ಉಡುಪಿ: ಕರಾವಳಿಯಲ್ಲಿ ಇಂದು, ನಾಳೆ ರೆಡ್ ಅಲರ್ಟ್, ಅರಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತ ಭೀತಿ

Source: VB | By S O News | Published on 15th May 2021, 2:50 PM | Coastal News | State News |

ಉಡುಪಿ: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ 'ತೌಕ್ತೆ' ಹೆಸರಿನ ಚಂಡಮಾರುತ ಉಂಟಾಗಿದ್ದು, ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ನೀಡಿರುವ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಗಾಳಿ-ಮಳೆಯಾಗುವ ಸಾಧ್ಯತೆ ಇದೆ.

ಚಂಡಮಾರುತದಿಂದಾಗಿ ಉಡುಪಿ ಜಿಲ್ಲೆಯಲ್ಲಿ ಮೇ 15 ಮತ್ತು 16ರಂದು ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ. ಬಳಿಕ 17 ಮತ್ತು 18ರಂದು ಆರೆಂಜ್ ಅಲರ್ಟ್ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಗುಡುಗು-ಸಿಡಿಲು ಸಹಿತ ಬಿರುಸಿನ ಗಾಳಿಯಿಂದ ಕೂಡಿದ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕರಿಗೆ ಹಲವು ಸೂಚನೆಗಳನ್ನು ನೀಡಿದೆ.

ಜಿಲ್ಲಾ/ ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಕೋಪವನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು. ಮೀನುಗಾರರು ನದಿ, ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಕೆಳಗೆ ನಿಲ್ಲದೇ ಸುರಕ್ಷಿತ ಸ್ಥಳಗಳನ್ನು ತಲುಪಬೇಕು. 6 ನೇ ಪುಟಕ್ಕೆ

ರೆಡ್ ಅಲರ್ಟ್

ತುರ್ತು ಸೇವೆಗಾಗಿ ಟೋಲ್ ಫ್ರಿ ನಂ.1077 ಅಥವಾ ದೂರವಾಣಿ ಸಂಖ್ಯೆ: 0820- 2574802ನ್ನು ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಸರಗೋಡಿನಲ್ಲೂ ರೆಡ್ ಅಲರ್ಟ್: ತೌಕ್ತೆ ಚಂಡಮಾರುತದ ಪರಿಣಾಮ ಭಾರೀ ಗಾಳಿ ಮಳೆಗೆ ಸಾಧ್ಯತೆ ಇರುವುದರಿಂದ ಕಾಸರಗೋಡು ಜಿಲ್ಲೆಯಲ್ಲಿ ಮೇ 15ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಇನ್ನೊಂದು ಮಾಹಿತಿ ನೀಡುವ ತನಕ ಸಮುದ್ರಕ್ಕಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಕರ್ನಾಟಕ ಸೇರಿದಂತೆ 5 ಕರಾವಳಿ ರಾಜ್ಯಗಳಿಗೆ ಎಚ್ಚರಿಕೆ, 53 ಎನ್‌ಡಿಆರ್‌ಎಫ್ ತಂಡಗಳು ಸಜ್ಜು

ಹೊಸದಿಲ್ಲಿ, ಮೇ 14: ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇ 16ರ ವೇಳೆಗೆ ಚ೦ಡಮಾರುತವಾಗಿ ಪರಿವರ್ತನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಶುಕ್ರವಾರ ಎಚ್ಚರಿಕೆಗಳನ್ನು ಹೊರಡಿಸಿದೆ.

'ತೌಕ್ತೆ' ಚಂಡಮಾರುತದ ಸಂಭಾವ್ಯ ಪರಿಣಾಮಗಳನ್ನು ಎದುರಿಸಲು ತಲಾ 40 ಸಿಬ್ಬಂದಿಯ 53 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಈ ಪೈಕಿ 24 ತಂಡಗಳು ಈಗಾಗಲೇ ಈ ರಾಜ್ಯಗಳಲ್ಲಿಯ ನಿಗದಿತ ತಾಣಗಳಲ್ಲಿ ಸ್ಥಿತಗೊಂಡಿದ್ದು, ಉಳಿದ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‌ಡಿಆರ್‌ಎಫ್)ಯ ಮಹಾನಿರ್ದೇಶಕ ಎಸ್.ಎನ್.ಪ್ರಧಾನ್ ಅವರು ಟ್ವೀಟಿಸಿದ್ದಾರೆ.

