ಭಟ್ಕಳದಲ್ಲಿ ಕೊರೊನಾ ತಡೆ ಕಾರ್ಯಾಚರಣೆಯ ಹೆಸರಿನಲ್ಲಿ ಅಧಿಕಾರಿಗಳ ರಾಜಕೀಯ ಚೆದುರಂಗದಾಟ:ತಾಪಂ ಅಧ್ಯಕ್ಷ ಈಶ್ವರ ನಾಯ್ಕ ಗಂಭೀರ ಆರೋಪ

Source: S.O. News Service | Published on 29th August 2020, 7:49 PM | Coastal News | Don't Miss |

ಭಟ್ಕಳ: ತಾಲೂಕಿನಲ್ಲಿ ಕೋವಿಡ್-19 ತಡೆ ಕಾಯಾಚರಣೆಯ ಹೆಸರಿನಲ್ಲಿ ಅಧಿಕಾರಿಗಳು ರಾಜಕೀಯ ಚೆದುರಂಗದಾಟ ನಡೆಸಿದ್ದಾರೆ ಎಂದು ತಾಲೂಕು ಪಂಚಾಯತ ಅಧ್ಯಕ್ಷ ಈಶ್ವರ ನಾಯ್ಕ ಗಂಭೀರವಾಗಿ ಆರೋಪಿಸಿದ್ದಾರೆ.

ಕೊರೊನಾ ಸೋಂಕಿಗೆ ಒಳಗಾಗಿ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗುವ ಮುನ್ನ 8-10 ದಿನಗಳ ಹಿಂದೆಯೇ ನಾನು ಮನೆಯಲ್ಲಿ ಇದ್ದಿರಲಿಲ್ಲ. ನಾನು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳೆದ 3-4 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಅಧಿಕಾರಿಗಳು ನನ್ನಿಂದ ಯಾವುದೇ ಪ್ರಾಥಮಿಕ ಸಂಪರ್ಕದ ಮಾಹಿತಿಯನ್ನು ಪಡೆದುಕೊಂಡಿಲ್ಲ. ಆದರೆ ಕಂದಾಯ ಹಾಗೂ ಗ್ರಾಮ ಪಂಚಾಯತ ಅಧಿಕಾರಿಗಳು ನನ್ನ ಮನೆ, ಪಕ್ಕದ ಮನೆ, ಗೇರು ಬೋಜದ ಫ್ಯಾಕ್ಟರಿಗೆ ತೆರಳಿ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಬೆಳವಣಿಗೆಯಿಂದ ನಮ್ಮ ಮನೆಯವರು ಭಯಭೀತರಾಗಿದ್ದಾರೆ. ಫ್ಯಾಕ್ಟರಿಗೆ ಕೆಲಸಕ್ಕೆ ಬರುತ್ತಿದ್ದವರೂ ಕೆಲಸಕ್ಕೆ ಬಾರದೆ ದೂರವೇ ಉಳಿದಿದ್ದಾರೆ. ಆದರೆ ಕೆಲವೇ ದಿನಗಳ ಹಿಂದೆ ಭಟ್ಕಳ ಶಾಸಕರು ಕೊರೊನಾ ಸೋಂಕಿಗೆ ಒಳಗಾಗಿ, ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕನಿಷ್ಠ ಅವರ ಪ್ರಾಥಮಿಕ ಸಂಪರ್ಕದ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನವನ್ನು ಯಾವೊಬ್ಬ ಅಧಿಕಾರಿಗಳೂ ಮಾಡಿಲ್ಲ. ನಾನು ವಿರೋಧಿ ಪಕ್ಷದವನೆಂಬ ಕಾರಣಕ್ಕೆ ಅಧಿಕಾರಿಗಳು ಇಂತಹ ವರ್ತನೆ ತೋರಿದ್ದಾರೆ. ಓರ್ವ ಜನಪ್ರತಿನಿಧಿಯಾದ ನನಗೇ ಈ ಪರಿಯ ತಾರತಮ್ಯವಾದರೆ ಜನಸಾಮಾನ್ಯರ ಪರಿಸ್ಥಿತಿ ಏನಾಗಬೇಡ ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ. 

 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...