ಅದರ ಬೆಳೆ, ಕೈಗಾರಿಕೆ, ಹಣಕಾಸಿನ ವ್ಯವಸ್ಥೆ, ಸಾಹಿತ್ಯ-ಸಂಸ್ಕøತಿ ಮೊದಲಾದವುಗಳನ್ನು ಕಾಪಾಡಿಕೊಳ್ಳುವ ಹಕ್ಕು ಅತ್ಯಾವಶ್ಯಕವಾಗಿ ಬೇಕಾಗುತ್ತದೆ. ಆ ಹಕ್ಕಿಗೆ ಭಂಗ ಬಂದರೆ ಭರತಖಂಡವು ಸಂಪೂರ್ಣ ಸ್ವರಾಜ್ಯವನ್ನು ಸಂಪಾದಿಸಿದರೂ ಆ ಸ್ವಾತಂತ್ರ್ಯವು ಭಗ್ನ ದರ್ಪಣವಾಗುತ್ತದೆ. ಹಾಗಾಗಬೇಕೆಂದು ಯಾವ ದೇಶಭಕ್ತರೂ ಹಾರೈಸುವುದಿಲ್ಲ. ಹಾಗಾಗದಂತೆ ನೋಡಿಕೊಳ್ಳುವುದು ನಮ್ಮ ಪರಮಪ್ರಾಣ ಕರ್ತವ್ಯ, ಇವು ಕುವೆಂಪು ಅವರು ಹೇಳಿರುವ ಮಾತುಗಳು.

14. ಇದು ಕರ್ನಾಟಕಕ್ಕೆ ಮಾತ್ರ ಹೇಳಿರುವ ಮಾತುಗಳೆಂದು ಭಾವಿಸಬೇಕಾಗಿಲ್ಲ. ಒಕ್ಕೂಟ ವ್ಯವಸ್ಥೆಯೊಳಗೆ ಎಲ್ಲಾ ರಾಜ್ಯಗಳ ಸ್ವತಂತ್ರಅಸ್ಮಿತೆಯ ಬಗ್ಗೆ ಹೇಳಿರುವ ಮಾತುಗಳು. ಈಬಗೆಯ ನಡೆ-ನುಡಿಗಳು ಕರ್ತವ್ಯದ ಪ್ರಮುಖ ಭಾಗಗಳು. ನಮ್ಮ ಸರ್ಕಾರ ಈ ಕರ್ತವ್ಯ ಭಾಗವನ್ನು ಸದಾ ಎಚ್ಚರಗತಿಯಲ್ಲಿ ಪರಿಪಾಲಿಸಿಕೊಂಡು ಬರುತ್ತಿದೆ.

15. ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ! ಅದು ಕನ್ನಡದ ಜನ, ನೆಲ, ಜಲ, ಬದುಕು,ಸಾಹಿತ್ಯ, ಸಂಸ್ಕøತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡ ಕರ್ನಾಟಕ, ಅದುವೇ ಕನ್ನಡತನ. ಕರ್ನಾಟಕದ ನೆಲದಲ್ಲಿ ವಾಸಿಸುತ್ತಿರುವವರೆಲ್ಲರೂ ಕನ್ನಡಿಗರು ಎಂದು ನಾವು ತಿಳಿದು ಕೊಂಡಿದ್ದೇವೆ.

16. ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ.ಅದು ನನ್ನ ಬದುಕು. ನಾನು ಹುಟ್ಟು ಕನ್ನಡ ಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಸಾರ್ವತ್ರಿಕ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯವರೆಗೆ ನೆಲ-ಜಲ-ನುಡಿಯ ಬಗ್ಗೆಎಂದೂ ರಾಜೀಮಾಡಿ ಕೊಂಡಿಲ್ಲ, ಎಂದೂ ರಾಜಕೀಯವನ್ನೂ ಮಾಡಿಲ್ಲ.

17. ಕನ್ನಡ ನಾಡು, ನುಡಿ ಮತ್ತು ಜನ ಬೇರೆ ಬೇರೆ ಅಲ್ಲ ಎನ್ನುವ ಅಭಿಪ್ರಾಯ ನನ್ನದು. ಆದ್ದರಿಂದಲೇ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರೂಪಿಸಿ ಬೆಳೆಸಿರುವ ಕರ್ನಾಟಕ ಅಭಿವೃದ್ದಿ ಮಾದರಿಎನ್ನುವುದು ಈ ನೆಲದ ಭಾಷಾ ಅಸ್ಮಿತೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ನಾಡಿನ ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಆಶಯವನ್ನೂ ಹೊಂದಿದೆ.

