ಭಟ್ಕಳ: ನಾಗಬನ ಕಂಪೌಂಡ ನಿರ್ಮಾಣ ಕ್ಕೆ ಎರಡು ಕೋಮುಗಳ ನಡುವೆ ವಿವಾದ: ಪೊಲೀಸ್ ಬಂದೋಬಸ್ತ್ ನಲ್ಲಿ ಕಂಪೌಂಡ್ ಕಟ್ಟುವ ಕಾರ್ಯ

Source: S O news service | By MV Bhatkal | Published on 17th April 2021, 4:01 PM | Coastal News |

ಭಟ್ಕಳ : ಕಳೆದ ಹಲವಾರು ವರ್ಷಗಳಿಂದ ಬಗೆಹರಿಯದ ಸಮಸ್ಯೆಯೊಂದು ಬಗೆಹರಿಯುವ ಹಂತಕ್ಕೆ ತಂದು ನಿಲ್ಲಿಸುವಲ್ಲಿ  ಶಾಸಕ ಸುನಿಲ್ ನಾಯ್ಕ ಯಶಸ್ವಿಯಾಗಿದ್ದರಾದರೂ,  ಕಾರ್ಯಕರ್ತರ ಚೀರಾಟದಿಂದಾಗಿ ವ್ಯರ್ಥವಾದಂತಾಗಿ ಕೊನೆಗೂ ಅಧಿಕಾರಿಗಳ ಮರ್ಜಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. 

ಭಟ್ಕಳದ ಮುಖ್ಯ ರಸ್ತೆಯಲ್ಲಿರುವ ನಾಗ ಬನಕ್ಕೆ ಸುಮಾರು 130 ವರ್ಷಗಳಿಂದ ಸೂಸಗಡಿಯಲ್ಲಿ 3.25 ಗುಂಟೆ ಸ್ಥಳ ಸರಕಾರ ಬಿಟ್ಟಿರುವ ಬಗ್ಗೆ ದಾಖಲೆಗಳೇ ಹೇಳುತ್ತಿವೆ.  ಸರಕಾರದ ದಾಖಲೆಯಂತೆ ನಾಗಬನ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಈ ಸ್ಥಳವನ್ನು ನಿಗದಿ ಮಾಡಲಾಗಿದ್ದರೂ ಸಹ ಕಳೆದ ಹಲವಾರು ವರ್ಷಗಳಿಂದ ಈ ಸ್ಥಳದ ಅಭಿವೃದ್ಧಿಗೆ ಒಂದಲ್ಲ ಒಂದು ತೊಂದರೆ ಇತ್ತು.  ಅಕ್ಕಪಕ್ಕದಲ್ಲಿ ಕೆಲವು ಸ್ಥಳ ಅತಿಕ್ರಮಣವಾಗಿದ್ದು ಅಭಿವೃದ್ಧಿ ಪಡಿಸಲು ಮುಂದಾದಾಗೆಲ್ಲ ತಕರಾರು ಬರುವುದು ಸಾಮಾನ್ಯವಾಗಿತ್ತು. 2013ರಲ್ಲಿ ನಾಗಬನವನ್ನು ಅಪವಿತ್ರಗೊಳಿಸಿದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸರಕಾರ ಈ ಸ್ಥಳಕ್ಕೆ ಬೇಲಿ ಹಾಕಲು 2 ಲಕ್ಷ ರೂಪಾಯಿ ಮಂಜೂರಿ ಮಾಡಿತ್ತು. ಸರಕಾರಿ ಜಾಗ ಆಗಿದ್ದರಿಂದ ನಂತರ ಬಂದ ಜಿಲ್ಲಾಧಿಕಾರಿಗಳು ಹಣ ಮಂಜೂರಿಯಾಗಿದ್ದರೂ ಕ್ರಮ ತೆಗೆದುಕೊಳ್ಳದ ಕಾರಣ ಹಣ ಹಾಗೆಯೇ ಇತ್ತು. ಕಳೆದ ಕೆಲವು ಸಮಯದ ಹಿಂದೆ ಸರಕಾರ ಮತ್ತೆ 5.50 ಲಕ್ಷ ಹಣ ಮಂಜೂರಿ ಮಾಡಿ ಕಂಪೌಂಡ್ ಕಟ್ಟಲು ನಿರ್ಮಿತಿ ಕೇಂದ್ರದವರಿಗೆ ನೀಡಿದ್ದರಿಂದ ಶುಕ್ರವಾರ ಬೆಳಿಗ್ಗೆ ಕಂಪೌಂಡ್ ಕಟ್ಟಲು ಕಾಮಗಾರಿಯನ್ನು ಆರಂಭಿಸಲಾಗಿತ್ತು.

