ಭಟ್ಕಳ: ಮಳೆಗಾಲ ಬಂದರೂ ಮುಚ್ಚಿಕೊಂಡಿರುವ ಚರಂಡಿಗಳು; ಹೇಳೋರಿಲ್ಲಾ ಕೇಳೋರಿಲ್ಲಾ... ನೆರೆಯ ಭೀತಿ ತಪ್ಪುತ್ತಿಲ್ಲ!

Source: S O News Service | By Vasanth Devadig | Published on 27th May 2018, 4:17 PM | Coastal News | Special Report |

ಭಟ್ಕಳ: ಮುಂಗಾರು ಪೂರ್ವ ಮಳೆ ಈಗಾಗಲೇ ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡಿದೆ. ಇನ್ನು ಒಂದು ವಾರದ ಒಳಗೆ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಬತ್ತಿದ ಬಾವಿಯಿಂದಾಗಿ ಕಂಗೆಟ್ಟು ಹೋಗಿದ್ದ ಜನರಿಗೆ ಮಳೆಗಾಲವಾದರೂ ನೆಮ್ಮದಿ ಕೊಡಬಹುದು ಎಂಬ ನಿರೀಕ್ಷೆ ಹುಸಿಯಾಗುವ ಲಕ್ಷಣ ಗೋಚರಿಸಿದೆ. ಹೊಳೆ ಹಳ್ಳ ತುಂಬಿ ಊರ ಮೇಲೆ ನುಗ್ಗಿ ಬರುವ ಆತಂಕ ಹಳ್ಳಿಗಳಲ್ಲಿ ಇದ್ದರೆ, ಪಟ್ಟಣದಲ್ಲಿ ಚರಂಡಿಯದ್ದೇ ಯಮ ಯಾತನೆ!

ಭಟ್ಕಳ ಶಹರವನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ ಎಂದರೆ ಚರಂಡಿಯದ್ದು. ನೂರಾರು ಕೋಟಿ ರುಪಾಯಿ ವ್ಯಯವಾಗಿದ್ದರೂ ಚರಂಡಿ ಸುಧಾರಿಸುತ್ತಿಲ್ಲ. ದೊಡ ಯೋಜನೆಯ ಬಗ್ಗೆ ಮಾತನಾಡಲಾಗುತ್ತಿದ್ದರೂ ಅನುಷ್ಠಾನ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ.

ಭಟ್ಕಳ ಪುರಸಭಾ ವ್ಯಾಪ್ತಿಯ ಹಲವಡೆ ಚರಂಡಿಗಳಲ್ಲಿ ಮಣ್ಣು ಕಲ್ಲು, ಇನ್ನಿತರೇ ತ್ಯಾಜ್ಯಗಳು ತುಂಬಿಕೊಂಡು ಚರಂಡಿಯ ವರ್ತಮಾನದ ಕಥೆಯನ್ನು ಬಿಡಿಸಿ ಹೇಳುತ್ತಿದೆ. ಬಿದ್ದ ಮಳೆಗೆ ಚರಂಡಿ ಇನ್ನಷ್ಟು ಹೈರಾಣಾಗಿದೆ. ಮಳೆಯ ನೀರು ಹರಿದು ಹೋಗಲು ಮತ್ತೊಮ್ಮೆ ರಸ್ತೆಯನ್ನೇ ಹುಡುಕಿಕೊಳ್ಳದೇ ಬೇರೆ ದಾರಿ ಇಲ್ಲ ಎಂಬಂತಾಗಿದೆ.

ಪ್ರತಿ ಮಳೆಗಾಲದಲ್ಲಿ ನೀರಿನಲ್ಲಿ ತೇಲಿ ಹೋದಂತೆ ಸಂಚರಿಸುವ ವಾಹನಗಳ, ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಉಡುಪುಗಳನ್ನು ನೀರಿನಿಂದ ಮೇಲಕ್ಕೆತ್ತಿ ನಡೆದಾಡುವ ವಿದ್ಯಾರ್ಥಿಗಳ ಪೋಟೋ ಕ್ಲಿಕ್ಕಿಸುವ ಕಾಯಕಕ್ಕೆ ಈ ಬಾರಿಯೂ ತಡೆ ಸಿಗುವ ಲಕ್ಷಣವಿಲ್ಲ. ಚರಂಡಿ ಅವ್ಯವಸ್ಥೆಯ ಕಥೆ ಹಳೆಯದಾದರೂ ಪರಿಹಾರಕ್ಕೆ ಯಾರೂ ಹಠ ತೊಟ್ಟಂತೆ ಕಾಣುತ್ತಿಲ್ಲ.

ಚುನಾವಣೆಯ ಗುಂಗಿನಿಂದ ಇನ್ನೂ ಹೊರ ಬಾರದ ಜನ ನಾಯಕರಿಗೆ ಚರಂಡಿ ಇನ್ನೂ ಕಣ್ಣಿಗೆ ಬಿದ್ದಿಲ್ಲ. ಮತ್ತೊಂದು ಮಳೆಗಾಲ, ಇನ್ನೊಂದು ನೆರೆ, ನೀರಿನಲ್ಲಿಯೇ ಪಯಣ ಇಲ್ಲಿನ ಜನರಿಗೆ ಮಾಮೂಲು ಎನ್ನುವಂತಾಗಿ ಹೋಗಿದೆ.

