ಪೊಲೀಸರ ಭದ್ರಕೋಟೆ ಭೇದಿಸಿ ಅಕ್ರಮ ಟೋಲ್‌ಗೆ ಮುತ್ತಿಗೆ; ಮಂಗಳೂರಿನಲ್ಲಿ ನೂರಾರು ಹೋರಾಟಗಾರರು ವಶಕ್ಕೆ, ಬಿಡುಗಡೆ

Source: Vb | By I.G. Bhatkali | Published on 19th October 2022, 5:02 PM | Coastal News | State News |

ಮಂಗಳೂರು: ಸುರತ್ಕಲ್‌ನ ಅಕ್ರಮ ಟೋಲ್‌ಗೇಟ್ ತೆರವುಗೊಳಿಸಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ನಡೆಯುತ್ತಾ ಬಂದಿರುವ ಹೋರಾಟ ಇಂದು ತೀವ್ರಸ್ವರೂಪವನ್ನು ಪಡೆದು ಪೊಲೀಸರ ಭದ್ರಕೋಟೆಯನ್ನು ಭೇದಿಸಿ ಟೋಲ್‌ಗೆ ಮುತ್ತಿಗೆ ಹಾಕುವವರೆಗೂ ಮುಂದುವರಿಯಿತು.

ಪಕ್ಷಾತೀತ, ಸಂಘಟನಾತೀತ ಹೋರಾಟದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಸಾರ್ವಜನಿಕರು ಭಾಗವಹಿಸುವ ಮೂಲಕ ಅಕ್ರಮ ಟೋಲ್ ವಿರುದ್ಧದ ಜನಾಕ್ರೋಶ ಇಂದು ವ್ಯಕ್ತವಾಯಿತು. ಹೋರಾಟಗಾರರು ಟೋಲ್‌ಗೆ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಕೆಲ ಸಮಯ ಟೋಲ್ ಸಂಗ್ರಹ ಸ್ಥಗಿತಗೊಂಡಿತ್ತಲ್ಲದೆ, ಪೊಲೀಸರು ನೂರಾರು ಹೋರಾಟಗಾರರು, ನಾಯಕರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಿಜೆಪಿಯೇತರ ಎಲ್ಲ ಪಕ್ಷಗಳು, ದ.ಕ., ಉಡುಪಿ ಜಿಲ್ಲೆಯ ಹತ್ತಾರು ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್‌ಗೇಟ್‌ ನ್ನು ಜನರಿಂದಲೇ ತೆರವುಗೊಳಿಸುವ ನೇರ ಕಾರ್ಯಾಚರಣೆಗೆ ಇಂದು ಕರೆ ನೀಡಲಾಗಿತ್ತು. ಈ ನಡುವೆ ಹೋರಾಟದ ವಿರುದ್ಧವಾಗಿ 16 ಮಂದಿ ಮುಖಂಡರಿಗೆ ಪೊಲೀಸರು ನೋಟಿಸ್‌ ನ್ನೂ ನೀಡಿದ್ದರು. ಹಾಗಿದ್ದರೂ ಇಂದು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಪೊಲೀಸರ ಕೋಟೆಯನ್ನು ಭೇದಿಸಿ ಟೋಲ್‌ಗೇಟ್‌ ಗೆ ಮುತ್ತಿಗೆ ಹಾಕಿದರು.

ಮಂಗಳವಾರ ಬೆಳಗ್ಗೆ 9ರ ವೇಳೆಗೆ ಪ್ರತಿಭಟನಾಕಾರರು ಸುರತ್ಕಲ್ ಟೋಲ್ ಸುತ್ತಮುತ್ತ ಜಮಾಯಿಸಲು ಆರಂಭಿಸಿದರು. ಅದಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಹೋರಾಟಗಾರರನ್ನು ಟೋಲ್ ಗೇಟ್‌ನ ಸುಮಾರು 50 ಮೀ. ದೂರದಲ್ಲಿ ಎನ್‌ಐಟಿಕೆ ಎದುರಿನ ಸರ್ವಿಸ್ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಡೆದಿದ್ದರು. ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಸಂಸದರು, ಶಾಸಕರ ವಿರುದ್ಧ ಘೋಷಣೆ, ಧಿಕ್ಕಾರಗಳನ್ನು ಕೂಗಿದರು. ಟೋಲ್‌ಗೇಟನ್ನು ತೆರವುಗೊಳಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ನಿರ್ಧರಿಸಿದ್ದ ಪ್ರತಿಭಟನಾಕಾರರು ಸುಮಾರು 10 ಗಂಟೆಗೆ ಏಕಾಏಕಿ ಪೊಲೀಸರ ಭದ್ರಕೋಟೆ, ಬ್ಯಾರಿಕೇಡ್ ಗಳನ್ನು ತಳ್ಳಿ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಿದರು.

ಸುಮಾರು 400ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪೊಲೀಸರಿಗೆ ಹೋರಾಟಗಾರರ ಕಿಚ್ಚನ್ನು ತಡೆಯಲು ಸಾಧ್ಯವಾಗಲಿಲ್ಲ. ಟೋಲ್ ಗೇಟ್ ನ ಮುಂಭಾಗದಲ್ಲಿ ಎರಡು ತಡೆಬೇಲಿಗಳನ್ನು ಪೊಲೀಸರು ಹಾಕಿದ್ದರೂ ಹೋರಾಟಗಾರರು ಅದನ್ನೂ ಮುರಿದು ಒಳನುಗ್ಗಿದ್ದರು. ಈ ಸಂದರ್ಭ ಅಲ್ಲಲ್ಲಿ ಪೊಲೀಸರು ಟೋಲ್‌ಗೇಟ್‌ ನತ್ತ ಹೋರಾಟ ಸಮಿತಿಯ ನಾಯಕರನ್ನು ತಡೆದು ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದರಾದರೂ ಅಕ್ರಮ ಟೋಲ್ ಸಂಗ್ರಹಣೆಯ ವಿರುದ್ಧದ ಜನಾಕ್ರೋಶ ಟೋಲ್‌ಗೆ ಮುತ್ತಿಗೆ ಹಾಕುವವರೆಗೆ ಮುಂದುವರಿಯಿತು.

ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ತಳ್ಳಾಟ, ಘರ್ಷಣೆ ನಡೆಯಿತು. ಅನೇಕರನ್ನು ಪೊಲೀಸರು ಎಳೆದೊಯ್ದರು. ಕೆಲವರನ್ನಂತೂ ಕಾಲು ಹಿಡಿದು ರಸ್ತೆಯಲ್ಲೇ ಎಳೆದೊಯ್ದು ಪ್ರತಿಭಟನೆ ನಿಲ್ಲಿಸಲು ಯತ್ನಿಸಲಾಯಿತು. ಆದರೂ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ವಿವಿಧ ಪಕ್ಷ, ಸಂಘಟನೆಗಳ ಮುಖಂಡರ ಸಹಿತ ಪ್ರತಿಭಟನಾಕಾರರು ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿ ಅಲ್ಲೇ ಕುಳಿತು ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಮುಖಂಡ ಮಿಥುನ್ ರೈ ಸಹಿತ ಕೆಲವರು ಟೋಲ್‌ಗೇಟ್ ಕ್ಯಾಬಿನ್ ಏರಿ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಎಚ್ಚೆತ್ತ ಪೊಲೀಸ್ ಪಡೆ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಸುತ್ತುವರಿದು ಎಲ್ಲ ಪ್ರತಿಭಟನಾಕಾರರನ್ನು ಎಳೆದೊಯ್ದು ಬಂಧಿಸಿದರು.

ಪೊಲೀಸರು- ಪ್ರತಿಭಟನಾಕಾರರ ನಡುವಿನ ತಿಕ್ಕಾಟದಲ್ಲಿ ಅನೇಕ ಪ್ರತಿಭಟನಾಕಾರರಿಗೆ ಸಣ್ಣಪುಟ್ಟ ಗಾಯಗಳಾದವು. ಒಬ್ಬ ಪ್ರತಿಭಟನಾಕಾರನ ಕಣ್ಣಿಗೆ ಬಲವಾದ ಏಟು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟೋಲ್‌ಗೇಟ್‌ನ ಕೆಲವು ಪರಿಕರಗಳಿಗೆ ಹಾನಿ ಉಂಟಾಯಿತು. ಕೆಲವು ಪೊಲೀಸರಿಗೂ ತರಚಿದ ಗಾಯಗಳಾದವು.

ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಕಾಂಗ್ರೆಸ್, ಸಿಪಿಎಂ, ಜೆಡಿಎಸ್, ಆಪ್ ಸೇರಿದಂತೆ ವಿವಿಧ ಪಕ್ಷ ಹಾಗೂ ಸಂಘಟನೆಗಳು ಭಾಗಿಯಾಗಿದ್ದವು. ಸುರತ್ಕಲ್ ಟೋಲ್‌ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ, ಮಾಜಿ ಶಾಸಕರಾದ ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ, ಮೊಯ್ದಿನ್ ಬಾವ, ಬಿಲ್ಲವ ಮುಖಂಡ ಪದ್ಮರಾಜ್, ಪ್ರಮುಖರಾದ ಮಿಥುನ್ ರೈ, ಶಶಿಧರ ಹೆಗ್ಡೆ, ಪ್ರತಿಭಾ ಕುಳಾಯಿ, ಬಿ.ಕೆ.ಇಮಿಯಾಝ್, ಸಂತೋಷ್ ಬಜಾಲ್, ಸುನೀಲ್ ಕುಮಾರ್ ಬಜಾಲ್, ದಿನೇಶ್ ಹೆಗ್ಡೆ ಉಳೆಪಾಡಿ, ಯಾದವ ಶೆಟ್ಟಿ, ವಸಂತ್ ಆಚಾರಿ, ಶ್ರೀನಾಥ್ ಕುಲಾಲ್, ರಾಘವೇಂದ್ರ ರಾವ್, ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...