ಕಡಲತಡಿಯಲ್ಲಿ ಕಣ್ಮನ ಸೆಳೆಯುತ್ತಿರುವ ಸೀ ವಾಕ್ ಶೃಂಗಾರ; ಭಟ್ಕಳದಲ್ಲಿ ಮಂತ್ರಿಗಳೇ, ಓಡುವುದು ಬೇಡ ನಡೆದಾಡಿ ಬನ್ನಿ

Source: S O News | By I.G. Bhatkali | Published on 21st June 2023, 11:16 PM | Coastal News | Special Report |

ಭಟ್ಕಳ: ಕರ್ನಾಟಕಕ್ಕೆ ಕರಾವಳಿ ತೀರ ಎನ್ನುವುದು ಶೃಂಗಾರ ಕಾವ್ಯದಂತಿದೆ. ಕಡಲ ತಡಿಯುದ್ಧಕ್ಕೂ ಸದಾ ಬಣ್ಣ ಬಣ್ಣದ ಕನಸುಗಳು ಚಿಗುರೊಡೆದು ಕುಳಿತುಕೊಂಡಿರುತ್ತದೆ. ಕಡಲ ತೀರಕ್ಕೆ ಇನ್ನಷ್ಟು ರಂಗು ನೀಡುವ ನಿಟ್ಟಿನಲ್ಲಿ ಕರಾವಳಿ ಕಡಲ ತೀರವನ್ನು ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸುವ ಪ್ರಯತ್ನ ಮುಂದುವರೆದುಕೊಂಡೇ ಇದೆ. ಆದರೆ ಭಟ್ಕಳದ ಮಟ್ಟಿಗೆ ಮುರುಡೇಶ್ವರವನ್ನು ಬಿಟ್ಟರೆ ಅಕ್ಕಪಕ್ಕದ ಕಡಲ ತೀರ ಹೆಚ್ಚು ಸುದ್ದಿಯಾಗಿಲ್ಲ. ಈ ನಡುವೆ ಆಡಳಿತ ಯಂತ್ರ ಬದಲಾದಂತೆ ಹೊಸ ಅವಕಾಶಗಳು ಬಾಗಿಲು ತೆರೆದುಕೊಳ್ಳುವ ನಿರೀಕ್ಷೆ ಹುಟ್ಟಿಕೊಂಡಿದೆ.

ಭಟ್ಕಳ ಮಾವಿನಕುರ್ವೆ ಬಂದರರೊಂದನ್ನೇ ಅವಲಂಬಿಸಿಕೊಂಡಿದ್ದ ಇಲ್ಲಿನ ಮೀನುಗಾರರಿಗೆ ಭಟ್ಕಳ ತೆಂಗಿನಗುಂಡಿ, ಅಳ್ವೆಕೋಡಿ ಬಂದರು ಅಭಿವೃದ್ಧಿ ಇನ್ನಿಲ್ಲದಂತೆ ಚೈತನ್ಯ ಮೂಡಿಸಿದೆ. ಮೀನುಗಾರಿಕಾ ಚಟುವಟಿಕೆಗಳು ಗಣನೀಯವಾಗಿ ವಿಸ್ತಾರಗೊಂಡಿವೆ. ಉದ್ಯೋಗ ಸೃಷ್ಟಿಗಳು ಗಮನ ಸೆಳೆಯುತ್ತಿವೆ. ಅಳ್ವೆಕೋಡಿ ದೇವಸ್ಥಾನ ಧಾರ್ಮಿಕವಾಗಿಯೂ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು, ತೆಂಗಿನಗುಂಡಿ ಅಳ್ವೆಕೋಡಿ ಪ್ರವಾಸಿಗರನ್ನು ಕೈ ಮಾಡಿ ಕರೆಯುತ್ತಿವೆ. ಪ್ರಸಕ್ತವಾಗಿ ತಾಲೂಕಿನ ವಿವಿಧ ಭಾಗಗಳಿಂದ ಜನರು ಅಳ್ವೆಕೋಡಿ, ತೆಂಗಿನಗುಂಡಿಯಲ್ಲಿ ಅಡ್ಡಾಡಿ ಹೋಗುತ್ತಿದ್ದಾರೆ. ಆದರೂ ಅಭಿವೃದ್ಧಿ ಸಾಲುತ್ತಿಲ್ಲ ಎನ್ನುವ ಕೊರಗು ಸ್ಥಳೀಯರನ್ನು ಕಾಡುತ್ತಿದೆ. ಇದೀಗ ಭಟ್ಕಳದ ಶಾಸಕರೇ ಮೀನುಗಾರಿಕೆ, ಬಂದರು ಇಲಾಖೆಯ ಮಂತ್ರಿಗಳಾಗಿದ್ದು, ಕನಸುಗಳಿಗೆ ರೆಕ್ಕೆ ಪುಕ್ಕಗಳು ಜೋಡಣೆಯಾಗಿವೆ.

