ಭಟ್ಕಳ ಮಿನಿ ವಿಧಾನಸೌಧದಲ್ಲಿ ಕಲ್ಲೇರಿ ನಿಂತರಷ್ಟೇ ಕೆಲಸ ! ಮರಿಪುಢಾರಿಗಳ ಕಾಟ ತಾಳಲಾರದೆ ಒಳಗಡೆಗೂ ಬಿದ್ದಿದೆ ಬೀಗ; ಸದ್ದಿಲ್ಲದೇ ಸೊರಗುತ್ತಿದೆ ಕನಸಿನ ಸೌಧ

ಭಟ್ಕಳ: ಇದು ಜನರ ಅಲೆದಾಟವನ್ನು ತಪ್ಪಿಸಿ ಒಂದೇ ಸೂರಿನಡಿ ಜನರಿಗೆ ಸೇವೆ ನೀಡಲು ರು.10ಕೋ.ಗೂ ಅಧಿಕ ಹಣವನ್ನು ವ್ಯಯಿಸಿ ಕಟ್ಟಲಾದ ಭಟ್ಕಳ ಮಿನಿ ವಿಧಾನಸೌಧದ ಸದ್ಯದ ಸ್ಥಿತಿಗತಿ! ಜನರ ಕನಸಿನ ಸೌಧ ಉದ್ಘಾಟನೆಗೊಂಡು ಒಂದು ವರ್ಷವೂ ಕಳೆದಿಲ್ಲ. ಆಗಲೇ ಇಡೀ ಕಟ್ಟಡದಲ್ಲಿ ಶಿಸ್ತು, ಸ್ವಚ್ಛತೆ ಎಲ್ಲವೂ ಕಣ್ಮರೆಯಾಗಿದೆ. ಸಾರ್ವಜನಿಕರಿಗೆ ನೀಡಲಾಗುವ ಸೇವೆಯ ರೀತಿನೀತಿಗಳು ಹಳಿ ತಪ್ಪಿದ್ದು, ಜನರು ಸೇವೆಯನ್ನು ಪಡೆಯಲು ಕಲ್ಲು ಏರಿ ನಿಲ್ಲಬೇಕಾಗಿದೆ.
ಭಟ್ಕಳ ಮಿನಿವಿಧಾನ ಸೌಧದಲ್ಲಿ ಕಂದಾಯ ಇಲಾಖೆ, ಸಹಾಯಕ ಆಯುಕ್ತರ ಕಚೇರಿ,
ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಮಿನಿ ವಿಧಾನಸೌಧ ಕಟ್ಟಲಾಗಿದೆ. ಆದರೆ ಇಲ್ಲಿ ಸರಿಯಾದ ವ್ಯವಸ್ಥೆ ಇನ್ನೂ ಆಗಿಲ್ಲ. ಹಳ್ಳಿಗಳಿಂದ ಬರುವ ಮಹಿಳೆಯರು, ವೃದ್ಧರು, ಸ್ವಲ್ಪ ಕುಳ್ಳನೆಯ ಜನರು ಕಲ್ಲನ್ನು ಏರಿ ಕೆಲಸ ಮಾಡಿಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ - ಮಂಗಳಾ ಗೊಂಡ, ಜಾಲಿ ಪಟ್ಟಣ ಪಂಚಾಯತ ಸದಸ್ಯರು |
ನೋಂದಣಿ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಇತ್ಯಾದಿಗಳು ಸೇವೆ ನೀಡಲು ಆರಂಭಿಸಿವೆ. ವಿಧಾನಸೌಧದ ನೆಲ ಮಹಡಿಯಲ್ಲಿ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಆಹಾರ, ನೆಮ್ಮದಿ ಕೇಂದ್ರ, ಪಹಣಿ ಪತ್ರಿಕೆ ವಿತರಣೆ ಕೆಲಸ ಕಾರ್ಯಗಳನ್ನು ನಡೆಯುತ್ತಿವೆ. ವಿಧಾನಸೌಧ ಉದ್ಘಾಟನೆಗೊಂಡ ಆರಂಭದಲ್ಲಿ ಜನರು ವಿಧಾನಸೌಧದ ಒಳಗೆ ಕಾಲಿಟ್ಟು ಸೇವೆಯನ್ನು ಪಡೆಯುತ್ತಿದ್ದರು. ಆದರೆ ಬರ ಬರುತ್ತ ಉಳ್ಳವರು, ಮರಿಪುಢಾರಿಗಳು ಸೀದಾ ನೆಮ್ಮದಿಕೇಂದ್ರ, ಆಹಾರ ವಿಭಾಗ, ಪಹಣಿ ಪತ್ರಿಕೆ ವಿತರಿಸುವ ಕಚೇರಿಯ ಸಿಬ್ಬಂದಿಗಳು, ಅಧಿಕಾರಿಗಳ ಬಳಿಗೆ ಧಾವಿಸಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಆರಂಭಿಸಿದರೆ, ಹಳ್ಳಿಗಳಿಂದ ಬರುವ ಬಡವರು ಹೊರಗೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಯಿತು. ಈ ಬಗ್ಗೆ ಜನರು ಅಧಿಕಾರಿಗಳ ಮುಂದೆ ಅಸಮಾಧಾನವನ್ನು ಹೊರಗೆ ಹಾಕಲಾರಂಭಿಸಿದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಯಾರಿಗೂ ಕಚೇರಿಯ ಒಳಗೆ ಕಾಲಿಡಲು ಅವಕಾಶ ನೀಡದೇ ಮಿನಿ ವಿಧಾನಸೌಧದ ಹೊರಗೆ ಆಯಾ ಕಚೇರಿಯ ಕಿಟಕಿಯಲ್ಲಿಯೇ ಅರ್ಜಿ ನೀಡಲು ಅವಕಾಶ ಮಾಡಿಕೊಟ್ಟರು. ಆದರೆ ಕಿಟಕಿಯೊಳಗೆ ಕೈಯೊಡ್ಡುವುದಕ್ಕೆ ಫಲಾನುಭವಿಗಳು ಹರಸಾಹಸ ಮಾಡಬೇಕಾಗಿದೆ. ನಂತರ ಒಂದೆರಡು ಕಡೆ ಕೆಂಪು ಕಲ್ಲನ್ನು ಹಾಸಿ ಅದರ ಮೇಲೆ ನಿಂತು ಸೇವೆಯನ್ನು ಪಡೆಯಲು ಸೂಚಿಸಲಾಗಿದ್ದು, ಜನರು ಕಲ್ಲು ಹತ್ತಿ ಇಳಿಯುವ ದೃಶ್ಯ ಸಾಮಾನ್ಯವಾಗಿದೆ. ಸ್ವಲ್ಪ ಕುಳ್ಳನೆಯ ಜನರಂತೂ ಕಲ್ಲನ್ನು ಏರಿಯೂ ತುದಿ ಬೆರಳ ಮೇಲೆ ನಿಂತು ಸರ್ಕಸ್ ಮಾಡುವುದನ್ನು ಕಾಣಬಹುದಾಗಿದೆ. ವೃದ್ಧರು, ಮಹಿಳೆಯರ ಪಾಡಂತೂ ಕೇಳುವುದೇ ಬೇಡ. ಹಾಗೆ ಹೀಗೆ ಸರ್ಕಸ್ ಮಾಡಿ ಕಲ್ಲು, ಕಿಟಕಿಯ ಮೆಟ್ಟಿಲನ್ನು ಏರುವ ಜನರು ಇಳಿಯುವಾಗ ಹೊಂಡದಲ್ಲಿ ಹಾರುವಂತೆ ಕೆಳಕ್ಕೆ ಹಾರಿ ಮೇಲಿನಿಂದ ಕೆಳಕ್ಕೆ ಇಳಿಯುವ ದೃಶ್ಯ ಆಧುನಿಕತೆಯ ಪ್ರತಿಬಿಂಬದಂತಿರುವ ಮಿನಿ ವಿಧಾನಸೌಧದ ಮರ್ಯಾದೆಯನ್ನೇ ಕಳೆಯುತ್ತಿರುವುದಂತೂ ಸುಳ್ಳಲ್ಲ ! ಮತ್ತೆ ಒಂದೆರಡು ಕಡೆ ಕಿಟಕಿಯ ಹೊರಗಡೆ ಮಳೆಯಲ್ಲಿಯೇ ನಿಲ್ಲಬೇಕಾದ ಸ್ಥಿತಿ. ಇನ್ನೊಂದೆಡೆ ಆಹಾರ ನಿರೀಕ್ಷಕರನ್ನು ಕಾಣಬೇಕು ಎಂದರೆ ಕಿಟಕಿಯ ಹೊರಗೆ ಹಾರಿ ಹಾರಿ ಬೀಳಬೇಕು!
