ನಕಲಿ ಎನ್‌ಕೌಂಟರ್‌ಗಳಿಗೆ ಬಲಿಯಾಗುತಿರುವ ನ್ಯಾಯಾಂಗ

Source: S O News service | By Staff Correspondent | Published on 2nd November 2016, 4:54 PM | Guest Editorial | Don't Miss |

ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಎಂಟು ಮಂದಿ ಶಂಕಿತ ಸಿಮಿ ಕಾರ್ಯಕರ್ತರನ್ನು ಮಧ್ಯಪ್ರದೇಶದ ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ ಕೊಂದು ಹಾಕಿರುವುದು ಇದೀಗ ದೇಶಾದ್ಯಂತ ಚರ್ಚೆಯಲ್ಲಿದೆ. ಕಾರ್ಯಾಚರಣೆಯ ಕುರಿತಂತೆ ಪೊಲೀಸರು ನೀಡುತ್ತಿರುವ ಹೇಳಿಕೆಗಳು, ಬಹಿರಂಗಗೊಂಡಿರುವ ವೀಡಿಯೊಗಳು ಒಟ್ಟು ಕಾರ್ಯಾಚರಣೆಯನ್ನೇ ಅನುಮಾನದಿಂದ ನೋಡುವಂತೆ ಮಾಡಿವೆ. ಮೃತ ಆರೋಪಿಗಳ ಪರ ವಕೀಲರು ಪೊಲೀಸರ ಮುಂದಿಟ್ಟಿರುವ ಹಲವು ಪ್ರಶ್ನೆಗಳು ಉತ್ತರವಿಲ್ಲದೆ ಬಿದ್ದುಕೊಂಡಿವೆ. ಇದೇ ಸಂದರ್ಭದಲ್ಲಿ ಬಿಜೆಪಿಯ ನಾಯಕರು ದೇಶಪ್ರೇಮದ ಹೆಸರಿನಲ್ಲಿ ಪ್ರಶ್ನೆಗಳನ್ನು ಎಂದಿನಂತೆ ಹೊಸಕಿ ಹಾಕುವ ಹುನ್ನಾರದಲ್ಲಿದ್ದಾರೆ.‘ಸತ್ತವರು ಉಗ್ರರು ತಾನೇ? ಎನ್‌ಕೌಂಟರ್ ನಕಲಿಯಾದರೇನು, ಅಸಲಿಯಾದರೇನು?’ ಎಂದು ಕೆಲವರು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಪೊಲೀಸರ ಕೃತ್ಯವನ್ನು ಯಾವ ರೀತಿಯಲ್ಲೂ ಪ್ರಶ್ನಿಸಬಾರದು ಮತ್ತು ಅನುಮಾನಿಸಬಾರದು ಎಂದು ಕೇಂದ್ರದ ಸಚಿವರೊಬ್ಬರು ಆದೇಶ ನೀಡಿದ್ದಾರೆ. ಅತ್ಯಂತ ವಿಪರ್ಯಾಸದ ವಿಷಯವೆಂದರೆ, ಪೊಲೀಸರ ಕೃತ್ಯವನ್ನು ವಿಚಾರಣೆ ನಡೆಸಬಾರದು, ಪ್ರಶ್ನಿಸಬಾರದು ಎಂದಿದ್ದರೆ, ಪೊಲೀಸರು ಮಾಡಿರುವ ಆರೋಪಗಳನ್ನು ನ್ಯಾಯಾಲಯ ಈವರೆಗೆ ವಿಚಾರಣೆ ನಡೆಸಿದ್ದಾದರೂ ಯಾಕೆ? ಪೊಲೀಸರು ನಡೆಸಿರುವ ಈ ಎನ್‌ಕೌಂಟರ್ ನಮ್ಮ ನ್ಯಾಯವ್ಯವಸ್ಥೆಗೇ ಕೇಂದ್ರ ಸಚಿವರು ನೀಡಿರುವ ಎಚ್ಚರಿಕೆಯೇ? ಪೊಲೀಸರು ಒಬ್ಬನ ಮೇಲೆ ಉಗ್ರನೆಂದು ಆರೋಪ ದಾಖಲಿಸಿದ ಬಳಿಕ ಆತನನ್ನು ನ್ಯಾಯಾಲಯ ವಿಚಾರಣೆ ನಡೆಸುವುದೇ ತಪ್ಪು ಎಂದು ಸಚಿವರು ಪ್ರತಿಪಾದಿಸುತ್ತಿದ್ದಾರೆಯೇ? ಬಂಧಿತ ಆರೋಪಿಗಳು ಅಪರಾಧಿಗಳು ಹೌದೇ, ಅಲ್ಲವೇೆ ಎನ್ನುವುದೇ ಅನುಮಾನವಿರುವಾಗ, ಸತ್ತಿರುವುದು ಉಗ್ರರು ಎಂಬ ತೀರ್ಮಾನಕ್ಕೆ ಬರುವುದಕ್ಕೆ ಹೇಗೆ ಸಾಧ್ಯ? ಈ ಕುರಿತಂತೆ ಎಳ್ಳಷ್ಟೂ ಅನುಮಾನಗಳಿಲ್ಲದೆ ಪೊಲೀಸರ ಕೃತ್ಯವನ್ನು ಸಂಪೂರ್ಣ ಬೆಂಬಲಿಸುತ್ತಿರುವ ಬಿಜೆಪಿ ನಾಯಕರು ಇದರಲ್ಲಿ ಎಷ್ಟರ ಮಟ್ಟಿಗೆ ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಯೂ ಈಗ ಎದ್ದಿದೆ.

ಉಗ್ರವಾದಿಗಳನ್ನು, ಭಯೋತ್ಪಾದಕರನ್ನು ಈ ದೇಶದಲ್ಲಿ ಯಾರೂ ಬೆಂಬಲಿಸುತ್ತಿಲ್ಲ. ಹಾಗೆ ಬೆಂಬಲಿಸುವ ಇತಿಹಾಸ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರಿಗೆ ಬಿಟ್ಟರೆ ಇಲ್ಲಿ ಯಾರಿಗೂ ಇಲ್ಲ. ಗಾಂಧೀಜಿಯನ್ನು ಕೊಂದ ಉಗ್ರವಾದಿ ನಾಥೂರಾಂ ಗೋಡ್ಸೆಯಿಂದ ಹಿಡಿದು ಇತ್ತೀಚೆಗೆ ವಿವಿಧ ಸ್ಫೋಟ ಪ್ರಕರಣಗಳಲ್ಲಿ ಗುರುತಿಸಿಕೊಂಡಿರುವ ಸನಾತನಸಂಸ್ಥೆಯ ಉಗ್ರರನ್ನು ಬೆಂಬಲಿಸುತ್ತಿರುವವರು ಯಾರು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಪೊಲೀಸರಿಂದ ಎನ್‌ಕೌಂಟರ್‌ಗೆ ಬಲಿಯಾಗಿರುವ ಎಂಟು ಮಂದಿ ತರುಣರು ಉಗ್ರವಾದಿಗಳೇ ಆಗಿದ್ದರೆ ಅದು ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಸಾಬೀತಾಗುವ ಹಂತದಲ್ಲಿತ್ತು. ಅವರನ್ನು ಗಲ್ಲಿಗೂ ಏರಿಸಬಹುದಿತ್ತು. ಉಗ್ರವಾದಿಗಳು ನ್ಯಾಯಾಲಯದಿಂದ ಅಪರಾಧಿಗಳು ಎಂದು