ಮಕ್ಕಾ: ಹಜ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ಭಾರೀ ದಂಡ, ಮರುಉಲ್ಲಂಘನೆಗೆ ಉಚ್ಛಾಟನೆ

Source: so english | By Arshad Koppa | Published on 30th August 2016, 8:13 AM | Gulf News |

ಮಕ್ಕಾ, ಸೌದಿ ಅರೇಬಿಯಾ, ಆ ೨೯: ಪಶ್ಚಿಮ ಪ್ರಾಂತ್ಯದ ಮಕ್ಕಾ ಸಂಸ್ಥಾನದ ಸರ್ಕಾರದ ವತಿಯಿಂದ ಹಜ್ ನಿಯಮಾವಳಿಯಲ್ಲಿ ಹಲವು ಮಹತ್ತರ ಬದಲಾವಣೆಯನ್ನು ಘೋಷಿಸಲಾಗಿದ್ದು ಮಕ್ಕಾ ನಗರಕ್ಕೆ ಆಗಮಿಸುವ ಪ್ರತಿ ಯಾತ್ರಿಕರೂ ಇದನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನಗರದಲ್ಲಿ ವಿವಿಧ ಸೇವೆ ಸಲ್ಲಿಸುವ ಸಂಸ್ಥೆಗಳಿಗೂ ಹೊಸ ಕಾನೂನುಗಳನ್ನು ಪ್ರಕಟಿಸಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವರ್ಷದ ಹಜ್ ಯಾವುದೇ ತೊಂದರೆಗಳಿಲ್ಲದೇ ಸಾಂಗವಾಗಿ ನೆರವೇರಲು ಹಿಂದಿನ ತಪ್ಪುಗಳನ್ನು ಪರಿಗಣಿಸಿ ಹೊಸ ಕಾನೂನ್ನು ಮತ್ತು ನಿರ್ದೇಶನಗಳನ್ನು ಪ್ರಕಟಿಸಲಾಗಿದೆ. 

ಉದಾಹರಣೆಗೆ ಲೈಸನ್ಸ್ ಇಲ್ಲದೇ ಯಾತ್ರಿಕರಿಗೆ ಪ್ರಯಾಣದ ಸೇವೆ ಸಲ್ಲಿಸುವ ವಾಹನಗಳ ಮಾಲಿಕರಿಗೆ ಒಂದು ಲಕ್ಷ ರಿಯಾಲ್ ದಂಡ, ಎರಡು ವರ್ಷ ಜಾಮೀನು ರಹಿತ ಜೈಲುವಾಸ ಮತ್ತು ಕಾರಿನ ಪರವಾನಿಗೆ ಮುಟ್ಟುಗೋಲು ಹಾಕಲಾಗುವುದು. 

ಅನಧಿಕೃತವಾಗಿ, ಯಾವುದೇ ದಾಖಲೆಪತ್ರಗಳಿಲ್ಲದೇ ಮಕ್ಕಾ ನಗರಕ್ಕೆ ಆಗಮಿಸುವವರಿಗೆ ಕನಿಷ್ಟ ಹತ್ತು ವರ್ಷ ಸೌದಿ ಅರೇಬಿಯಾಕ್ಕೆ ಪ್ರವೇಶಾವಕಾಶ ನಿಷೇಧಿಸುವ ದಂಡ ವಿಧಿಸಲಾಗುವುದು. 

ಅವಧಿ ಮೀರಿ ತಂಗುವ ವಿದೇಶೀಯರಿಗೆ ಮೊದಲ ಬಾರಿ ಹದಿನೈದು ಸಾವಿರ ರಿಯಾಲ್ ಮತ್ತು ದೇಶದಿಂದ ಉಚ್ಛಾಟನೆ, ಎರಡನೆಯ ಬಾರಿ ಇಪ್ಪತ್ತೈದು ಸಾವಿರ ರಿಯಾಲ್ ದಂಡ, ಎರಡು ತಿಂಗಳು ಜೈಲುವಾಸ ಬಳಿಕ ಉಚ್ಛಾಟನೆ, ಮೂರನೆಯ ಬಾರಿ ಐವತ್ತು ಸಾವಿರ ದಂಡ, ಆರು ತಿಂಗಳ ಜೈಲು ಬಳಿಕ ಉಚ್ಛಾಟನೆಯ ಶಿಕ್ಷೆ ಪ್ರಕಟಿಸಲಾಗಿದೆ. 

ಯಾತ್ರಿಕರಿಗೆ ಕೆಲಸ ನೀಡುವುದು, ಅನಧಿಕೃತ ಆಶ್ರಯ ನೀಡುವುದು ಅಥವಾ ಸರ್ಕಾರದ ನಿರ್ದೇಶನದ ವಿರುದ್ದ ಯಾವುದೇ ಕ್ರಮ ಕೈಗೊಳ್ಳುವುದು ಮೊದಲಾದವುಗಳಿಗೆ ಹದಿನೈದು ಸಾವಿರ ರಿಯಾಲ್ ದಂಡ ಮತ್ತು ವಿದೇಶೀಯರನ್ನು ತಕ್ಷಣ ದೇಶದಿಂದ ಉಚ್ಛಾಟಿಸಲಾಗುವುದು. 

ಕಳೆದ ವರ್ಷ ಅನಧಿಕೃತವಾಗಿ ಯಾತ್ರಿಕರನ್ನು ಸಾಗಿಸುತ್ತಿದ್ದ ಎಪ್ಪತ್ತಾರು ವಾಹನಗಳನ್ನು ದಸ್ತಗಿರಿ ಮಾಡಿ 3.7 ಮಿಲಿಯನ್ ರಿಯಾಲ್ ದಂಡ ವಿಧಿಸಲಾಗಿತ್ತು. 
 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.