ಶೂನ್ಯ ಬಜೆಟ್ ಕೃಷಿಯೆಂಬ ಮರೀಚಿಕೆ

Source: sonews | By Staff Correspondent | Published on 28th July 2019, 8:26 PM | Special Report |

ಶೂನ್ಯ ಬಜೆಟ್ ಕೃಷಿಯೆಂಬುದು ಸರ್ಕಾರವು ತನ್ನ ದುರಾಡಳಿತವನ್ನು ಮರೆಮಾಚಲು ಬಳಸುತ್ತಿರುವ ತರ್ಕಶೂನ್ಯ ಭಾವಾವೇಶದ ಕವಚವಾಗುತ್ತಿದೆಯೇ?

ಪ್ರಖ್ಯಾತ ಮರಾಠಿ ಕೃಷಿಕರಾದ ಸುಭಾಷ್ ಪಾಳೆಕಾರ್ ಅವರಿಗೆ ೨೦೧೬ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶೂನ್ಯ ಬಜೆಟ್ ಕೃಷಿ ಅಥವಾ ಸಹಜ ಕೃಷಿ ಪರಿಕಲ್ಪನೆಯನ್ನು ದೇಶಾದ್ಯಂತ ಸಾರ್ವಜನಿಕರ ಅವಗಾಹನೆಗೆ ತರಲಾಯಿತು. ದೇಶಾದ್ಯಂತ ಕೃಷಿ ವ್ಯವಸ್ಥೆಯು ಮಾರುಕಟ್ಟೆ ಶಕ್ತಿಗಳ ಜುಲುಮೆಯಲ್ಲಿ ವಾಣಿಜ್ಯೀರಣಗೊಂಡ ಒಳಸುರಿಗಳಿಂದಾಗಿ ಅತಂತ್ರಗೊಂಡಿರುವಾಗ ಬಹಳಷ್ಟು ಜನರು ಸಹಜ ಬೇಸಾಯ ಪದ್ಧತಿಯು ಒಂದು ದೊಡ್ಡ ಬಿಡುಗಡೆಯೆಂದೇ ಭಾವಿಸಿದರು. ಮೊದಲನೆಯದಾಗಿ ಮಾರುಕಟ್ಟೆಯಿಂದ ಬೀಜಗಳನ್ನು, ಗೊಬ್ಬವನ್ನು ಮತ್ತು  ಕ್ರಿಮಿನಾಶಕಗಳನ್ನು ಖರೀದಿ ಮಾಡುವ ಅಗತ್ಯವೇ ಇಲ್ಲವಾಗುವುದರಿಂದ ಉತ್ಪಾದನಾ ವೆಚ್ಚವನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಬಹುದು. ಎರಡನೆಯದಾಗಿ, ಮೇಲಿನ ಕಾರಣದ ಪರಿಣಾಮವಾಗಿ ರೈತಾಪಿಯು ಸಾಲದ ಬಲೆಯಲ್ಲಿ ಸಿಲುಕುವುದನ್ನು ತಡೆಗಟ್ಟಬಹುದು. ಬಿಜೆಪಿಯು ತನ್ನ ಬಜೆಟ್ಟಿನ ಮೂಲಕ ಹಾಗೂ ೨೦೧೮-೧೯ರ ಆರ್ಥಿಕ ಸಮೀಕ್ಷೆಯ ಮೂಲಕ ಶೂನ್ಯ ಬಜೆಟ್ ಕೃಷಿಯನ್ನು ಉತ್ತೇಜಿಸುತ್ತಿರುವುದಕ್ಕೆ ಮೇಲೆ ಹೇಳಲಾದ ವಿಷಯಗಳು ಕಾರಣವಾಗಿದ್ದರೆ ಸರ್ಕಾರದ ಉದ್ದೇಶಗಳನ್ನು ಅನುಮಾನಿಸಬೇಕಿರಲಿಲ್ಲ. ಆದರೆ ಕೆಲವು ಕಟುವಾದ ವಾಸ್ತವ ಸತ್ಯಗಳನ್ನು ಕಡೆಗಣಿಸಲಾಗುತ್ತದೆಯೇ?

