ಜ.೧೫ ಮತ್ತು ೧೬ರಂದು   ಶೇಡಿ ಮರದ ಹರಕೆ ಹೊರುವ  ಶೇಡಬರಿ ಜಾತ್ರೆ

Source: sonews | By Staff Correspondent | Published on 13th January 2018, 12:26 AM | Public Voice |

ಜಾತ್ರೆಯ ನಿಮಿತ್ತ ವಿಶೇಷ ಲೇಖನ

* ರಾಮ ಹೆಬಳೆ

ಒಂದು ಕಡೆ ಅರಬ್ಬೀ ಸಮುದ್ರ.ಇನ್ನೊಂದು ಬದಿ ವೆಂಕಟಾಪುರ ನದಿ.ಮತ್ತೊಂದೆಡೆ ಹಸಿರು ಕಾನನ ಹಾಗೂ ಮಗದೊಂದು ಕಡೆ ಸುಂದರವಾದ ಹಸಿರು ಗದ್ದೆ ಬಯಲಿನ ನಡುವೆ ಊರ ನಿವಾಸಿಗಳು.ಇವೆಲ್ಲದರ ನಡುವೆ ಶೇಡಿಯ ಗುಡ್ಡದ ಮೇಲೆ ಒಂದು ಸುಂದರ ಇತಿಹಾಸ ಪ್ರಸಿದ್ಧ ದೇವಾಲಯ...ಅದುವೇ "ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನ".

ಇದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮದಲ್ಲಿದೆ.ತಾಲೂಕು ಕೇಂದ್ರದಿಂದ ಸರಿ ಸುಮಾರು ಆರು ಕಿ.ಮೀ.ನಷ್ಟು ದೂರದಲ್ಲಿದೆ.ಇತ್ತ ರಾಷ್ಟ್ರೀಯ ಹೆದ್ದಾರಿ ವೆಂಕಟಾಪುರದಿಂದ ಎರಡೂವರೆ ಕಿ.ಮೀ.ನಷ್ಟು ಸಮೀಪವಿದೆ.

ಶ್ರೀ ಶೇಡಬರಿ ದೇವಾಲಯ ಸಮುದ್ರ ಮಟ್ಟದಿಂದ ಸರಿ ಸುಮಾರು ಹತ್ತು ಮೀ.ಗಳಷ್ಟು ಎತ್ತರದ ಗುಡ್ಡದ ಮೇಲಿದೆ.ಸರಿಸುಮಾರು ೪೧೬೦.೨೫ ಚ.ಅಡಿಗಳಷ್ಟಿರುವ ಈ ದೇವಾಲಯದ ಒಳಗಿನ ಸಾನಿಧ್ಯಗಳು ಪ್ರಮುಖವಾಗಿ ಜಟಕಾ,ಮಹಾಸತಿ ಪ್ರಧಾನ ಹಾಗೂ ಬ್ರಹ್ಮ ಗುಡಿಗಳು.

ಜಟಕಾ ಗರ್ಭಗುಡಿಯಲ್ಲಿ ಜಟಕಾ,ಜಪದ ಮಾಣಿ,ಹಾಯ್ಗುಳಿ,ಹುಲಿ ಕೀರ್ತಿ ಹಾಗೂ ತಂತ್ರಿ ಕಂಬಗಳನ್ನು ಪೂಜಿಸಲಾಗುತ್ತದೆ.ಇವುಗಳಲ್ಲದೇ ವಿಶೇಷವಾಗಿ ಇಲ್ಲಿ ಉದ್ಭವ ಮೂರ್ತಿ ಕೂಡ ಇದೆ.

ಮಹಾಸತಿ ಗರ್ಭಗುಡಿಯಲ್ಲಿ ಕೆಂಡಮಾಸ್ತಿ,ಮಲ್ಲ ಮಾಸ್ತಿ,ಸಣ್ಣ ಮಾಸ್ತಿ,ದೊಡ್ಡ ಮಾಸ್ತಿ ಹಾಗೂ ಹರಕೆ ಚೌಡಮ್ಮ ದೇವಿಯರನ್ನೂ ಪೂಜಿಸಲಾಗುತ್ತದೆ.

ಪ್ರಧಾನ ಗರ್ಭಗುಡಿಯಲ್ಲಿ ಎರಡು ಪ್ರಧಾನ ದೇವರುಗಳಿವೆ.

ಬ್ರಹ್ಮ ಗುಡಿಯಲ್ಲಿ ಸರಿಸುಮಾರು ಐದು ಮೀ.ಸುತ್ತಳತೆ ಹಾಗೂ ಮೂರುವರೆ ಮೀ.ಗಳಷ್ಟು ಎತ್ತರದ ಬೃಹದಾಕಾರದ ನಾಗನ ಹುತ್ತವಿದೆ.