18. ಭಾಷೆ ಎನ್ನುವುದು ಕೇವಲ ಭಾವನಾತ್ಮಕ ವಿಷಯ ಅಲ್ಲ. ಭಾಷೆಯ ವಿಷಯ ಬಂದಾಗ ನಾವು ಭಾವುಕರಾಗುತ್ತೇವೆ, ಇದು ತಪ್ಪಲ್ಲ, ಆದರೆ,ಅದು ಅಷ್ಟಕ್ಕೆ ನಿಲ್ಲಬಾರದು. ಅದು ಬದುಕು ರೂಪಿಸುವ ಸಮರ್ಥ ಸಾಧನವೂ ಆಗಬೇಕು. ನಮ್ಮದು ಕೇವಲ ಮಾತನಾಡುವ ಸರ್ಕಾರ ಅಲ್ಲ, ಕೆಲಸ ಮಾಡುವ ಸರ್ಕಾರ. ಗುರಿ ಮತ್ತು ದಾರಿ ಎರಡರಲ್ಲಿಯೂ ನಮಗೆ ಸ್ಪಷ್ಟತೆ ಇದೆ.

19. ಭಾಷೆ ಅನ್ನದ ಭಾಷೆಯಾದರೆ ಅದು ಬೆಳೆಯುತ್ತದೆ, ಉಳಿಯುತ್ತದೆ ಎನ್ನುವ ಮಾತಿದೆ. ಆದ್ದರಿಂದ ಕೃಷಿ, ಉದ್ಯಮ, ಉದ್ಯೋಗ, ವಿಜ್ಞಾನ, ತಂತ್ರಜ್ಞಾನ ಹೀಗೆ ಒಟ್ಟು ರಾಜ್ಯದ ಅಭಿವೃದ್ದಿಯಲ್ಲಿಯೇ ಕನ್ನಡದ ಬೆಳವಣಿಗೆ ಕೂಡಾ ಇದೆ ಎಂದು ನಮ್ಮ ಸರ್ಕಾರ ನಂಬಿದೆ.

20. ನಾವು ರೂಪಿಸಿ ಅನುಷ್ಠಾನಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಮಾದರಿಯ ಆಶಯ ಕೂಡಾ ಇದೇ ಆಗಿದೆ. ಇದು ಸಾಧ್ಯವಾಗಬೇಕೆಂದರೆ ಜ್ಞಾನ, ವಿಜ್ಞಾನಗಳ ಸೃಷ್ಟಿ ನಮ್ಮದೇ ಆದ ಭಾಷೆಯಲ್ಲಿ ಸಾಧ್ಯವಾಗಬೇಕು. ಭಾಷೆಯ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತಹ ವಾಣಿಜ್ಯಕ ಆರ್ಥಿಕ ವಿನ್ಯಾಸಗಳೂ ಕನ್ನಡಕ್ಕೆ ಲಭ್ಯವಾಗಬೇಕು.

21. ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕನ್ನಡ ಮತ್ತು ಕನ್ನಡಿಗರಿಗಾಗಿ ನಮ್ಮ ಸರ್ಕಾರ ಮಾಡಿದ ಕೆಲಸದ ಬಗ್ಗೆ ನಿಜಕ್ಕೂ ನನಗೆ ಹೆಮ್ಮೆಯಿದೆ. ಇದನ್ನು ರಾಜ್ಯದ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು ಮೆಚ್ಚಿ ಕೊಂಡಾಡಿದ್ದಾರೆ. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕರ್ನಾಟಕವನ್ನು ನಾವೆಲ್ಲಾ ಕೂಡಿ ಇನ್ನಷ್ಟು ಬಲಿಷ್ಠವಾಗಿ ನಿರ್ಮಿಸಬೇಕಾಗಿದೆ. ನವ ಕರ್ನಾಟಕ ನಿರ್ಮಾಣಕ್ಕೆ ಸಿದ್ಧರಾಗಬೇಕಾಗಿದೆ.

22. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇಕಡಾ ಐದರಷ್ಟು ಮೀಸಲಾತಿ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿಯೂ ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ, ಸಿಬಿಎಸ್‍ಇ, ಐಸಿಎಸ್‍ಇ ಶಾಲೆಗಳೂ ಸೇರಿದಂತೆ ಎಲ್ಲಾ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಭಾಷಾ ನೀತಿಜಾರಿ, ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ,ರಾಷ್ಟ್ರೀಕೃತ, ಗ್ರಾಮೀಣ ಮತ್ತು ಷೆಡ್ಯೂಲ್ಡ್ ಬ್ಯಾಂಕ್‌ಗಳ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಕಲಿಯುವಂತೆ ಸೂಚಿಸಿ ಸುತ್ತೋಲೆ, ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನ ಕಡ್ಡಾಯಗೊಳಿಸಿ ಆದೇಶ, ಗುಣಮಟ್ಟದ 125 ಕನ್ನಡ ಸಿನಿಮಾಗಳಿಗೆ ಸಹಾಯಧನ, ಕನ್ನಡೇತರರಿಗೆ ಕನ್ನಡ ಕಲಿಸಲು ಬೆಂಗಳೂರು ನಗರದಲ್ಲಿ ಕನ್ನಡ ಕಲಿಕಾ ಕೇಂದ್ರಗಳ ಪ್ರಾರಂಭ ಇವು ನಮ್ಮ ಸರ್ಕಾರ ಕೈಗೊಂಡಿರುವ ಪ್ರಮುಖ ಕನ್ನಡ ಪರ ನಿರ್ಧಾರಗಳು.

23. ಸಾಂಸ್ಕೃತಿಕ ಕರ್ನಾಟಕವನ್ನು ಇನ್ನಷ್ಟು ಬಲಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಸಾಂಸ್ಕೃತಿಕ ನೀತಿಯನ್ನು ಅಂಗೀಕರಿಸಿ ಅನುಷ್ಠಾನಕ್ಕೆ ತರುತ್ತಿದ್ದೇವೆ. ಮೂಲ ಸೌಕರ್ಯ ಕಲ್ಪಿಸಲು ಈ ವರ್ಷ 23 ಕೋಟಿ ರೂಪಾಯಿನೀಡಲಾಗಿದೆ.

24. ನಮ್ಮ ಕನ್ನಡ ಪರಂಪರೆ ತಾನು ಬದುಕುಮತ್ತು ಬೇರೆಯವರನ್ನು ಬದುಕಲು ಬಿಡು ತತ್ವಕ್ಕೆಆದ್ಯತೆ ನೀಡುವ ಪರಂಪರೆ. `ಮನುಷ್ಯಜಾತಿ ತಾನೊಂದೆ ವಲಂ' ಎಂದು ಹತ್ತನೇ ಶತಮಾನದಲ್ಲಿಯೇ ನಮ್ಮ ಆದಿಕವಿ ಪಂಪ ಕನ್ನಡದ ಆದರ್ಶನವನ್ನು ಘೋಷಿಸಿದ್ದಾನೆ. ಹದಿನೈದನೇ ಶತಮಾನದ ಕನಕದಾಸರು `ಕುಲ,ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ? ಬಲ್ಲಿರಾ ? 'ಎಂದಿದ್ದಾರೆ. ಇಪ್ಪತ್ತನೇ ಶತಮಾನದ ಕುವೆಂಪು`ವಿಶ್ವಮಾನವ ತತ್ವ ವನ್ನು ಎತ್ತಿ ಹಿಡಿದಿದ್ದಾರೆ.

25. ‘ಧರ್ಮ' ಎಂಬುದು ಸಂಕುಚಿತ ಅರ್ಥಕ್ಕೆ ಸೀಮೀತಗೊಳ್ಳದೆ, `ಧರ್ಮ-ಮಾನವಧರ್ಮ'ಎಂದು ನಂಬಿದ ಪರಂಪರೆ ನಮ್ಮದು. ದೇವರುಗುಡಿಯಲ್ಲಿ ಇಲ್ಲ, ಮನುಷ್ಯನ ಅಂತರಂಗದಲ್ಲಿದ್ದಾನೆ, `ದೇಹವೇ ದೇಗುಲ' ಎಂದು ವಚನಕಾರರು ಘೋಷಿಸಿದರು. ದೇಹವೇ ದೇವಾಲಯ ಎಂದಾಗ, ಎಲ್ಲಾ ಮನುಷ್ಯರು ಅವರ ದೇಹವೂ ದೇವನ ಆವಾಸ ಸ್ಥಾನವಾಗುತ್ತದೆ. ಅಲ್ಲಿ ಒಬ್ಬರನ್ನು ಮತ್ತೊಬ್ಬರು ಹಿಂಸಿಸಲು ಅವಕಾಶವಿಲ್ಲ.

