ಹಳ್ಳಿ ಜನರು ಅಧಿಕಾರಿಗಳ ಗ್ರಾಮ ವಾಸ್ತವ್ಯದ ಸದುಪಯೋಗ ಪಡೆಯಬೇಕು......ಸಾಜೀದ್ ಅಹ್ಮದ್ ಮುಲ್ಲಾ

Source: S.O. News Service | By MV Bhatkal | Published on 21st March 2021, 9:15 PM | Coastal News | Don't Miss |

ಭಟ್ಕಳ:ಹಳ್ಳಿಗೇ ಬಂದು ಅಧಿಕಾರಿಗಳು ಗ್ರಾಮ ವಾಸ್ತವ್ಯ ನಡೆಸುವುದರಿಂದ ಜನರ ಸಮಸ್ಯೆ ಆಲಿಸುವುದರ ಜೊತೆಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಸಾಧ್ಯವಿದೆ. ಸರಕಾರ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಹಮ್ಮಿಕೊಂಡ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆಯಲು ಜನರು ಮುಂದಾಗಬೇಕು ಎಂದು ಸಹಾಯಕ ಆಯುಕ್ತ ಸಾಜೀದ ಅಹ್ಮದ್ ಮುಲ್ಲಾ ಹೇಳಿದರು.
ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯತಿಯ ಸರಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಶನಿವವಾರ  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗೆ ಅಧಿಕಾರಿಗಳ ತಂಡ ಬಂದು ದಿನವಿಡೀ ವಾಸ್ತವ್ಯ ಇರುವುದರಿಂದ ಗ್ರಾಮದ ಅನೇಕ ಸಮಸ್ಯೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಸರಕಾರ ಹಳ್ಳಿ ಜನರಿಗೆ ಕೆಲಸ ಕಾರ್ಯಕ್ಕಾಗಿ  ಕಚೇರಿಗೆ ಅಲೆದಾಟ ತಪ್ಪಿಸಲು ಇಂತಹ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಮವಾಸ್ತವ್ಯದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಕೆಲವೊಂದಕ್ಕೆ ಸ್ಥಳದಲ್ಲೇ ಮಂಜೂರಿ ನೀಡಲಾಗುವುದು ಎಂದರು. ಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ನಾಯ್ಕ ಉಪಸ್ಥಿತರಿದ್ದರು. ತಹಸೀಲ್ದಾರ
ರವಿಚಂದ್ರ ಎಸ್ ಮಾತನಾಡಿ, ಗ್ರಾಮ ವಾಸ್ತವ್ಯದಲ್ಲಿ ಕಂದಾಯ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದು, ಜನರ ಸಮಸ್ಯೆ ತಿಳಿಸಬಹುದು ಎಂದರು. ಸಹಾಯಕ ಆಯುಕ್ತರ ನೇತೃತ್ವದಲ್ಲಿ ಕಂದಾಯ ಗ್ರಾಮ ರಚಿಸುವುದರ ಜೊತೆಗೆ ಕೊಪ್ಪ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಮೀನು ಗುರುತಿಸಿ, ಅಳತೆಗೆ ಸೂಚಿಸಲಾಯಿತು. ಅದರಂತೆ ಸ್ಮಶಾನದ ಜಮೀನು ಗುರುತಿಸಲಾಯಿತು. ಶಾಲೆ, ಅಂಗನವಾಡಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಲಾಯಿತು. ಮಧ್ಯಾಹ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು  ಅಂಗನವಾಡಿಯಲ್ಲೇ ಊಟ ಮಾಡಿದರು. ನಂತರ ಕೋವಿಡ್ ಸೋಂಕಿನ ಮುಂಜಾಗ್ರತಾ ಕ್ರಮ, ಕೃಷಿ, ತೋಟಗಾರಿಕೆ,ಶಿಶು ಅಭಿವೃದ್ಧಿ, ಪಶು ಸಂಗೋಪನೆ, ಶಿಕ್ಷಣ  ಇಲಾಖೆಯ ಯೋಜನೆಗಳ  ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು. ಗ್ರಾಮಸ್ಥರಿಗೆ ಮಂಗನ ಕಾಯಿಲೆ ಲಸಿಕೆ ನೀಡಿ ಆರೋಗ್ಯ ತಪಾಸಣೆ ನಡೆಸಲಾಯಿತು. ಗ್ರಾಮ ವಾಸ್ತವ್ಯದಲ್ಲಿ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳು ಕಂಪ್ಯೂಟರ ಸಹಿತ ಹಾಜರಿದ್ದು, ಸ್ಥಳದಲ್ಲೇ ಅರ್ಜಿ ಸ್ವೀಕರಿಸಿದರು. ಆಧಾರ ನೋಂದಣಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಮುಂತಾದವುಗಳ ಅರ್ಜಿಗಳನ್ನೂ ಸ್ವೀಕರಿಸಲಾಯಿತು. ಸಭೆಯಲ್ಲಿ ಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಗ್ರಾಮವಾಸ್ತವ್ಯದಲ್ಲಿ ಅರ್ಜಿಗಳ ಮಹಾಪೂರ

ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯತ್‍ನಲ್ಲಿ ನಡೆದ ಸಹಾಯಕ ಆಯುಕ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ ಪರಿಹಾರಕ್ಕೆ ಆಗ್ರಹಿಸಿದರು.
ಅಂಗವಿಕಲರ ವೇತನ. ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ/ಯಶಸ್ವಿನಿ ಯೋಜನೆ, ವೃದ್ಯಾಪ್ಯ ವೇತನ, ಪಹಣಿ ಪತ್ರಿಕೆ ದುರಸ್ಥಿ, ಹದ್ ಬಂದೋಬಸ್ತ ಸರ್ವೆ, ರಸ್ತೆ, ಗಟಾರ, ಸೇತುವೆ, ಅತಿಕ್ರಮಣ ಸಕ್ರಮ ಸೇರಿದಂತೆ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು. ಸಂಧ್ಯಾ ಸುರಕ್ಷಾ ಯೋಜನೆಗೆ ಹೆಚ್ಚಿನ ಅರ್ಜಿ ಸ್ವೀಕೃತಿ ಆಗಿದ್ದು ಕಂಡು ಬಂತು. ಸಭೆಯಲ್ಲಿ ಹಿರಿಯ ನಾಗರಿಕರೇ ಹೆಚ್ಚು ಆಗಮಿಸಿದ್ದರು. ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಿದ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ ಅವರು ದಾಖಲೆ ಸರಿ ಇದ್ದ ಅರ್ಜಿಗಳಿಗೆ ಸ್ಥಳದಲ್ಲೇ ಮಂಜೂರಾತಿ ನೀಡಿದರು. ವಿವಿಧ ಸಮಸ್ಯೆಗೆ ಸಂಬಂಧಿಸಿದಂತೆ 150ಕ್ಕೂ  ಅಧಿಕ ಅರ್ಜಿಗಳು ಸಲ್ಲಿಕೆ ಆಗಿವೆ.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...