ದುಬೈ: ಸಚಿವೆ ಉಮಾಶ್ರೀಯವರಿಗೆ ’ಶ್ರೀರಂಗ ಪ್ರಶಸ್ತಿ’ ಪ್ರದಾನ

Source: Arshad, Dubai | By Arshad Koppa | Published on 26th September 2016, 1:13 AM | Gulf News |

ದುಬೈ, ಸೆ ೨೪: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಉಮಾಶ್ರೀಯವರಿಗೆ ಶ್ರೀರಂಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  ಯು.ಎ.ಇ.ಯಲ್ಲಿರುವ ಧ್ವನಿ ಪ್ರತಿಷ್ಠಾನ ಪ್ರತಿವರ್ಷ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಶ್ರೀರಂಗ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು ಈ ವರ್ಷದ ಪ್ರಶಸ್ತಿಯನ್ನು ಸಚಿವೆ ಉಮಾಶ್ರೀಯವರಿಗೆ ನೀಡಲಾಯಿತು.

ಸೆ. ೨೩ ರಂದು ಶಾರ್ಜಾದಲ್ಲಿ ನಡೆದ "ಶಾರ್ಜಾ ಎಕ್ಸ್ಪೋ ಸೆಂಟರ್ ಅರ್ಪಿಸುವ ಎರಡನೇ ಮದ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ" ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ಅರ್ಪಿಸಲಾಯಿತು. ಆದರೆ ಅಂತಿಮ ಹಂತದಲ್ಲಿ ಕಾವೇರಿ ವಿವಾದದ ಕುರಿತು ಬೆಂಗಳೂರಿನಲ್ಲಿ ಅಂದೇ ನಡೆದ ವಿಶೇಷ ಅಧಿವೇಶನದಲ್ಲಿ ಭಾಗವಹಿಸುವುದು ಸಚಿವೆಯಾದ ಅವರಿಗೆ ಅನಿವಾರ್ಯವಾಗಿದ್ದ ಕಾರಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಸಾಧ್ಯವಾಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಪ್ರೊ. ಡಾ. ಬರಗೂರು ರಾಮಚಂದ್ರಪ್ಪರವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳೂ, ಕರ್ನಾಟಕ ಜನಪದ ಮೇಳದ ಅಧ್ಯಕ್ಷರೂ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಶ್ರೀ ಗೊ.ರು. ಚನ್ನಬಸಪ್ಪನವರು ವಹಿಸಿದ್ದರು. ಇವರೊಂದಿಗೆ ಹಿರಿಯ ರಂಗಕರ್ಮಿ ಶ್ರೀ ಶ್ರೀನಿವಾಸ ಕಪ್ಪಣ್ಣ, ಯು.ಎ.ಇ. ಎಕ್ಸ್ ಚೇಂಜ್ ನ ಮುಖ್ಯ ನಿರ್ವಾಹಕ ನಿರ್ದೇಶಕರಾದರಾದ ಶ್ರೀ ಸುಧೀರ್ ಕುಮಾರ್ ಶೆಟ್ಟಿ, ಪ್ರಜಾವಾಣಿ ಪತ್ರಿಕೆಯ ಸಂಪಾದಕ ಮತ್ತು ’ನಾಲ್ಕನೆಯ ಆಯಾಮ’ ಅಂಕಣದ ಲೇಖಕರಾದ ಶ್ರೀ ಪದ್ಮರಾಜ ದಂಡಾವತಿ, ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ವಿಜಯವಾಣಿ ಪತ್ರಿಕೆಯ ಹಿರಿಯ ಪತ್ರಕರ್ತರಾದ ಶ್ರೀ ಶಿವಾನಂದ ತಗಡೂರು, ತುಳು ಕೂಟ ಕತರ್ ನ ಅಧ್ಯಕ್ಷ ಶ್ರೀ ರವಿ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಒಮಾನ್ ನ ಪ್ರಮುಖ ಉದ್ಯಮಿ ಶ್ರೀ ಶಶಿಧರ ಶೆಟ್ಟಿ ಮತ್ತು ಕುವೈಟ್ ನ ಉದ್ಯಮಿ ಶ್ರೀ ಎಲಿಯಾಸ್ ಸಾಂಕ್ಟಿಸ್ ರವರು ಉಪಸ್ಥಿತರಿದ್ದರು. 

ಎಲ್ಲಾ ಆಹ್ವಾನಿತ ಅತಿಥಿಗಳನ್ನು ಮತ್ತು ಗಣ್ಯರನ್ನು ಎಕ್ಸ್ಪೋ ಸೆಂಟರ್ ಸಭಾಂಗಣದಲ್ಲಿ ಸಾಂಪ್ರಾದಾಯಿಕ ಪೂರ್ಣಕುಂಭ ಮಾದರಿಯಲ್ಲಿ  ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಯು.ಎ.ಇ. ಮತ್ತು ಭಾರತದ ರಾಷ್ಘ್ರಗೀತೆಗಳನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಎಕ್ಸ್ಪೋ ಸೆಂಟರ್  ಶಾರ್ಜಾ ದ ನಿರ್ದೇಶಕರಾದ ಶ್ರೀ ಮುತಾಸ್ ಮೊಹಮ್ಮದ್ ಉಸ್ಮಾನ್ ಹಾಗೂ ಅವರ ಸಹವರ್ತಿಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ಶ್ರೀ ಶಿವಾನಂದ ತಗಡೂರು ರವರು ಉದ್ಘಾಟಿಸಿದರು. ಯು.ಎ.ಇ.ಯಲ್ಲಿರುವ ಕೆಲವು ಕನ್ನಡಿಗರ ಕನ್ನಡ ಪುಸ್ತಕಗಳ ಸಂಗ್ರಹವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. 

ರಸಸಂಜೆ ಕಾರ್ಯಕ್ರಮದಲ್ಲಿ ಶ್ರೀ ರವಿರಾಜ ತಂತ್ರಿ ಉದಯ ನಂಜಪ್ಪ, ದಿನೇಶ್, ಬಾಲಕ ಅಮೋಘ್,  ಸಾಯಿ ಮಲ್ಲಿಕಾ, ಅಶೋಕ್ ಬೈಲೂರು-ಸುಕನ್ಯಾ, ಮತ್ತಿತರರು ಕನ್ನಡದ ವಿವಿಧ ಪ್ರಾಕಾರದ ಹಾಡುಗಳನ್ನು ಹಾಡಿ ನೆರೆದವರನ್ನು ರಂಜಿಸಿದರು. ಶ್ರೀಮತಿ ಭಾಗ್ಯ ಸಾದನ್ ದಾಸ್ ಹಾಗೂ ಶ್ರೀಮತಿ ವಿದ್ಯಾ ಶಿವಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಆರತಿ ಅಡಿಗ ರವರು ಎಲ್ಲಾ ಗೋಷ್ಠಿಗಳನ್ನು ನಿರೂಪಿಸಿದರು. ಅಬುಧಾಬಿ ಕರ್ನಾಟಕದ ಸದಸ್ಯರ ತಂಡದವರಿಂದ ನಾಡಗೀತೆಯನ್ನು ಹಾಡಲಾಯಿತು. 