26. ‘ದಯೆಯೇ ಧರ್ಮದ ಮೂಲವಯ್ಯ ! ದಯೆ ಇಲ್ಲದ ಧರ್ಮ ಯಾವುದಯ್ಯ ? ಎಂದು ಹೇಳಿದ ಬಸವಣ್ಣನವರು ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವವರಿಗೆ ಉತ್ತರ ನೀಡಿದ್ದಾರೆ. ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವವರು ಧರ್ಮದ್ರೋಹಿಗಳು, ಬಸವದ್ರೋಹಿಗಳು.

27. ಕೋಮು ಸೌಹಾರ್ಧದಂತೆಯೇ, ಭಾಷಾ ಸೌಹಾರ್ಧವೂ ಮುಖ್ಯ ಎಂದು ನಂಬಿದ್ದೇವೆ. ಕರ್ನಾಟಕವು `ಸರ್ವಜನಾಂಗದ ಶಾಂತಿಯ ತೋಟ' ಎಂದು ಕುವೆಂಪು ಘೋಷಿಸಿದ್ದಾರೆ. ಆದರೆ, ಇಲ್ಲಿ ಬಂದು ನೆಲೆಸುವ ಅನ್ಯ ಭಾಷಿಕರು ಸ್ವತಂತ್ರವಾಗಿ ಇಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಅವರಿಗೆ ಸ್ವತಂತ್ರವಿದೆಯಾದರೂ, ಇಲ್ಲಿನ ನೆಲದ ಭಾಷೆ ಕನ್ನಡವನ್ನು ಅವರು ಕಲಿಯಲೇಬೇಕು ಎಂಬುದು ನಮ್ಮ ಸದಾಶಯ.

28. ನಾನು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಬಲವಾದ ನಂಬಿಕೆ ಹೊಂದಿದವನು. ಸಾಹಿತ್ಯ, ಸಂಗೀತ, ಚಿತ್ರಕಲೆ, ಮಾಧ್ಯಮ ಎಲ್ಲವೂ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಭಿನ್ನ ಮುಖಗಳು. ಅಭಿಪ್ರಾಯಗಳು ರೂಪುಗೊಳ್ಳುವುದೇ ಮುಕ್ತವಾದ ಅಭಿವ್ಯಕ್ತಿ ಮೂಲಕ. ಇತ್ತೀಚೆಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶ ಭಕ್ತಿ, ಧರ್ಮಭಕ್ತಿ, ರಾಷ್ಟ್ರೀಯತೆ ಮೊದಲಾದವುಗಳ ಹೆಸರಲ್ಲಿ ದಮನ ಮಾಡುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ. ಪ್ರಜಾಪ್ರಭುತ್ವ ಗಟ್ಟಿಗೊಳ್ಳುವುದೇ ಮುಕ್ತ ಅಭಿವ್ಯಕ್ತಿಯ ಮೂಲಕ ಎಂಬುದು ನನ್ನ ನಂಬಿಕೆ.

29. ಮಾತೃ ಭಾಷೆಯ ಶಿಕ್ಷಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗೆಗೆ ಇರುವ ಕಾನೂನು ತೊಡಕನ್ನು ನಿವಾರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿದೆ. ಕೇಂದ್ರ ಸರ್ಕಾರಕ್ಕೆ ಈ ಸಂಬಂಧವಾಗಿ ಎರಡು ಪತ್ರಗಳನ್ನು ಬರೆದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿಯೂ ಪ್ರಸ್ತಾಪಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸುತ್ತೇವೆ.

30. ಭಾರತದ ಒಕ್ಕೂಟ ತತ್ವವನ್ನು ಒಪ್ಪಿಕೊಂಡು ಕನ್ನಡದ ಅನನ್ಯತೆಯನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ. ಆದುದರಿಂದಲೇ ನಮ್ಮ ನಾಡಿಗೆ ಒಂದು ನಾಡಗೀತೆ ಇರುವಂತೆ, ನಾಡಧ್ವಜವೂ ಇರಬೇಕು ಎಂದು ನಾವು ನಂಬುತ್ತೇವೆ. ನಾಡಗೀತೆ-ರಾಷ್ಟ್ರಗೀತೆ, ನಾಡಧ್ವಜ-ರಾಷ್ಟ್ರಧ್ವಜ ಇವೆರಡೂ ಪರಸ್ಪರ ಪೂರಕ, ಪರಸ್ವರ ವಿರೋಧಿ ಅಲ್ಲ. ನಮ್ಮರಾಷ್ಟ್ರಕವಿ ಕುವೆಂಪು ಅವರು `ಜಯಭಾರತ ಜನನಿಯ ತನುಜಾತೆ; ಜಯಹೇ ಕರ್ನಾಟಕ ಮಾತೆ' ಎಂದು ಹಾಡಿದ್ದಾರೆ. ಈ ಆದರ್ಶಕ್ಕೆ ನಾವು ಬದ್ಧರಾಗಿದ್ದೇವೆ. ಇದನ್ನು ವಿರೋಧಿಸುವುದು ನಾಡು-ನುಡಿಗೆ ತೋರುವ ಅಗೌರವವಾಗುತ್ತದೆ.

