ಉಡುಪಿ: ಒಂದೇ ಕುಟುಂಬದ ನಾಲ್ವರ ಕಗ್ಗೋಲೆ ಪ್ರಕರಣ; ಆರೋಪಿ ಪ್ರವೀಣ್ ಮನೆಯಿಂದ ಕೃತ್ಯಕ್ಕೆ ಬಳಸಿದ ಚೂರಿ ವಶ

Source: Vb | By I.G. Bhatkali | Published on 20th November 2023, 12:35 AM | Coastal News | Don't Miss |

ಉಡುಪಿ: ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ(39) ಕೃತ್ಯ ಎಸಗಲು ಬಳಸಿದ್ದ ಚೂರಿಯನ್ನು ವಶಪಡಿಸಿಕೊಳ್ಳುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನ.15 ರಂದು ಬೆಳಗಾವಿಯ  ಕುಡುಚಿಯಲ್ಲಿ ಬಂಧಿತನಾದ ಪ್ರವೀಣ್‌ ಚೌಗುಲೆಯನ್ನು ಪೊಲೀಸರು ಬಂಧಿಸಿ, ನ.16ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದರು. ನಂತರ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕೃತ್ಯಕ್ಕೆ ಬಳಸಿದ ಆಯುಧಕ್ಕಾಗಿ ಶೋಧ ಕಾರ್ಯ ನಡೆಸಿದ್ದರು. ನಡೆಸಿದರು.

ವಿಚಾರಣೆಯಲ್ಲಿ ಸಮರ್ಪಕ ಮಾಹಿತಿ ನೀಡದೆ ಆರೋಪಿ ಪೊಲೀಸರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದನು.

ಮೊದಲು ಕೃತ್ಯ ಎಸಗಿ ಉಡುಪಿಯಿಂದ ಮಂಗಳೂರಿಗೆ ಹೋಗುವಾಗ ದಾರಿ ಮಧ್ಯೆ ಸೇತುವೆಯಿಂದ ನದಿಗೆ ಎಸೆದಿದ್ದೆ ಎಂದು ಹೇಳಿದ್ದ ಪ್ರವೀಣ್, ಬಳಿಕ ಅದನ್ನು ತನ್ನ ಮಂಗಳೂರಿನ ಮನೆಯ ಬಳಿ ವಿಲೇವಾರಿ ಮಾಡಿದ್ದೆ ಎಂದು ತಿಳಿಸಿದ್ದನು.

ಈ ಆಧಾರದಲ್ಲಿ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಆಯುಧಕ್ಕಾಗಿ ತೀವ್ರ ಶೋಧ ನಡೆಸಿದಾಗ, ಆತನ ಬಿಜೈ ಪ್ಲಾಟ್‌ನಲ್ಲಿ ಕೃತ್ಯಕ್ಕೆ ಬಳಸಿದ ಚೂರಿ ಪತ್ತೆಯಾಗಿತ್ತು. ಅದಲ್ಲದೆ ಕೃತ್ಯಕ್ಕೆ ಬಳಸಿದ ಮಾಸ್ಕ್, ರಕ್ತಸಿಕ್ಕ ಬಟ್ಟೆ, ಕಾರು ಸೇರಿದಂತೆ ಎಲ್ಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Read These Next