ಮಣಿಪುರದಲ್ಲಿ ಬಿಜೆಪಿಯಿಂದ ಭಾರತ ಮಾತೆಯ ಹತ್ಯೆ: ರಾಹುಲ್; ನೀವು ದೇಶಭಕ್ತರಲ್ಲ, ದೇಶದ್ರೋಹಿಗಳು: ಲೋಕಸಭೆಯಲ್ಲಿ ತೀವ್ರ ವಾಗ್ದಾಳಿ

Source: Vb | By I.G. Bhatkali | Published on 11th August 2023, 7:11 AM | National News |

ಹೊಸದಿಲ್ಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ರಾಜಕೀಯವು ಈಶಾನ್ಯದ ರಾಜ್ಯದಲ್ಲಿ 'ಭಾರತ ಮಾತೆಯನ್ನು ಕೊಂದಿದೆ'' ಎಂದು ಆರೋಪಿಸಿದರು ಹಾಗೂ ಆ ಪಕ್ಷದ ಸದಸ್ಯರು 'ದೇಶದ್ರೋಹಿಗಳು” ಎಂದು ಬಣ್ಣಿಸಿದರು.

ಸರಕಾರದ ವಿರುದ್ಧ ಪ್ರತಿಪಕ್ಷ ಒಕ್ಕೂಟ 'ಇಂಡಿಯಾ' ಮಂಡಿಸಿದ ಅವಿಶ್ವಾಸ ನಿರ್ಣಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಣಿಪುರದಲ್ಲಿ ಮೂರು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದ್ದರೂ ಅಲ್ಲಿಗೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿದರು. ಮೋದಿ ಮಣಿಪುರವನ್ನು ಭಾರತದ ಭಾಗ ಎಂಬುದಾಗಿ ಪರಿಗಣಿಸುತ್ತಿಲ್ಲ ಎಂದು ರಾಹುಲ್ ಹೇಳಿದರು.

ನನ್ನ ಇನ್ನೊಂದು ತಾಯಿಯನ್ನು ಕೊಂದಿದ್ದೀರಿ
ಸರಕಾರದ ವಿರುದ್ಧದ ತನ್ನ ತೀವ್ರ ವಾಗ್ದಾಳಿಯನ್ನು ಮುಂದುವರಿಸಿದ ರಾಹುಲ್, ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸೇನೆಗೆ ಮಾತ್ರ ಸಾಧ್ಯವಿದೆ, ಆದರೆ ಸರಕಾರವು ಅಲ್ಲಿ ಸೇನೆಯನ್ನು ನಿಯೋಜಿಸುತ್ತಿಲ್ಲ ಎಂದು ಹೇಳಿದರು.

“ನೀವು ಭಾರತದ ಧ್ವನಿಯನ್ನು ಕೊಂದಿದ್ದೀರಿ. ಅಂದರೆ ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ... ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ. ನನ್ನ ಇನ್ನೊಂದು ತಾಯಿ ಭಾರತ ಮಾತೆಯನ್ನು ನೀವು ಮಣಿಪುರದಲ್ಲಿ ಕೊಂದಿದ್ದೀರಿ” ಎಂದು ಸದನದಲ್ಲಿ ಉಪಸ್ಥಿತರಿದ್ದ ಸೋನಿಯಾ ಗಾಂಧಿಯತ್ತ ಬೆಟ್ಟು ಮಾಡುತ್ತಾ ಅವರು ಹೇಳಿದರು.

ನೀವು ಎಲ್ಲೆಡೆಯೂ ಚಿಮಿಣಿ ಎಣ್ಣೆ ಸುರಿದಿದ್ದೀರಿ
ನೀವು ಎಲ್ಲಾ ಕಡೆ ಚಿಮಿಣಿ ಎಣ್ಣೆ ಸುರಿದಿದ್ದೀರಿ. ನೀವು ಮಣಿಪುರಕ್ಕೆ ಬೆಂಕಿ ಕೊಟ್ಟಿದ್ದೀರಿ. ಈಗ ನೀವು ಹರ್ಯಾಣಕ್ಕೆ ಬೆಂಕಿ ಕೊಡಲು ಪ್ರಯತ್ನಿಸುತ್ತಿದ್ದೀರಿ' ಎಂದು ನೂಹ್ ಮತ್ತು ಗುರುಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗಳನ್ನು ಉಲ್ಲೇಖಿಸುತ್ತಾ ಕಾಂಗ್ರೆಸ್‌ ನಾಯಕ ಹೇಳಿದರು.

