ಭಟ್ಕಳದಲ್ಲಿ 4 ವರ್ಷದ ಬಾಲಕ ಅನುಮಾಸ್ಪದ ಸಾವು; ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ; ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು

Source: S O News | Published on 30th December 2023, 12:48 PM | Coastal News | Don't Miss |

ಭಟ್ಕಳ: ಇಲ್ಲಿನ ಬಂದರ್ ರೋಡ್ 2ನೇ ಕ್ರಾಸ್ ವ್ಯಾಪ್ತಿಯಲ್ಲಿ ತನ್ನ ತಾಯಿಯೊಂದಿಗೆ ವಾಸವಾಗಿದ್ದ 4 ವರ್ಷದ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಭಟ್ಕಳ ಶಹರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೃತ ಬಾಲಕನನ್ನು ಆರ್ಹಾನ್ (4) ಎಂದು ಗುರುತಿಸಲಾಗಿದೆ. ಬುಧವಾರ ಬಾಲಕ ಅರ್ಹಾನ್ ಇಲ್ಲಿನ ಬಂದರ್ ರೋಡ್ 2ನೇ ಕ್ರಾಸ್ ಸಮೀಪ  

ತೀವೃ ಅಸ್ವಸ್ಥಗೊಂಡು ಬಿದ್ದಿದ್ದು, ಆತನನ್ನು ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಇಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತ ಪಟ್ಟಿದ್ದಾನೆ ಎಂಬ ಮಾಹಿತಿ ಲಭಿಸಿದೆ. 

ಅನುಮಾನವೇನು?: ಇಲ್ಲಿನ ಬಂದರ್ ರೋಡ್ 2ನೇ ಕ್ರಾಸ್ ಸಮೀಪ ರಸ್ತೆಯಂಚಿನಲ್ಲಿ ನಿಂತ ಬಾಲಕನಿಗೆ ವಾಹನ ಬಡಿದು ಬಾಲಕ ಗಂಭಿರವಾಗಿ ಗಾಯಗೊಂಡಿದ್ದಾನೆ ಎಂದು ಮೃತ ಬಾಲಕನ ತಾಯಿ ಹೇಳುತ್ತಿದ್ದರೂ, ಬಾಲಕನ ದೇಹದ ವಿವಿದೆಡೆ ಕಂಡು ಬಂದಿರುವ ಗಾಯದ ಗುರುತು ಅನುಮಾನವನ್ನು ಹುಟ್ಟು ಹಾಕಿದೆ. ಬಾಲಕನ ಮೈ ಮೇಲೆ ಕೆಲವು ಹಳೆಯ ಗಾಯದ ಗುರುತುಗಳೂ ಪತ್ತೆಯಾಗಿವೆ. ಅಲ್ಲದೇ ವಾಹನ ಬಡಿದಿದ್ದರೆ 
ಯಾವ ವಾಹನ, ಆ ಸಮಯದಲ್ಲಿ ಬಾಲಕ ತಾಯಿ ಎಲ್ಲಿ ಇದ್ದಳು ಎನ್ನುವ ಬಗ್ಗೆ ಇಲ್ಲಿಯವರೆಗೂ ನಿಖರ ಮಾಹಿತಿ ಸಿಕ್ಕಿಲ್ಲ.

ಅಲ್ಲದೇ ಆಕೆ ಕಳೆದ ಕೆಲವು ತಿಂಗಳುಗಳಿಂದ ಗಂಡನಿಂದ ದೂರ ಇದ್ದಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು, ಆಕೆಯ ಇನ್ನೋರ್ವ ಎರಡೂವರೆ ವರ್ಷದ ಮಗನ ಮುಖ, ಕಾಲಿನ ಮೇಲೆಯೂ ಶಂಕ್ಯಾಸ್ಪದ ರೀತಿಯಲ್ಲಿ ಗಾಯಗಳಾಗಿರುವುದು ಆಕೆಯ ಮೇಲೆ ಅನುಮಾನ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ಈ ನಡುವೆ ಮೃತ ಬಾಲಕ ಆತನ ವಯಸ್ಸಿಗೆ ತಕ್ಕಂತೆ ತೂಕ ಹೊಂದಿರಲಿಲ್ಲ ಎಂದು ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಮೃತ ಬಾಲಕನನ್ನು ಇಲ್ಲಿನ ಬೆಳಲಖಂಡದಲ್ಲಿರುವ ಆತನ ತಂದೆಯ ಮನೆಗೆ ಕರೆತರಲಾಗಿದ್ದು, ಸುತ್ತಮುತ್ತಲಿನ ಜನರು ಮೃತ ಬಾಲಕನ ತಾಯಿಯ ಮೇಲೆಯೇ ಆರೋಪ ಹೊರಿಸಿ ತರಾಟೆಗೆ ತೆಗೆದುಕೊಂಡಿರುವುದು ಕಂಡು ಬಂದಿದೆ.

ಘಟನೆಯ ಬಗ್ಗೆ ಮಾತನಾಡಿರುವ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲಕ್ಕೆ ಕಳುಹಿಸಿ ಕೊಡಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. 

Read These Next