ದೇಶ ಹೊತಿ ಉರಿಯಲು ನೂಪುರ್ ಶರ್ಮಾ ಕಾರಣ; ಆಕೆ ದೇಶದ ಕ್ಷಮೆ ಯಾಚಿಸಬೇಕು; ಸುಪ್ರೀಂ ಕೋರ್ಟ್ ಆಕ್ರೋಶ

Source: Vb | By I.G. Bhatkali | Published on 2nd July 2022, 9:32 AM | National News |

ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಕುರಿತು ಆಕ್ಷೇಪಕಾರಿಯಾದ ಹೇಳಿಕೆಗಳನ್ನು ನೀಡುವ ಮೂಲಕ ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ದೇಶ ಹೊತ್ತಿ ಉರಿಯುವಂತೆ ಮಾಡಿದ್ದಾರೆಂದು ಸುಪ್ರೀಂಕೋರ್ಟ್ ಶುಕ್ರವಾರ ಆಕ್ರೋಶವ್ಯಕ್ತಪಡಿಸಿದೆ ಹಾಗೂ ಆಕೆ ಇಡೀ ದೇಶದ ಮುಂದೆ ಕ್ಷಮೆಯಾಚಿಸಬೇಕೆಂದು ಸೂಚಿಸಿದೆ.

“ನೂಪುರ್ ಶರ್ಮಾ ತನ್ನ ಸಡಿಲು ನಾಲಗೆಯಿಂದಾಗಿ ಇಡೀ ದೇಶ ಹೊತ್ತಿ ಉರಿಯುವಂತೆ ಮಾಡಿದ್ದಾರೆ. ದೇಶಾ ದ್ಯಂತ ಉದ್ವಿಗ್ನ ಭಾವನೆಗಳ ಕಿಡಿಯನ್ನು ಆಕೆ ಹಚ್ಚಿದ್ದಾರೆ. ಈ ಮಹಿಳೆಯು, ದೇಶದಲ್ಲಿ ಈಗ ನಡೆಯುತ್ತಿರುವುದಕ್ಕೆಲ್ಲಾ ಸಂಪೂರ್ಣವಾಗಿ ಹೊಣೆಗಾರರಾಗಿದ್ದಾರೆ'' ಎಂದು ನ್ಯಾಯಾಧೀಶರು ಕಟುವಾಗಿ ಹೇಳಿದ್ದಾರೆ.

“ಟಿವಿ ಚರ್ಚಾಗೋಷ್ಠಿಯಲ್ಲಿ ಆಕೆ ಪ್ರಚೋದನಾಕಾರಿ ಹೇಳಿಕೆ ನೀಡಿರುವುದನ್ನು ನಾವು ನೋಡಿದ್ದೇವೆ. ಆಕೆ ಅದನ್ನು ಹೇಳಿದ ರೀತಿ ಹಾಗೂ ಆನಂತರ ತಾನೊಬ್ಬಳು ನ್ಯಾಯವಾದಿ ಎಂದು ಆಕೆ ಹೇಳಿಕೊಂಡಿರುವುದು ತೀರಾ ನಾಚಿಕೆಗೇಡು. ನೂಪುರ್ ಇಡೀ ದೇಶದ ಕ್ಷಮೆ ಕೇಳಬೇಕು” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ತನಗೆ ಜೀವಬೆದರಿಕೆಯಿರುವುದರಿಂದ ದೇಶಾದ್ಯಂತ ತನ್ನ ವಿರುದ್ಧ ಸಲ್ಲಿಸಲಾಗಿರುವ ಹಲವಾರು ಎಫ್ ಐಆರ್‌ಗಳನ್ನು ದಿಲ್ಲಿಗೆ ವರ್ಗಾಯಿಸಬೇಕೆಂದು ನೂಪುರ್ ಶರ್ಮಾ ನ್ಯಾಯಾಲಯವನ್ನು ಕೋರಿದ್ದರು. ಬೆದರಿಕೆಯಿರುವ ಹಿನ್ನೆಲೆಯಲ್ಲಿ ನೂಪುರ್‌ ಅವರು ಅರ್ಜಿಯಲ್ಲಿ ಆಕೆಯ ಹೆಸರನ್ನು ಬಳಸಿಕೊಂಡಿಲ್ಲವೆಂದು ಅವರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು * ಆಕೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆಯೇ ಅಥವಾ ಆಕೆಯು ಭದ್ರತಾ ಬೆದರಿಕೆಯಾಗಿದ್ದಾರೆಯೇ' ಎಂದು ಖಾರವಾಗಿ ಹೇಳಿದರು. ತನ್ನ ಅರ್ಜಿಯಲ್ಲಿನ ಅಂಶಗಳನ್ನು “ಸಮಾನವಾಗಿ ಪರಿಗಣಿಸಬೇಕು'' ಹಾಗೂ “ಯಾವುದೇ ತಾರತಮ್ಯ ಎಸಗಬಾರದು” ಎಂಬ ನೂಪುರ್ ಅವರ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು.

“ಆದರೆ, ನೀವು ಇತರರ ವಿರುದ್ಧ ಎಫ್‌ಐಆರ್ ಅನ್ನು ಸಲ್ಲಿಸಿದಾಗ ಅವರನ್ನು ತಕ್ಷಣವೇ ಬಂಧಿಸಲಾಗಿದೆ. ಆದರೆ ನಿಮ್ಮ ವಿರುದ್ಧ ಎಫ್ ಐಆರ್ ಸಲ್ಲಿಸಿದರೂ, ಯಾರೂ ಕೂಡಾ ನಿಮ್ಮನ್ನು ಮುಟ್ಟುವ ಧೈರ್ಯ ಮಾಡಿಲ್ಲ' ಎಂದು ನ್ಯಾಯಾಧೀಶರು ಹೇಳಿದರು.

“ಆಕೆ ಪಕ್ಷವೊಂದರ ವಕ್ತಾರೆಯಾಗಿದ್ದರೇನಾಯಿತು? ತನಗೆ ಅಧಿಕಾರದ ಬೆಂಬಲವಿರುವುದರಿಂದ ನೆಲದ ಕಾನೂನನ್ನು ಗೌರವಿಸದೆ ಏನು ಬೇಕಾದರೂ ಹೇಳಬಹುದೆಂದು ