ಭಟ್ಕಳ: ಕೊರೊನಾ 2ನೇ ಅಲೆಯ ಟಫ್ ರೂಲ್ಸ್‍ಗೆ ಭಟ್ಕಳದಲ್ಲಿ ಬಸವಳಿದ ಆಟೋ ಚಾಲಕರ ಬದುಕು

Source: ವಸಂತ ದೇವಾಡಿಗ | By V. D. Bhatkal | Published on 29th April 2021, 12:13 PM | Coastal News | Special Report |

ಭಟ್ಕಳ: ಕಳೆದ ವರ್ಷದ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಕೊರೊನಾ 2ನೇ ಅಲೆ ಬಡ ಆಟೋ ರಿಕ್ಷಾ ಚಾಲಕರ ಬೆನ್ನು ಹತ್ತಿದೆ. ಹೊತ್ತು ಮೂಡುವ ಮುನ್ನವೇ ಮನೆಯಿಂದ ಹೊರಗೆ ಬಂದು ದಿನವಿಡೀ ಊರೆಲ್ಲ ಸುತ್ತಾಡಿ, ಹೊತ್ತು ಮುಳುಗಿದ ಮೇಲೆ ಗೂಡು ಸೇರಿ ಮನೆಮಂದಿಯೊಂದಿಗೆ ಕುಳಿತು ಎದುರಿಗೆ ಅನ್ನದ ತಟ್ಟೆಯನ್ನು ಇಟ್ಟುಕೊಂಡು, ಅದರಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಿದ್ದ ಆಟೋ ಚಾಲಕರು, ಟಫ್ ರೂಲ್ಸ್ ಹೆಸರಿನಲ್ಲಿ ಸರಕಾರ 14 ದಿನಗಳ ಕಾಲ ಆಟೋ ಸೇವೆಗೆ ನಿಬರ್ಂಧ ವಿಧಿಸುತ್ತಿದ್ದಂತೆಯೇ ಅಕ್ಷರಶಃ ಮಾತು ಕಳೆದುಕೊಂಡಿದ್ದಾರೆ. 

ತಾಲೂಕಿನಲ್ಲಿ ಭಟ್ಕಳ, ಶಿರಾಲಿ, ಮುರುಡೇಶ್ವರ ಸೇರಿದಂತೆ ಒಟ್ಟೂ 1300 ಪ್ರಯಾಣಿಕರ ಆಟೋಗಳಿವೆ. ತಾಲೂಕಿನಲ್ಲಿ ಓಡಾಡಿಕೊಳ್ಳುವ ಸರಿಸುಮಾರು 100ರಷ್ಟು ಸರಕು ಸಾಗಾಟದ ಗೂಡ್ಸ್ ರಿಕ್ಷಾಗಳೂ ಇವೆ. ಕೆಲವು ಆಟೋಗಳಿಗೆ ಮಾಲಕರೇ ಚಾಲಕರಾಗಿದ್ದರೆ, ಉಳಿದ ಆಟೋಗಳನ್ನು ಹೊಟ್ಟೆಪಾಡಿಗಾಗಿ ಬಾಡಿಗೆಗೆ ಪಡೆದುಕೊಂಡು ಚಲಾಯಿಸಲಾಗುತ್ತದೆ. 18-20 ವರ್ಷದ ವಯಸ್ಸಿನವರಿಂದ ಹಿಡಿದು 60 ದಾಟಿದ ವಯೋವೃದ್ಧರೂ ಆಟೋಗಳನ್ನು

ಕೊರೊನಾ ಟಫ್ ರೂಲ್ಸ್‍ನಿಂದಾಗಿ ಆಟೋ ಚಾಲಕರು ಮತ್ತೆ ಸಂಕಷ್ಟಕ್ಕೆ ಬಿದ್ದಿದ್ದೇವೆ. ಆಟೋ ಖರೀದಿ, ಇನ್ಸೂರೆನ್ಸ್, ಪಾಸಿಂಗ್‍ನಿಂದ ಹಿಡಿದು ಇಂಧನದವರೆಗೆ ನಾವು ಸಾವಿರಾರು ರುಪಾಯಿಯನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಪಾವತಿಸುತ್ತೇವೆ. ಆದರೆ ನಾವು ಕಷ್ಟದಲ್ಲಿರುವಾಗ ಸರಕಾರ ನಮ್ಮನ್ನು ಕೈ ಬಿಟ್ಟಿದೆ.
 
ಸತೀಶ ನಾಯ್ಕ, ಮುರುಡೇಶ್ವರ ಆಟೋ ಚಾಲಕರ ಸಂಘದ ಅಧ್ಯಕ್ಷರು

ಓಡಿಸಿಕೊಂಡು ಅನ್ನ ಕಾಣುತ್ತಿದ್ದಾರೆ. ಬಹಳಷ್ಟು ಮನೆಗಳಿಗೆ ಇದೇ ಆಟೋ ಚಾಲಕರೇ ಯಜಮಾನರಾಗಿದ್ದಾರೆ. ವಿವಿಧ ಜಾತಿ, ಧರ್ಮದ ಜನರು ಈ ಆಟೋ ಚಾಲಕ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಯಾವತ್ತೂ ಗಳಿಕೆಯಲ್ಲಿ ಅಂತಹ ಏರಿಕೆ ಕಂಡವರಲ್ಲ. ದಿನ ಕಳೆಯ ಬೇಕು ಎನ್ನುವುದಕ್ಕಾಗಿ ಆಟೋಗಳನ್ನು ಆಶ್ರಯಿಸಿಕೊಂಡು ಬಂದವರು. ಉದ್ಯೋಗ ಸಿಗದೇ ಇದ್ದಾಗ ಆಟೋವೊಂದಿರಲಿ ಎಂದು ಮನೆಯವರ ಮಾತಿಗೆ ಹೂಂಗುಟ್ಟು ಆಟೋದಲ್ಲಿ ಕುಳಿತವರು! ಪ್ರಯಾಣಿಕರ ಮುಂದೆ ಶಿಸ್ತನ್ನು ಪಾಲಿಸುವುದಕ್ಕಾಗಿ ಪ್ಯಾಂಟು, ಶರ್ಟು ಧರಿಸಿ ಬಂದು, ರಿಕ್ಷಾದ ಒಳಗೆ ಪುಟ್ಟ ಧ್ವನಿವರ್ಧಕ, ಮೊಬೈಲ್ ಫೋನ್ ಹಾಡನ್ನು ಕೇಳುತ್ತ ಎದೆಯೊಳಗಿನ ನೋವನ್ನು ಮರೆತವರು! ಇಂತಹ ಆಟೋ ಚಾಲಕರು ಯಾವತ್ತೂ ತಾವು ಕಷ್ಟದಲ್ಲಿದ್ದೇವೆ ಎಂದು ದೊಡ್ಡ ದನಿಯಲ್ಲಿ ಕೂಗಿಕೊಂಡವರಲ್ಲ.

ವರ್ಷದಿಂದ ವರ್ಷಕ್ಕೆ ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವಂತೆಯೇ ಬಹಳಷ್ಟು ಆಟೋ ಚಾಲಕರ ಪರಿಸ್ಥಿತಿ ಬಡ ಕಾರ್ಮಿಕರಿಗಿಂತ ಕಡೆಯಾಗಿದೆ ಎಂದರೆ ತಪ್ಪಾಗಲಾರದು. ಆದರೆ ಕೆಲಸ ಬಿಡುವ ಹಾಗಿಲ್ಲವಲ್ಲ! ಹೀಗೆ ತೆವಳುತ್ತ ದಿನಗಳನ್ನು ಸವೆಸುತ್ತಿರುವ ಆಟೋ ಚಾಲಕರನ್ನು ಮಹಾಮಾರಿ ಕೊರೊನಾ ಸತತ 2ನೇ ವರ್ಷ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. 

