ಭಟ್ಕಳ: ಶಿರಾಲಿಯಲ್ಲಿ ವಿರೋಧ ಲೆಕ್ಕಿಸದೇ ಹೆದ್ದಾರಿ ಕಾಮಗಾರಿ ಆರಂಭ

Source: S O News Service | By I.G. Bhatkali | Published on 14th February 2019, 12:22 AM | Coastal News |

ಭಟ್ಕಳ: ಯಾವುದೇ ಕಾರಣಕ್ಕೂ ತಾಲೂಕಿನ ಶಿರಾಲಿಯಲ್ಲಿ ಹೆದ್ದಾರಿಯನ್ನು 30ಮೀ. ಅಗಲಕ್ಕೆ ಸೀಮಿತಗೊಳಿಸುವುದು ಬೇಡ, ಪೂರ್ವ ನಿಗದಿಯಂತೆ 45ಮೀ.ಗೆ ಕಾಮಗಾರಿ ನಡೆಸಬೇಕು ಎಂದು ಅಲ್ಲಿನ ಜನರು ಪಟ್ಟು ಹಿಡಿದಿದ್ದರೂ ಜಿಲ್ಲಾಡಳಿತ ವಿರೋಧವನ್ನು ಲೆಕ್ಕಿಸದೇ ಬುಧವಾರ 30ಮೀ. ಅಗಲದ ರಸ್ತೆ ಕಾಮಗಾರಿಗೆ ಚಾಲನೆ ನೀಡಿತು.

 ಬುಧವಾರ ಬೆಳಿಗ್ಗೆ ಕಾಮಗಾರಿಯನ್ನು ಆರಂಭಿಸುತ್ತಿದ್ದಂತೆಯೇ ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಜನರು, ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕಿದರು. ನಾವು ಈ ಸಂಬಂಧ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಇದನ್ನು ನಾವು ಶಿರಾಲಿ ಭವಿಷ್ಯದ ದೃಷ್ಟಿಯಿಂದ ಮಾಡುತ್ತಿದ್ದೇವೆ. ಅಧಿಕಾರಿಗಳಿಗೂ ಮನವಿ ನೀಡಿ ವಿನಂತಿಸಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಮಟ್ಟದಲ್ಲಿಯೂ ಹೆದ್ದಾರಿಯ ಅಗಲವನ್ನು 45ಮೀ.ಗೆ ಹೆಚ್ಚಿಸಲು ಪ್ರಯತ್ನ ಅಂತಿಮ ಘಟ್ಟವನ್ನು ತಲುಪಿದೆ. ಈ ಹಂತದಲ್ಲಿ ಹೆದ್ದಾರಿಯನ್ನು 30ಮೀ.ಗೆ ಸೀಮಿತಗೊಳಿಸಿ ಕಾಮಗಾರಿಯನ್ನು ಆರಂಭಿಸುವುದು ಬೇಡ ಎಂದು ಅಸಮಾಧಾನವನ್ನು ಹೊರ ಹಾಕಿದರು.

ಭಟ್ಕಳ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ ಸ್ಥಳಕ್ಕೆ ಧಾವಿಸಿ, ಕಾಮಗಾರಿಯನ್ನು ಮುಂದುವರೆಸಬೇಕಾದ ಅಗತ್ಯತೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. `ನಮಗೆ ಮೇಲಾಧಿಕಾರಿಗಳಿಂದ ಆದೇಶವಾಗಿದೆ. ರಸ್ತೆಯ ಅಗಲ, ಉದ್ಧ, ಕಾಮಗಾರಿಯ ರೂಪುರೇಷೆಗಳನ್ನು ಹೆದ್ದಾರಿ ಪ್ರಾಧಿಕಾರವೇ ನಿರ್ಧರಿಸುತ್ತದೆ. ನಾವು ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸಿ ಕಾಮಗಾರಿಯನ್ನು ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ಇದನ್ನು ಜನರು ಅರಿತುಕೊಂಡು ಸಹಕಾರ ನೀಡಬೇಕು' ಎಂದು ವಿನಂತಿಸಿಕೋಂಡರು. ಇದಕ್ಕೆ ಪ್ರತಿಭಟನಾಕಾರರು ಬಗ್ಗಲಿಲ್ಲ. ಸದ್ಯದಲ್ಲಿಯೇ ಹೆದ್ದಾರಿಯ ಅಗಲವನ್ನು ಬದಲಿಸುವ ಬಗ್ಗೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಆದ್ದರಿಂದ ಕಾಮಗಾರಿ ನಡೆಸುವುದು ಬೇಡ, ಇದಕ್ಕಾಗಿ ಕೆಲವು ದಿನಗಳ ಕಾಲಾವಕಾಶ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಇದಕ್ಕೆ ಸಹಾಯಕ ಆಯುಕ್ತರು ಒಪ್ಪಿಗೆ ಸೂಚಿಸಲಿಲ್ಲ. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಡಿವಾಯ್‍ಎಸ್ಪಿ ವೆಲೆಂಟೈನ್ ಡಿಸೋಜಾ, ಸಿಪಿಐ ಕೆ.ಎಲ್.ಗಣೇಶ ಸಿಬ್ಬಂದಿಗಳೊಡನೆ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರನ್ನು ಚೆದುರಿಸಿದರು. ನಂತರ 30ಮೀ. ಅಗಲಕ್ಕೆ ಹೆದ್ದಾರಿಯನ್ನು ಸೀಮಿತಗೊಳಿಸಿ ಕಾಮಗಾರಿಯನ್ನು ಆರಂಭಿಸಲಾಯಿತು.

 ಶಾಸಕರ ಖಂಡನೆ: ಶಿರಾಲಿಯಲ್ಲಿ 45ಮೀ. ಹೆದ್ದಾರಿ ಅಗಲೀಕರಣಕ್ಕಾಗಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಐಆರ್‍ಬಿ ಕಂಪೆನಿ 30ಮೀ.ಗೆ ಸೀಮಿತಗೊಳಿಸಿ ಕಾಮಗಾರಿ ನಡೆಸಲು ಮುಂದಾಗಿರುವುದನ್ನು ಖಂಡಿಸುತ್ತೇನೆ ಎಂದು ಶಾಸಕ ಸುನಿಲ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಯಾವುದೇ ಸಹಕಾರ ಸಿಗದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಹೆದ್ದಾರಿಯನ್ನು 30ಮೀ.ಗೆ ಸೀಮಿತಗೊಳಿಸಿದಲ್ಲಿ ಜನರೊಂದಿಗೆ ಸೇರಿಕೊಂಡು ನಾನೇ ಪ್ರತಿಭಟನೆಗೆ ಇಳಿಯುತ್ತೇನೆ ಎಂದು ಅವರು ಎಚ್ಚರಿಸಿದ್ದಾರೆ.

Read These Next