ಉತ್ತರಕನ್ನಡ ಕಾಂಗ್ರೆಸ್‍ನಲ್ಲಿ ಧೂಳೆಬ್ಬಿಸಿದ ಡಿಕೆಶಿ ನಡೆ; ಕುಮಟಾ, ಶಿರಸಿಗೆ ಹೊಸ ಅಭ್ಯರ್ಥಿ ಸಾಧ್ಯತೆ ; ದೇಶಪಾಂಡೆ ನಿಗೂಢ ಹೆಜ್ಜೆ

Source: S O News Service | By V. D. Bhatkal | Published on 8th December 2020, 1:05 AM | Coastal News | Special Report |

ಭಟ್ಕಳ: ನಿವಾರ್, ಬುರೆವಿಯಂತಹ ಚಂಡಮಾರುತಗಳು ದೇಶದ ವಿವಿಧ ರಾಜ್ಯಗಳಲ್ಲಿ ಸದ್ದು ಮಾಡುತ್ತಿದ್ದರೂ ಉತ್ತರಕನ್ನಡ ಜಿಲ್ಲೆಗೆ ಅಂತಹ ಹಾನಿಯೇನೂ ಆಗಿಲ್ಲ. ಆದರೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಜಿಲ್ಲೆಗೆ ಬಂದು ಕಾಂಗ್ರೆಸ್‍ನಲ್ಲಿ ಧೂಳೆಬ್ಬಿಸಿ ಹೋಗಿದ್ದಾರೆ. ಗ್ರಾಮ ಪಂಚಾಯತ ಚುನಾವಣೆಯ ಹೊತ್ತಿಗೇ ಮುಂದಿನ ವಿಧಾನಸಭಾ ಚುನಾವಣೆಗೂ ಕಾಂಗ್ರೆಸ್ ಅಡಿಗಲ್ಲನ್ನು ಇರಿಸಿದ್ದು, ಪ್ರಸಕ್ತವಾಗಿ ಜಿಲ್ಲಾ ಕಾಂಗ್ರೆಸ್‍ನಲ್ಲಿ ನಡೆದಿರುವ ಬೆಳವಣಿಗೆಗಳು ರಾಜಕೀಯ ಆಸಕ್ತರಲ್ಲಿ ತೀವೃ ಕುತೂಹಲ ಕೆರಳಿಸಿದೆ. 

ಗ್ರಾಮ ಪಂಚಾಯತ ಚುನಾವಣೆ ನಾಮಪತ್ರ ಸಲ್ಲಿಕೆ ಆರಂಭಕ್ಕೆ 2 ದಿನ ಬಾಕಿ ಇರುವಂತೆಯೇ ಆಯಾ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷರು ಆದೇಶ ಹೊರಡಿಸಿದ್ದು, ಕೆಲವೊಂದು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಕುಮಟಾ ವಿಧಾಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಶಿರಸಿ ವಿಧಾನ ಸಭಾ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕರನ್ನು ಉಸ್ತುವಾರಿಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿರುವ ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್‍ರಿಗೆ ಯಲ್ಲಾಪುರ ಮುಂಡಗೋಡದ ಜವಾಬ್ದಾರಿಯನ್ನು ನೀಡಿದ್ದರೆ, ಆರ್.ವಿ.ದೇಶಪಾಂಡೆಯವರು ಹಳಿಯಾಳದ ಜೊತೆಗೆ ಕುಮಟಾವನ್ನೂ ಹೊತ್ತುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ವಿಭಿನ್ನ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ. ಮುಂದಿನ 2023ರ ವಿಧಾನಸಭಾ ಚುನಾವಣೆಯ ಟಿಕೇಟ್ ಕಥೆ ಈ ಹಂತದಲ್ಲಿಯೇ ಬಿಚ್ಚಿಕೊಳ್ಳಲು ಆರಂಭಿಸಿದೆ.