ಸರತಿ ಸಾಲಿನ ದುಡಿಮೆ :
ಆಟೋ ಚಾಲಕರ ದುಡಿಮೆ ದಿನಕ್ಕೆ ಇಷ್ಟೇ ಎನ್ನುವಂತಿಲ್ಲ. ಸಿಕ್ಕಷ್ಟು ಬಾಡಿಗೆ, ಅದರಲ್ಲಿಯೇ ಸಂತೃಪ್ತಿ! ತಾಲೂಕಿನಲ್ಲಿ ಪ್ರಮುಖವಾಗಿ ಬಸ್ ನಿಲ್ದಾಣ, ಸರ್ಕಲ್, ಹಳೆಬಸ್ ನಿಲ್ದಾಣ, ಮಾರಿಕಟ್ಟೆ, ಸುಲ್ತಾನ್ ಸ್ಟ್ರೀಟ್, ಸೋಡಿಗದ್ದೆ ಕ್ರಾಸ್, ಶಿರಾಲಿ ಪೇಟೆ, ಮುರುಡೇಶ್ವರ ಓಲಗಮಂಟಪ ಅಕ್ಕಪಕ್ಕದಲ್ಲಿ ಸಾಲಿನಲ್ಲಿ ನಿಂತಿರುತ್ತಿದ್ದ ಆಟೋ ರಿಕ್ಷಾಗಳು ತಮ್ಮ ಸರತಿಗಾಗಿ ಕಾದು ಸುಸ್ತಾದ ದಿನಗಳು ಅದೆಷ್ಟು ಇವೆಯೋ! ಹಬ್ಬ, ಮದುವೆ, ಮುಂಜಿ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಒಂದಷ್ಟು ಉತ್ಸಾಹದಿಂದಲೇ ಓಡಾಡುವ ಆಟೋ ರಿಕ್ಷಾಗಳು ವರ್ಷದ ದುಡಿಮೆಯನ್ನು ಹೊಂದಿಸಿಕೊಳ್ಳಲು ಹೆಣಗಾಡುತ್ತವೆ. ಆದರೆ ಮದುವೆ ಸೀಸನ್ ಕೊರೊನಾ 2ನೇ ಅಲೆಯಲ್ಲಿ ಮುಳುಗಿ ಹೋಗಿದೆ. ರಮಜಾನ್ ಪೇಟೆಯನ್ನು ಕಫ್ರ್ಯೂ ಸಂಪೂರ್ಣವಾಗಿ ನುಂಗಿ ಹಾಕಿದೆ. ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿ ಹೋಗಿವೆ. ಅಲ್ಲದೇ  ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಪ್ರಯಾಣಿಕರನ್ನಾಗಿಸಿಕೊಂಡು ದುಡಿಮೆಯನ್ನು ಹುಡುಕಿಕೊಂಡಿದ್ದ ಕೆಲವು ಆಟೋ ರಿಕ್ಷಾಗಳಿಗೆ, ಇದೀಗ ಶಾಲಾ ಕಾಲೇಜು ಆರಂಭವೇ ಅನಿಶ್ಚಿತತೆಗೆ ಸಿಲುಕಿರುವುದರಿಂದ ಆಟೋ ಭವಿಷ್ಯವೂ ಅಸ್ಪಷ್ಟವಾಗಿದೆ.