ಆಗ್ನೇಯ ಅರಬಿ ಸಮುದ್ರದಲ್ಲಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಲಕ್ಷದ್ವೀಪ ಪ್ರದೇಶದಲ್ಲಿ ಗುರುವಾರ ವಾಯುಭಾರ ಕುಸಿತ ಉಂಟಾಗಿದ್ದು, ಶನಿವಾರ ಬೆಳಗ್ಗೆ ತೀವ್ರತೆಯನ್ನು ಪಡೆದುಕೊಳ್ಳಲಿದೆ ಮತ್ತು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ ಎಂದು ತನ್ನ ಎಚ್ಚರಿಕೆ ವರದಿಯಲ್ಲಿ ತಿಳಿಸಿರುವ ಐಎಂಡಿ, ಅದು ಇನ್ನಷ್ಟು ತೀವ್ರಗೊಂಡು ಗುಜರಾತ್ ಮತ್ತು ಪಾಕಿಸ್ತಾನ ತೀರಗಳತ್ತ ಸಾಗಲಿದೆ. ಮೇ 18ರ ಸಂಜೆಯ ವೇಳೆಗೆ ಅದು ಗುಜರಾತ್ ತೀರದ ಸಮೀಪ ತಲುಪುವ ಸಾಧ್ಯತೆಯಿದೆ ಎಂದಿದೆ. ಮ್ಯಾನ್ಮಾರ್ ನೀಡಿರುವ ತೌಕ್ತೆ (ಹಲ್ಲಿ) ಹೆಸರನ್ನು ಭಾರತದ ಕರಾವಳಿಯಲ್ಲಿನ ಈ ವರ್ಷದ ಮೊದಲ ಚಂಡಮಾರುತಕ್ಕೆ ಇರಿಸಲಾಗಿದೆ.

ಏನಿದು ತೌಕ್ತೆ ?

ಉಡುಪಿ: ತೌಕ್ತೆ (TAUKTAE) ಎಂಬುದು ಈಗ ತಾನೇ ಮಧ್ಯ ಅರಬಿ ಸಮುದ್ರ ದಲ್ಲಿ ಸೃಷ್ಟಿಯಾಗುತ್ತಿರುವ ಚಂಡಮಾರುತದ ಹೆಸರು. ಶನಿವಾರ, ರವಿವಾರ, ಭಾರತದ ಪಶ್ಚಿಮ ಕರಾವಳಿಗೆ ರಭಸದ ಗಾಳಿಯೊಂದಿಗೆ ಮಳೆ ತರುವ ಚಂಡಮಾರುತವಿದು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ, ಡಾ.ಎ.ಪಿ.ಭಟ್ ಅವರು ತಿಳಿಸಿದ್ದಾರೆ.

ನೆರೆ ರಾಷ್ಟ್ರವಾದ ಮ್ಯಾನ್ಮಾರ್ (ಬರ್ಮಾ) ರಾಷ್ಟ್ರ ಈ ಚಂಡಮಾರುತಕ್ಕೆ ತೌಕ್ತೆ ಎಂಬ ಹೆಸರನ್ನು ಸೂಚಿಸಿದೆ. ಬರ್ಮೀಸ್ ಭಾಷೆಯಲ್ಲಿ ತಕೆ ಎಂದರೆ ಲಿಸಾರ್ಡ್ (ಒಂದು ಜಾತಿಯ ಹಲ್ಲಿ).

