ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಸಭಾಧ್ಯಕ್ಷ ಕಾಗೇರಿ

Source: sonews | By Staff Correspondent | Published on 10th October 2019, 6:57 PM | State News | Don't Miss |

ಬೆಂಗಳೂರು: ಒಂದೆಡೆ ಬರ ಮತ್ತು ಮತ್ತೊಂದೆಡೆ ನೆರೆಯ ಸಮಸ್ಯೆಗೆ ತುತ್ತಾಗಿ ಅರ್ಧ ರಾಜ್ಯವೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಈ ಕುರಿತು ತಾವು ನೀಡಿರುವ ನಿಲುವಳಿ ಸೂಚನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ನೇತೃತ್ವದ ಪ್ರತಿಪಕ್ಷದ ಒತ್ತಾಯಕ್ಕೆ ಮಣಿಯದೆ ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿದ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ  ಇಂದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದರು.

ಸಂತಾಪ ಸೂಚನಾ ನಿರ್ಣಯ ಪೂರ್ಣಗೊಂಡ ನಂತರ ಕಾರ್ಯದರ್ಶಿಗಳ ವರದಿ ಹಾಗೂ ವಿವಿಧ ಸಮಿತಿಗಳ ವರದಿ ಮಂಡನೆಯ ನಂತರ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳ ನೀಡಿರುವ ನಿಲುವಳಿ ಸೂಚನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸಭಾಧ್ಯಕ್ಷರು ಹೇಳಿದರಾದರೂ, ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ನಂತರ ನಿಯಮ 60 ರಂತೆ ಸಾರ್ವಜನಿಕ ಮಹತ್ವದ ವಿಚಾರದ ಚರ್ಚೆಗೆ ನಿಯಮಾವಳಿಗಳಲ್ಲಿ ಅವಕಾಶವಿದೆ ಎಂಬುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು ದಿನದ ಕಾರ್ಯಸೂಚಿಯಲ್ಲಿ ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಚರ್ಚೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಪೀಠಕ್ಕೆ ತಾವು ಸಲ್ಲಿಸಿದ ನಿಲುವಳಿ ಸೂಚನೆ ಕುರಿತ ಪ್ರಾಥಮಿಕ ಚರ್ಚೆಗೆ ಪಟ್ಟುಹಿಡಿದರು. ಸಭಾನಾಯಕ ಬಿ ಎಸ್ ಯಡಿಯೂರಪ್ಪ ಅವರು ಮಧ್ಯ ಪ್ರವೇಶಿಸಿ ಚರ್ಚೆಗೆ ತಾವು ಸಿದ್ಧ ಎಂದು ಭರವಸೆ ನೀಡಿದರೂ ಪ್ರತಿಪಕ್ಷದವರು ಮುಖ್ಯಮಂತ್ರಿಯವರ ಮನವಿಯನ್ನು ಪುರಸ್ಕರಿಸಲಿಲ್ಲ.

ತಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತ ಸದಸ್ಯರಾದ ಕೆ ಆರ್ ರಮೇಶ್ ಕುಮಾರ್   ಕೃಷ್ಣ ಬೈರೇಗೌಡ ಹಾಗೂ ಹೆಚ್ ಕೆ ಪಾಟೀಲ್ ಅವರು ಕಲಾಪದ ಕಾರ್ಯವಿಧಾನದಲ್ಲಿನ ನಿಯಮಾವಳಿಗಳನ್ನು ಉಲ್ಲೇಖಿಸಿದರೂ ಸಭಾಧ್ಯಕ್ಷರ ಮನವೊಲಿಸಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವದ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಏರಿದ ಧ್ವನಿಯಲ್ಲಿ ಕೂಗಿ ಸಭಾಧ್ಯಕ್ಷರ ನಡೆಯನ್ನು ಪ್ರತಿಭಟಿಸಿದರಲ್ಲದೆ, ಸಭಾಧ್ಯಕ್ಷರು ಸರ್ಕಾರದ ಜೊತೆಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದಾವುದಕ್ಕೂ ಜಗ್ಗದ ಸಭಾಧ್ಯಕ್ಷರು ಕಾರ್ಯಸೂಚಿಯಂತೆ ಕಲಾಪವನ್ನು ಮುಂದುವರೆಸಿದರು.

ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ - ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸಿದರು. ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರು 2018-19 ನೇ ಸಾಲಿನ ಸಮಿತಿಯ 28 ನೇ ವರದಿಯನ್ನು ಒಪ್ಪಿಸಿದರು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್ ಅಂಗಾರ ಅವರು ಸಮಿತಿಯ ಎರಡನೇ ವರದಿಯನ್ನು ಸದನಕ್ಕೆ ಒಪ್ಪಿಸಿದರು.

ನಂತರ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ 2017-18 ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು ಸಭೆಯ ಮುಂದಿಟ್ಟರು.  ಅಲ್ಲದೆ, ಮಾರ್ಚ್ 2018 ಕ್ಕೆ ಅಂತ್ಯಗೊಂಡ ರಾಜಸ್ವ ವಲಯದ ಮೇಲಿನ ವರದಿ ಹಾಗೂ ಆರ್ಥಿಗ ವಲಯದ ಮೇಲಿನ ವರದಿಗಳನ್ನು ಸಭೆಯ ಮುಂದಿಟ್ಟರು. ತದನಂತರ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ, ಡಾ ಸಿ ಎನ್ ಅಶ್ವಥನಾರಾಯಣ ಹಾಗೂ ಲಕ್ಷ್ಮಣ ಸವದಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರನ್ನು ಒಳಗೊಂಡಂತೆ ಬಿ ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ಸಹೋದ್ಯೋಗಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ವಿತ್ತೀಯ ಕಾರ್ಯಕಲಾಪಗಳಲ್ಲಿನ ಪ್ರಸಕ್ತ ಸಾಲಿನ ಅನುದಾನದ ಬೇಡಿಕೆಗಳನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ಹಾಗೂ    ಸರ್ಕಾರದ ಸಚೇತಕರಾಗಿ ವಿ ಸುನೀಲ್ ಕುಮಾರ್ ಅವರನ್ನು ಮಾನ್ಯ ಮಾಡಿರುವುದಾಗಿ ರಾಜ್ಯ           ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕೃತವಾಗಿ ಪ್ರಕಟಿಸಿದರು.

ಅಂತೆಯೇ, ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ಆಡಳಿತಾರೂಢಾ ಹಾಗೂ ಪ್ರತಿಪಕ್ಷಗಳ ಸದನ ನಾಯಕರನ್ನು ಕಲಾಪ ಸಲಹಾ ಸಮಿತಿಯ ಸಭೆಗೆ ಆಮಂತ್ರಿಸಿದ ಸಭಾಧ್ಯಕ್ಷರು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಘೋಷಣೆ ಮತ್ತು ಪ್ರತಿ-ಘೋಘಣೆಗಳ ನಡುವೆಯೇ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...