ತೀರ್ಮಾನವಾದ ಬಳಿಕ ಜೈಲಿನಿಂದ ಪರಾರಿಯಾಗಿರುವುದಲ್ಲ. ವಕೀಲರು ಹೇಳುವಂತೆ, ಇವರ ಮೇಲಿರುವ ವಿಚಾರಣೆ ಪ್ರಗತಿಯಲ್ಲಿತ್ತು. ಕೆಲವೇ ತಿಂಗಳುಗಳಲ್ಲಿ ಇವರ ಮೇಲಿನ ವಿಚಾರಣೆ ಮುಗಿಯುವ ಹಂತದಲ್ಲಿತ್ತು. ಇವರು ನಿರಪರಾಧಿಗಳಾಗಿ ಬಿಡುಗಡೆಯಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಇಂತಹ ಹೊತ್ತಿನಲ್ಲಿ ಆರೋಪಿಗಳು ಬಹುಭದ್ರತೆಯಿರುವ ಜೈಲೊಂದರಿಂದ ಏಕಕಾಲದಲ್ಲಿ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗುವುದು, ಬಳಿಕ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅವರು ಹೇಳುತ್ತಾರೆ. ಇದೇ ಸಂದರ್ಭಲ್ಲಿ ಅವರು ಕೆಲವು ಪ್ರಶ್ನೆಗಳು ಪೊಲೀಸರ ಮುಂದಿಟ್ಟಿದ್ದು, ಆ ಪ್ರಶ್ನೆಗಳು ಉತ್ತರಕ್ಕೆ ಅನರ್ಹ ಅಥವಾ ಪ್ರಶ್ನೆಗೆ ಉತ್ತರಿಸುವ ಯಾವ ಜವಾಬ್ದಾರಿಯೂ ಪೊಲೀಸರಿಗೆ ಇಲ್ಲ ಎಂಬ ಅರ್ಥದಲ್ಲಿ ಸರಕಾರ ಹೇಳಿಕೆ ನೀಡುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.

ಪೊಲೀಸರು ಆರೋಪಗಳನ್ನು ಹಣೆಯ ಮೇಲೆ ಲಗತ್ತಿಸಿ ಅವರನ್ನು ಉಗ್ರರೆಂದು ಘೋಷಿಸಿದಾಕ್ಷಣ ಅವರು ಅಪರಾಧಿಗಳಾಗುವುದಿಲ್ಲ ಎನ್ನುವುದಕ್ಕೆ ಹತ್ತು ಹಲವು ಉದಾಹರಣೆಗಳು ನಮ್ಮ ಮುಂದಿವೆ. ಮಕ್ಕಾ ಸ್ಫೋಟ ಪ್ರಕರಣಗಳಲ್ಲಿ ಪೊಲೀಸರಿಂದ ಉಗ್ರರೆಂದು ಗುರುತಿಸಲ್ಪಟ್ಟವರು, ನ್ಯಾಯಾಲಯದಿಂದ ನಿರಪರಾಧಿಗಳೆಂದು ಘೋಷಿಸಲ್ಪಟ್ಟರು. ಆ ಬಳಿಕ ಸರಕಾರವೇ ಅವರ ಜೊತೆಗೆ ಕ್ಷಮೆ ಯಾಚಿಸಿ ಅವರಿಗೆ ಪರಿಹಾರವನ್ನು ನೀಡಿತು ಎನ್ನುವುದನ್ನು ನಾವು ನೋಡಿದ್ದೇವೆ. ಮಾಲೆಗಾಂವ್ ಸ್ಫೋಟ, ಸಂಜೋತಾ ಸ್ಫೋಟ ಪ್ರಕರಣಗಳಲ್ಲಿ ಅನ್ಯಾಯವಾಗಿ ಬಂಧಿಸಲ್ಪಟ್ಟು, ಉಗ್ರರೆಂಬ ಹಣೆಪಟ್ಟಿ ಧರಿಸಿ ಹಲವು ವರ್ಷಗಳ ಕಾಲ ಜೈಲಿನಲ್ಲಿ ಕೊಳೆತು ಬಳಿಕ ನಿರಪರಾಧಿಗಳೆಂದು ನ್ಯಾಯಾಲಯದಲ್ಲಿ ಸಾಬೀತಾದ ನತದೃಷ್ಟರ ಉದಾಹರಣೆ ಸಾಕಷ್ಟಿಸಿವೆೆ. ಒಂದು ವೇಳೆ ಪೊಲೀಸರು ಆರೋಪಪಟ್ಟಿ ದಾಖಲಿಸಿ, ಪೊಲೀಸರೇ ಗಲ್ಲಿಗೇರಿಸುವಂತಿದ್ದಿದ್ದರೆ ನ್ಯಾಯ ವ್ಯವಸ್ಥೆಯ ಸ್ಥಿತಿ ಏನಾಗಿ ಬಿಡುತ್ತಿತ್ತು? ಒಂದೆಡೆ ನಿರಪರಾಧಿಗಳು ಗಲ್ಲಿಗೇರುತ್ತಿದ್ದರು ಮತ್ತು ನಿಜವಾದ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದರು. ಇಂದು ಅವರದೇ ಸ್ಥಾನದಲ್ಲಿ ಸ್ಫೋಟ ನಡೆಸಿದ ಆರೋಪ ಹೊತ್ತು ಕೇಸರಿ ಸಂಘಟನೆಯ ಶಂಕಿತ ಉಗ್ರರು ಜೈಲಿನಲ್ಲಿದ್ದಾರೆ. ವಿಪರ್ಯಾಸವೆಂದರೆ, ಇವರನ್ನು ‘ಸ್ವಾತಂತ್ರ ಹೋರಾಟಗಾರರೋ’ ಎಂಬಂತೆ ಅನುಕಂಪದ ಕಣ್ಣಲ್ಲಿ ಸರಕಾರ ನೋಡುತ್ತಿದೆ. ಇವರ ಬಿಡುಗಡೆಗೆ ತನಿಖಾ ಸಂಸ್ಥೆಯನ್ನು ಸರ್ವ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಭೋಪಾಲ್‌ನ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದ ವೀಡಿಯೊಗಳು ಈಗಾಗಲೇ ಹತ್ತು ಹಲವು ಪ್ರಶ್ನೆಗಳನ್ನು ಸಾಮಾಜಿಕ ತಾಣಗಳಲ್ಲಿ ಎತ್ತುತ್ತಿವೆ. ಜೈಲಿನ ಸ್ವರೂಪ ಮತ್ತು ಭದ್ರತೆಯನ್ನು ಗಮನಿಸಿದರೆ, ಬೇರೆ ಬೇರೆ ಸೆಲ್‌ಗಳಲ್ಲಿದ್ದ ಆರೋಪಿಗಳು ಏಕಕಾಲದಲ್ಲಿ ಪರಾರಿಯಾಗುವ ಸಂಭವವೇ ಇಲ್ಲ ಎನ್ನಲಾಗುತ್ತಿದೆ. ಹಾಗೆಯೇ ಜೈಲಿನಿಂದ ಪಾರಾಗಲು ಚಮಚವನ್ನು ಬಳಸಿದರು, ಮರದ ಕೀಲಿಕೈ ಬಳಸಿದರು ಎಂಬೆಲ್ಲ ಗೊಂದಲಕಾರಿ ಹೇಳಿಕೆಗಳನ್ನು ಪೊಲೀಸರು ನೀಡುತ್ತಿದ್ದಾರೆ. ಪೊಲೀಸರ ಹೇಳಿಕೆಗಳಲ್ಲೇ ಪರಸ್ಪರ ವಿರೋಧಾಭಾಸಗಳು ಕಾಣುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಕರಣದಲ್ಲಿ ಒಬ್ಬ ಪೊಲೀಸ್ ಪೇದೆಯನ್ನು