ಇದಲ್ಲದೇ ಹೊರಭಾಗದಲ್ಲಿ ಆರಾಧಿಸುವ ಕೆಲವು ಸಾನಿಧ್ಯಗಳಿವೆ.ಸೇಡಿಮರ,ಕೀಳುವರ್ಗ,ಬಬ್ಬರ್ಯವೀರ,ಬಾಗಿಲ ಜಟಕಾ ಹಾಗೂ ಹೊರಸುತ್ತು ಜಟಕಾ.ಇವುಗಳಲ್ಲಿ ಮುಖ್ಯವಾಗಿ ಜಾತ್ರೆಯ ದಿನ ಸೇಡಿಮರದ ಸೇವೆ ವಿಶೇಷವಾಗಿರುತ್ತದೆ.ಕೆಲವು ಭಕ್ತರು ತಮಗೆ ಕಷ್ಟದ ಸಮಯದಲ್ಲಿ ತಮ್ಮ ಸುಖ ಪ್ರಾಪ್ತಿಗಾಗಿ "ಶೇಡಿಮರ" ಏರುವ ಹರಕೆಯನ್ನು ಬೇಡಿಕೊಳ್ಳುತ್ತಾರೆ.ಅದನ್ನು ವರ್ಷಂಪ್ರತಿ ನಡೆಯುವ ಜಾತ್ರೆಯ ಸಮಯದಲ್ಲಿ ಮಾತ್ರ ಸೇವೆಯನ್ನು ಒಪ್ಪಿಸಬೇಕಾಗುತ್ತದೆ.

ದೇವಾಲಯದ ದಕ್ಷಿಣ ಬಾಗಿಲಿನ ಎದುರುಗಡೆ ಸೇಡಿಮರದ ಕಟ್ಟೆ ಇದೆ.ಇದರಲ್ಲಿ ಸರಿಸುಮಾರು ಒಂದು ಮೀ.ಸುತ್ತಳತೆ ಹಾಗೂ ಆರೂವರೆ ಮೀ.ಗಳಷ್ಟು ಎತ್ತರದ ಸೇಡಿಕಂಬ ಇದೆ.ಇದನ್ನು ವಾಂಟೆ ಮರದಿಂದ ಕೆತ್ತಲಾಗಿದೆ.ಇದಕ್ಕೆ ಸರಿಸುಮಾರು ಏಳುವರೆ ಮೀ.ಗಳಷ್ಟು ಅಳತೆಯ ಉದ್ದದ ಇನ್ನೊಂದು ಕಂಬವನ್ನು ಅಡ್ಡಲಾಗಿ ಹಾಕಿ ಲಾಕ್ ಮಾಡಲಾಗುತ್ತದೆ.ಇದನ್ನು ಬಿಳಿಸಂಪಿಗೆ ಮರದಿಂದ ಕೆತ್ತಲಾಗಿದೆ.ಅದರ ಒಂದು ಬದಿ ಹರಕೆ ಹೊತ್ತವರು ಕುಳಿತರೆ ಇನೊಂದು ಬದಿ ದೇವಸ್ಥಾನದಿಂದ ನಿಯೋಜನೆಗೊಳ್ಳುವ ನುರಿತ ಸ್ವಯಂಸೇವಕರು ಮೂರು ಸುತ್ತು ತಿರುಗಿಸುತ್ತಾ ಅದನ್ನು ನಿಯಂತ್ರಣ ಮಾಡುತ್ತಾರೆ.ಇದನ್ನು ನೋಡುವುದೇ ಒಂದು ದೊಡ್ಡ ಸೌಭಾಗ್ಯ.ಸಂಜೆ ಮೂರು ಗಂಟೆಗೆ ಆರಂಭವಾಗುವ ಈ ಸೇವೆ ಆರು ಗಂಟೆಯವರೆಗೂ ನಿರಂತರವಾಗಿರುತ್ತದೆ.

ಇದಲ್ಲದೆ ಹರಕೆ ಪಟ್ಟೆ ಒಪ್ಪಿಸುವುದು ಹಾಗೂ ಇನ್ನಿತರ ಸೇವೆಗಳೂ ಕೂಡ ಲಭ್ಯವಿರುವವು.ಶ್ರೀ ದೇವರುಗಳು ಚಿನ್ನಾಭರಣ ಹಾಗೂ ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿರುತ್ತವೆ.

ಸಿಹಿ ತಿನಿಸಿನ ಅಂಗಡಿಗಳು,ಮಕ್ಕಳ ಆಟಿಕೆ ಅಂಗಡಿಗಳು,ಬಳೆ ಅಂಗಡಿಗಳು ಹಾಗೂ ಹೋಟೆಲ್ ಗಳು ಈ ಎರಡು ದಿನ ಬೀಡುಬಿಟ್ಟಿರುತ್ತವೆ.

ರಾತ್ರಿ ಯಕ್ಷಗಾನ ಹಾಗೂ ಮನರಂಜನೆಯ ಕಾರ್ಯಕ್ರಮಗಳೂ ಕೂಡ ನಡೆಯುವವು.ಸಾವಿರಾರು ಜನಸಂಖ್ಯೆ ಸೇರುವ ವ್ಯಾವಹಾರಿಕ ಕಾಲೆಂಡರಿನ ಪ್ರಕಾರ ಭಟ್ಕಳ ತಾಲೂಕಿನಲ್ಲಿಯೇ ಪ್ರಥಮವಾಗಿ ಬರುವ ಶ್ರೀ ಶೇಡಬರಿ ಜಾತ್ರೆಗೆ ನೀವೂ ಬನ್ನಿ...ನಿಮ್ಮವರನ್ನೂ ಕರೆತನ್ನಿರಿ.........

 

 

ಶ್ರೀ ಶೇಡಬರಿ,ಹೆಬಳೆ,

ಭಟ್ಕಳ,(ಉ.ಕ)

ಪಿನ್:೫೮೧೩೨೦

೯೯೬೪೮೮೪೪೯೪

 

Read These Next

 ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ...