ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಾಸಿಯಾಗದ ಕೊರೊನಾ! ಭಟ್ಕಳದಲ್ಲಿ ಸಿಬ್ಬಂದಿಗಳ ಕೊರತೆ; ಬಸ್ ಓಡಾಟದಲ್ಲಿ ವ್ಯತ್ಯಯ

Source: S O News service | By V. D. Bhatkal | Published on 19th November 2022, 8:14 PM | Coastal News | Special Report |

ಭಟ್ಕಳ: ಅದ್ಯಾವಾಗ ಕೊರೊನಾ ಎಂಬ ಮಹಾಮಾರಿ ಊರುಕೇರಿಗಳಿಗೆ ಒಕ್ಕರಿಸಿತೋ ಏನೋ, ಮೊದಲೇ ತೆವಳಿಕೊಂಡು ದಿನದೂಡುತ್ತಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಇನ್ನಷ್ಟು ರೋಗಗ್ರಸ್ಥವಾಗಿ ಹೋಯಿತು. ಇದೀಗ ಕೊರೊನಾ ಇಲ್ಲಿಂದ ದೂರ ಓಡಿ ಹೋಗಿದ್ದರೂ, ಸರಕಾರಿ ಬಸ್ಸುಗಳು ಮಾತ್ರ ನಿಲ್ಲಲಾಗದೇ, ಓಡಲಾಗದೇ ಪರಿತಪಿಸುತ್ತಿರುವುದು ಕಂಡು ಬಂದಿದೆ.

ಭಟ್ಕಳದ ಬಸ್ ಸೌಕರ್ಯ ಎನ್ನುವುದು ಇಲ್ಲಿನ ಬಸ್ ನಿಲ್ದಾಣದಂತೆ ಆಗಿಹೋಗಿದೆ. ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ ಬಸ್ ಪ್ರಯಾಣದ ಸ್ಥಿತಿಗತಿ ಕೊರೊನಾ ಸೋಂಕಿದಂತೆ ಎಳೆದುಕೊಂಡು ಹೋಗುತ್ತಿದೆ. ಭಟ್ಕಳದಲ್ಲಿ ಈ ಹಿಂದೆ ಇದ್ದ 72 ಸರಕಾರಿ ಬಸ್ಸುಗಳ ಸಂಖ್ಯೆ 65ಕ್ಕೆ ಕುಸಿದಿದೆ. ಮೊದಲಿದ್ದ ಸಿಬ್ಬಂದಿಗಳ ಸಂಖ್ಯೆಯೂ ಕೆಳಕ್ಕೆ ಇಳಿದಿದೆ. ಪರಿಣಾಮವಾಗಿ ಭಟ್ಕಳದಿಂದ ಮುಂಡಳ್ಳಿಗೆ ಪ್ರಯಾಣಿಸುತ್ತಿದ್ದ ಬಸ್ಸುಗಳನ್ನು 9 ರಿಂದ 3ಕ್ಕೆ ಇಳಿಸಲಾಗಿದೆ. ಅತ್ತ ದಿನಕ್ಕೆ 9 ಬಾರಿ ಅಳಿವೇಕೋಡಿಗೆ ಓಡುತ್ತಿದ್ದ ಬಸ್ಸುಗಳು 4ಕ್ಕೆ ಕುಸಿದಿದೆ. ಪ್ರತಿ ದಿನ 4 ಬಾರಿ ಅಬ್ರೆಗೆ ಪ್ರಯಾಣಿಸುತ್ತಿದ್ದ ಬಸ್ಸುಗಳನ್ನು 3ಕ್ಕೆ, ದಿನಕ್ಕೆ 3 ಬಾರಿ ಬೈಲೂರಿಗೆ ತೆರಳುತ್ತಿದ್ದ ಬಸ್ಸುಗಳನ್ನು 2ಕ್ಕೆ, ದಿನಕ್ಕೆ 6 ಬಾರಿ ಕುಳವಾಡಿಗೆ ಸಂಚರಿಸುತ್ತಿದ್ದ ಬಸ್ಸುಗಳನ್ನು 5 ಬಾರಿಗೆ ಸೀಮಿತಗೊಳಿಸಲಾಗಿದೆ.

