ನಗರಸಭೆ ವಾಹನಕ್ಕೆ ಸಿಕ್ಕಿ ಒಂದೂವರೆ ವರ್ಷದ ಮಗು ಸಾವು 

Source: S.O. News Service | By MV Bhatkal | Published on 29th November 2017, 10:01 PM | Coastal News | Don't Miss |

ಕಾರವಾರ:ನಗರಸಭೆಯ ಕಸ ಸಂಗ್ರಹಣೆ ವಾಹನಕ್ಕೆ ಸಿಲುಕಿ ಕಾರವಾರದ ದಳವಿವಾಡಾದ ಶಂಕರ ಮಂಜುನಾಥ ಗುಡ್ಡಣ್ಣನವರ್ ಹೆಸರಿನ ಒಂದು ವರ್ಷ ಆರು ತಿಂಗಳ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಂಗಳವಾರ (ನವೆಂಬರ್ 29) ನಡೆದಿದೆ. ಪ್ರತಿದಿನ ಕಸ ಸಂಗ್ರಹಣೆ ವಾಹನ ಮನೆಯ ಬಳಿ ಬಂದಾಗ ಶಂಕರ್ ಓಡಿಬಂದು ವಾಹನದ ಬಳಿ ನಿಲ್ಲುತ್ತಿದ್ದ. ಮಂಗಳವಾರ ಮನೆಯ ಬಳಿ ಬೆಳಿಗ್ಗೆ ಆಟವಾಡುತ್ತಿದ್ದ ಮಗು ಎಂದಿನಂತೆ ವಾಹನದ ಹಿಂಬಾಗದಲ್ಲಿ ಹೋಗಿ ನಿಂತಿತ್ತು.

ಈ ವೇಳೆ ಅದರ ಹಿಂಭಾಗದ ಫಲಕ ಆಕಸ್ಮಿಕವಾಗಿ ಮಗುವಿನ ತಲೆಯ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಶಂಕರ್ ಮೃತಪಟ್ಟಿದ್ದಾನೆ ಎಂದು ಮೃತ ಮಗುವಿನ ತಂದೆ ಮಂಜುನಾಥ ತಿಳಿಸಿದರು. ಮೂಲತಃ ರಾಣೆಬೆನ್ನೂರಿನವರಾದ ಮಂಜುನಾಥ ಸುಮಾರು 6 ತಿಂಗಳ ಹಿಂದೆ ಉದ್ಯೋಗಕ್ಕೆಂದು ಇಲ್ಲಿಗೆ ಬಂದು ಸೈಕಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದುರದೃಷ್ಟವೆಂದರೆ ಮಂಗಳವಾರ ತಮ್ಮ 2ನೇ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿದ್ದ ದಂಪತಿಗೆ ಮಗುವಿನ ಸಾವು ಸಿಡಿಲು ಬಡಿದಂತಾಗಿದೆ. ಅಲ್ಲದೆ ಮಗುವಿನ ತಾಯಿಯು ತುಂಬು ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲಿಯೇ ಇಂಥ ಘಟನೆ ನಡೆದಿರುವುದು ಎಲ್ಲರ ಮನ ಕಲಕಿದೆ.
ಮಧ್ಯಾಹ್ನದ ವೇಳೆ ರಾಣೆಬೆನ್ನೂರಿನಿಂದ ಕುಟುಂಬಸ್ಥರು ಶವವನ್ನು ಒಯ್ಯಲು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಅಂಬ್ಯುಲೆನ್ಸ್ ಮೂಲಕ ಊರಿಗೆ ಸಾಗಿಸಲಾಯಿತು. ನಗರಸಭೆಯಿಂದ ಪರಿಹಾರ ವಿತರಣೆ ನಗರಸಭೆಯ ಕಸವಿಲೇವಾರಿ ವಾಹನಕ್ಕೆ ಸಿಲುಕಿ ಮೃತಪಟ್ಟ ಹಿನ್ನೆಲೆಯಲ್ಲಿ ನಗರಸಭೆಯ ವತಿಯಿಂದ ಮೃತರ ಕುಟುಂಬಕ್ಕೆ 50 ಸಾವಿರ ರೂಪಾಯಿ ಚೆಕ್ ಹಾಗೂ 10 ಸಾವಿರ ರೂಪಾಯಿ ನಗದು ಸೇರಿ ಒಟ್ಟು 60 ಸಾವಿರ ಪರಿಹಾರವನ್ನು ನೀಡಲಾಯಿತು.

 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...