ಮೋದಿ ಇಬ್ಬರೊಂದಿಗೆ ಮಾತ್ರ ಮಾತನಾಡುತ್ತಾರೆ
ಪ್ರಧಾನಿ ನರೇಂದ್ರ ಮೋದಿ ಇಬ್ಬರ ಮಾತುಗಳನ್ನು ಮಾತ್ರ ಕೇಳುತ್ತಾರೆ- ಅಮಿತ್ ಶಾ ಮತ್ತು ಗೌತಮ್ ಅದಾನಿ, ರಾವಣ ಇಬ್ಬರ ಮಾತುಗಳನ್ನು ಮಾತ್ರ ಕೇಳುತ್ತಿದ್ದ ಹಾಗೆ. ಆದರೆ, ಈ ವಿಷಯದಲ್ಲಿ ಅವರು ಹೆಚ್ಚಿನ ವಿವರಣೆಯನ್ನು ನೀಡಲಿಲ್ಲ. ಅಂದರೆ, ರಾವಣ ಯಾರ ಮಾತುಗಳನ್ನು ಕೇಳುತ್ತಿದ್ದನು ಎನ್ನುವುದನ್ನು ಹೇಳಲಿಲ್ಲ!

"ನಾನು ಕೆಲವು ದಿನಗಳ ಹಿಂದೆ ಮಣಿಪುರಕ್ಕೆ ಹೋಗಿ ದೇನೆ. ನಮ್ಮ ಪ್ರಧಾನಿ ಅಲ್ಲಿಗೆ ಹೋಗಿಲ್ಲ. ಅವರು ಇನ್ನೂ ಅಲ್ಲಿಗೆ ಹೋಗಿಲ್ಲ. ಅವರು ಮಣಿಪುರವನ್ನು ಭಾರತದ ಭಾಗವೆಂಬಂತೆ ಪರಿಗಣಿಸುತ್ತಿಲ್ಲ. ನಾನು 'ಮಣಿಪುರ' ಎಂದು ಈಗ ಹೇಳಿದೆ. ಆದರೆ, ವಾಸ್ತವಿಕವಾಗಿ ಅಲ್ಲಿ ಯಾವುದೇ ಮಣಿಪುರ ಉಳಿದಿಲ್ಲ. ನೀವು ಮಣಿಪುರವನ್ನು ಎರಡು ಭಾಗಗಳಾಗಿ ವಿಭಜಿಸಿದ್ದೀರಿ. ನೀವು ಮಣಿಪುರವನ್ನು ತುಂಡು ಮಾಡಿದ್ದೀರಿ' ಎಂದು ಕಾಂಗ್ರೆಸ್‌ ನಾಯಕ ಹೇಳಿದರು.

ನಾನು ಮಣಿಪುರಕ್ಕೆ ಭೇಟಿ ನೀಡಿ ನಿರಾಶ್ರಿತ ಶಿಬಿರಗಳಲ್ಲಿರುವ ಮಹಿಳೆಯರು ಮತ್ತು ಮಕ್ಕಳನ್ನು ಭೇಟಿಯಾಗಿದ್ದೇನೆ, ಆದರೆ ಪ್ರಧಾನಿ ಇನ್ನೂ ಹಾಗೆ ಮಾಡಿಲ್ಲ ಎಂದು ರಾಹುಲ್ ನುಡಿದರು.

ಲೋಕಸಭೆಯಲ್ಲಿ ರಾಹುಲ್ ಗಾ೦ಧಿ ಮಾತನಾಡುತ್ತಿದ್ದಾಗ ಸದನದಲ್ಲಿ ಪ್ರಧಾನಿ ಇರಲಿಲ್ಲ.

“ಒಂದು ಶಿಬಿರದಲ್ಲಿ ಮಹಿಳೆಯೊಬ್ಬರನ್ನು ಕಂಡು, “ನಿಮಗೆ ಏನಾಯಿತು' ಎಂದು ಕೇಳಿದೆ. ನನ್ನ ಏಕೈಕ ಮಗ, ಚಿಕ್ಕ ಬಾಲಕನನ್ನು ನನ್ನ ಕಣ್ಣೆದುರೇ ಗುಂಡು ಹೊಡೆದು ಕೊಂದರು. ನಾನು ಇಡೀ ರಾತ್ರಿಯನ್ನು ನನ್ನ ಮಗುವಿನ ಶವದೊಂದಿಗೆ ಕಳೆದೆ. ಮತ್ತೆ ನನಗೆ ಹೆದರಿಕೆಯಾಯಿತು, ನಾನು ಮನೆಯನ್ನೇ ತೊರೆದೆ' ಎಂದು ಅವರು ಉತ್ತರಿಸಿದರು. ಮನೆ ಬಿಡುವಾಗ ನೀವು ಏನನ್ನಾದರೂ ತಂದಿದ್ದೀರಾ ಎಂದು ಅವರಲ್ಲಿ ಕೇಳಿದಾಗ, ನಾನು ಉಟ್ಟ ಬಟ್ಟೆ ಮತ್ತು ಮಗನ ಫೋಟೊದೊಂದಿಗೆ ಬಂದಿದ್ದೇನೆ ಎಂದು ಅವರು ಹೇಳಿದರು'' ಎಂದು ರಾಹುಲ್ ಗಾಂಧಿ ಹೇಳಿದರು.

“ಇನ್ನೊಂದು ಶಿಬಿರದಲ್ಲಿ, ನಾನು ಇದೇ ಪ್ರಶ್ನೆಯನ್ನು ಮಹಿಳೆಯೊಬ್ಬರಿಗೆ ಕೇಳಿದೆ. ಈ ಪ್ರಶ್ನೆಯನ್ನು ಕೇಳುತ್ತಿದ್ದಂತೆಯೇ ಅವರು ನಡುಗಲು ಆರಂಭಿಸಿದರು ಮತ್ತು ಮೂರ್ಛ ತಪ್ಪಿದರು' ಎಂದರು.

ಇವು ಎರಡು ಉದಾಹರಣೆಗಳು, ಮಣಿಪುರದಲ್ಲಿ ಅವರು (ಬಿಜೆಪಿ) ಹಿಂದೂಸ್ತಾನವನ್ನು ಕೊಂದಿದ್ದಾರೆ. ಅವರ ರಾಜಕೀಯವು ಮಣಿಪುರವನ್ನು ಕೊಂದಿಲ್ಲ, ಮಣಿಪುರದಲ್ಲಿರುವ ಹಿಂದೂಸ್ತಾನವನ್ನು ಕೊಂದಿದೆ. ಮಣಿಪುರದಲ್ಲಿ ಹಿಂದೂಸ್ತಾನವನ್ನು ಕೊಲ್ಲಲಾಗಿದೆ. ಮಣಿಪುರದ ಜನರನ್ನು ಕೊಲ್ಲುವ ಮೂಲಕ ನೀವು ಭಾರತ ಮಾತೆಯನ್ನು ಕೊಂದಿದ್ದೀರಿ. ನೀವು ದೇಶಭಕ್ತರಲ್ಲ, ನೀವು ದೇಶದ್ರೋಹಿಗಳು' ಎಂದು ಅವರು ಹೇಳಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ತನ್ನ ಮಾತುಗಳಿಗೆ ರಾಹುಲ್ ಗಾಂಧಿ ಕ್ಷಮೆ ಕೋರಬೇಕು ಎಂದು ಸಚಿವ ಕಿರಣ್ ರಿಜಿಜು ಹೇಳಿದರು. ಈಶಾನ್ಯ ಭಾರತದಲ್ಲಿನ ಬಂಡಾಯ ಮತ್ತು ಇತರ ಸಮಸ್ಯೆಗಳಿಗೆ ಕಾಂಗ್ರೆಸ್ ಕಾರಣ ಎಂದು ಅವರು ಹೇಳಿದರು.

ಅವಿಶ್ವಾಸ ನಿರ್ಣಯವನ್ನು ಪ್ರತಿಪಕ್ಷಗಳ ಒಕ್ಕೂಟ 'ಇಂಡಿಯಾ' ಪರವಾಗಿ ಕಾಂಗ್ರೆಸ್ ಮಂಗಳವಾರ ಮಂಡಿಸಿದೆ. ನಿರ್ಣಯದ ಮೇಲಿನ ಚರ್ಚೆಯನ್ನು ಮಂಗಳವಾರ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಆರಂಭಿಸಿದರು. ಗುರುವಾರ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುವ ಕಾರ್ಯಕ್ರಮವಿದೆ. ಅದರೊಂದಿಗೆ ಅವಿಶ್ವಾಸ ನಿರ್ಣಯದ ಕಲಾಪ ಮುಕ್ತಾಯಗೊಳ್ಳುತ್ತದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...