ಈಗ ಏನಿದ್ದರೂ ಅಲ್ಲೊಂದು ಇಲ್ಲೊಂದು ಆಟೋ ರಿಕ್ಷಾಗಳು ಊರ ನಡುವಿನ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು ಇರುವ ಅಂಬುಲೆನ್ಸ್‍ಗಳ ಕೆಲಸಕ್ಕಷ್ಟೇ ಸೀಮಿತವಾಗಿವೆ. ದಿನದಿಂದ ದಿನಕ್ಕೆ ಆಟೋ ಚಾಲಕರ ಜೀವನ ನಿರ್ವಹಣೆ ತೀರ ಕಷ್ಟ ಎಂಬಂತಾಗಿದೆ. ಅತ್ತ ಮಧ್ಯಮ ವರ್ಗವೂ ಅಲ್ಲದೇ ಇತ್ತ ಬಡವರ ಪಟ್ಟಿಗೂ ಸೇರದಂತೆ ಇರುವ ಆಟೋ ಚಾಲಕರು ಅವರಿವರ ಮುಂದೆ ಕೈಯೊಡ್ಡಲೂ ಮುಜಗರ ಪಟ್ಟುಕೊಳ್ಳುವವರು. ಕಳೆದ ವರ್ಷ ಸರಕಾರ ಘೋಷಿಸಿದ್ದ ರು.5000 ತಾಲೂಕಿನ 50% ಆಟೋ ಚಾಲಕರನ್ನಷ್ಟೇ ತಲುಪಿದೆ! ಉಳಿದವರು ಇನ್ನೂ ಅನರ್ಹರಾಗಿಯೇ ಉಳಿದುಕೊಂಡಿದ್ದಾರೆ. ಮತ್ತೆ ಕೊರೊನಾ ಬಂದಿದೆ. ಕೆಲಸ ಕಳೆದುಕೊಂಡು ಮನೆಯ ಮುಂದೆಯೋ, ಪರಿಚಿತರ ಮನೆಯ ಬಾಗಿಲಿನಲ್ಲೋ ಅಥವಾ ರಸ್ತೆಯ ಅಂಚಿನಲ್ಲೆಲ್ಲೋ ಕೆಲಸ ಕಳೆದುಕೊಂಡು ನಿಂತಿರುವ ಆಟೋಗಳ ಮೇಲೆ ಕರಿಮೋಡದಂತೆ ಧೂಳು ಆವರಿಸಿಕೊಂಡಿದೆ. ಕನಿಷ್ಠ ಅದನ್ನು ಒರೆಸಿಕೊಳ್ಳಲಲೂ ಆಗದಂತೆ ಆಟೋ ಚಾಲಕರ ಕೈ ನಡುಕುತ್ತಿದೆ! 

                 

Read These Next

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ 66 ಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ...

ಕಡಲತಡಿಯಲ್ಲಿ ಕಣ್ಮನ ಸೆಳೆಯುತ್ತಿರುವ ಸೀ ವಾಕ್ ಶೃಂಗಾರ; ಭಟ್ಕಳದಲ್ಲಿ ಮಂತ್ರಿಗಳೇ, ಓಡುವುದು ಬೇಡ ನಡೆದಾಡಿ ಬನ್ನಿ

ಕರ್ನಾಟಕಕ್ಕೆ ಕರಾವಳಿ ತೀರ ಎನ್ನುವುದು ಶೃಂಗಾರ ಕಾವ್ಯದಂತಿದೆ. ಕಡಲ ತಡಿಯುದ್ಧಕ್ಕೂ ಸದಾ ಬಣ್ಣ ಬಣ್ಣದ ಕನಸುಗಳು ಚಿಗುರೊಡೆದು ...

ಭಟ್ಕಳ ವಿಧಾನಸಭಾ ಕ್ಷೇತ್ರ; ಜಾತಿ, ಪಕ್ಷಸಿದ್ಧಾಂತ ಬದಿಗಿಟ್ಟು “ಅಭ್ಯರ್ಥಿ” ಗಳ ಬಗ್ಗೆ ಆಸಕ್ತಿ ತೋರುತ್ತಿರುವ ಮತದಾರ

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ೨೦೧೮ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆ ವಿಭಿನ್ನವಾಗಿ ಗೋಚರಿಸುತ್ತಿದೆ. ...

ಆನ್‌ಲೈನ್ ಹಣ ವಂಚನೆ, ಅಶ್ಲೀಲ ಜಾಲತಾಣಗಳ ವಿರುದ್ಧ 3 ವರ್ಷಗಳಲ್ಲಿ 32,746 ಪ್ರಕರಣ ದಾಖಲು

ಹಣ, ಅಶ್ಲೀಲ ಮತ್ತಿತರ ವಿಷಯಗಳ ಜಾಲತಾಣಗಳ ಕುರಿತಂತೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 32,746 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇದೇ ...