ಗಾಝಾ: ಚರ್ಚ್‌ ಮೇಲೆ ಇಸ್ರೇಲ್ ಬಾಂಬ್ ದಾಳಿ; ಭಾರೀ ಸಾವು ನೋವಿನ ಶಂಕೆ; ದಾಳಿ ಹೊಣೆ ವಹಿಸಿಕೊಂಡ ಇಸ್ರೇಲ್ ಸೇನೆ

Source: Vb | By I.G. Bhatkali | Published on 21st October 2023, 4:05 PM | Global News |

ಗಾಝಾ: ಯುದ್ಧಪೀಡಿತ ಗಾಝಾದಲ್ಲಿ ಇಸ್ರೇಲ್ ವಾಯುಪಡೆ ಗುರುವಾರ ರಾತ್ರಿ ನಡೆಸಿದ ಬಾಂಬ್ ದಾಳಿಯಲ್ಲಿ ಚರ್ಚೊಂದರ ಆವರಣದಲ್ಲಿ ಆಶ್ರಯಪಡೆದಿದ್ದ ಬಹುದೊಡ್ಡ ಸಂಖ್ಯೆಯ ನಿರಾಶ್ರಿತರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್‌ನ ಗೃಹಸಚಿವಾಲಯ ತಿಳಿಸಿದೆ.

ಗಾಝಾ ನಗರದ ಗ್ರೀಕ್ ಅರ್ಥೋಡಕ್ ಸೈಂಟ್ ಪಾರ್ಫಿಯ‌ ಚರ್ಚ್‌ ಆವರಣದ ಮೇಲೆ ಗುರುವಾರ ರಾತ್ರಿ ಇಸ್ರೇಲ್ ವಾಯುಸೇನೆ ದಾಳಿ ನಡೆಸಿರುವುದಾಗಿ ಸಚಿವಾಲಯ ತಿಳಿಸಿದೆ. ಚರ್ಚ್‌ನಲ್ಲಿ ಸುಮಾರು 500 ಮಂದಿ ಆಶ್ರಯಪಡೆದಿದ್ದಾರೆನ್ನಲಾಗಿದೆ.

ಈ ಮಧ್ಯೆ ಇಸ್ರೇಲ್ ಲೆಬನಾನ್ ಗಡಿಯಲ್ಲಿ ಹಿಜ್ಜುಲ್ಲಾ ಹೋರಾಟಗಾರರ ಜೊತೆ ಘರ್ಷಣೆಯನ್ನು ನಡೆಸಿದ ಕೆಲವು ದಿನಗಳ ಆನಂತರ ಕಿರ್ಯಾತ್ ಶಮೋನಾ ನಗರದಿಂದ ನಾಗರಿಕರನ್ನು ತೆರವುಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ.

1150ರಲ್ಲಿ ನಿರ್ಮಿಸಲಾದ ಸೈಂಟ್ ಪಾರ್ಫಿಯರ್ ಚರ್ಚ್, ಗಾಝಾದಲ್ಲಿರುವ ಅತ್ಯಂತ ಪುರಾತನ ಚರ್ಚ್‌ ಆಗಿದೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ವಾಯುದಾಳಿಯಿಂದ ತಪ್ಪಿಸಿಕೊಳ್ಳಲು ಎಲ್ಲಾ ಧರ್ಮಗಳ ಜನರು ಈ ಚರ್ಚ್‌ನಲ್ಲಿ ಆಶ್ರಯಪಡೆದಿದ್ದರೆನ್ನಲಾಗಿದೆ.

ಈ ಬಗ್ಗೆ ಇಸ್ರೇಲ್ ಸೇನೆ ಹೇಳಿಕೆಯೊಂದನ್ನು ನೀಡಿದ್ದು, ತನ್ನ ಫೈಟರ್ ಜೆಟ್‌ಗಳು ಇಸ್ರೇಲ್ ನೆಡೆಗೆ ರಾಕೆಟ್‌ಗಳು ಹಾಗೂ ಮೋರ್ಟಾರ್ ಗಳನ್ನು ಎಸೆಯುವ ನಿಯಂತ್ರಣ ಕೇಂದ್ರವನ್ನು ಗುರಿಯಿರಿಸಿ ದಾಳಿ ನಡೆಸಿದ್ದವು. ಈ ಸಂದರ್ಭ ಪಕ್ಕದಲ್ಲೇ ಇರುವ ಚರ್ಚ್‌ನ ಒಂದು ಪಾರ್ಶ್ವದ ಗೋಡೆಗೆ ಭಾರೀಹಾನಿಯಾಗಿದೆ ಎಂದು ತಿಳಿಸಿದೆ. ಹಮಾಸ್ ಉದ್ದೇಶಪೂರ್ವಕವಾಗಿ ತನ್ನ ನೆಲೆಗಳನ್ನು ನಾಗರಿಕ ಪ್ರದೇಶಗಳಲ್ಲಿ ಸ್ಥಾಪಿಸುತ್ತಿದೆ ಹಾಗೂ ಗಾಝಾಪಟ್ಟಿಯಲ್ಲಿರುವ ನಿವಾಸಿಗಳನ್ನು ಮಾನವಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದೆ.

ವಾಯುದಾಳಿಯಲ್ಲಿ ಚರ್ಚ್‌ ಮುಂಭಾಗಕ್ಕೆ ಹಾನಿಯಾಗಿದೆ ಹಾಗೂ ಸಮೀಪದಲ್ಲಿರುವ ಕಟ್ಟಡವೊಂದು ಸಂಪೂರ್ಣ ಕುಸಿದುಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಾಝಾದ ಚರ್ಚ್ ಮೇಲೆ ಇಸ್ರೇಲ್ ಸೇನೆ ನಡೆಸಿದವಾಯುದಾಳಿಯನ್ನು ಗ್ರೀಕ್ ಅರ್ಥೋಡಕ್ಸ್ ಚರ್ಚ್ ಮಂಡಳಿ ತೀವ್ರವಾಗಿ ಖಂಡಿಸಿದೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...