ಒಳಗಿನ ಕೋಣೆಗೆ ಬೀಗ:
ಕಿಟಕಿಯಲ್ಲಿ ನೀಡುತ್ತಿರುವ ಸೇವೆಯ ಬಗ್ಗೆ ಗಮನಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಶಿರಸ್ತೇದಾರರಿಗೆ ಸೂಚಿಸಲಾಗಿದೆ. - ಎಸ್.ರವಿಚಂದ್ರ, ತಹಸೀಲ್ದಾರರು ಭಟ್ಕಳ |
ಈ ನಡುವೆ ಮಿನಿವಿಧಾನ ಸೌಧದ ಹೊರಗೆ ಸೇವೆಗೆ ಅವಕಾಶವನ್ನು ಕಲ್ಪಿಸಿದ ನಂತರವೂ ಉಳ್ಳವರು, ರಾಜಕೀಯ ಮರಿಪುಢಾರಿಗಳು ಕಿಟಕಿಯ ಸರ್ಕಸ್‍ಗೆ ಕಾಯದೇ ನೇರವಾಗಿ ಕಚೇರಿಯ ಒಳಗೆ ತೆರಳಿ ಕೆಲಸ ಮಾಡಿಸಿಕೊಳ್ಳಲು ಸುರುವಿಟ್ಟುಕೊಂಡರು. ನಂತರ ಸಾರ್ವಜನಿಕರ ಕಡೆಯಿಂದ ಮತ್ತದೇ ತಕರಾರು ಎದ್ದಿತು. ಇದೀಗ ಅಧಿಕಾರಿಗಳು ಕಚೇರಿಯ ಬಾಗಿಲಿಗೆ ಬೀಗ ಜಡಿದು ಕಿಟಕಿಯ ಕೆಲಸವನ್ನು ಮುಂದುವರೆಸಿದ್ದಾರೆ. ಕಲ್ಲು, ಪಾಗಾರ ಹತ್ತಿಳಿಯುವ ಅಭ್ಯಾಸ ಇದ್ದವರಿಗೆ ಇದೇನೂ ಕಷ್ಟವಲ್ಲ. ಆದರೆ ಉಳಿದವರಿಗೆ ಇದು ಯಾತನೆಯೇ!
ಒಳಗೆ ಎಲೆ ಅಡಿಕೆ ಜಗಿದು ಉಗಿದರು:
ಒಂದು ಕಡೆ ಮಿನಿ ವಿಧಾನಸೌಧದಲ್ಲಿ ಶಿಸ್ತನ್ನು ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರೆ, ಕೆಲವು ಕೀಟಲೆಯ ಜನರಿಂದ ಮಿನಿ ವಿಧಾನಸೌಧದ ಸ್ವಚ್ಛತೆಗೆ ಧಕ್ಕೆ ಬಂದಿದೆ. ವಿಧಾನಸೌಧದ ಒಳಗೆ ಎಲೆ ಅಡಿಕೆ ಜಗಿದು ಉಗಿದಿರುವುದು ಕಂಡು ಬಂದಿದೆ. ಮತ್ತೆ ಲಿಫ್ಟ್‍ನಲ್ಲಿಯೂ ಅದೇ ವಿಕೃತಿಯನ್ನು ಕೆಲವರು ಮೆರೆದಿದ್ದಾರೆ. ಸರಕಾರಿ ಕಟ್ಟಡ ಆಸ್ತಿ ರಕ್ಷಣೆಯ ಹೊಣೆ ಅಧಿಕಾರಿಗಳದ್ದು ಮಾತ್ರವಲ್ಲ, ಜನರಿಗೂ ಇರಬೇಕಲ್ಲವೇ?