ಆಹ್ವಾನಿತ ಅತಿಥಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಸಭೆಯಲ್ಲಿ ಒಟ್ಟು ನಾಲ್ಕು ವಿಧದ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಮೊದಲನೆಯದಾಗಿ ಸಾಹಿತ್ಯ ಮತ್ತು ಸಮಕಾಲೀನತೆ ವಿಷಯವಾಗಿ ಶ್ರೀ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಸಾಹಿತ್ಯಗೋಷ್ಠಿ ನಡೆಯಿತು. ಶ್ರೀ ಗೋಪಿನಾಥರಾವ್, ಶ್ರೀ ಸುಧಾಕರ ರಾವ್ ಪೇಜಾವರ, ಶ್ರೀ ಗಣೇಶ್ ರೈ ಯವರು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿ ಇಂದು ಸಾಹಿತ್ಯಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ, ಓದುವ ಪರಿ ಕಡಿಮೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು. ಕೊನೆಯಲ್ಲಿ ಮಾತನಾಡಿದ ಅಧ್ಯಕ್ಷ ರಾಮಚಂದ್ರಪ್ಪನವರು ಮಧ್ಯಪ್ರಾಚ್ಯದಲ್ಲಿರುವ ಕನ್ನಡಿಗರಿಗೆ ಕರ್ನಾಟಕವೇ ನಮ್ಮೂರು ಎಂದು ತಿಳಿಸಿದರು. ಭಾಷೆ ಬೆಳೆಯಲು ಮಡಿವಂತಿಕೆಯೇ ಅಡ್ಡಿಯಾಗಿದ್ದು ಮಡಿವಂತಿಕೆಯನ್ನು ಮೀರಿ ಬೆಳೆದ ಭಾಷೆ ಸರ್ವವ್ಯಾಪಿಯಾಗುತ್ತದೆ, ಭಾಷೆಗೆ ಜಾತಿ ಇಲ್ಲ, ಕವಿಯಾಗುವವರು ಕಾಲಾತೀತವಾಗಿ ಯೋಚಿಸಬೇಕು ಎಂದು ಹಲವು ಉದಾಹರಣೆಗಳ ಮೂಲಕ ತಿಳಿಸಿದರು. ಇಂದು ಕಾವೇರಿಗೆ ಹೋರಾಡುತ್ತಿರುವ ನಾವು ಕಾವೇರಿಗೆ ನೀರುಣಿಸುವ ಜಲದ ಮೂಲವನ್ನೇ ಮರೆತಿದ್ದಾರೆ. ತಾಯಿಯಾದವಳಿಗೆ ಎಲ್ಲಾ ಮಕ್ಕಳೂ ಸಮಾನರು, ಇಂದು ತಾಯ್ತನದ ಸಮಾಜ ನಮಗೆ ಬೇಕಾಗಿದೆ ಎಂದು ಹೇಳಿದ ಅವರು ’ನನ್ನ ತಾಯಿ ಒಂದೂ ಕವಿತೆ ಬರೆಯಲಿಲ್ಲ್ಲ, ಆದರೆ ನೂರಾರು ಕವಿತೆಗಳನ್ನು ಬದುಕಿದಳು’ ಎಂಬ ಖಲೀಲ್ ಜಿಬ್ರಾನ್ ರವರ ಕವಿತೆಯ ಸಾಲುಗಳಿಂದ ನೆರೆದವರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದರು. 

ಎರಡನೆಯದಾಗಿ ನಡೆದ ಕಾವ್ಯಧಾರೆ ಹೆಸರಿನ ಕವಿಗೋಷ್ಠಿಯ ಅಧ್ಯಕ್ಶತೆಯನ್ನು ಹಿರಿಯ ಚುಟುಕು ಕವಿ ಶ್ರೀ ಜರಗನಹಳ್ಳಿ ಶಿವಶಂಕರ್ ರವರು ವಹಿಸಿದ್ದರು. ಯು.ಎ.ಇ.ಯಲ್ಲಿರುವ ಕವಿಗಳಾದ ಶ್ರೀ ಇರ್ಶಾದ್ ಮೂಡಬಿದ್ರಿ, ಶ್ರೀಮತಿ ಆರತಿ ಘಟಿಕಾರ್, ಶ್ರೀ ರಾಬರ್ಟ್ ಉದ್ಯಾವರ, ಶ್ರೀ ಅವನೀಶ್ ಭಟ್, ಶ್ರೀ ಪ್ರಕಾಶ್ ಪಯ್ಯಾರ್ ಹಾಗೂ ಹೊಳೆನರಸೀಪುರ ಮಂಜುನಾಥ್ ರವರು ತಮ್ಮ ತಮ್ಮ ಕವನಗಳನ್ನು ಓದಿ ನೆರೆದವರನ್ನು ರಂಜಿಸಿದರು. ಶ್ರೀ ಅವನೀಶ್ ಭಟ್ ರವರ ಕವಿತೆಯಲ್ಲಿ ಕಾವೇರಿಯ ಪ್ರಸ್ತಾಪವೂ ಆಗಿತ್ತು.
"ಅಂದು ಉಕ್ಕಿ ಹರಿದಳು ಕಾವೇರಿ
ಇಂದು ಹೊತ್ತಿ ಉರಿಯುತ್ತಿದ್ದಾಳೆ ಕಾ..ವೇರಿ
ನೀರಿಗಾಗಿ ಹೋರಾಟ ನಮ್ಮ ಜನ್ಮಸಿದ್ಧ ಹಕ್ಕು
ಆದರೆ ಅದಕ್ಕೆ ಹಿಂಸೆ ಏಕೆ ಬೇಕು?
ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಬೇಕು
ಆದರೆ ಬಸ್ಸು ಲಾರಿ ಕಾರಿಗೆ ಬೆಂಕಿ ಏಕೆ ಇಕ್ಕಬೇಕು"
ಎಂಬ ಪದ್ಯದ ಮೂಲಕ ಕನ್ನಡಿಗರ ಹಿಂಸಾತ್ಮಕ ಕ್ರಮವನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷರಾದ ಶ್ರೀ ಗೊ.ರು. ಚನ್ನಬಸಪ್ಪನವರು ಹೆಂಡತಿ ಹಾಲು ಕಾಯಿಸುವಾಗ ಹಾವು ಅದರಲ್ಲಿ ಸತ್ತಿತ್ತು, ಹೆಂಡತಿಗೆ ಹೇಳುವಂತಿಲ್ಲ, ಹಾಲನ್ನು ಕುಡಿಯುವಂತಿಲ್ಲ ಎಂಬ ಕವನದ ಮೂಲಕ ಜೀವನದ ಸೂಕ್ಷ್ಮ ಸಂಗತಿಗಳನ್ನು ಮನದಟ್ಟು ಮಾಡಿಸಿದರು. 

