ಕೊರೊನಾ ಪರೀಕ್ಷೆಗಾಗಿ ಭಟ್ಕಳಕ್ಕೆ ಸ್ಕ್ರ್ಯಾಚ್ ಕಾರ್ಡ !

Source: S.O. News Service | By I.G. Bhatkali | Published on 12th April 2020, 8:00 PM | Coastal News |

ಭಟ್ಕಳ: ಮಹಾಮಾರಿ ಕೊರೊನಾ ಸೋಂಕಿನ ಹಾಟ್‍ಸ್ಪಾಟ್ ಆಗಿ ಬಿಂಬಿತವಾಗಿರುವ ಭಟ್ಕಳದಲ್ಲಿ ಪ್ರಯೋಗಾಲಯ ಪರೀಕ್ಷೆ ವಿಳಂಬವಾಗುತ್ತಿರುವುದನ್ನು ತಡೆಯಲು ಮುಂದಿನ ದಿನಗಳಲ್ಲಿ ಸ್ಕ್ರ್ಯಾಚ್ ಕಾರ್ಡ ಪರೀಕ್ಷೆ ಅಳವಡಿಕೆ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಕೊರೊನಾ ರೋಗದಂತೆ ಸ್ಕ್ರ್ಯಾಚ್ ಕಾರ್ಡ ಪ್ರಯೋಗವೂ ಇಲ್ಲಿನ ವೈದ್ಯರಿಗೆ ಹೊಸದು ಎಂದು ಹೇಳಲಾಗಿದ್ದು, ಅದರ ಬಳಕೆಯ ವಿಧಾನ ಇನ್ನಷ್ಟೇ ತಿಳಿಯಬೇಕಾಗಿದೆ. ಸ್ಕ್ರ್ಯಾಚ್ ಕಾರ್ಡ ಬಳಕೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಸರಕಾರದಿಂದ ಸ್ಪಷ್ಟ ನಿರ್ಧಾರ ಹೊರ ಬೀಳುವ ನಿರೀಕ್ಷೆ ಇದೆ. ಆದರೆ ದೇಶದ ಎಲ್ಲ ಪ್ರದೇಶಗಳಲ್ಲಿಯೂ ಇದನ್ನು ಬಳಸುವ ಸಾಧ್ಯತೆ ಇಲ್ಲವಾಗಿದ್ದು, ಕೊರೊನಾ ಸೋಂಕಿತರು ಹೆಚ್ಚಿರುವ ಪ್ರದೇಶಗಳನ್ನಷ್ಟೇ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಸ್ಕ್ರ್ಯಾಚ್ ಕಾರ್ಡ ಏಕೆ? : 

ಸೋಂಕಿತ ಮಹಿಳೆಯ ಮನೆಗೆ ಕ್ರಿಮಿನಾಶಕ
ಇಲ್ಲಿನ ಫಾರೂಕಿ ಸ್ಟ್ರೀಟ್‍ನಲ್ಲಿರುವ ಕೊರೊನಾ ಸೋಂಕಿತ ಗರ್ಭೀಣಿ ಮಹಿಳೆಯ ಮನೆಯಲ್ಲಿ ಬುಧವಾರ ಪೌರ ಕಾರ್ಮಿಕರು ಕ್ರಿಮಿನಾಶಕವನ್ನು ಸಿಂಪಡಿಸಿದರು. ಇದೀಗ ಆಕೆಯ ಕುಟುಂಬದ ಸದಸ್ಯರ ಮೇಲೆ ನಿಗಾ ಮುಂದುವರೆದಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮಹಿಳೆ ಮಣಿಪಾಲಕ್ಕೆ : 
 ಸೋಂಕಿತ ಗರ್ಭೀಣಿ ಮಹಿಳೆಯನ್ನು ಗುರುವಾರ ಸಂಜೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸಾಗಿಸಲಾಯಿತು. ಉಡುಪಿ ಜಿಲ್ಲಾಧಿಕಾರಿಗಳಿಂದ ಅನುಮತಿ ಸಿಗುವುದು ವಿಳಂಬವಾದ ಹಿನ್ನೆಲೆಯಲ್ಲಿ ರೋಗಿಯನ್ನು ಒಂದು ದಿನ ತಡವಾಗಿ ಸಾಗಿಸಲಾಯಿತು ಎಂದು ತಿಳಿದು ಬಂದಿದೆ. 


ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರಸಕ್ತವಾಗಿ ಕೆಲವೇ ಪ್ರದೇಶಗಳಲ್ಲಿ ಕೊರೊನಾ ಪರೀಕ್ಷಾ ಪ್ರಯೋಗಾಲಯಗಳಿದ್ದು, ವರದಿ ಬರುವುದು ವಿಳಂಬವಾಗುತ್ತಿವೆ. ಅಲ್ಲದೇ ಸೋಂಕಿತರ ಹೆಚ್ಚಳದಿಂದಾಗಿ ಈಗ ಇರುವ ಪ್ರಯೋಗಾಲಯಗಳ ಮೇಲೆ ಹೆಚ್ಚಿನ ಒತ್ತಡ ಬೀಳಲಾರಂಭಿಸಿದೆ. ಭಟ್ಕಳದಿಂದ ಶಂಕಿತರ ಗಂಟಲಿನ ದ್ರವ ಮಾದರಿ ತೆಗೆದು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಯಂತ್ರಗಳು ಕೆಟ್ಟರೆ ಹಾಸನ ಪ್ರಯೋಗಾಲಯಕ್ಕೆ ಕಳುಹಿಸಿ ಮತ್ತೆ ಕೆಲ ದಿನಗಳವರೆಗೆ ವರದಿಗಾಗಿ ಕಾದು ಕುಳಿತ ಘಟನೆಯೂ ನಡೆದಿದೆ. ಶಿವಮೊಗ್ಗ, ಹಾಸನದಂತಹ ಪ್ರಯೋಗಾಲಯಗಳಲ್ಲಿ ಕೊರೊನಾ ಸೋಂಕು ಇರುವುದು ಖಚಿತವಾದರೂ, ಅದನ್ನು ದೃಢಪಡಿಸಿಕೊಳ್ಳಲು ಪುಣೆ ಅಥವಾ ಬೆಂಗಳೂರಿನತ್ತ ಮುಖ ಮಾಡಿ ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ಭಟ್ಕಳದಲ್ಲಿಯೇ ಶಂಕಿತರನ್ನು ಸ್ಕ್ರ್ಯಾಚ್ ಕಾರ್ಡ ಪರೀಕ್ಷೆಗೆ ಒಳಪಡಿಸಿ, ಗೊಂದಲಗಳಿದ್ದರೆ ಪುಣೆ ಅಥವಾ ಬೆಂಗಳೂರು ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಿಕೊಡುವುದರಿಂದ ಕೆಲಸ ಇನ್ನಷ್ಟು ಸುಲಭವಾಗಲಿದೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. 

Read These Next