ಬೇಡಿಕೆ ಈಡೇರಿಕೆಗಾಗಿ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಧರಣಿ.

Source: SO News | By Laxmi Tanaya | Published on 3rd October 2020, 3:13 PM | Coastal News | Don't Miss |

ಭಟ್ಕಳ: ಕಳೆದ ಏಳು ದಿನಗಳಿಂದ ಕೆಲಸದಿಂದ ಹೊರಗುಳಿದು ಮನೆಯಲ್ಲಿದ್ದು ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು, ನೌಕರರು ಶನಿವಾರ ಇಲ್ಲಿನ ತಹಶಿಲ್ದಾರರ ಕಚೇರಿ ಹೊರಗಡೆ ಉರಿ ಬಿಸಿಲಿನಲ್ಲಿ ಕುಳಿತು ಪ್ರತಿಭಟಿಸಿದರು.  ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಶಿಲ್ದಾರ್ ಎಸ್‌ ರವಿಚಂದ್ರನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆ ಹಾಗೂ ಹೊರಗುತ್ತಿಗೆಯಲ್ಲಿ ವೈದ್ಯರು, ನರ್ಸ್‌ಗಳು, ಸಹಾಯಕರು, ಕಂಪ್ಯೂಟರ್‌ ಆಪರೇಟರ್‌ಗಳು, ಸೇರಿದಂತೆ 33 ಮಂದಿ ಆರೋಗ್ಯ ಇಲಾಖೆಯಡಿ ಶಿರಾಲಿ ಮತ್ತು ಭಟ್ಕಳ ತಾಲೂಕು ಆಸ್ಪತ್ರೆಗಳಲ್ಲಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಕೊರೊನಾ ವಾರ್ಡ್‌ಗಳಲ್ಲಿ ಅನೇಕರು ಕೆಲಸ ನಿರ್ವಹಿಸುತ್ತಿದ್ದಾರೆ.

ರಜೆ ಇಲ್ಲದಂತೆ ದುಡಿಮೆ: 
ಕಳೆದ ಏಳು ದಿನಗಳಿಂದ ಕೆಲಸ ಮಾಡದೆ ಹೋರಾಟ ಮಾಡುತ್ತಿದ್ದರೂ, ಸರ್ಕಾರ, ಇಲಾಖೆಯಾಗಲೀ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಬೇಡಿಕೆಗೆ ಸ್ಪಂದಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಕೊರೊನಾ ಸಂದರ್ಭದಲ್ಲಿ ಒಂದು ದಿನವೂ ರಜೆ ಇಲ್ಲದಂತೆ ದುಡಿಯುತ್ತಿದ್ದರೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೊರೊನಾ ವಾರಿಯರ್ಸ್‌ ಎಂದು ಹೇಳುವ ಸರ್ಕಾರ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಕಳೆದ 10-15 ವರ್ಷಗಳಿಂದ ದುಡಿಯುತ್ತಿದ್ದೇವೆ. ಆದರೆ, ಕೇವಲ 8ರಿಂದ 9 ಸಾವಿರ ರೂ. ವೇತನ ನೀಡುತ್ತಿದ್ದಾರೆ. ಇದರಿಂದ ಜೀವನ ನಡೆಸಲು ಸಾಧ್ಯ ವಾಗುತ್ತಿಲ್ಲ. ಅಲ್ಲದೆ, ಕೊರೊನಾ ಸಂದರ್ಭದಲ್ಲಿ ನೌಕರರಿಗೆ ಏನಾದರೂ ತೊಂದರೆಯಾದರೆ ನಮ್ಮ ಗೋಳು ಕೇಳುವವರಿಲ್ಲ ಎಂದು ಅಳಲು ತೋಡಿಕೊಂಡರು.

ಹೋರಾಟಕ್ಕೆ ನಿರ್ಧಾರ: ಕಳೆದ ಏಳು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಇದುವರೆಗೂ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ನೌಕರರು ತೀರ್ಮಾನಿಸಿದ್ದಾರೆ.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಭಟ್ಕಳ ಘಟಕದ ಅಧ್ಯಕ್ಷ ಡಾ ಕುಸ್ಗುರು, ಕಾರ್ಯದರ್ಶಿ ಅನಂತ ಮೊಗೇರ್, ಮಾಲಾ ನಾಯ್ಕ, ಶೋಭಾ ಹರಿಕಾಂತ, ಡಾ ರಕ್ಷೀತ ಎಂ.ಎಚ್, ಡಾ ಪಲ್ಲವಿ, ಡಾ ಸ್ವಾತಿ ಉದ್ಯಾವರ, ಡಾ ಚೇತನ್, ನೇತ್ರ ಸಹಾಯಕ ಎಂ.ಅರುಣ್, ಪ್ರಯೋಗಾಲಯ ತಂತ್ರಜ್ಞಾನದ ರೂಪಾ ನಾಯ್ಕ, ಜೋತಿ ನಾಯ್ಕ, ಸ್ಟಾಪ್ ನರ್ಸ್‌ಗಳಾದ,
ದಿವ್ಯ ಕೊಡಿಯಾ, ಲೀಲಾವತಿ ಎಚ್, ಮಂಜುಳಾ ನಾಯ್ಕ, ಲೀಲಾವತಿ ನಾಯ್ಕ, ಅರ್ಚನಾ,
ಚೇತನಾ, ಯಶೋಧ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.‌ ಜಮಾಯಿಸಿದ ಪ್ರತಿಭಟನಾಕಾರರು,
ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದರು.

ಸರ್ಕಾರ ಆದಷ್ಟು ಬೇಗ ತಮ್ಮ ಬೇಡಿಕೆ ಈಡೇರಿಸಬೇಕೆಂದು ಧರಣಿ ನಿರತರು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರು ಮನವಿ ಮಾಡಿದ್ದಾರೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...