ಭಟ್ಕಳ ತೆಂಗಿನಗುಂಡಿ ಅಳ್ವೆಕೋಡಿಯಲ್ಲಿ ಸೀ ವಾಕ್ ಅನ್ನು ಬಳಸಿಕೊಂಡು ಪ್ರವಾಸೋದ್ಯಮದ ದೃಷ್ಟಿಯಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅವಕಾಶ ಇದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು ಎನ್ನುವುದು ನಮ್ಮೆಲ್ಲರ ಆಗ್ರಹವಾಗಿದೆ.
 - ರಾಮಾ ಮೊಗೇರ,

ಜಿಪಂ ಮಾಜಿ ಉಪಾಧ್ಯಕ್ಷ

ಕಣ್ಮನ ಸೆಳೆಯುತ್ತಿರುವ ಸೀ ವಾಕ್:
ಭಟ್ಕಳ ತೆಂಗಿನಗುಂಡಿ ಅಳ್ವೆಕೋಡಿಯಲ್ಲಿ ಸರಿ ಸುಮಾರು ರು.80 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣವಾದ ಬ್ರೇಕ್ ವಾಟರ್ (ತಡೆಗೋಡೆ) ಎಲ್ಲರ ಗಮನ ಸೆಳೆಯುತ್ತವೆ. ಪಕ್ಕದ ಕುಂದಾಪುರ ಮರವಂತೆ ಬೀಚ್‍ನ ಮಾದರಿಯಲ್ಲಿಯೇ ನಿರ್ಮಿಸಲಾದ ತಡೆಗೋಡೆಯ ಅಂಚಿನವರೆಗೂ ನಡೆದು ಹೋಗಿ ಕಡಲ ಸೌಂದರ್ಯವನ್ನು ಆಸ್ವಾದಿಸಲು ಅವಕಾಶ ಕಲ್ಪಿಸಲಾಗಿದೆ. ಕಡಲ ತುದಿಯಲ್ಲಿ ಗಗನ ಚುಂಬಿಯಾದ ಶಿವ, ಶಿವನ ನಾಮಬಲದೊಂದಿಗೆ ವೈಭವವನ್ನು ಕಾಣುತ್ತಿರುವ ಮುರುಡೇಶ್ವರ, ಸಮುದ್ರದ ನಡುವೆ ನಿಂತ ಕುಂದ ದ್ವೀಪ ಇತ್ಯಾದಿ ಎಲ್ಲವೂ ತೆಂಗಿನಗುಂಡಿ, ಅಳ್ವೆಕೋಡಿಯಲ್ಲಿರುವ ಸೀ ವಾಕ್‍ನಲ್ಲಿ ಕಂಗೊಳಿಸುತ್ತವೆ. ಇತ್ತಿತ್ತಲಾಗಿ ಹೆಚ್ಚು ಹೆಚ್ಚು ಪ್ರವಾಸಿಗರು ಸೀ ವಾಕ್ ಸಂಜೆ ವಿಹಾರ ಆರಂಭಿಸಿದ್ದಾರೆ. 

ಮುಲಭೂತ ಸೌಕರ್ಯಗಳ ಕೊರತೆ:
ಕರ್ನಾಟಕ ಕರಾವಳಿಯನ್ನು ಪ್ರವಾಸೋದ್ಯಮ ತಾಣವನ್ನಾಗಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಹತ್ವದ್ದಾಗಿದೆ. ಆದರೆ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರವನ್ನೂ ಸೇರಿದಂತೆ ಕರಾವಳಿ ತೀರದಲ್ಲಿ  ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಬಗೆ ಹರಿಸುವುದೇ ಸವಾಲಾಗಿ ಪರಿಣಮಿಸಿದೆ.