ಮಾಧ್ಯಮ ವರದಿಗಳು ಹೇಳುವಂತೆ ಪಾಳೇಕಾರ್ ಅವರಿಗೆ ೨೦೧೬ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತಾದರೂ ಅವರ ಪ್ರಯೋಗವು ಮಾತ್ರ ಒಂದು ದಶಕದಷ್ಟು ಹಳೆಯದು. ಆದರೂ ಶೂನ್ಯ ಕೃಷಿ ಪದ್ಧತಿಯ ಬಗ್ಗೆ ಅವರೇ ಬರೆದ ಪುಸ್ತಕಗಳನ್ನೂ ಹಾಗೂ ಅವರಿಗೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪತ್ರಿಕೆಗಳು ಪ್ರಕಟಿಸಿದ ಕೆಲವು ಅಧ್ಯಯನ ವರದಿಗಳನ್ನು ಹೊರತುಪಡಿಸಿದರೆ ಅವರ ಕೃಷಿ ಪದ್ಧತಿಯ ಆರ್ಥಿಕ ಅಂದಾಜುಗಳ  ಬಗ್ಗೆ ಯಾವುದೇ ಆಳವಾದ ಸ್ವತಂತ್ರ ಅಧ್ಯಯನಗಳು ಸಾರ್ವಜನಿಕ ವಲಯದಲಿ ಲಭ್ಯವಿಲ್ಲ. ಜಗತ್ತಿನ ೮೧ ದೇಶಗಳಲ್ಲಿರುವ ೧೮೨ ರೈತ ಸಂಘಟನೆಗಳ ಒಕ್ಕೂಟವಾದ  ಲಾ ವಯಾ ಕೆಂಪಸೀನಾ ಎಂಬ ಸಂಘಟನೆಯು ನಡೆಸಿದ ಒಂದು ಕ್ಷೇತ್ರ ಅಧ್ಯಯನದ ವರದಿಯ ಪ್ರಕಾರ ಕರ್ನಾಟಕದಲ್ಲಿ ಪಾಳೆಕಾರ್ ಕೃಷಿಯ  ಜೊತೆಗೆ ಕೈಗೂಡಿಸುತ್ತಿರುವ ಬಹುಪಾಲು ರೈತರು ಮಧ್ಯಮ ರೈತರಾಗಿದ್ದಾರೆ. ಹೀಗಾಗಿ ಕೃಷಿ ಪದ್ಧತಿಯ ಎಷ್ಟರ ಮಟ್ಟಿಗೆ ಎಲ್ಲಾ ರೈತಾಪಿಯನ್ನು ಒಳಗೊಳ್ಳಬಲ್ಲದು ಮತ್ತು ಅದರ ವ್ಯಾಪ್ತಿಯ ಮಿತಿ, ಪ್ರಮಾಣ ಮತ್ತು ಸುಸ್ಥಿರತೆಗಳ ವಿಷಯಗಳು ಇನ್ನೂ ಪ್ರಶ್ನಾರ್ಹವಾಗಿಯೇ ಉಳಿದಿದೆ. ಅದೇ ವರದಿಯು ತಿಳಿಸುವಂತೆ ಉತ್ಪನ್ನದ ಮಾರುಕಟ್ಟೆಯೇ  ಶೂನ್ಯ ಕೃಷಿ ಪದ್ಧತಿಯ ಪ್ರಧಾನ ಮಿತಿಯಾಗಿದೆ. ಇತ್ತೀಚಿಗೆ ಪದ್ಧತಿಯು ಲಾಭದಾಯಕವಾಗಿಲ್ಲ ಎಂಬ ಕಾರಣದಿಂದ ಹೆಚ್ಚೆಚ್ಚು ಒಳಸುರಿಯನ್ನು ಅವಲಂಬಿಸುವ ಹಳೆಯ ಕೃಷಿ ಪದ್ಧತಿಗೆ ಮರಳಿರುವ ಹಲವಾರು ಪ್ರಕರಣಗಳನ್ನು ಪತ್ರಿಕೆಗಳು ವರದಿ ಮಾಡಿವೆ.

