ಇಂದಿನಿಂದ ಭಟ್ಕಳದಲ್ಲಿ ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ; ಅಕ್ಕಿ, ಬೇಳೆಗಾಗಿ ಪೇಟೆಗೆ ಬರುವಂತಿಲ್ಲ; ಹಳ್ಳಿ ಹಳ್ಳಿಗೆ ಅವಶ್ಯಕ ವಸ್ತುಗಳು

Source: S.O. News Service | By I.G. Bhatkali | Published on 10th May 2021, 11:51 AM | Coastal News |

ಭಟ್ಕಳ: ಕಳೆದ ವರ್ಷದ ಲಾಕ್‍ಡೌನ್ ಮಾದರಿಯಲ್ಲಿಯೇ ಮೇ.10ರಿಂದ ಭಟ್ಕಳ ತಾಲೂಕಿನಲ್ಲಿ ಜನರ ಓಡಾಟದ ಮೇಲೆ ಕಠಿಣ ನಿರ್ಬಂಧ ಹೇರಲು ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ತಾಲೂಕಾಡಳಿತ ನಿರ್ಣಯ ಕೈಗೊಂಡಿದೆ. 

ಈ ಕುರಿತು ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ರವಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1000 ದಾಟಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಜನರ ಓಡಾಟದ ಮೇಲೆ ಕಠಿಣ ನಿರ್ಬಂಧ ಹೇರದೇ ಪರ್ಯಾಯ ಮಾರ್ಗ ಇಲ್ಲದಾಗಿದೆ. ಮೇ.10, ಬೆಳಿಗ್ಗೆ 6 ಗಂಟೆಯಿಂದ ಮೇ24 ಬೆಳಿಗ್ಗೆ 6 ಗಂಟೆಯವರೆಗಿನ ಅವಧಿಯಲ್ಲಿ ಜನರು ಸಾಮಾನು ಖರೀದಿಯ ನೆಪದಲ್ಲಿ ಬೈಕ್ ಅಥವಾ ಇನ್ನಾವುದೇ ವಾಹನ ಹಿಡಿದು ಪೇಟೆಗೆ ಬರುವಂತಿಲ್ಲ.

ಆಯಾ ವಾರ್ಡ ಅಥವಾ ಗ್ರಾಮ ವ್ಯಾಪ್ತಿಯಲ್ಲಿ ಕಿರಾಣಿ ಅಂಗಡಿಗಳಿಗೆ ದಿನಸಿ ಪೂರೈಕೆಗೆ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಜನರು ಅಲ್ಲಿಂದಲೇ ಅವಶ್ಯಕ ಸಾಮಾನುಗಳನ್ನು ಖರೀದಿಸಬಹುದಾಗಿದೆ. ಔಷಧಿ ಖರೀದಿಸಲು ಪೇಟೆಗೆ ಬರುವ ಬದಲಾಗಿ ಆಯಾ ಪ್ರದೇಶಕ್ಕೆ ಔಷಧಿಗಳನ್ನು ಪೂರೈಸುವ ಬಗ್ಗೆ ಚರ್ಚೆ ನಡೆದಿದೆ, ಪಕ್ಕದ ಜಿಲ್ಲೆಗಳಿಗೆ ಚಿಕಿತ್ಸೆಗಾಗಿ ತೆರಳುವ ಮುನ್ನ ವೈದ್ಯರ ಲಭ್ಯತೆ, ಚಿಕಿತ್ಸೆಯ ವಿವರಗಳನ್ನು ಪರಿಶೀಲಿಸಿದ ನಂತರವೇ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.

ಪೂರ್ವ ನಿಗದಿಯಾದ ಮದುವೆ ಸಮಾರಂಭಕ್ಕೆ ಕೇವಲ 40 ಜನರಿಗಷ್ಟೇ ಪಾಸ್ ವಿತರಿಸಲಾಗುತ್ತಿದ್ದು, ಪಾಸ್ ಹಸ್ತಾಂತರಕ್ಕೆ ಅವಕಾಶ ಇಲ್ಲ. ಅಲ್ಲದೇ ಮದುವೆ ಕಾರ್ಯಕ್ರಮವನ್ನು ಕಡ್ಡಾಯವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬೇಕು, ಮದುವೆ ಪಾಸ್ ಹೊರತಾಗಿ ಬೇರೆ ಯಾವ ಕೆಲಸ ಕಾರ್ಯಗಳಿಗೂ ನಾವು ಪಾಸ್ ವಿತರಿಸುವುದಿಲ್ಲ, ಮನೆ ದುರಸ್ತಿ ಮತ್ತಿತರ ಕೆಲಸ ಕಾರ್ಯಗಳಿಗೆ ಸಾಮಗ್ರಿಗಳನ್ನು ಖರೀದಿಸಲು ಅವಕಾಶ ನೀಡುವ ಮೊದಲು ಅದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ, ಕೈಗಾರಿಕೆ, ಉತ್ಪಾದನಾ ಘಟಕದಲ್ಲಿ ಕಾರ್ಮೀಕರಿಗೆ ವಸತಿ, ಊಟ ಸೌಲಭ್ಯ ಇದ್ದರೆ ಕೆಲಸ ಮುಂದುವರೆಸಬಹುದಾಗಿದೆ, ಯಾವುದೇ ಕಾರಣಕ್ಕೂ ಕಾರ್ಮಿಕರು ಕೆಲಸ ನಡೆಯುವ ಸ್ಥಳವನ್ನು ಬಿಟ್ಟು ಹೊರಗೆ ಬರಬಾರದು ಎಂದು ಆದೇಶಿಸಿದರು. ತಹಸೀಲ್ದಾರ ಎಸ್.ರವಿಚಂದ್ರ ಉಪಸ್ಥಿತರಿದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...