ಕೊರೊನಾ ಕಾಟದ ನಂತರದ ದಿನಗಳಲ್ಲಿ ಕೆಲವು ಪ್ರದೇಶಗಳಿಗೆ ಓಡುತ್ತಿದ್ದ ಬಸ್ಸುಗಳ ಸಂಖ್ಯೆಯಲ್ಲಿ ಕಡಿತವಾಗಿರುವುದು ನಿಜ. ಲಭ್ಯ ಇರುವ ಬಸ್ಸು, ಸಿಬ್ಬಂದಿಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಪ್ರಯತ್ನ ಮುಂದುವರೆಸಿದ್ದೇವೆ
  - ದಿವಾಕರ, ವ್ಯವಸ್ಥಾಪಕರು, ಭಟ್ಕಳ ವಾರಸಾಸ ಡಿಪೋ 

ಈ ಹಿಂದೆ ಮಾರುಕೇರಿ ದೇವಿ ಮನೆಯತ್ತ ದಿನಕ್ಕೆ 2 ಬಾರಿ ಸಂಚರಿಸುತ್ತಿದ್ದ ಬಸ್ಸುಗಳನ್ನು ಇದೀಗ ತಡೆ ಹಿಡಿಯಲಾಗಿದೆ. ದಿರಿಂದಾಗಿ ಸಾರ್ವಜನಿಕರಿಗೆ ಬಸ್ ಪ್ರಯಾಣ ದುಸ್ತರವಾಗಿ ಪರಿಣಮಿಸಿದೆ. ಸಾಲದೆಂಬಂತೆ ದೂರದ ಗುಲ್ಬರ್ಗಾಕ್ಕೆ ಈ ಹಿಂದೆ ಇಬ್ಬರು ಚಾಲಕ, ಓರ್ವ ನಿರ್ವಾಹಕನನ್ನು ನಿಯೋಜಿಸಲಾಗುತ್ತಿತ್ತಾದರೂ ಇದೀಗ ಇಬ್ಬರೇ ಹೋಗಿ ಬನ್ನಿ ಎಂದು ಫರ್ಮಾನು ಹೊರಡಿಸಲಾಗಿದೆ.

ತಾಲೂಕಿನ ಗ್ರಾಮೀಣ ಪ್ರದೇಶವಾದ ಕುಳವಾಡಿಗೆ ಸದ್ಯ ಚಾಲಕರೋರ್ವರೇ ಹೋಗಿ ಬರುತ್ತಿದ್ದಾರೆ. ನಿತ್ಯ ಬೆಳಿಗ್ಗೆ 8.30 ಹಾಗೂ 9.30ಗೆ ಮಡಗಾಂವಗೆ ಪ್ರಯಾಣಿಸುತ್ತಿದ್ದ ಬಸ್ಸುಗಳಲ್ಲಿಯೂ ಚಾಲಕ, ನಿರ್ವಾಹಕನ ಕೆಲಸವನ್ನು ಚಾಲಕರೋರ್ವರೇ ನಿಭಾಯಿಸುತ್ತಿದ್ದಾರೆ.

ಇದು ಕೇವಲ ಭಟ್ಕಳದ ಸಮಸ್ಯೆ ಮಾತ್ರವಲ್ಲ, ಇಡೀ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯೇ ಕೊರೊನಾ ರೋಗದಿಂದ ಮುಕ್ತವಾಗಿಲ್ಲ ಎಂದು ಸಿಬ್ಬಂದಿಗಳೇ ದೂರುತ್ತಿದ್ದಾರೆ.

ಹೊಸ ಬಸ್ಸುಗಳಿಲ್ಲ, ವರ್ಗಾವಣೆಯೂ ಆಗಿಲ್ಲ:
ಸದ್ಯದ ಪರಿಸ್ಥಿತಿಯಲ್ಲಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ಬಸ್ಸುಗಳ ಆಗಮನ ಸಲೀಸಾಗಿಲ್ಲ. ಹೊಸ ಬಸ್ಸುಗಳು ಬೇಕು ಎಂದರೆ ಸಚಿವರು, ಅಧಿಕಾರಿಗಳು ಇಲ್ಲ ಎನ್ನುವುದಿಲ್ಲ, ಆದರೆ ಹೊಸ ಬಸ್ ಬರಲು ಇನ್ನೊಂದು ವರ್ಷವೇ ಕಳೆಯಬಹುದು ಎನ್ನುತ್ತಾರೆ ಅಲ್ಲಿನ ಸಿಬ್ಬಂದಿಗಳು. ಅಲ್ಲದೇ ಇಲ್ಲಿನ ಸಿಬ್ಬಂದಿಗಳ ಕೊರತೆಯನ್ನು ಸರಿದೂಗಿಸಲು ಬೇರೆ ಬೇರೆ ಸಾರಿಗೆ ಸಂಸ್ಥೆಯಿಂದ 48 ಚಾಲಕ, ನಿರ್ವಾಹಕರನ್ನು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದ್ದರೂ, ಇದ್ದ ಸ್ಥಳದಿಂದ ಸಿಬ್ಬಂದಿಗಳನ್ನು ಕಳುಹಿಸಿಕೊಡುವ ಆದೇಶಕ್ಕೆ ಅಧಿಕಾರಿಗಳ ಸಹಿಯೇ ಬಿದ್ದಿಲ್ಲ!