Unveiling the Potential: Bhatkal's Coastal Transformation for Tourism and Development

ಈಗ ಸಚಿವರಾಗಿರುವ ಮಂಕಾಳ ವೈದ್ಯರ ಕಡಲ ತಡಿಯ ಸುಸಜ್ಜಿತ ರಸ್ತೆ ನಿರ್ಮಾಣದ ಯೋಜನೆ ಕನಸು ಬಡವಾಗಿದೆ. ಮುಂಡಳ್ಳಿಯಿಂದ ಹೊನ್ನಾವರ ಅಪ್ಸಕೊಂಡದವರೆಗೆ ಸಮುದ್ರ ತಟದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನಕ್ಕೆ ಸಚಿವರು ಈ ಹಿಂದೆ ಮುಂದಡಿ ಇಟ್ಟಿದ್ದರು. ಆದರೆ ಈಗ ಅಳ್ವೆಕೋಡಿಯಿಂದ ಮುರುಡೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು, ಸಂಚಾರ ಬೇಸರ ಮೂಡಿಸುತ್ತಿದೆ.

ತೆಂಗಿನಗುಂಡಿ ಅಳ್ವೆಕೋಡಿಯ ನಡುವೆ ಸೇತುವೆ ನಿರ್ಮಾಣದ ಯೋಜನೆ ಈ ಅವಧಿಯಲ್ಲಿಯಾದರೂ ಅನುಷ್ಠಾನಕ್ಕೆ ಬರಬೇಕಾಗಿದೆ. ಇದರ ಜೊತೆಗೆ ಸೀ ವಾಕ್ ಪರಿಸರದಲ್ಲಿ ಪ್ರವಾಸಿಗರು ತಂಗಲು, ಆಕರ್ಷಿಸಲು ಪಕ್ಕದ ಗೋವಾ ರಾಜ್ಯ, ನಮ್ಮದೇ ಜಿಲ್ಲೆಯ ಗೋಕರ್ಣದಲ್ಲಿ ಇರುವಂತೆ ಪುಟ್ಟ ಪುಟ್ಟ ಗುಡಿಸಲು, ಮನೆಗಳು ತಲೆ ಎತ್ತಬೇಕಾಗಿದೆ. ಹೊಟೆಲ್, ಪುಟ್ಟ ವಾಣಿಜ್ಯ ಮಳಿಗೆಗಳಿಗೆ ಖಂಡಿತ ಅವಕಾಶ ಇದೆ.

ಬಂದರು ಅಭಿವೃದ್ಧಿಯ ವಿಷಯದಲ್ಲಿ ಮಂತ್ರಿ ಮಂಕಾಳ ಓಡುವುದು ಅನಿವಾರ್ಯ ಎನ್ನುವುದು ಎಲ್ಲರಿಗೂ ಗೊತ್ತು! ಆದರೆ ಸೀ ವಾಕ್ ಸೌಂದರ್ಯಕ್ಕೆ ಇನ್ನಷ್ಟು ಅರ್ಥ ನೀಡಲು ಬಂದರು ಅಭಿವೃದ್ಧಿಗೆ ವಿನಿಯೋಗಿಸುವಷ್ಟು ಹಣ ಬೇಡ. ಮಂತ್ರಿಗಳೇ ಸೀ ವಾಕ್ ಮೇಲೆ ಓಡುವುದು ಬೇಡ, ಒಮ್ಮೆಯಾದರೂ ಸುಮ್ಮನೆ ನಡೆದಾಡಿ ಬನ್ನಿ, ನವೀನ ಪ್ರವಾಸಿ ತಾಣದ ಬಣ್ಣದ ಕನಸು ನಿಮಗೂ ಕಾಣಿಸಿಕೊಂಡರೆ ಅದು ಜನರ ಅದೃಷ್ಟ ಎನ್ನುವುದು ಜನರ ಮಾತೇ ಆಗಿದೆ! 

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...