ಸಣ್ಣರೈತಾಪಿಯ ಮಟ್ಟಿಗೆ ಶೂನ್ಯ ಕೃಷಿಯೆಂಬುದು ಯಾವುದೇ ಪರಿಹಾರವಲ್ಲವೆಂಬುದು ಸ್ಪಷ್ಟವಾಗುತ್ತಿರುವಾಗ ೨೦೨೦ರೊಳಗೆ ರೈತಾಪಿಯ ಆದಾಯವನ್ನು ದ್ವಿಗುಣಗೊಳಿಸಬೇಕೆಂಬ ತನ್ನ ಮಹತ್ವಾಕಾಂಕ್ಷಿ ಯೋಜನೆಗಾಗಿ ಕೇಂದ್ರ ಸರ್ಕಾರವು ಶೂನ್ಯ ಕೃಷಿಯನ್ನು ಒಂದು ದೊಡ್ಡ ರಣತಂತ್ರವೆಂಬಂತೆ ಏಕೆ ಪ್ರಚಾರ ಮಾಡುತ್ತಿದೆ? ವಯಾ ಕೆಂಪಸೀನ ಅಧ್ಯಯನವು ತಿಳಿಸುವಂತೆ ಇದು ಕೇವಲ ಮಧ್ಯಮ ವರ್ಗದ ರೈತಾಪಿಗೆ ಪ್ರಯೋಜನಕಾರಿಯಾಗಿದ್ದಲ್ಲಿ ಶೂನ್ಯಕೃಷಿಯನ್ನು ಸರ್ಕಾರವು ಒಂದು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡುತ್ತಿದೆ ಎಂದು ಸಂದೇಹ ಪಡುವುದರಲ್ಲಿ ಯಾವುದೇ ತಪ್ಪಿಲ್ಲ. ಐತಿಹಾಸಿಕವಾಗಿ ನೋಡುವುದಾದರೆ ದೇಶದಲ್ಲಿ, ಅದರಲ್ಲೂ ಹಿಂದಿ ಸೀಮೆಯಲ್ಲಿ, ಮಧ್ಯಮ ರೈತಾಪಿಯು ಒಂದು ಒತ್ತಡ ಗುಂಪಾಗಿ  ರಾಜಕೀಯ ಪಕ್ಷಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಅದೇ ಸಮಯದಲ್ಲಿ ರೈತಾಪಿಗಳ ಒತ್ತಡ ರಾಜಕಾರಣದಲ್ಲಿ ಸಣ್ಣ, ಅತಿಸಣ್ಣ ಮತ್ತು ಕೃಷಿ ಕಾರ್ಮಿಕರನ್ನು ಒಳಗೊಳ್ಳದಿರುವುದು ದೇಶದಲ್ಲಿ ರೈತ ಹೋರಾಟಗಳು ಸಮರಶೀಲ ಸ್ವರೂಪವನ್ನು ತೆಗೆದುಕೊಳ್ಳದಂತೆ ತಡೆಗಟ್ಟಿದೆ. ಇಂಥ ಹಿನ್ನೆಲೆಯಲ್ಲಿ ಸರ್ಕಾರದ ನೀತಿಗಳು ರೈತ ಸಮಾಜವನ್ನು ಶಮನ ಮಾಡುವ ಧೋರಣೆಯನ್ನು ಹೊಂದಿವೆಯೇ ವಿನಾ ಪರಿವರ್ತನಾಕಾರಿ ಧೋರಣೆಯನ್ನಲ್ಲ.

