ಬಾಂಗ್ಲಾ ದೇಶದಲ್ಲಿ ಅಗ್ನಿ ದುರಂತ; 40ಕ್ಕೂ ಹೆಚ್ಚು ಮಂದಿ ಸಜೀವ ದಹನ-ವರದಿ

Source: SOnews | By Staff Correspondent | Published on 1st March 2024, 12:08 PM | Global News |

ಢಾಕಾ: ಬಾಂಗ್ಲಾದೇಶದ ರಾಜಧಾನಿಯ ಏಳು ಮಹಡಿಯ ಕಟ್ಟಡದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 44 ಮಂದಿ ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ. 

ಬೈಲಿ ರಸ್ತೆಯ ಜನಪ್ರಿಯ ಬಿರಿಯಾನಿ ರೆಸ್ಟೋರೆಂಟ್ ನಲ್ಲಿ ಈ ಬೆಂಕಿ ದುರಂತ ರಾತ್ರಿ 9.50ರ ಸುಮಾರಿಗೆ ಸಂಭವಿಸಿದ್ದು, ಮೇಲಿನ ಮಹಡಿಗಳಿಗೆ ಕಾಳ್ಗಿಚ್ಚಿನಂತೆ ಹಬ್ಬಿತು. ಅಸಂಖ್ಯಾತ ಮಂದಿ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡರು. ಎರಡು ಗಂಟೆಯ ಒಳಗೆ ಬೆಂಕಿಯನ್ನು ತಹಬಂದಿಗೆ ತರಲಾಗಿದೆ. ಕಟ್ಟಡಗಳಲ್ಲಿ ಸಿಕ್ಕಿಹಾಕಿಕೊಂಡ 75 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮೊಹ್ಮದ್ ಶಿಹಾಬ್ ಹೇಳಿದ್ದಾರೆ.  ಇದನ್ನೂ ಓದಿ ಜೆಎನ್‌ಯುವಿನಲ್ಲಿ ಎಬಿವಿಪಿ ಹಾಗೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಸದಸ್ಯರ ನಡುವೆ ಘರ್ಷಣೆ; ಹಲವರಿಗೆ ಗಾಯ  ಬೈಲಿ ರಸ್ತೆಯ ಕಟ್ಟಡಗಳಲ್ಲಿ ಪ್ರಮುಖವಾಗಿ ರೆಸ್ಟೋರೆಂಟ್ ಗಳು, ಬಟ್ಟೆ ಅಂಗಡಿಗಳು ಮತ್ತು ಮೊಬೈಲ್ ಶಾಪ್ ಗಳಿವೆ. ಕೆಲವರು ಆರನೇ ಮಹಡಿಯಿಂದ ಕೆಳಕ್ಕೆ ಇಳಿಯಲು ನೀರಿನ ಪೈಪ್ ಗಳನ್ನು ಬಳಸಿದ್ದು, ಈ ವೇಳೆ ಗಾಯಗಳಾಗಿವೆ. ಇತರ ಹಲವು ಮಂದಿ ಮೇಲ್ಚಾವಣಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ನೆರವಿಗಾಗಿ ಮೊರೆ ಇಡುವ ದೃಶ್ಯ ಕಂಡುಬಂದಿತ್ತು.  ಬಹುತೇಕ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಢಾಕಾ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ ಆರೋಗ್ಯ ಸಚಿವ ಸಮಂತ ಲಾಲ್ ಸೇನ್, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಸುಮಾರು 40 ಮಂದಿ ಗಾಯಾಳುಗಳು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   

ಅಪಾರ್ಟ್ಮೆಂಟ್ ಗಳಲ್ಲಿ ಮತ್ತು ಫ್ಯಾಕ್ಟರಿಗಳಲ್ಲಿ ಸುರಕ್ಷತಾ ಕ್ರಮಗಳ ಜಾರಿಯಲ್ಲಿ ಅಧಿಕಾರಿಗಳ ಉದಾಸೀನದಿಂದಾಗಿ ಬೆಂಕಿ ದುರಂತಗಳು ಬಾಂಗ್ಲಾದಲ್ಲಿ ಸಂಭವಿಸುತ್ತಲೇ ಇವೆ. 2021ರ ಜುಲೈನಲ್ಲಿ ಆಹಾರ ಸಂಸ್ಕರಣಾ ಘಟಕದಲ್ಲಿ ನಡೆದ ದುರಂತದಲ್ಲಿ 52 ಮಂದಿ ಬಲಿಯಾಗಿದ್ದರು. 2019ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಇಂಥದ್ದೇ ದುರಂತದಲ್ಲಿ 70 ಮಂದಿ ಜೀವ ಕಳೆದುಕೊಂಡಿದ್ದರು.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...