31. ನಾವು ನುಡಿದಂತೆ ನಡೆಯುವವರು. ಕನ್ನಡ ಮತ್ತು ಸಂಸ್ಕೃತಿ ಪರ ಚಟುವಟಿಕೆಗಳಿಗಾಗಿ ನೀಡುತ್ತಿರುವ ಅನುದಾನವನ್ನು 160 ಕೋಟಿ ರೂಗಳಿಂದ 424 ಕೋಟಿ ರೂ ಗಳಿಗೆ ಹೆಚ್ಚಿಸಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ನಿರ್ಮಿಸಲಿರುವ ಶತಮಾನೋತ್ಸವ ಭವನ ನಿರ್ಮಾಣಕ್ಕಾಗಿ ಐದು ಕೋಟಿ ರೂ ವಿಶೇಷ ಅನುದಾನ ನೀಡಿದ್ದೇವೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಪರಿಷತ್‍ನ ಚಟುವಟಿಕೆಗಳಿಗೆ 12 ಕೋಟಿ ರೂ ಅನುದಾನ ನೀಡುತ್ತಿದ್ದೇವೆ.

32. ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯದ ವಿಷಯಗಳಿಗಷ್ಟೇ ಸೀಮಿತಗೊಳ್ಳದೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಚರ್ಚೆಗೆ ಎತ್ತಿಕೊಂಡಿರುವುದು ಸ್ವಾಗತಾರ್ಹವಾಗಿದೆ. ಈ ಚರ್ಚೆ-ಸಂವಾದದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸುತ್ತದೆ. ನಾವೆಲ್ಲಾ ಹುಟ್ಟಿನಿಂದ ಇಲ್ಲವೇ ವಾಸದ ಬಲದಿಂದ ಮಾತ್ರ ಕನ್ನಡಿಗರಾದರೆ ಸಾಲದು. ನಮ್ಮ ಆಚಾರ, ವಿಚಾರ, ನಡವಳಿಕೆಗಳಿಂದಲೂ ಕನ್ನಡಿಗರಾಗಬೇಕು. ಭಾಷೆ ಬಳಕೆಯ ಮೂಲಕವೇ ನಾವು ಬೆಳೆಯಲು ಸಾಧ್ಯ. ಕನ್ನಡ ಬಳಕೆ ಬಗ್ಗೆ ನಮಗೆ ಹೆಮ್ಮೆ ಇರಬೇಕು, ಕೀಳರಿಮೆ ಬೇಡ. ಕನ್ನಡ ಮಾತಾನಾಡುವುದು ಎಂದರೆ ಅದು ನಮ್ಮ ನಾಡಿನ ಸಂಸ್ಕೃತಿಯನ್ನು ಇನ್ನೊಂದು ಪೀಳಿಗೆಗೆ ದಾಟಿಸುವುದು ಎಂದರ್ಥ.

33. ನಾವು ಕನ್ನಡದಲ್ಲಿಯೇ ವ್ಯವಹರಿಸುತ್ತೇವೆ, ಕನ್ನಡ ಪತ್ರಿಕೆ ಹಾಗೂ ಪುಸ್ತಕಗಳನ್ನು ಕೊಂಡು ಓದುತ್ತೇವೆ ಮತ್ತು ಇಂತಹ ಕನ್ನಡತನದ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿಯೂ ಬೆಳೆಸುತ್ತೇವೆ ಎಂದು ಪ್ರತಿಯೊಬ್ಬ ಕನ್ನಡಿಗನೂ ಸಂಕಲ್ಪ ಮಾಡಬೇಕೆಂದು ತಮ್ಮೆಲ್ಲರನ್ನೂ ಕೋರುತ್ತೇನೆ. ತಮ್ಮೆಲ್ಲರಿಗೂ ಶುಭ ಕೋರಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ನಮಸ್ಕಾರ.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...