ಬೆಳಿಗ್ಗೆಯಿಂದ ಸುಗಮವಾಗಿ ನಡೆಯುತ್ತಿರುವ ಕಾಮಗಾರಿಗೆ ಮಧ್ಯಾಹ್ನದ ವೇಳೆಗೆ  ತಕರಾರು ತೆಗೆದಿದ್ದು ಅದೇ ರೀತಿಯಾಗಿ ಮುಂದುವರಿಯಿತು. ಮತ್ತೆ ಇನ್ನೋರ್ವ ಬಂದು ತಕರಾರು ಇದೆ ಎಂದಾಗ ಸ್ಥಳದಲ್ಲಿ ಎರಡೂ ಕೋಮಿನ ಜನರು ಜಮಾಯಿಸಲು ಆರಂಭಿಸಿದ್ದು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ಕೈಮೀರುವ ಮೊದಲು ಜಾಗೃತರಾದ ಅಧಿಕಾರಿಗಳು ಸಹಾಯಕ ಕಮಿಷನರ್ ಕಚೇರಿಯಲ್ಲಿ ಸಭೆ ಕರೆದು ಕಾಮಗಾರಿಯನ್ನು ಒಂದೆರಡು ದಿನ ಸ್ಥಗಿತಗೊಳಿಸಿ ಮತ್ತೆ ಮುಂದುವರಿಸಲು ಚಿಂತನೆ ನಡೆಯಿತು. 

ಆದರೆ ಖಡಾಖಂಡಿತವಾಗಿ ಅದನ್ನು ವಿರೋಧಿಸಿದ ಶಾಸಕ ಸುನಿಲ್ ನಾಯ್ಕ ಅವರು ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಲು ಸಾಧ್ಯವಿಲ್ಲ. ನಾವು ಬೇಕಾದರೆ ಸ್ಥಳಕ್ಕೆ ಬರುವುದಿಲ್ಲ, ಅಧಿಕಾರಿಗಳು ನಿಂತು ಕಂಪೌಂಡ್ ಕಟ್ಟಿಸುವುದಾದರೆ ನಾವು ಬೆಂಬಲ ನೀಡುತ್ತೇವೆ ವಿನಹ ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ. ನೀವು ಮುಂದೆ ನಿಂತು ಕಟ್ಟಿಸುವುದಕ್ಕೆ ಸಾಧ್ಯವಿಲ್ಲ ಎಂದಾದರೆ ನಾವು ಕಟ್ಟಿ ಮುಗಿಸುತ್ತೇವೆ. ಯಾವುದೇ ನಿಮ್ಮ ನಿರ್ಧಾರ ತಿಳಿಸಿ ಎಂದರಲ್ಲದೇ ಕಂಪೌಂಡ್ ಕಟ್ಟುವ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದರು. 

ಸಭೆಗೆ ಬಂದ ತಂಜೀಂ ನಿಯೋಗ: ಸಹಾಯಕ ಕಮಿಷನರ್ ಕಚೇರಿಯಲ್ಲಿ ಸಭೆಯ ನಡೆಯುತ್ತಿರುವ ಮಧ್ಯದಲ್ಲಿಯೇ ತಂಜೀಂ ನಿಯೋಗ ಸಭೆಗೆ ಹಾಜರಾಗಿ ಕಂಪೌಂಡ್ ಕಟ್ಟಲು ತಮ್ಮ ವಿರೋಧವಿದೆ, ಕಳೆದ ಹಲವಾರು ವರ್ಷಗಳಿಂದ ಇಲ್ಲಿ ವಿವಾದ ಇದ್ದು ತಮ್ಮನ್ನು ಮಾತುಕತೆಗೆ ಕರೆಯದೇ ಕಂಪೌಂಡ್ ಕಟ್ಟಲು ಆರಂಭಿಸಿರುವುದು ಎಷ್ಟು ಸರಿ. ಕಂಪೌಂಡ್ ಕಟ್ಟುವುದೇ ಆದಲ್ಲಿ ಪುರಸಭೆಯಿಂದ ಪರವಾನಿಗೆಯನ್ನು ಪಡೆದು ಈಗ ನಾಗಬನ ಇರುವಷ್ಟು ಜಾಗಾದಲ್ಲಿ ಮಾತ್ರ ನಿರ್ಮಿಸಿ ಎಂದು ಸಭೆಗೆ ತಿಳಿಸಿದರು. 

ತಂಜೀಂ ನಿಯೋಗಕ್ಕೆ ಅತ್ಯಂತ ಸಮರ್ಪಕವಾಗಿ ತಿಳಿಸಿ ಹೇಳಿದ ಶಾಸಕ ಸುನಿಲ್ ನಾಯ್ಕ ಅವರು ಕಳೆದ ನೂರಾರು ವರ್ಷಗಳಿಂದ ಇಲ್ಲಿ ನಾಗಬನಕ್ಕೆಂದು ಸರಕಾರ ಜಾಗಾ ಬಿಟ್ಟಿದೆ. ಸಾರ್ವಜನಿಕ ಉದ್ದೇಶಕ್ಕೆ ಎಂತಾ ಇದ್ದರೂ ಸಹ ನಾಗಬನ ಇರುವುದರಿಂದ ಅದರಲ್ಲಿ ಸಾರ್ವಜನಿಕ ಉದ್ದೇಶ ಬೇರೆ ಯಾವುದು ಇರಲು ಸಾಧ್ಯ.  ನಾವು ಕಳೆದ ಹಲವಾರು ವರ್ಷಗಳಿಂದ ಭಟ್ಕಳದಲ್ಲಿ ಅತಿಕ್ರಮಣ ಜಾಗಾದಲ್ಲಿ ನಿರ್ಮಾಣವಾಗುವ  ಅಭಿವೃದ್ಧಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಇಲ್ಲಿನ ನಾವು ಹೊರಟಿರುವುದು ನಾಗಬನಕ್ಕೆ ಸರಕಾರದ ವತಿಯಿಂದ ಕಂಪೌಂಡ್ ಹಾಕಲು ಮಾತ್ರ, ಹಾಗಿರುವಾಗ ನಿಮ್ಮದೇನು ತಕರಾರು.  ನಾವು ನಮ್ಮ ಜಾಗದಲ್ಲಿ ಕಟ್ಟಿಕೊಳ್ಳಲು ತಕರಾರು ಹಾಕುವುಕ್ಕೆ ನಿಮಗೇನು ಅಧಿಕಾರವಿದೆ.  ಇಂತಹ ಕ್ಷುಲ್ಲಕ ಕಾರಣಕ್ಕೆ ನೀವು ತಕರಾರು ಮಾಡುವುದು ಸರಿಯಲ್ಲ ಎಂದು ಮನವರಿಕೆ ಮಾಡಿದ್ದು, ತಂಜೀಂ ನಿಯೋಗ ಕೂಡಾ ತಮ್ಮ ಮಾತಿನ ವರಸೆಯನ್ನು ಬದಲಿಸುತ್ತಿರುವಾಗಲೇ, ಕಾರ್ಯಕರ್ತರೋರ್ವರು ಕೂಗಾಡಿದ್ದರಿಂದ ಸಭೆಯೇ ರದ್ದಾಗಿದ್ದು ಯಾವುದೇ ನಿರ್ಣಯಕ್ಕೆ ಬರದ ಪರಿಸ್ಥಿತಿ ನಿರ್ಮಾಣವಾಯಿತು.

ಸಭೆಯಿಂದ ತಂಜೀಂ ನಿಯೋಗದ ಸದಸ್ಯರು ಹೊರ ನಡೆದರೆ, ಶಾಸಕ ಸುನಿಲ್ ನಾಯ್ಕ ಕೂಡಾ ಬೇಸರಗೊಂಡು ಹೊರ ನಡೆದರು. ಕಾರ್ಯಕರ್ತರ ನಡೆ ನಿರ್ಣಾಯಕ ಘಟ್ಟಕ್ಕೆ ಬಂದಿರುವ ಸಭೆಯೇ ಮುರಿದು ಬಿದ್ದಂತಾಗಿದ್ದು, ಅಧಿಕಾರಿಗಳ ಮುಂದಿನ ನಡೆ ಏನು ಎನ್ನುವುವುದನ್ನು ಕಾದು ನೋಡುವ ಪರಿಸ್ಥಿತಿ ಎದುರಾಯಿತು. 

ಸರಕಾರಿ ಜಾಗಾದಲ್ಲಿ ಸರಕಾರದ ಅನುದಾನದಡಿಯಲ್ಲಿ ಕಂಪೌಂಡ್ ಕಟ್ಟಲು ನಿರ್ಮಿತಿ ಕೇಂದ್ರಕ್ಕೆ ಆದೇಶ ನೀಡಲಾಗಿದ್ದು ಸಾರ್ವಜನಿಕರ ಯಾವುದೇ ತಕರಾರು ಇಲ್ಲವಾಗಿದ್ದರಿಂದ ಶನಿವಾರ ಬೆಳಿಗ್ಗೆ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಕಂಪೌಂಡ್ ಕಟ್ಟುವ ಕಾರ್ಯ ಮುಂದುವರಿದಿದೆ.

 

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...