ಭಟ್ಕಳ ಗ್ರಾಮೀಣ ಭಾಗದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಕೆಲವು ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಮಳೆಗಾಲ ಎದುರಿಗೆ ಇದೆ ಎನ್ನುವುದೇ ಗೊತ್ತಿಲ್ಲ. ಅಲ್ಲಿಯೂ ಹಲವು ಕಡೆ ಚರಂಡಿ ಇನ್ನೂ ಶುಚಿಯಾಗಿಲ್ಲ. ಕಸ, ತ್ಯಾಜ್ಯಗಳ ರಾಶಿ ಚರಂಡಿಯಲ್ಲಿ ಇನ್ನೂ ಉಳಿದುಕೊಂಡಿದೆ. ಗಿಡಗಂಟಿಗಳು ಅಲ್ಲಿಯೇ ನೆಲೆ ಕಂಡುಕೊಂಡಿವೆ. ಅಲ್ಲಲ್ಲಿ ರಸ್ತೆಯ ಹೊಂಡಗಳು ಹಾಗೆಯೇ ಉಳಿದುಕೊಂಡಿವೆ. ಕೆಲಸ ಮಾಡುವವರು ಆಲಸಿಗಳಾಗಿದ್ದರೆ, ಕೆಲಸ ಮಾಡಿಸುವವರು ಇನ್ನೂ ಸ್ವರ್ಗ ಲೋಕದಲ್ಲಿಯೇ ಸಂಚರಿಸುತ್ತಿದ್ದಾರೆ! ಜನರಿಗೆ ಯಾರನ್ನು ಹೇಳಬೇಕು, ಯಾರಿಗೆ ಕೇಳಬೇಕು ಎನ್ನುವುದೇ ಗೊತ್ತಾಗದೇ ಬೀಳುವ ಮಳೆ ಹನಿಯತ್ತ ದೃಷ್ಟಿ ಹರಿಸಿ ಕುಳಿತು ಬಿಟ್ಟಿದ್ದಾರೆ!

ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಅತ್ಯಗತ್ಯ ಎಂದೆನ್ನಿಸುವ ಚರಂಡಿಗಳ ದುರಸ್ತಿ ಕಾರ್ಯ ಕೈಗೊಂಡಿದ್ದೇವೆ. ಕೆಲವು ಕಡೆ ಕೆಲಸ ಇನ್ನೂ ನಡೆಯುತ್ತಿದೆ. ಮತ್ತೆ ಕೆಲವು ಕಡೆ ಚರಂಡಿ ಕೆಲಸದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ನಷ್ಟೇ ಕಾಮಗಾರಿ ಆರಂಭವಾಗಬೇಕಿದೆ.
                     - ವೆಂಕಟೇಶ ನಾವುಡಾ, ಪುರಸಭಾ ಮುಖ್ಯಾಧಿಕಾರಿಗಳು

Read These Next

ಭಟ್ಕಳ ಶಿರಾಲಿ,ಬೆಂಗ್ರೆ ಭಾಗಗಳಲ್ಲಿ ಗದ್ದೆ ನಾಟಿ ಕಾರ್ಯ ಆರಂಭ:ಪೇಟೆಗೆ ಮುಖ ಮಾಡಿ ನಾಟಿಗೆ ನೋ ಎನ್ನುತ್ತಿರುವ ನಾರಿಯರು

ಭಟ್ಕಳ: ಮುಂಗಾರು ಮಳೆಯಿಂದಾಗಿ ತಾಲೂಕಿನಲ್ಲಿ ಕೃಷಿ ಭೂಮಿ ತಂಪಾಗಿದೆ. ಇದ್ದ ತುಂಡು ಭೂಮಿಯಲ್ಲಿಯೇ ಅನ್ನ ಹುಡುಕಾಡುವ ಇಲ್ಲಿನ ರೈತನಿಗೆ ...

ಮೋದಿ ತಂಡದೊಂದಿಗೆ ಯೂರೋಪ್ ಪ್ರವಾಸ ಕೈ ತೆರಳುವ:ಕನ್ನಡಿಗ ಐ.ಎಫ್.ಎಸ್.ಅಧಿಕಾರಿ ಎ.ಟಿ.ದಾಮೋದರ ನಾಯ್ಕ 

ಭಟ್ಕಳ:ಲಕ್ಷದ್ವೀಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಭಟ್ಕಳ ಗಡಿಭಾಗದ ನಿವಾಸಿ ಐ.ಎಫ್.ಎಸ್. ಅಧಿಕಾರಿ ...

ಭಟ್ಕಳ ಶಿರಾಲಿ,ಬೆಂಗ್ರೆ ಭಾಗಗಳಲ್ಲಿ ಗದ್ದೆ ನಾಟಿ ಕಾರ್ಯ ಆರಂಭ:ಪೇಟೆಗೆ ಮುಖ ಮಾಡಿ ನಾಟಿಗೆ ನೋ ಎನ್ನುತ್ತಿರುವ ನಾರಿಯರು

ಭಟ್ಕಳ: ಮುಂಗಾರು ಮಳೆಯಿಂದಾಗಿ ತಾಲೂಕಿನಲ್ಲಿ ಕೃಷಿ ಭೂಮಿ ತಂಪಾಗಿದೆ. ಇದ್ದ ತುಂಡು ಭೂಮಿಯಲ್ಲಿಯೇ ಅನ್ನ ಹುಡುಕಾಡುವ ಇಲ್ಲಿನ ರೈತನಿಗೆ ...

ಯುಪಿಎಸ್‌ಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಣೆ; ಆತ್ಮಹತ್ಯೆಗೆ ಶರಣಾದ ಕುಮಟಾದ ಯುವಕ

ಹೊಸದಿಲ್ಲಿ: ಪರೀಕ್ಷೆ ಹಾಲ್‌ಗೆ ಪ್ರವೇಶಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ 28 ಹರೆಯದ ಯುಪಿಎಸ್‌ಸಿ ಆಕಾಂಕ್ಷಿ ಯುವಕ ರವಿವಾರ ...