ಸರ್ಕಾರವು ಶೂನ್ಯ ಕೃಷಿ ಪದ್ಧತಿಯನ್ನು ಅಧಿಕೃತವಾಗಿ ಪರಿಗಣಿಸಿದ್ದು ಮತ್ತು ಅದರ ವಕ್ತಾರರಾದ ಪಾಳೆಕಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದ್ದು ಯಾವ ಸಂದರ್ಭದಲ್ಲಿ ಎಂಬುದನ್ನು ಒಮ್ಮೆ ನೆನಪಿಗೆ ತಂದುಕೊಳ್ಳಿ. ೨೦೧೫ರ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರವು ೨೦೧೩ರ  ಭೂಸ್ವಾಧೀನದಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆ, ಪುನರ್ವಸತಿ ಮತ್ತು ಪರಿಹಾರ ಕಾಯಿದೆಯಲ್ಲಿದ್ದ ಭೂ ಸ್ವಾಧೀನ ಮಾಡುವಾಗ ಕಡ್ಡಾಯವಾಗಿ ರೈತರ ಸಮ್ಮತಿ ಇರಲೇ ಬೇಕೆಂಬ ಕಲಮನ್ನು ಸುಗ್ರೀವಾಜ್ನೆಯ ಮೂಲಕ ತೆಗೆದುಹಾಕಲು ಹೊರಟಿತ್ತು. ೨೦೧೬ರಲ್ಲಿ ಪಾಳೆಕಾರ್ ಅವರಿಗೆ ಪ್ರಶಸ್ತಿಯನ್ನೂ ಮತ್ತು ಶೂನ್ಯಕೃಷಿಯ ಪ್ರಚಾರವನ್ನೂ ಪ್ರಾರಂಭಿಸಿತು. ಆದರೆ ಭೂ ಒಡೆತನದ ಪ್ರಶ್ನೆಯೇ ನೆನೆಗುದಿಗೆ ಬೀಳುವಾಗ ತನ್ನ ನೆಲದಲ್ಲಿ ಯಾವ ಬಗೆಯ ಕೃಷಿ ಪದ್ಧತಿಯನ್ನು ಅನುಸರಿಸಬೇಕೆಂಬ ನೀತಿಗಳು ರೈತನ ಬದುಕಿನಲ್ಲಿ ಯಾವ ಬದಲಾವಣೆಯನ್ನು ತಾನೇ ತಂದೀತು? ಮೇಲಾಗಿ ಶೂನ್ಯ ಕೃಷಿಯೆಂದರೆ ರೈತಾಪಿಯ ಉತ್ಪಾದನಾ ವೆಚ್ಚ ಶೂನ್ಯವಾಗುತ್ತದೆಂದಲ್ಲ. ಬದಲಿಗೆ ರೈತಾಪಿಗೆ ನಡುವಿನ ಅವಧಿಯ ಬೆಳೆಗಳ ಮೂಲಕ ಬರಬಹುದಾದ ಆದಾಯವು ಅವರ ಉತ್ಪಾದನಾ ವೆಚ್ಚವನ್ನು ಸರಿದೂಗಿಸುತ್ತದೆನ್ನುವುದೇ ಅದರ ನಿಜವಾದ ಅರ್ಥ. ಕನಿಷ್ಟ ಬೆಂಬಲ ಬೆಲೆಯಂಥ ಕ್ರಮಗಳ ಮೂಲಕ ಏಕಬೆಳೆ ಪದ್ಧತಿಯನ್ನು ಉತ್ತೇಜಿಸುವ ಮೂಲಭೂತ ವ್ಯವಸ್ಥೆಯಲ್ಲಿ ಯಾವ ಬದಲಾವಣೆಗಳನ್ನು ತಂದುಕೊಳ್ಳದೆ ಕೇವಲ ಒಂದು ನಡುವಿನ ಅವಧಿ ಬೆಳೆಯನ್ನು ಬೆಳೆಯಲು ಬೇಕಾದ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಧೋರಣೆಯು ಸ್ವಘೋಷಿತ ರೈತ ಸ್ನೇಹೀ ಸರ್ಕಾರದ ರಾಜಕೀಯ ಇಚ್ಚಾಶಕ್ತಿಯ ಬಗ್ಗೆ ಸಾಕಷ್ಟು ಹೇಳುತ್ತದೆ. ಶೂನ್ಯ ಕೃಷಿಯ ಮೂಲಕ ನಮ್ಮ ಮೂಲ ಪರಂಪರೆಗೆ ಮರಳೋಣ ಎಂಬ ಸರ್ಕಾರದ ಘೋಷಣೆಗಳು ಜನಸಾಮಾನ್ಯರಲ್ಲಿ ರಾಷ್ಟ್ರೀಯವಾದಿ ಭಾವೋನ್ಮಾದಗಳನ್ನು ಉತ್ತೇಜಿಸುತ್ತದೆ . ಮತ್ತು ಮೂಲಕ ದೇಶದಲ್ಲಿ ಒಂದು ಆರೋಗ್ಯಕರ ಕೃಷಿ ವ್ಯವಸ್ಥೆಯನ್ನು ಸಮಗ್ರವಾಗಿ ಪುನರುಥ್ಹಾನ ಮಾಡದ ಸರ್ಕಾರದ ನೀತಿಗಳ ಬಗ್ಗೆ ಗಟ್ಟಿಯಾದ ಪ್ರಶ್ನೆಗಳನ್ನು ಕೇಳದಂತೆ ಜನರ ಗಮನವನ್ನು ಪಕ್ಕಕ್ಕೆ ಸರಿಸುತ್ತದೆ. ಸಮಸ್ಯೆಯನ್ನು ಸಮೀಪದಿಂದ ಅಧ್ಯಯನ ಮಾಡುವ ಯಾರಿಗೇ ಆದರೂ ಭಾವೋನ್ಮಾದದ ಘೋಷಣೆಯ ಹಿಂದೆ ಸರ್ಕಾರವು ಕೃಷಿ ವಿಷಯದಲ್ಲಿ ಮಾಡುತ್ತಿರುವ ದುರಾಡಳಿತದ ಹಾಗೂ ತಪ್ಪು ನೀತಿಗಳ ಸ್ಪೋಟಕ ಉದಾಹರಣೆಗಳೇ ಪತ್ತೆಯಾಗುತ್ತವೆ. ಉದಾಹರಣೆಗೆ ಪರಂಪರಾಗತ ಕೃಷಿಗೆ ಮರಳೋಣ ಎಂಬ ಘೊಷಣೆಯ ಸಾರಾಂಶವು ಕಡಿಮೆ ವೆಚ್ಚದ ಕೃಷಿ ಪದ್ಧತಿಯಾಗಿದ್ದಲ್ಲಿ, ಶೂನ್ಯ ಕೃಷಿ ಯೋಜನೆಯ ಮುಂದಾಳಾಗಿರುವ  ಆಂಧ್ರಪ್ರದೇಶವು ತನ್ನ ಹವಾಮಾನ ಸಂವೇದಿ ಶೂನ್ಯ ಬಂಡವಾಳ ಸಹಜ ಕೃಷಿ ಯೋಜನೆಗೆ ೧೭,೦೦೦ ಕೋಟಿ ರೂ.ಗಳಷ್ಟು ದೊಡ್ಡ ಮೊತ್ತವನ್ನು ಏಕೆ ಸಂಗ್ರಹಿಸಿಟ್ಟುಕೊಂಡಿದೆ? ಅಂಥಾ ದೊಡ್ಡ ಪ್ರಮಾಣದ ಹೂಡಿಕೆಯು ಬಂದಿರುವುದೇ ಜಾಗತಿಕ ಹಣಕಾಸು ಸಂಸ್ಥೆಗಳ ಮೂಲಕ ಮತ್ತು ಕ್ಲೈಮೇಟ್ ಬಾಂಡುಗಳ ಮೂಲಕ. ಇದು ಘೋಷಿತ ನೀತಿಯಲ್ಲೂ ವಾಸ್ತವಿಕ ಆಚರಣೆಯಲ್ಲೂ ಇರುವ ವ್ಯತ್ಯಾಸದತ್ತ ಗಮನ ಹರಿಸಲೇಬೇಕಾದ ಅನಿವಾರ್ಯತೆಯನ್ನು ಉಂಟುಮಾಡುತ್ತದೆ.

ಇನ್ನೂ ವಿಚಲಿತಗೊಳಿಸುವ ಸಂಗತಿಯೆಂದರೆ, ಶೂನ್ಯ ಬಂಡವಾಳ ಕೃಷಿ ಯೋಜನೆಯು ಸಾರಾಂಶದಲ್ಲಿ ನವ ಉದಾರವಾದಿ ಪ್ರಭುತ್ವವು ತನ್ನ ಕಾರ್ಪೊರೇಟ್ ಧಣಿಗಳ ಲಾಭವನ್ನು ಹೆಚ್ಚಿಸುವ ಮತ್ತು  ದೇಶದ ಪ್ರಾಧಾನ್ಯತಾ ಕ್ಷೇತ್ರವಾದ ಕೃಷಿಯಲ್ಲಿ ಸರ್ಕಾರದ ವೆಚ್ಚವನ್ನು ಕಡಿತಗೊಳಿಸುವ ಎರಡೂ ಉದ್ದೇಶಗಳನ್ನೂ ಸಫಲಗೊಳಿಸುವ ಸಾಧನವೂ ಆಗಿರಬಹುದೇ  ಎಂಬ ಸಕಾರಣ ಸಂದೇಹವನ್ನೂ ಹುಟ್ಟುಹಾಕುತ್ತದೆ.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...