ಹಾಗೇನಾದರೂ ಸಿಬ್ಬಂದಿಗಳ ವರ್ಗಾವಣೆ ಪ್ರಕ್ರಿಯೆ ಮುಕ್ತಾಯವಾದರೆ ಭಟ್ಕಳಕ್ಕೆ 6-7 ಸಿಬ್ಬಂದಿಗಳಾದರೂ ಬರುತ್ತಿದ್ದರು, ಅದು ಮತ್ತೆ ಯಾವಾಗಲೋ ಎನ್ನುತ್ತಾ ಇಲ್ಲಿನ ಸಿಬ್ಬಂದಿಗಳು ನಿಟ್ಟುಸಿರು ಬಿಡುತ್ತಾರೆ. ಬಸ್ಸುಗಳ ಕಥೆ ಹೀಗೆ ಆದರೆ ನಿಲ್ದಾಣದ ಕಥೆ ಹೇಗಿರಬೇಡ? ಹೈಟೆಕ್ ಎಂದು ಕಟ್ಟಲಾಗಿದ್ದ ನಿಲ್ದಾಣ ಮಣ್ಣಿನ ಹೊಂಡವಾಗಿಯೇ ಉಳಿದುಕೊಂಡಿದೆ. ಒಟ್ಟಾರೆಯಾಗಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಸಂಪೂರ್ಣ ಸೊರಗಿದಂತೆ ಕಂಡು ಬರುತ್ತಿದ್ದು, ಸಾರ್ವಜನಿಕರು ಸರಕಾರದತ್ತ ಎದುರು ನೋಡುತ್ತಿದ್ದಾರೆ.

Read These Next

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ 66 ಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ...

ಕಡಲತಡಿಯಲ್ಲಿ ಕಣ್ಮನ ಸೆಳೆಯುತ್ತಿರುವ ಸೀ ವಾಕ್ ಶೃಂಗಾರ; ಭಟ್ಕಳದಲ್ಲಿ ಮಂತ್ರಿಗಳೇ, ಓಡುವುದು ಬೇಡ ನಡೆದಾಡಿ ಬನ್ನಿ

ಕರ್ನಾಟಕಕ್ಕೆ ಕರಾವಳಿ ತೀರ ಎನ್ನುವುದು ಶೃಂಗಾರ ಕಾವ್ಯದಂತಿದೆ. ಕಡಲ ತಡಿಯುದ್ಧಕ್ಕೂ ಸದಾ ಬಣ್ಣ ಬಣ್ಣದ ಕನಸುಗಳು ಚಿಗುರೊಡೆದು ...

ಭಟ್ಕಳ ವಿಧಾನಸಭಾ ಕ್ಷೇತ್ರ; ಜಾತಿ, ಪಕ್ಷಸಿದ್ಧಾಂತ ಬದಿಗಿಟ್ಟು “ಅಭ್ಯರ್ಥಿ” ಗಳ ಬಗ್ಗೆ ಆಸಕ್ತಿ ತೋರುತ್ತಿರುವ ಮತದಾರ

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ೨೦೧೮ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆ ವಿಭಿನ್ನವಾಗಿ ಗೋಚರಿಸುತ್ತಿದೆ. ...

ಆನ್‌ಲೈನ್ ಹಣ ವಂಚನೆ, ಅಶ್ಲೀಲ ಜಾಲತಾಣಗಳ ವಿರುದ್ಧ 3 ವರ್ಷಗಳಲ್ಲಿ 32,746 ಪ್ರಕರಣ ದಾಖಲು

ಹಣ, ಅಶ್ಲೀಲ ಮತ್ತಿತರ ವಿಷಯಗಳ ಜಾಲತಾಣಗಳ ಕುರಿತಂತೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 32,746 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇದೇ ...