ಗಾಝಾ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ; ಸಾವಿನ ಸಂಖ್ಯೆ 500ಕ್ಕೇರಿಕೆ

Source: Vb | By I.G. Bhatkali | Published on 19th October 2023, 8:06 AM | Global News |

ಗಾಝಾನಗರ: ಗಾಝಾ ಪಟ್ಟಿಯ ಖಾನ್‌ನಿಸ್‌ ಆಸ್ಪತ್ರೆಯ ಮೇಲೆ ಮಂಗಳವಾರ ತಡರಾತ್ರಿ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ 500ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದು, ಇಡೀ ಸ್ಫೋಟದಲ್ಲಿ ವಿಶ್ವವೇ ದಿಗ್ಗ ಮೆಗೊಂಡಿದೆ. ಗಾಯಗೊಂಡ ನೂರಾರು ಮಂದಿಯನ್ನು ರಕ್ಷಿಸಲು ವೈದ್ಯರು ಹರಸಾಹಸ ನಡೆಸುತ್ತಿದ್ದಾರೆ. ದಾಳಿಯಲ್ಲಿ ಕುಸಿದುಬಿದ್ದ ಆಸ್ಪತ್ರೆಯ ಭಗ್ನಾವಶೇಷಗಳಲ್ಲಿ ಸಿಲುಕಿಕೊಂಡವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.

ಆಸ್ಪತ್ರೆಯ ನೆಲದಲ್ಲಿ ನೂರಾರು ಮೃತದೇಹಗಳು ಚದುರಿಬಿದ್ದಿರುವ ದೃಶ್ಯಗಳಿರುವ ವೀಡಿಯೊವನ್ನು ಅಸೋಯೆಟೆಡ್ ಪ್ರೆಸ್ ಸುದ್ದಿಸಂಸ್ಥೆ ಪ್ರಸಾರ ಮಾಡಿದೆ. ಮೃತಪಟ್ಟವರಲ್ಲಿ ಹಲವರು ಪುಟ್ಟ ಮಕ್ಕಳಾಗಿದ್ದು, ಇಡೀ ಕಟ್ಟ ಡವನ್ನು ಬೆಂಕಿಯ ಜ್ವಾಲೆ ಆವರಿಸಿದೆ ಎಂದು ವರದಿ ತಿಳಿಸಿದೆ.

ಆಸ್ಪತ್ರೆಯ ಆವರಣದಲ್ಲಿ ಹುಲ್ಲುಹಾಸಿನಲ್ಲಿ ಕಂಬಳಿಗಳು, ಶಾಲಾ ಬ್ಯಾಗ್ ಮತ್ತಿತರ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಹರಡಿವೆ. ಆಸುಪಾಸಿನಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಸಂಪೂರ್ಣ ವಾಗಿ ಸುಟ್ಟುಕರಕಲಾಗಿದ್ದು, ಇಡೀ ಪ್ರದೇಶದಲ್ಲಿ ಕಟ್ಟಡದ ಅವಶೇಷಗಳು ತುಂಬಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಮಧ್ಯೆ ಇಸ್ರೇಲ್ ತನ್ನ ದಾಳಿಯನ್ನು ಬುಧವಾರವೂ ಮುಂದುವರಿಸಿದೆ. ಫೆಲೆಸ್ತೀನ್ ನಾಗರಿಕರಿಗೆ ಸುರಕ್ಷಿತ ವಲಯವೆಂದು ಸ್ವತಃ ಇಸ್ರೇಲ್ ಬಣ್ಣಿಸಿದ್ದರೂ, ಇಸ್ರೇಲ್ ಸೇನೆ ದಕ್ಷಿಣ ಗಾಝಾದ ನಗರಗಳ ಮೇಲೆಯೂ ವಾಯುದಾಳಿ ನಡೆಸಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಖಾನ್ ಯೂನಿಸ್‌ನ ಆಸ್ಪತ್ರೆಯ ಮೇಲೆ ನಡೆದ ವಾಯುದಾಳಿ ಇಸ್ರೇಲ್ ಕೃತ್ಯವೆಂದು ಹಮಾಸ್ ಆರೋಪಿಸಿದೆ. ತಾನು ಸೇನಾ ಕಾರ್ಯಾಚರಣೆ ನಡೆಸುವ ಮುನ್ನ ದಕ್ಷಿಣ ಗಾಝಾಪಟ್ಟಿಯ ಪ್ರದೇಶದಿಂದ ತೆರವುಗೊಳ್ಳುವಂತೆ ಇಸ್ರೇಲ್ ಖಾನ್‌ ಯೂನಿಸ್ ನಗರದ ನಿವಾಸಿಗಳಿಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನ ದಾಳಿಯಿಂದ ಪಾರಾಗಲು ಸಾವಿರಾರು ನಾಗರಿಕರು ಅಲ್ ಅಹ್ಲಿ ಮತ್ತಿತರ ಆಸ್ಪತ್ರೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು. ದಾಳಿ ನಡೆದ ಸಂದರ್ಭ ಸಾವಿರಕ್ಕೂ ಅಧಿಕ ನಾಗರಿಕರು ಖಾನ್‌ಯೂನಿಸ್‌ನ ಆಸ್ಪತ್ರೆ ಹಾಗೂ ಆಸುಪಾಸಿನ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದಾರೆನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳ ಅನುಭವ: ನನಗೆ ದೊಡ್ಡದೊಂದು ಸ್ಫೋಟದ ಸದ್ದು ಕೇಳಿಸಿದ್ದು, ತನ್ನ ಶಸ್ತ್ರಕ್ರಿಯೆ ಕೊಠಡಿಯ ಛಾವಣಿ ಕುಸಿದುಬೀಳುವುದನ್ನು ನಾನು ಕಣ್ಣಾರೆಕಂಡಿದ್ದೇನೆ. ನೂರಾರು ಶವಗಳು ಹಾಗೂ ತೀವ್ರವಾಗಿ ಗಾಯಗೊಂಡವರನ್ನು ತಾನು ಕಂಡಿರುವುದಾಗಿ ಅಲ್‌ ಅಲ್ಲ ಆಸ್ಪತ್ರೆಯ ಸರ್ಜನ್ ಘಾಸ್ಟನ್ ಅಲಿ ಸಿಟ್ಟಾ ಹೇಳಿದ್ದಾರೆ.

ಗಾಯಾಳುಗಳಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು; ಔಷಧಿ ಸಾಮಗ್ರಿಗಳ ಕೊರತೆ; ಖಾನ್‌ ನಿಸ್‌ನ ಆಲ್ ಆಹ್ಲಿ ಆಸ್ಪತ್ರೆಯಲ್ಲಿ ಗಾಯಗೊಂಡ 350ಕ್ಕೂ ಅಧಿಕ ಮಂದಿಯನ್ನು ಗಾಝಾ ನಗರದ ಮುಖ್ಯ ಆಸ್ಪತ್ರೆಯಾದ ಅಲ್‌ಶಿಫಾದಲ್ಲಿ ದಾಖಲಿಸಲಾಗಿದೆ. ಇಸ್ರೇಲ್‌ನ ವಾಯುದಾಳಿಯಲ್ಲಿ ಗಾಯಗೊಂಡವರಿಂದ ಇಡೀ ಆಸ್ಪತ್ರೆ ಈಗಾಗಲೇ ತುಂಬಿತುಳುಕುತ್ತಿದ್ದು, ವೈದ್ಯರು ಗಾಯಾಳುಗಳನ್ನು ನೆಲದಲ್ಲಿ ಮಲಗಿಸಿಯೇ ಶಸ್ತ್ರಕ್ರಿಯೆ ನಡೆಸುತ್ತಿದ್ದಾರೆ.

“ನಮಗೆ ವೈದ್ಯಕೀಯ ಸಲಕರಣೆಗಳ ಅಗತ್ಯವಿದೆ. ನಮಗೆ ಆಸ್ಪತ್ರೆಗಳು, ಅರಿವಳಿಕೆಗಳು ಮತ್ತಿತರ ವೈದ್ಯಕೀಯ ಸಾಮಗ್ರಿಗಳ ಅಗತ್ಯವಿದೆ. ಕೆಲವೇ ತಾಸುಗಳೊಳಗೆ ಆಸ್ಪತ್ರೆಯ ಜನರೇಟರ್ ಗಳಲ್ಲಿರುವ ಇಂಧನ ಮುಗಿಯಲಿದ್ದು, ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸದೇ ಇದ್ದಲ್ಲಿ ಆಸ್ಪತ್ರೆಯನ್ನು ಮುಚ್ಚಲೇಬೇಕಾದ ಪರಿಸ್ಥಿತಿಯಿದೆ”ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದ ಪ್ರತಿಭಟನೆ: ಖಾನ್‌ನಿಸ್‌ನ ಆಸ್ಪತ್ರೆಯ ಮೇಲೆ ನಡೆದ ಭೀಕರ ದಾಳಿಯ ಬೆನ್ನಲ್ಲೇ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಇಸ್ರೇಲ್ ಅಕ್ರಮಿತ ಪಶ್ಚಿಮದಂಡೆಯಲ್ಲಿ ಪ್ರತಿಭಟನಾಕಾರರು ಫೆಲೆಸ್ತೀನ್ ಭದ್ರತಾಪಡೆಗಳೊಂದಿಗೆ ಸಂಘರ್ಷಕ್ಕಿಳಿದರು.

ಈಜಿಪ್ಟ್, ಲೆಬನಾನ್‌ಗಳಲ್ಲಿಯೂ ಪ್ರತಿಭಟನೆಗಳು ಭುಗಿ ಲೆದ್ದಿವೆ. ಇರಾನ್ ಬೆಂಬಲಿತ ಹಿಜ್ಜುಲ್ಲಾ ಗುಂಪು ಇಸ್ರೇಲಿ ಪಡೆಗಳ ಮೇಲೆ ಗುಂಡು ಹಾರಿಸಿವೆ.ಅಲ್ಲದೆ ಅಪಾರ ರಾಕೆಟ್ ಗಳೊಂದಿಗೆ ಸಂಘರ್ಷಕ್ಕಿಳಿಯುವುದಾಗಿ ಅದು ಎಚ್ಚರಿಕೆ ನೀಡಿದೆ.

ಜೋರ್ಡಾನ್‌ನಲ್ಲಿ ಜನರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಗಾಝಾದಲ್ಲಿ ನರಮೇಧ ನಿಲ್ಲಿಸುವಲ್ಲಿ ತಮ್ಮ ನಾಯಕರು ವಿಫಲರಾಗಿದ್ದಾರೆಂದು ಆರೋಪಿಸಿ ಪ್ರತಿಭಟನೆಗಿಳಿದ ಜನರು, ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...