ನೂತನ ಸಂಸತ್ ಭವನದತ್ತ ಪ್ರತಿಭಟನಾ ರಾಲಿಗೆ ಯತ್ನ; ಕುಸ್ತಿಪಟುಗಳು-ಪೊಲೀಸರ ನಡುವೆ ಸಂಘರ್ಷ; ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದ ದಿಲ್ಲಿ ಪೊಲೀಸರು

Source: vb | By I.G. Bhatkali | Published on 30th May 2023, 10:47 AM | National News |

ಹೊಸದಿಲ್ಲಿ: ಭದ್ರತಾ ಆವರಣ ಭೇದಿಸಿ “ಮಹಿಳಾ ಮಹಾ ಪಂಚಾಯತ್' ಆಯೋಜಿಸಲಾಗಿದ್ದ ನೂತನ ಸಂಸತ್‌ ಭವನದ ಕಟ್ಟಡದತ್ತ ಪ್ರತಿಭಟನಾ ರಾಲಿ ನಡೆಸಲು ಯತ್ನಿಸಿದ ವಿನೇಶ್ ಫೋಗಟ್, ಸಾಕಿ ಮಲಿಕ್ ಹಾಗೂ ಬಜರಂಗ್ ಪುನಿಯಾ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ದಿಲ್ಲಿ ಪೊಲೀಸರು ರವಿವಾರ ಬಂಧಿಸಿದ್ದಾರೆ.

ವಿನೇಶ್ ಫೋಗಟ್ ಹಾಗೂ ಸಂಗೀತಾ ಫೋಗಟ್ ಅವರು ಬ್ಯಾರಿಕೇಡ್‌ಗಳನ್ನು ಭೇದಿಸಲು ಪ್ರಯತ್ನಿಸಿದ್ದರಿಂದ ಕುಸ್ತಿಪಟುಗಳು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ಹಾಗೂ ತಳ್ಳಾಟ ನಡೆದು ಜಂತರ್ ಮಂತರ್ ಸಂಘರ್ಷದ ವಾತಾವರಣಕ್ಕೆ ಸಾಕ್ಷಿಯಾಯಿತು. ತನ್ನನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವ ಬಗ್ಗೆ ವಿನೇಶ್ ಫೋಗಟ್ ಹಾಗೂ ಸಂಗೀತಾ ಫೋಗಟ್ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

ನಂತರ ಪೊಲೀಸರು ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು ಹಾಗೂ ಇನ್ನು ಕೆಲವರನ್ನು ಬಲವಂತವಾಗಿ ಎಳೆದೊಯ್ದು ಬಸ್‌ನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. “ಕಾನೂನು ಹಾಗೂ ಸುವ್ಯವಸ್ಥೆ ಉಲ್ಲಂಘಿಸಿರುವುದಕ್ಕೆ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು'' ಎಂದು ಕಾನೂನು ಹಾಗೂ ಸುವ್ಯವಸ್ಥೆಯ ವಿಶೇಷ ಪೊಲೀಸ್‌ ಆಯುಕ್ತ ದೀಪೇಂದ್ರ ಪಾಠಕ್ ಹೇಳಿದ್ದಾರೆ.

ನಂತರ ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಎಪ್ರಿಲ್ 23ರಂದು ಪ್ರತಿಭಟನೆ ಆರಂಭಿಸಿದ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ತೆರವುಗೊಳಿಸುವುದು ಕಂಡು ಬಂತು. ಪ್ರತಿಭಟನಾ ನಿರತ ಕುಸ್ತಿಪಟುಗಳು 'ಮಹಿಳಾ ಸಮ್ಮಾನ್ ಪಂಚಾಯತ್‌'ಗೆ ಕರೆ ನೀಡಿದ್ದರಿಂದ ದಿಲ್ಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದರು. ಲ್ಯುಟ್‌ಯೆನ್ ದಿಲ್ಲಿ ಪ್ರದೇಶದಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಲವು ಸ್ತರಗಳಲ್ಲಿ ಬ್ಯಾರಿಕೇಡ್‌ ಗಳನ್ನು ಅಳವಡಿಸಲಾಗಿತ್ತು. ಸಂಸತ್‌ ಕಟ್ಟಡದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಕುಸ್ತಿಪಟುಗಳು, “ನಾವು ನೂತನ ಸಂಸತ್ ಭವನದ ಸಮೀಪ ಮಹಾಪಂಚಾಯತ್‌ ನಡೆಸಲು ಹೇಗಾದರೂ ತೆರಳಲಿದ್ದೇವೆ' ಎಂದು ಹೇಳಿದರು. ಆದರೆ, ಕಾರ್ಯಕ್ರಮ ನಡೆಸಲು ಅನುಮತಿ ನೀಡದೇ ಇರುವುದರಿಂದ ನೂತನ ಸಂಸತ್‌ ಕಟ್ಟಡದತ್ತ ತೆರಳಲು ಪ್ರತಿಭಟನಾಕಾರರಿಗೆ ಅವಕಾಶ ನೀಡುವುದಿಲ್ಲ. ಅಲ್ಲದೆ ಕುಸ್ತಿಪಟುಗಳು ಯಾವುದೇ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಬಾರದು' ಎಂದು ಪೊಲೀಸರು ಎಚ್ಚರಿಕೆ ನೀಡಿದರು.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒಲಿಪಿಂಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ, ಏಶಿಯನ್ ಗೇಮ್ಸ್‌ನ ಚಿನ್ನ ವಿಜೇತೆ ವಿನೇಶ್ ಸೇರಿದಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...