ಕಳೆದ 2018ರ ಚುನಾವಣೆಯಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ 59392 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‍ನಿಂದ ಸೋತ ಶಾರದಾ ಶೆಟ್ಟಿ ಪಡೆದ ಮತಗಳು 26,642. ಗೆಲುವಿನ ಅಂತರ ಬರೋಬ್ಬರಿ 32750! ಹಾಗೆ ನೋಡಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೂರಜ್ ನಾಯ್ಕರೇ 20474 ಮತಗಳನ್ನು ಪಡೆದು ಕಾಂಗ್ರೆಸ್ ಸನಿಹಕ್ಕೆ ಬಂದು ಮುಟ್ಟಿದ್ದರು. ಈಗ ಚುನಾವಣೆ ಮುಗಿದು ಎರಡೂವರೆ ವರ್ಷಗಳು ಕಳೆದು ಹೋಗಿವೆ. ಅಲ್ಲಿ ಕಾಂಗ್ರೆಸ್ ಬಲಿತುಕೊಳ್ಳಲು ಏನಾದರೂ ಅವಕಾಶ ಇದೆಯಾ ಎಂದು ನೋಡಿದರೆ ಕಾಂಗ್ರೆಸ್ ನಾಯಕರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಅಲ್ಲಿನ ಜಾತಿ ಸಮೀಕರಣಗಳೂ ವರ್ತಮಾನದಲ್ಲಿ ಕಾಂಗ್ರೆಸ್‍ಗೆ ಪೂರಕವಾಗಿಲ್ಲ. ಅಲ್ಲೀಗ ಕಾಂಗ್ರೆಸ್ ಕುಮಟಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ ಎಂಬ ವರ್ತಮಾನ ಕಾಂಗ್ರೆಸ್ ವಲಯದಿಂದ ಕೇಳಿ ಬರುತ್ತಿದೆ. ಅದೇ ಕಾಲಕ್ಕೆ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಕುಮಟಾದ ಗ್ರಾಮ ಪಂಚಾಯತ ಚುನಾವಣೆಯ ಉಸ್ತುವಾರಿಯನ್ನಾಗಿ ಕಳುಹಿಸಿಕೊಡಲಾಗಿದೆ. 

ಮಧುವಿನೊಂದಿಗೆ ಶಶಿ!:
ಕಾಂಗ್ರೆಸ್ ಮೂಲಗಳ ಪ್ರಕಾರ ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅವರೊಂದಿಗೆ ಶಶಿಭೂಷಣ ಹೆಗಡೆ ಸಹ ಕಾಂಗ್ರೆಸ್ ಪಾಳೆಯ ಸೇರಿಕೊಳ್ಳಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದು. ಈ ಹಿಂದೆ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 500 ಚಿಲ್ಲರೆ ಮತಗಳಿಂದ ಸೋಲು ಅನುಭವಿಸಿದ್ದ ಶಶಿಭೂಷಣ ಹೆಗಡೆಯವರನ್ನೇ ಕಾಂಗ್ರೆಸ್‍ಗೆ ಕರೆ ತಂದು ಪಟ್ಟ ಕಟ್ಟಲು ಕೆಲವು ಕಾಂಗ್ರೆಸ್ ನಾಯಕರು ಗಂಭೀರ ಪ್ರಯತ್ನ ನಡೆಸಿದ್ದಾರೆ. ಜಿಲ್ಲೆಗೆ ಕಾಲಿಟ್ಟ ಡಿಕೆಶಿ ಮುಂದೆಯೂ ಈ ಬಗ್ಗೆ ಚರ್ಚೆ ನಡೆದಿದೆ. ಆದರೆ ಜಿಲ್ಲಾ ಕಾಂಗ್ರೆಸ್ ವರಿಷ್ಠ ಆರ್.ವಿ. ದೇಶಪಾಂಡೆಯವರ ಒಲವು ಹೊನ್ನಾವರದ ಶಿವಾನಂದ ಹೆಗಡೆಯವರ ಮೇಲೆ ಇದ್ದು, ಕುಮಟಾದಲ್ಲಿ ಶಶಿಯೋ, ಶಿವಾನಂದರೋ ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ. ಆದರೆ ಶಶಿಭೂಷಣ ಶಿರಸಿ ಕ್ಷೇತ್ರದತ್ತಲೇ ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. 

ಶಿರಸಿಯಲ್ಲಿ ಸುಷ್ಮಾ ರೆಡ್ಡಿ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜೇತ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 70595 ಮತಗಳನ್ನು ಪಡೆದು ಗೆದ್ದು ಬೀಗಿದ್ದರು. ಎದುರಾಳಿ ಕಾಂಗ್ರೆಸ್‍ನ ಭೀಮಣ್ಣ ಪಡೆದಿರುವುದು 53143 ಮತಗಳು. ಅಂತರ 17461. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಖಚಿತವಾಗಿ ಗೆಲ್ಲಲಿದೆ ಎಂದುಕೊಂಡ ಸಂದರ್ಭದಲ್ಲಿಯೂ ಕಾಂಗ್ರೆಸ್, 3059 ಮತಗಳ ಅಂತರದಿಂದ ಸೋತು ನಿರಾಸೆ ಅನುಭವಿಸಿತ್ತು. ಅಲ್ಲಿಯೂ ಸದ್ಯ ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಿಕೊಂಡಿಲ್ಲ. ಅಲ್ಲೀಗ ಕಾಂಗ್ರೆಸ್ ಹೊಸಬರತ್ತ ಮುಖಮಾಡಿದೆ ಎಂಬ ಮಾಹಿತಿ ಹೊರ ಬಂದಿದೆ. ಸದ್ಯ ಕಾಂಗ್ರೆಸ್ ಧುರೀಣ, ಮಾರ್ಗರೇಟ್ ಆಳ್ವಾರ ಕಟ್ಟಾ ಬೆಂಬಲಿಗರಾಗಿದ್ದ ದಿವಂಗತ ದೀಪಕ ಹೊನ್ನಾವರ ತಂಗಿ ಸುಷ್ಮಾ ರೆಡ್ಡಿಯವರ ಹೆಸರು ಕಾಣಿಸಿಕೊಂಡಿದೆ.

ಹಾವೇರಿಯ ಎಮ್.ಎಮ್.ಹಿಂಡಸಗೇರಿಯವರನ್ನು ಗ್ರಾಮ ಪಂಚಾಯತ ಚುನಾವಣಾ ಕಾರ್ಯಕ್ಕೆ ಶಿರಸಿಗೆ ನಿಯೋಜಿಸಲಾಗಿದ್ದರೂ ಸುಷ್ಮಾ ಸದ್ಯದಲ್ಲಿಯೇ ಕಾರ್ಯಪ್ರವೃತ್ತರಾಗಲಿದ್ದಾರೆ ಎನ್ನುತ್ತವೆ ಮೂಲಗಳು. ಸದ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಭೀಮಣ್ಣ ನಾಯ್ಕರನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ. ಉಳಿದಂತೆ ಕಾರವಾರದಲ್ಲಿ 3ನೇ ಸ್ಥಾನ ಪಡೆದು, ವಿಜೇತ ಅಭ್ಯರ್ಥಿ ರೂಪಾಲಿಗಿಂತ 15268 ಮತಗಳಿಂದ ಹಿಂದೆ ಇದ್ದ ಸತೀಶ ಸೈಲ್, ಭಟ್ಕಳದಲ್ಲಿ ಬಿಜೆಪಿಯ ಸುನಿಲ್ ನಾಯ್ಕ ಎದುರು ಕೇವಲ 5930 ಮತಗಳ ಅಂತರದಿಂದ ಸೋಲನ್ನು ಕಂಡಿದ್ದ ಮಂಕಾಳು ವೈದ್ಯರ ಸ್ಥಾನಮಾನ ಆಭಾದಿತವಾಗಿಯೇ ಮುಂದುವರೆದಿದೆ. 

ದೇಶಪಾಂಡೆ ನಿಗೂಢ ಹೆಜ್ಜೆ:
ಹಳಿಯಾಳದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೇಟ್ ತನಗೇ ಬೇಕು ಎಂದು ಪಟ್ಟು ಹಿಡಿದಿರುವ ಎಮ್ಮೆಲ್ಸಿ ಎಸ್.ಎಲ್.ಘೋಟ್ನೇಕರ್, ಆ ದಿಶೆಯಲ್ಲಿ ಪ್ರಯತ್ನವನ್ನು ಮುಂದುವರೆಸಿಕೊಂಡೇ ಇದ್ದಾರೆ. ಆದರೆ ಆರ್.ವಿ.ದೇಶಪಾಂಡೆಯವರೇ ಹಳಿಯಾಳದ ಶಾಸಕರಾಗಿರುವುದರಿಂದ ಈಗಲೇ ಉಸ್ತುವಾರಿ ಪಟ್ಟವನ್ನು ಬದಲಿಸುವ ಸಾಹಸಕ್ಕೆ ಕಾಂಗ್ರೆಸ್ ಕೈ ಹಾಕಿಲ್ಲ. ಬದಲಾಗಿ ಘೋಟ್ನೇಕರ್‍ಗೆ ಯಲ್ಲಾಪುರ, ಮುಂಡಗೋಡದಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಒಲ್ಲದ ಮನಸ್ಸಿನಿಂದಲೇ ಅತ್ತ ಮುಖಮಾಡಿರುವ ಘೋಟ್ನೇಕರ್ ಹಳಿಯಾಳದ ಮೇಲಿನ ದೃಷ್ಟಿಯನ್ನು ಕದಲಿಸುತ್ತಲೇ ಇಲ್ಲ. ಘೋಟ್ನೇಕರ್ ಪಟ್ಟು ಗಟ್ಟಿಯಾಗುತ್ತ ಹೋದರೆ ಮುಂದೇನು ಎನ್ನುವ ಪ್ರಶ್ನೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ದೇಶಪಾಂಡೆ ಚುನಾವಣಾ ಕಣದಿಂದ ಹಿಂದೆ ಸರಿಯಲು ಮನಸ್ಸು ಮಾಡಿದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರವಾಗಿ ರಾಜ್ಯಸಭಾ ಸದಸ್ಯರಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಸುಳಿದಾಡುತ್ತಿದೆ. ಅಷ್ಟಕ್ಕೂ ದೇಶಪಾಂಡೆ ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...