ಅರಬಿಸಮುದ್ರ ಹಾಗೂಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ಇವುಗಳ ಸುತ್ತ ಇರುವ 13 ರಾಷ್ಟ್ರಗಳು ನಾಮಕರಣ ಮಾಡುತ್ತವೆ. ಈ ಹೆಸರುಗಳನ್ನು ಮೊದಲೇ ಸೂಚಿಸಲಾಗಿರುತ್ತದೆ. ಕಳೆದ ವರ್ಷ, ಪ್ರತೀ ರಾಷ್ಟ್ರ 13 ಹೆಸರುಗಳ ಪಟ್ಟಿಕೊಟ್ಟದ್ದರಿಂದ ಒಟ್ಟು 169 ಹೊಸ ಹೆಸರುಗಳ ಪಟ್ಟಿಯನ್ನು ಇಂಡಿಯನ್ ಮೆಟ್ರೋಲೋಜಿಕಲ್ ವಿಭಾಗ ಬಿಡುಗಡೆ ಮಾಡಿದೆ. ಈ ಹೊಸ ಪಟ್ಟಿಯಲ್ಲಿ ಬಾಂಗ್ಲಾದೇಶ, ಭಾರತ, ಇರಾನ್, ಮಾಲ್ಡೀವ್ಸ್ , ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಖತರ್, ಸೌದಿ, ಶ್ರೀಲಂಕಾ, ಥಾಯ್ಲೆಂಡ್, ಯುಎಇ ಮತ್ತು ಯೆಮನ್ ಹೀಗೆ13 ರಾಷ್ಟ್ರಗಳ ಹೆಸರು ಕ್ರಮವಾಗಿ ಬರುತ್ತವೆ. ಈ ಮ್ಯಾನ್ಮಾರ್ ದೇಶ ಕೊಟ್ಟ ಹೆಸರು. ಮುಂದೆ ಬರುವ ಚಂಡಮಾರುತದ ಹೆಸರು ಯಾಸ್. ಇದನ್ನು ಒಮಾನ್ ದೇಶ ಸೂಚಿಸಿದೆ. ಈ ತೌಕ್ತೆ ಚಂಡಮಾರುತ ಈಗ ತಾನೆ ಮಧ್ಯ ಅರಬಿಸಮುದ್ರದಲ್ಲಿ ಭಾರತದ ನೈರುತ್ಯದಲ್ಲಿ ಹುಟ್ಟಿ ಪೂರ್ವದ ಕಡೆಗೆ ಅಂದರೆ ನಮ್ಮ ಪಶ್ಚಿಮದ ಕರಾವಳಿ ಕಡೆಗೆ ಬರುತ್ತಿದೆ. ಹವಾಮಾನ ವಿಶ್ಲೇಷಕರ ಪ್ರಕಾರ ಮೇ 15 ಹಾಗೂ 16 ರಂದು ಪಶ್ಚಿಮದಿಂದ ಉತ್ತರಕ್ಕೆ ಹೊರಟು ಗುಜರಾತ್‌ನ ದಕ್ಷಿಣ ತೀರಕ್ಕೆ 17 ರಂದು ತಲುಪಲಿದೆ.

ಚಂಡಮಾರುತವೆಂದರೆ ಸಮುದ್ರದಲ್ಲಿ ಒಂದು ಕಡೆ ನಿಮ್ಮ ಒತ್ತಡ ಸೃಷ್ಟಿಯಾಗಿ ಸುತ್ತಲಿಂದಲೂ ಅಲ್ಲಿಗೆ ಗಾಳಿ ನುಗ್ಗುವುದು. ಅವು ನೇರ ನುಗ್ಗದೇ ಸುರುಳಿ ಆಕಾರದಲ್ಲಿ ಸುತ್ತುತ್ತಾ ಮೋಡಗಳನ್ನು ಎತ್ತಿಕೊಂಡು ಕೆಲವೇ ಗಂಟೆಗಳಲ್ಲಿ ಅತೀ ಪ್ರಬಲ ಶಕ್ತಿ ಪಡೆಯುತ್ತವೆ. ಧಾರಾಕಾರ ಮಳೆ ಬಿರುಗಾಳಿಯೊಂದಿಗೆ ಸಮುದ್ರ ತೀರಕ್ಕೆ ಅಪ್ಪಳಿಸಿ ಕೆಲವೇ ಗಂಟೆಗಳಲ್ಲಿ ಅನೇಕ ಅವಾಂತರಗಳನ್ನು ಮಾಡುತ್ತವೆ.

ಭಾರತದ ಪೂರ್ವ ಕರಾವಳಿಯಲ್ಲಿ, ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತ ಪ್ರತೀ ವರ್ಷವಿರುತ್ತದೆ. ಅದು ಅಪರೂಪವೇನಲ್ಲ. ಆದರೆ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತ ಅತೀ ಅಪರೂಪ. ಬಹುಶಃ ಸಮುದ್ರ ತೀರಕ್ಕೆ ಗೋಡೆಯಂತಿರುವ ಸಸ್ಯ ಶ್ಯಾಮಲೆಯಾಗಿದ್ದ ನಮ್ಮ ಪಶ್ಚಿಮ ಘಟ್ಟವೇ ಇದಕ್ಕೆ ಕಾರಣವಿದ್ದಿರಬೇಕು.

ಆದರೆ ಈಗ ಕಾಡು ಬೋಳಾಗಿರುವುದರಿಂದ ಭೂಮಿಯ ಉಷ್ಣತೆ ಸುಮಾರು 1.5 ಡಿಗ್ರಿಯಷ್ಟು ಏರಿರುವುದರಿಂದ ಅರಬಿ ಸಮುದ್ರದಲ್ಲೂ ಚಂಡಮಾರುತ, ಭಾರತದ ಪೂರ್ವ ಕರಾವಳಿಯಲ್ಲಿ ಪ್ರತೀ ವರ್ಷ ಬರುವಂತೆ ಮಾಮೂಲಾಗಿ ಬರುತ್ತಿದೆ.

ಪ್ರಕೃತಿ ಮುನಿದರೆ...... ಹೀಗೆಯೇ. ಅನುಭವಿಸಬೇಕಷ್ಟೆ.

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...