ಆರೋಪಿಗಳು ಕೊಂದು ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಆರೋಪಿಸಿದ್ದಾರೆ. ಅಥವಾ ತಮ್ಮ ಪ್ರಹಸನವನ್ನು ನಿಜ ಮಾಡಲು ಒಬ್ಬ ಅಮಾಯಕ ಪೊಲೀಸ್ ಸಿಬ್ಬಂದಿಯನ್ನು ಅಧಿಕಾರಿಗಳು ಬಲಿಕೊಟ್ಟರೇ? ಎಂಬ ಪ್ರಶ್ನೆಯನ್ನು ಕೆಲವರು ಹಾಕುತ್ತಿದ್ದಾರೆ. ಆದುದರಿಂದ ಭೋಪಾಲ್‌ನಲ್ಲಿ ನಡೆದಿರುವ ಎನ್‌ಕೌಂಟರ್ ನಕಲಿಯೇ ಅಸಲಿಯೇ ಎನ್ನುವುದು ಕೇವಲ ಆರೋಪಿಗಳಿಗಷ್ಟೇ ಅಲ್ಲ, ಒಬ್ಬ ಪೊಲೀಸ್ ಸಿಬ್ಬಂದಿಗೂ ನ್ಯಾಯ ನೀಡಬಹುದು. ಯಾಕೆಂದರೆ ನಕಲಿ ಎನ್‌ಕೌಂಟರ್‌ಗಳನ್ನು ಅಸಲಿಯೆಂದು ಸಾಬೀತು ಪಡಿಸಲು ಕೆಳ ಸ್ಥಾನದಲ್ಲಿರುವ ಪೊಲೀಸ್ ಸಿಬ್ಬಂದಿಗಳನ್ನು ಬಲಿಪಶು ಮಾಡುತ್ತಿರುವುದು ದೇಶದಲ್ಲಿ ಹೊಸತೇನೂ ಅಲ್ಲ. ಒಟ್ಟಿನಲ್ಲಿ ಇಂತಹದೊಂದು ಬರ್ಬರ ಕೃತ್ಯ ಯಾಕೆ ನಡೆಯಿತು? ಹೇಗೆ ನಡೆಯಿತು? ಒಂದು ವೇಳೆ ಆರೋಪಿಗಳು ನಿರಪರಾಧಿಗಳೆಂದು ನ್ಯಾಯಾಲಯದಲ್ಲಿ ಸಾಬೀತಾಗಿ ಬಿಡುಗಡೆಯಾದರೆ ಸರಕಾರಕ್ಕೆ, ಪೊಲೀಸ್ ಇಲಾಖೆಗೆ ಕಳಂಕ ಬರುತ್ತದೆಯೆಂಬ ಭಯದಿಂದ ಏಕಾಏಕಿ ಎನ್‌ಕೌಂಟರ್ ಹೆಸರಿನಲ್ಲಿ ಆರೋಪಿಗಳನ್ನು ಮುಗಿಸಲಾಯಿತೇ? ಅಥವಾ ಇನ್ನಿತರ ರಾಜಕೀಯ ಕಾರಣಗಳು ಇದರ ಹಿಂದೆ ಇವೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಎನ್‌ಕೌಂಟರ್ ಅಸಲಿಯೇ ನಕಲಿಯೇ ಎನ್ನುವುದು ನ್ಯಾಯಾಂಗದ ನೇತೃತ್ವದಲ್ಲೇ ತನಿಖೆ ನಡೆಯಬೇಕು. ಪೊಲೀಸರು ನ್ಯಾಯಾಂಗದ ಮೇಲೆ ಸರ್ಜಿಕಲ್ ದಾಳಿ ನಡೆಸಿ, ಅದರ ಅಧಿಕಾರವನ್ನು ಕಸಿದುಕೊಳ್ಳುವ ಸಂವಿಧಾನ ವಿರೋಧಿ ಕೃತ್ಯಗಳು ಇನ್ನಾದರೂ ನಿಲ್ಲಬೇಕಾಗಿದೆ.

ಕೃಪೆ:  www.varthabharati.in ಸಂಪಾದಕೀಯ

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...