ಕೋಳಿ ಅಂಗಡಿಗಳ ತ್ಯಾಜ್ಯ ವಿಲೇವಾರಿ ಶುಲ್ಕವನ್ನು ವಿರೋಧಿಸಿ ವಿಲೇವಾರಿ ಘಟಕದ ಮುಂದೆ ತ್ಯಾಜ್ಯ ಸುರಿದ ಅಂಗಡಿಕಾರರು:ಅಂಗಡಿಕಾರರ ಕ್ರಮದ ವಿರುದ್ಧ ಅಧಿಕಾರಿಗಳು ಆಕ್ರೋಶ

Source: S.O. News Service | By MV Bhatkal | Published on 22nd June 2021, 8:38 PM | Coastal News |

ಭಟ್ಕಳ: ತಾಲೂಕಿನ ಪುರಸಭೆಯ ವತಿಯಿಂದ ಪಟ್ಟಣ ಪ್ರದೇಶದ ಕೋಳಿ ಅಂಗಡಿಗಳ ತ್ಯಾಜ್ಯ ವಿಲೇವಾರಿ ಸಂಬಂಧ ವಿಧಿಸಲಾಗಿರುವ ಸಾಗಾಟ ಶುಲ್ಕವನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಭರದಲ್ಲಿ ಅಂಗಡಿಕಾರರು ತ್ಯಾಜ್ಯವನ್ನು ತಂದು ವಿಲೇವಾರಿ ಘಟಕದ ಮುಂದೆ ಸುರಿದಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.
ಕಳೆದ ಕೆಲವು ತಿಂಗಳುಗಳಿಂದ ತಾಲೂಕಿನ ಪಟ್ಟಣ ಪ್ರದೇಶದ ಕೋಳಿ ಅಂಗಡಿಗಳ ತ್ಯಾಜ್ಯಗಳನ್ನು ಮಂಗಳೂರಿನಲ್ಲಿರುವ ಸೌಝಾ ಫಡ್ ಪ್ರೊಸೆಸಿಂಗ್ ಘಟಕಕ್ಕೆ ( ಶ್ವಾನ ಮತ್ತಿತರ ಪ್ರಾಣಿಗಳಿಗೆ ಆಹಾರ ಉತ್ಪಾದನೆ) ಸಾಗಿಸಲು ಭಟ್ಕಳ ಪುರಸಭೆ ಕ್ರಮ ಕೈಗೊಂಡಿತ್ತು. ಇದರಿಂದಾಗಿ ಕೋಳಿ ಅಂಗಡಿಗಳ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿದಿದ್ದಲ್ಲದೇ ಭಟ್ಕಳ ಪುರಸಭೆಯ ಈ ಕ್ರಮ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದರೆ ಕೊರೊನಾ ತಡೆ ಲಾಕ್‍ಡೌನ್ ಹಾಗೂ ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದಾಗಿ ತ್ಯಾಜ್ಯ ಸಾಗಾಟ ದುಬಾರಿಯಾಗಿ ಪರಿಣಮಿಸಿದ್ದು, ಮಂಗಳೂರು ಸೌಝಾ ಕಂಪೆನಿಯವರು ತ್ಯಾಜ್ಯವನ್ನು ಆಮದು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಅದರೆ ತ್ಯಾಜ್ಯ ವಿಲೇವಾರಿಯ ಅಗತ್ಯವನ್ನು ಮನಗಂಡಿರುವ ಪುರಸಭೆ, ಕೋಳಿ ಅಂಗಡಿಗಳ ಮಾಲಕರನ್ನು ಕರೆಯಿಸಿ ಸಭೆ ನಡೆಸಿದ್ದು, ಸಾಗಾಟದ ಸಮಸ್ಯೆ ಬಗೆ ಹರಿಯುವವರೆಗೂ ಪ್ರತಿ ಅಂಗಡಿಗೆ ತಲಾ ರು.200 ರುಪಾಯಿ ನಿಗದಿಪಡಿಸಿ, ನಂತರ ಖರ್ಚು ವೆಚ್ಚವನ್ನು ನೋಡಿಕೊಂಡು ಶುಲ್ಕ ನಿಗದಿಯ ವಿಷಯದಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಬಗ್ಗೆ ಎಲ್ಲರ ಒಪ್ಪಿಗೆಯನ್ನು ಪಡೆಯಲಾಗಿತ್ತು. ಆದರೆ ಸಭೆಯ ನಂತರ ಕೆಲ ಅಂಗಡಿಕಾರರು 200 ರುಪಾಯಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ತ್ಯಾಜ್ಯ ವಿಲೇವಾರಿಗೆ ಹಣ ನೀಡಿದ ಅಂಗಡಿಕಾರರಿಂದ ತ್ಯಾಜ್ಯವನ್ನು ಸಂಗ್ರಹಿಸಿ ಮಂಗಳೂರಿಗೆ ಕಳುಹಿಸಲಾಗಿದ್ದು, ಉಳಿದವರು ತ್ಯಾಜ್ಯ ವಿಲೇವಾರಿ ಸಾಧ್ಯವಾಗದೇ ಪುರಸಭೆಯ ತೀರ್ಮಾನವನ್ನು ವಿರೋಧಿಸುವ ಭರದಲ್ಲಿ ತ್ಯಾಜ್ಯವನ್ನು ತಂದು ಇಲ್ಲಿನ ಸಾಗರರೋಡ್ ತ್ಯಾಜ್ಯ ವಿಲೇವಾರಿ ಘಟಕದ ಮುಂದೆ ಹೆದ್ದಾರಿಯ ಬದಿಯಲ್ಲಿಯೇ ಸುರಿದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪುರಸಭೆ ಮುಖ್ಯಾಧಿಕಾರಿ ದೇವರಾಜ, ಹಿರಿಯ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್ ಸ್ಥಳಕ್ಕೆ ಧಾವಿಸಿ ಬಂದಿದ್ದು, ಅಂಗಡಿಕಾರರ ಕ್ರಮದ ವಿರುದ್ಧ ಆಕ್ರೋಶ ಹೊರ ಹಾಕಿದರು. ಯಾವುದೇ ಸಮಸ್ಯೆ ಇದ್ದಲ್ಲಿ, ಪುರಸಭೆ ಆಡಳಿತ ಅಥವಾ ಅಧಿಕಾರಿಗಳ ಗಮನಕ್ಕೆ ತರಬೇಕೇ ವಿನಃ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಇಂತಹ ನಡವಳಿಕೆ ಸರಿಯಲ್ಲ, ಕೂಡಲೇ ವಿಲೇವಾರಿ ಮಾಡದೇ ಇದ್ದರೆ ಪೊಲೀಸರಿಗೆ ದೂರು ನೀಡುವುದಾಗಿಯೂ ಅಧಿಕಾರಿಗಳು ಎಚ್ಚರಿಸಿದರು.ಇದರಿಂದ ವಿಚಲಿತರಾದ ಅಂಗಡಿಕಾರರು ತ್ಯಾಜ್ಯವನ್ನು ವಾಹನದಲ್ಲಿ ತುಂಬಿಸಿಕೊಂಡು ಅಲ್ಲಿಂದ ತೆರಳಿದ್ದಾರೆ.
          

Read These Next