ಶಿಡ್ಲಘಟ್ಟ ತಾಲೂಕಿನ ಮೇಲೂರಿನಲ್ಲಿ ಮಳೆಗಾಗಿ ಕತ್ತೆಗಳ ಮದುವೆ!

Source: tamim | By Arshad Koppa | Published on 25th September 2016, 8:34 PM | Incidents |

ಶಿಡ್ಲಘಟ್ಟ,ಸೆಪ್ಟೆಂಬರ್24: ಸತತ ಬರಗಾಲದಿಂದ ತತ್ತರಿಸುತ್ತಿರುವ ತಾಲೂಕಿನ ಜನರು ರೈತರು ಮಳೆರಾಯನ ಕೃಪೆಗಾಗಿ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ ಪೂಜೆ ಪುನಸ್ಕಾರ, ಶ್ರೀರಾಮನ ದಂಡು ಭಜನೆಗಳು ನಡೆಯುತ್ತಿವೆ. ಹಾಗೆಯೆ ಕತ್ತೆ ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆ ಬೀಳಲಿದೆ ಎಂಬ ನಂಬಿಕೆಯಿಂದ ಕತ್ತೆ ಮದುವೆಗೂ ಮುಂದಾಗಿದ್ದಾರೆ.
   ತಾಲೂಕಿನ ಮೇಲೂರು ಗ್ರಾಮದಲ್ಲಿ ಕತ್ತೆಗಳಿಗೆ ಮದುವೆ ಮಾಡಲಾಯಿತು ಸಾಮಾನ್ಯವಾಗಿ ಹೆಣ್ಣು ಗಂಡಿಗೆ ನಮ್ಮ ಸಂಪ್ರದಾಯದಂತೆ ಮಧುವೆ ಹೇಗೆ ನಡೆಯುತ್ತಿದೆಯೋ ಅದೇ ಮಾದರಿಯಲ್ಲಿ ಕತ್ತೆಗಳಿಗೂ ಮದುವೆಯ ಕಾರ್ಯವನ್ನು ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿದರು.
    ವಧು ವರರನ್ನು ಸಿಂಗರಿಸಿದಂತೆಯೆ ಕತ್ತೆಗಳಿಗೂ ಶುಭ್ರ ಶ್ವೇತ ವರ್ಣದ ವಸ್ತ್ರ ಧರಿಸಿ ಅರಿಷಿಣ ಕುಂಕುಮ ಇಟ್ಟು ಹೂ ಮುಡಿಸಿ ಸಿಂಗರಿಸಲಾಗಿತ್ತು. ವರನ ಕತ್ತೆ ಕಡೆಯವರು ಮೊದಲಿಗೆ ವಧುವಿನ ಕತ್ತೆ ಕಡೆಯವರನ್ನು ಮದುವೆಗೆ ಆಹ್ವಾನಿಸುವ ಸಂಪ್ರದಾಯದೊಂದಿಗೆ ಆರಂಭವಾದ ಮದುವೆ ಸಂಭ್ರಮದಲ್ಲಿ ಗ್ರಾಮದ ಹಿರಿಯರು ಕಿರಿಯರೆಲ್ಲರೂ ಭಾಗವಹಿಸಿದ್ದರು.
    ನವ ವಧು ವರನಂತೆ ಸಿಂಗರಿಸಿದ್ದ ಕತ್ತೆಗಳಿಗೂ ಶುಭ ಮುಹೂರ್ತದಲ್ಲಿ ಕಂಕಣ ಭಾಗ್ಯವನ್ನು ಕರುಣಿಸಲಾಯಿತು. ನಂತರ ಗ್ರಾಮದ ತೇರು ಬೀದಿಗಳಲ್ಲಿ ಮೆರವಣಿಗೆ ನಡೆಸಿದಾಗ ಮನೆ ಮನೆ ಮುಂದೆಯೂ ಸಾರಿಸಿ ರಂಗೋಲಿ ಹಾಕಿ ಕತ್ತೆಗಳಿಗೆ ಪಾದ ಪೂಜೆ ನೆರವೇರಿಸಿ ಬೀಳ್ಕೊಟ್ಟರು.
    ಅಕ್ಕಿ ಬೆಲ್ಲವನ್ನು ಮಡಿಲು ತುಂಬಿ ಕಳುಹಿಸಿದರು ವಧು ವರರ ಮೆರವಣಿಗೆಗೆ ಜನಪದ, ಸೋಭಾನೆ ಪದಗಳು ಇನ್ನಷ್ಟು ಕಳೆ ಕಟ್ಟಿದ್ದವು. ಮದುವೆ ಮುಗಿದ ಮೇಲೆ ಬಾತನ್ನ, ಕೇಸರಿ ಬಾತು ಇನ್ನಿತರೆ ತರಹೆವಾರಿ ಭರ್ಜರಿ ಊಟೋಪಚಾರವೂ ನಡೆಯಿತು.
    ಮಳೆರಾಯ ಮುನಿಸಿಕೊಂಡಿದ್ದು ಬಿತ್ತನೆ ಮಾಡಿದ ಹೊಲ ಗದ್ದೆಗಳಲ್ಲಿ ಪೈರು ಬಾಡತೊಡಗಿದೆ ಈಗಾಗಲೇ ದೇವರಮಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಬಾಲಕೀಯರಿಗೆ ಮತ್ತು ಕಪ್ಪೆಗಳಿಗೆ ಮಧುವೆ ಮಾಡಿದ ಬಳಿಕ ಮೇಲೂರಿನಲ್ಲಿ ಕತ್ತೆಗಳ ಮಧುವೆ ಮಾಡಿದ್ದು ಮಳೆರಾಯನ ಕೃಪೆಗೆ ಮೊರೆ ಹೋಗಿದ್ದಾರೆ.
    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾಧರ್ಮೇಂದ್ರ, ಉಪಾಧ್ಯಕ್ಷ ಆಂಜನೇಯರೆಡ್ಡಿ, ಕೆ.ಮಂಜುನಾಥ್, ಎಚ್.ಟಿ.ನಾರಾಯಣಸ್ವಾಮಿ, ಜೆ.ಜೆ.ಗೌಡ, ರೂಪೇಶ್ ಮತ್ತಿತರರು ಭಾಗವಹಿಸಿದರು.
 

Read These Next