ಬಳಿಕ ಮಾತನಾಡಿದ ಹಿರಿಯ ಚುಟುಕು ಕವಿ ಶ್ರೀ ಜರಗನಹಳ್ಳಿ ಶಿವಶಂಕರ್ ತಮ್ಮ ಹಲವು ಚುಟುಕುಗಳನ್ನೇ ಆಧರಿಸಿ ಜೀವನದ ಹಲವು ಮಜಲುಗಳನ್ನು ಪರಿಚಿಯಿಸಿದರು. 


ಬತ್ತಿಯಾದ ಹತ್ತಿ
ನೊಂದುಕೊಳ್ಳುತ್ತೆ
ತನ್ನ ಒಡಲೊಳಗೆ 
ಬೆಚ್ಚಗೆ ಅಡಗಿದ್ದ
ಬೀಜವೇ ಎಣ್ಣೆಯಾಗಿ
ತನ್ನನ್ನು ಸುಡುತ್ತಿದೆಯೆಂದು

ಈ ಕವನದ ಮೂಲಕ ಇಂದು ಬೆಳೆದ ಮಕ್ಕಳೇ ತಮ್ಮ ತಂದೆತಾಯಿಯರನ್ನು ಅನಾಥಾಶ್ರಮಕ್ಕೆ ಬಿಟ್ಟುಬರುವ ಪರಿಯನ್ನು ವಿವರಿಸಿದರು.

ಗೋಷ್ಠಿಗಳ ನಡುವೆ ಶ್ರೀಮತಿ ರೋಹಿಣಿ ಅನಂತ್ ರವರ ನೃತ್ಯ ನಿರ್ದೇಶನದ ತಂಡ ಹಲವು ಕನ್ನಡ ಹಾಡುಗಳಿಗೆ ಅತ್ಯಮೋಘವಾದ ನೃತ್ಯ ಪ್ರದರ್ಶನಗಳನ್ನು ನೀಡಿ ಸಭಿಕರನ್ನು ರಂಜಿಸಿತು. 

ಆ ಬಳಿಕ ಆದ್ಯ ಶ್ರೀರಂಗರ ಸ್ಮರಣಾರ್ಥ ನೀಡಲಾಗುವ "ಧ್ವನಿ ಶ್ರೀರಂಗ" ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಈ ವರ್ಷದ ಶ್ರೀರಂಗ ಪ್ರಶಸ್ತಿಯನ್ನು ಸಚಿವೆ ಉಮಾಶ್ರೀ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಸಾಧಿಸಿದ ಯು.ಎ.ಇ. ಎಕ್ಸ್ ಚೇಂಜ್ ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಸುಧೀರ್ ಕುಮಾರ್ ಶೆಟ್ಟಿಯವರಿಗೆ "ಧ್ವನಿ ಅಂತಾರಾಷ್ಟ್ರೀಯ ಪುರಸ್ಕಾರ" ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಉಮಾಶ್ರೀಯವರಿಗೆ ಈ ಪ್ರಶಸ್ತಿಯನ್ನು ಸಚಿವೆಯಾದ ಕಾರಣದಿಂದಲ್ಲ, ಆದರೆ ರಂಗಕ್ಷೇತ್ರದಲ್ಲಿ ಏನೂ ಇಲ್ಲದೇ ಬಂದು ಅವರು ಸಾಧಿಸಿದ ಸಾಧನೆಗಾಗಿಯೇ ಗುರುತಿಸಲಾಗಿದೆ ಎಂದು ಶ್ರೀ ಶ್ರೀನಿವಾಸ ಕಪ್ಪಣ್ಣನವರು ಉಮಾಶ್ರೀಯವರ ಪರಿಚಯದ ಭಾಷಣದಲ್ಲಿ ತಿಳಿಸಿದರು. ಈ ಪ್ರಶಸ್ತಿಯನ್ನು ಉಮಾಶ್ರೀಯವರ ಪರವಾಗಿ ಶ್ರೀ ಬರಗೂರು ರಾಮಚಂದ್ರಪ್ಪನವರು ಸ್ವೀಕರಿಸಿದರು.

 ಬಳಿಕ ಸಮ್ಮೇಳನಾಧ್ಯಕ್ಶ ಶ್ರೀ ಗೊ.ರು. ಚನ್ನಬಸಪ್ಪನವರನ್ನೂ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ  ಶ್ರೀ ಗೊ.ರು. ಚನ್ನಬಸಪ್ಪನವರು ವಿದೇಶದಲ್ಲಿ ಕನ್ನಡ ಉಳಿಸಿಕೊಂಡು ಬರುತ್ತಿರುವವರ ಬಗ್ಗೆ ತಮ್ಮ ಶ್ಲಾಘನೆಯನ್ನು ಪ್ರಕಟಿಸಿ ನಮ್ಮದಾದ ಸಾಹಿತ್ಯ, ನಮ್ಮದೇ ಸಂಗೀತ, ನಮ್ಮದೇ ಕ್ರೀಡೆ, ಇವೆಲ್ಲವೂ ನಮ್ಮ ಸಂಸ್ಕೃತಿ ಉಳಿಯಲು ಅಗತ್ಯ. ಇಲ್ಲದಿದ್ದರೆ ಮನ ಬರಡಾಗುತ್ತದೆ. ಈ ಸ್ಥಳವನ್ನು ಇತರ ವಿಷಯಗಳು ಆಕ್ರಮಿಸಿಕೊಂಡು ನಮ್ಮ ಸಂಸ್ಕೃತಿ ಭಾಷೆ ದೂರಾಗುತ್ತದೆ. ಆದ್ದರಿಂದ ಇಂತಹ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ತಿಳಿಸಿದರು. 

ಬಳಿಕ ಶ್ರೀ ವಿಜಯ್ ಮತ್ತು ತಂಡದವರಿಂದ ಅತ್ಯಾಕರ್ಷಕ ನಾಟ್ಯ ಪ್ರದರ್ಶನ ನಡೆಯಿತು. ಅಪ್ಪಟ ಶ್ವೇತವಸ್ತ್ರಧಾರಿಗಳಾಗಿದ್ದ ತಂಡ ಯಕ್ಷಗಾನದ ಪಾತ್ರಧಾರಿಯೊಬ್ಬರನ್ನೂ ಒಳಗೊಂಡಿದ್ದು ಎಲ್ಲರ ಮನಸೆಳೆಯಿತು. 

 

ಆಹ್ವಾನಿತ ಎಲ್ಲಾ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.

ಆಹ್ವಾನಿತರು ಶ್ರೀ ಪಕಾಶ್ ಪಯ್ಯಾರ್ ದಂಪತಿಗಳನ್ನೂ ಆತ್ಮೀಯವಾಗಿ ಸನ್ಮಾನಿಸಿ ತಮ್ಮ ಅಭಿಮಾನವನ್ನು ಹಂಚಿಕೊಂಡರು. 

 

ಬಳಿಕ ನಡೆದ ಮೂರನೆಯ ಗೋಷ್ಠಿಯಾದ ಮಾಧ್ಯಮ ಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀ ಪದ್ಮರಾಜ ದಂಡಾವತಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಶಿವಾನಂದ ತಗಡೂರು, ಶ್ರೀ ಮನೋಹರ ತೋನ್ಸೆ, ಶ್ರೀ ವಿನಯ ಕುಮಾರ್ ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿ ಪ್ರಬಲ ಮಾಧ್ಯಮದ ಸಬಲತೆ ಮತ್ತು ದೌರ್ಬಲ್ಯಗಳ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದರು. ಎಲ್ಲರೂ ಇಂದು ವಾಟ್ಸಪ್ ಮತ್ತು ಫೇಸ್ ಬುಕ್ ಗಳಂತಹ ಸಾಮಾಜಿಕ ತಾಣಗಳಲ್ಲಿ ಪ್ರತಿಯೊಬ್ಬರಿಗೂ ಲಭ್ಯವಾಗಿರುವ ಪತ್ರಕರ್ತನ ಪಾತ್ರದ ಬಗ್ಗೆ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅಧ್ಯಕ್ಷ ಶ್ರೀ ಪದ್ಮರಾಜ ದಂಡಾವತಿಯವರು ತಮ್ಮ ಮೂವತ್ತೈದು ವರ್ಷಗಳ ಅನುಭವದ ಸಾರದ ಕೆಲವು ಮಹತ್ವದ ಸಂಗತಿಗಳನ್ನು ತಿಳಿಸಿದರು. ಇದಕ್ಕೆ ಉದಾಹರಣೆಯಾಗಿ ಭಾರತದ ಅತ್ಯುನ್ನದ ಗೌರವವಾದ ಭಾರತರತ್ನ ಪ್ರಶಸ್ತಿಯನ್ನು ವಿಜ್ಞಾನಿ ಶ್ರೀ ಸಿ.ಎನ್.ಆರ್. ರಾವ್ ಹಾಗೂ ಕ್ರಿಕೆಟ್ ಆಟಗಾರ ಶ್ರೀ ಸಚಿನ್ ತೆಂಡೂಲ್ಕರ್ ರವರಿಗೆ ಪ್ರದಾನಿಸಿದ ಬಳಿಕ ಪತ್ರಿಕೆಗಳು ಈ ವಿಷಯವನ್ನು ಪ್ರಕಟಿಸಿದ ಪರಿಯನ್ನು ವಿವರಿಸಿದರು. ಇಂದು ಸಾರ್ವತ್ರಿಕವಾಗುತ್ತಿರುವ ಪೇಯ್ಡ್ ನ್ಯೂಸ್ ಅಥವಾ ಹಣ ಕೊಟ್ಟು ತಮಗೆ ಬೇಕಾದ ಸುದ್ದಿಗಳನ್ನು ಹಾಕಿಸುವ ಪ್ರಕ್ರಿಯೆಯ ಬಗ್ಗೆ ಅತೀವ ಕಳಕಳಿ ವ್ಯಕ್ತಪಡಿಸಿದ ಅವರು ಇದರಿಂದ ಪತ್ರಿಕೋದ್ಯಮದ ವಿಶ್ವಾಸಾರ್ಹತೆಯೇ ಪಣಕ್ಕಿಟ್ಟಂತಾಗಿದೆ ಎಂದು ತಿಳಿಸಿದರು. 

