ಭಟ್ಕಳದಲ್ಲಿ ಪ್ರತ್ಯೇಕ ಕೋವಿಡ್ ಕೇಂದ್ರ ತೆರೆಯಲು ಮಜ್ಲಿಸೇ ಇಸ್ಲಾ ವ ತಂಜೀಮ್ ನಿರ್ಧಾರ

Source: S O News service | By I.G. Bhatkali | Published on 17th May 2021, 5:59 PM | Coastal News |

ಭಟ್ಕಳ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆಯೇ, ಮುಂಜಾಗೃತಾ ಕ್ರಮವಾಗಿ ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಅತ್ಯಾಧುನಿಕ ವ್ಯವಸ್ಥೆಯುಳ್ಳ ಪ್ರತ್ಯೇಕ ಕೋವಿಡ್ ಸೋಂಕಿತರ ಚಿಕಿತ್ಸಾ ಕೇಂದ್ರ ತೆರೆಯಲು ತೀರ್ಮಾನಿಸಿದೆ.

ತಾಲೂಕಿನ ಹೆಚ್ಚಿನ ಜನರು ಆರೋಗ್ಯದ ವಿಷಯದಲ್ಲಿ ಪಕ್ಕದ ಕುಂದಾಪುರ, ಉಡುಪಿ ಹಾಗೂ ಮಂಗಳೂರು ಆಸ್ಪತ್ರೆಗಳನ್ನು ಅವಲಂಬಿಸಿಕೊಂಡಿದ್ದು, ಇತ್ತೀಚಿನ ಬೆಳವಣಿಗೆಯಲ್ಲಿ ಭಟ್ಕಳದ ಜನರಿಗೆ ಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ತಂಝೀಮ್ ಈ ನಿರ್ಣಯವನ್ನು ತೆಗೆದುಕೊಂಡಿದೆ. ಈಗಾಗಲೇ ತಂಜೀಮ್ ವತಿಯಿಂದ ಹೆಬಳೆಯಲ್ಲಿರುವ ವಿಮೆನ್ ಸೆಂಟರ್ ಕಟ್ಟಡವನ್ನು ಗೊತ್ತುಪಡಿಸಲಾಗಿದ್ದು, ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯ ಇರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

50 ಬೆಡ್‍ಗಳ ಈ ಕೋವಿಡ್ ಸೆಂಟರ್‍ನಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಭಾಗವನ್ನು ತೆರೆಯಲಾಗುತ್ತದೆ. ನೂತನ ಕೋವಿಡ್ ಸೆಂಟರ್‍ನಲ್ಲಿ ಓರ್ವ ವಿಶೇಷ ವೈದ್ಯರು ಸೇರಿದಂತೆ ಒಟ್ಟೂ ಮೂವರು ವೈದ್ಯರನ್ನು ಸೇವೆಗಾಗಿ ಗೊತ್ತುಪಡಿಸಲಾಗಿದ್ದು, ಹೆಚ್ಚಿನ ಆಮ್ಲಜನಕ ಸಿಲೆಂಡರ್‍ಗಳು ಒಂದೆರಡು ದಿನಗಳ ಒಳಗಾಗಿ ಹೊಸ ಕೋವಿಡ್ ಸೆಂಟರ್‍ಗೆ ಬಂದಿಳಿಯಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಅತ್ಯಾಧುನಿಕ ವ್ಯವಸ್ಥೆಯುಳ್ಳ ಈ ಕೇಂದ್ರದಲ್ಲಿ ಸಾಮಾನ್ಯ ಜನರಿಗೆ ಹೊರೆಯಾಗದಂತೆ ಚಿಕಿತ್ಸೆಗಾಗಿ ಕನಿಷ್ಠ ಬೆಲೆಯನ್ನು ನಿಗದಿಪಡಿಸಲಾಗುತ್ತದೆ ಎಂದು ತಂಜೀಮ್ ಮೂಲಗಳು ತಿಳಿಸಿವೆ. ಇದರಿಂದಾಗಿ ಭಟ್ಕಳ ಸರಕಾರಿ ಆಸ್ಪತ್ರೆಯ ಮೇಲೆ ಇರುವ ಒತ್ತಡ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ. ದಿನದಿಂದ ದಿನಕ್ಕೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. 

Read These Next