ಭಟ್ಕಳ: ಮಣ್ಣುಗೂಡಿನಂತೆ ಇದ್ದ ಭಟ್ಕಳ ಬಸ್ ನಿಲ್ದಾಣದ ಕಟ್ಟಡ ಕುಸಿದು ಬೀಳುತ್ತಿದ್ದಂತೆಯೇ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ಮಾತು ಕೇಳಿ ಬಂದಿತ್ತು. ಹೊಸ ಕಟ್ಟಡ ಮಾತ್ರವಲ್ಲ, ಮಹಾನಗರಗಳಲ್ಲಿರುವಂತೆ ಬಸ್ ನಿಲ್ದಾಣದಲ್ಲಿ ಸೌಕರ್ಯವನ್ನು ಒದಗಿಸುವ ಬಗ್ಗೆಯೂ ಚರ್ಚೆ ಚಾಲ್ತಿಗೆ ಬಂದಿತು.
ಅಂದಿನ ಸಿದ್ದರಾಮಯ್ಯ ಸರಕಾರ ಭಟ್ಕಳ ಬಸ್ ನಿಲ್ದಾಣ ನಿರ್ಮಾಣಕ್ಕೆಂದೇ ರು.5ಕೋ.ಗೂ ಅಧಿಕ ಅನುದಾನಕ್ಕೆ ಮಂಜೂರಾತಿ ನೀಡಿದ್ದೂ ಆಯಿತು. ಕೋಟಿ ಹಣ ಖರ್ಚಾಗಿ ಬಸ್ ನಿಲ್ದಾಣವೇನೋ ತಲೆ ಎತ್ತಿ ನಿಂತಿತು. ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಉದ್ಘಾಟನೆಗೂ ಮೊದಲೇ ಹೊಸ ಬಸ್ ನಿಲ್ದಾಣದಲ್ಲಿ ಬಸ್ಸುಗಳು ಓಡಾಡಲಾರಂಭಿಸಿ ಈಗಾಗಲೇ ತಿಂಗಳು ಕಳೆದು ಹೋಗಿದೆ. ಆದರೆ ನಿಲ್ದಾಣದ ಒಳಗೆ ಕಾಲಿಟ್ಟ ಪ್ರಯಾಣಿಕರು ಹೈಟೆಕ್ ಎಂದರೆ ಇದೇನಾ ಎಂದು ಪ್ರಶ್ನೆಯನ್ನು ಕೇಳಲಾರಂಭಿಸಿದ್ದಾರೆ.
ಬಸ್ ನಿಲ್ದಾಣಕ್ಕೆ ಕಾಲಿಡುವ ಮುನ್ನವೇ ನಿಲ್ದಾಣದ ಹೊರಗೆ ಮಾವಿನ ಮರದ ಸಮೀಪ ಅಳವಡಿಸಲಾಗಿರುವ ಧ್ವನಿ ವರ್ಧಕಗಳು ನಮ್ಮನ್ನು ಬರ ಮಾಡಿಕೊಳ್ಳುತ್ತವೆ. ದೌರ್ಭಾಗ್ಯ ಎಂದರೆ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಬಸ್ ಬಗ್ಗೆ ಮಾಹಿತಿ ನೀಡಬೇಕಾಗಿದ್ದ ಧ್ವನಿ ವರ್ಧಕಗಳು ಪಕ್ಕದ ಕಟ್ಟಡ, ರಸ್ತೆಯಲ್ಲಿ ಓಡಾಡುವ ಜನರಿಗೆ ಕಿರಿಕಿರಿಯನ್ನು ನೀಡಲಷ್ಟೇ ಸೀಮಿತವಾಗಿದೆ. ಬಸ್ ನಿಲ್ದಾಣಕ್ಕೂ ಧ್ವನಿ ವರ್ಧಕಕ್ಕೂ ಸಂಬಂಧವೇ ಇಲ್ಲ ಎಂಬಂತಾಗಿದೆ. ಕಳ್ಳತನದ ಎಚ್ಚರಿಕೆಯ ಮಾತುಗಳೂ ಬಸ್ ನಿಲ್ದಾಣದ ಹೊರಗೆ ಇರುವವರಿಗೆ ಮಾತ್ರ! ವಿಪರೀತ ಶಬ್ದ ಮಾಲಿನ್ಯಕ್ಕೆ ಜನರು ರೋಸಿ ಹೋಗಿದ್ದಾರೆ. ಬಸ್ ನಿಲ್ದಾಣದ ಒಳಗಿನ ಕಥೆಯನ್ನಂತೂ ಕೇಳುವುದೇ ಬೇಡ.
ಬಸ್ ನಿಲ್ದಾಣದ ಒಳಗೆ ಅರ್ಧ ಜಾಗಕ್ಕಷ್ಟೇ ಕಾಂಕ್ರೀಟ್ ಅಳವಡಿಸಿರುವುದರಿಂದ ಉಳಿದರ್ಧ ಭಾಗಕ್ಕೆ ಮಣ್ಣೇ ಗತಿಯಾಗಿದ್ದು, ಒಳಗೆ ಬರುವ ಬಸ್ಸುಗಳೆಲ್ಲ ಧೂಳನ್ನು ಎಬ್ಬಿಸಿದ ನಂತರವೇ ಸುಮ್ಮನಾಗುತ್ತವೆ. ಅದು ಯಾವ ಪರಿ ಎಂದರೆ ಬಸ್ ನಿಲ್ದಾಣದ ಆವರಣದ ಒಳಗಿನ ಮಾವಿನ ಮರದ ಎಲೆಗಳ ಹಸಿರು ಬಣ್ಣ ಧೂಳಿನಿಂದಾಗಿ ಸಂಪೂರ್ಣ ಬದಲಾಗಿದೆ. ಬಸ್ ನಿಲ್ದಾಣದ ಇಳಗಿನ ಕಲ್ಲು ಹಾಸಿಗೆಯೂ ಸದಾ ಮಣ್ಣು, ಧೂಳಿನಿಂದಲೇ ಕೂಡಿರುವುದನ್ನು ಕಾಣಬಹುದಾಗಿದೆ. ಬಸ್ ಹತ್ತಿ ದೂರದೂರಿಗೆ ಪ್ರಯಾಣಿಸುವ ಜನರು ಮೈ ಕೈ ಕೊಳೆಯನ್ನಾಗಿಸಿಕೊಂಡೇ ಬಸ್ ಹತ್ತಬೇಕಾದ ಅನಿವಾರ್ಯತೆ ಇದೆ.
ಶಾಲೆ, ಕಾಲೇಜು ಮಕ್ಕಳ ಪಾಡನ್ನಂತೂ ಕೇಳುವುದೇ ಬೇಡ. ಕುಂದಾಪುರದ ಕಡೆಗೆ ಪ್ರಯಾಣ ಬೆಳೆಸುವ ಸರಕಾರಿ ಬಸ್ಸುಗಳು ಇನ್ನೂ ಬಸ್ ನಿಲ್ದಾಣದ ಒಳಗೆ ಕಾಲಿಡಲೋ, ಬೇಡವೋ ಎನ್ನುತ್ತಾ ಹಳೆಯ ಬಸ್ ನಿಲ್ದಾಣದಲ್ಲಿಯೇ ನಿಂತುಕೊಳ್ಳುತ್ತಿವೆ.
ಹೈಟೆಕ್ ಬಸ್ ನಿಲ್ದಾಣದ ಕಟ್ಟಡ ಉದ್ಘಾಟನೆಗೂ ಮೊದಲೇ ಗುಣಮಟ್ಟದ ಕೊರತೆಯನ್ನು ಎದುರಿಸುತ್ತಿದೆ. ಎದುರಿಗೆ ಗ್ಲಾಸನ್ನು ಅಳವಡಿಸಿ ಜನರ ಕಣ್ಣಿಗೆ ಮಣ್ಣೆರಚಲಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಒಟ್ಟೂ ಕಟ್ಟಡ ನಿಮಾಣದ ಬಗ್ಗೆಯೇ ತನಿಖೆ ನಡೆಯ ಬೇಕಾದ ಅಗತ್ಯ ಇದೆ. ಬಸ್ ನಿಲ್ದಾಣದ ಕಂಪೌಂಡ್‍ಗಳು ಇನ್ನೂ ಹೊಸತಾಗಿಲ್ಲ. ಪ್ರವೇಶ ದ್ವಾರ ನಿರ್ಮಾಣದ ಬಗ್ಗೆ ಯಾರೂ ಉಸಿರನ್ನೇ ತೆಗೆಯುತ್ತಿಲ್ಲ. ಒಟ್ಟಿನಲ್ಲಿ ಹೆಸರಿಗೆ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಹೈಟೆಕ್ ಕಲ್ಪನೆ ಸಂಪೂರ್ಣವಾಗಿ ಕಳಚಿ ಬಿದ್ದಿದೆ. ಯಾವ ಪುರುಷಾರ್ಥಕ್ಕೆ ಇಂತಹ ಬಸ್ ನಿಲ್ದಾಣವನ್ನು ಉದ್ಘಾಟಿಸಬೇಕು ಎನ್ನುವ ಕಾರಣಕ್ಕೋ ಏನೂ, ಸಚಿವರ ವೇಳಾಪಟ್ಟಿಯಲ್ಲಿ ಬಿಡುವೇ ಸಿಗುತ್ತಿಲ್ಲ!