ಕೊನೆಯದಾಗಿ ನಡೆದ ’ಅನಿವಾಸಿಯ ಅಂತರಾತ್ಮ’ ಎಂಬ ವಿಚಾರಗೋಷ್ಠಿಯಲ್ಲಿ ಶ್ರೀ ಶಶಿಧರ್ ಶೆಟ್ಟಿ, ಉದ್ಯಮಿ, ಹಾಗೂ ತುಳುಕೂಟ ಕತರ್ ಅಧ್ಯಕ್ಷರಾದ ಶ್ರೀ ರವಿ ಶೆಟ್ಟಿ, ಹಾಗೂ  ಕುವೈಟ್ ನ ಉದ್ಯಮಿ ಎಲಿಯಾಸ್ ಸಾಂಕ್ಟಿಸ್ ರವರು ತಮ್ಮ ವಿಚಾರಗಳಲ್ಲಿ ಅನಿವಾಸಿ ಭಾರತೀಯರು, ಅದರಲ್ಲೂ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಇಲ್ಲಿ ಉದ್ಯೋಗವನ್ನು ಕಳೆದುಕೊಂಡು ಹಿಂದಿರುಗುವವರು ಎದುರಿಸುವ ಸವಾಲುಗಳನ್ನು ಈ ಗೋಷ್ಠಿಯಲ್ಲಿ ಸಮಾಲೋಚಿಸಲಾಯಿತು. ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಸರ್ವೋತ್ತಮ ಶೆಟ್ಟಿಯವರು ಅನಿವಾಸಿಗಳ ತಾಪತ್ರಯಗಳ ಬಗ್ಗೆ ಪ್ರಸ್ತಾಪಿಸಿ ಇದಕ್ಕೆ ಪರಿಹಾರವಾಗಿ ಕೆಲವು ಸಲಹೆಗಳನ್ನು ಸೂಚಿಸಿದರು:
೧) ನಮ್ಮದೇ ಆದ ವೆಬ್ ಸೈಟ್ ಒಂದನ್ನು ಸ್ಥಾಪಿಸಿ ಇಲ್ಲಿ ಇರುವ ಎಲ್ಲಾ ಕನ್ನಡಿಗರ ಬಗ್ಗೆ ವಿವರಗಳನ್ನು ಸಂಗ್ರಹಿಸಬೇಕು. ಇದರಿಂದ ನಮ್ಮ ಸಂಖ್ಯೆ ಎಷ್ಟಿದೆ, ಈ ಮೂಲಕ ಏನು ಮಾಡಬಹುದು ಎಂಬುದಕ್ಕೆ ಸಹಕಾರಿಯಾಗುತ್ತದೆ.
೨) ವಿದೇಶಗಳಲ್ಲಿ ಆಗುವ ಕನ್ನಡ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರದ ಮನ್ನಣೆ ಮತ್ತು ಪ್ರೋತ್ಸಾಹ ಹಾಗೂ ಧನಸಹಾಯ
೩) ಕನ್ನಡಪರ ಚಟುವಟಿಕೆಗಳನ್ನು ವಿದೇಶದಲ್ಲಿ ಮಾಡುತ್ತಿರುವ ಶ್ರೀ ಪಯ್ಯಾರ್ ರವರಿಗೆ ರಾಜ್ಯೋತ್ಸವ ಪ್ರಶಸ್ತಿಗಾಗಿ ಶಿಫಾರಸ್ಸು

ಅಂತಿಮವಾಗಿ ಶ್ರೀ ಮುರುಗೇಶ್ ಗಾಜರೆಯವರು ವಂದನಾರ್ಪಣೆ ಸಲ್ಲಿಸಿದರು. ಶ್ರೀ ಸಂಪತ್ ಶೆಟ್ಟಿಯವರು ಎಲ್ಲಾ ಪ್ರಾಯೋಜಕರ ಸಹಕಾರ ಮತ್ತು ಪ್ರೋತ್ಸಾಹಕ್ಕಾಗಿ ಸ್ಮರಣಿಕೆಗಳನ್ನು ನೀಡಿ ವಂದಿಸಿದರು. ಶ್ರೀಮತಿ ಲತಾ ಹೆಗಡೆಯವರು ಕುಂಭ ಮೇಳದ ಸ್ವಾಗತದ ಸಹಿತ ವೇದಿಕೆಯ ಹಿಂದಿನ ಹಲವು ಜವಾಬ್ದಾರಿಗಳನ್ನು ಹೊತ್ತಿದ್ದರು. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.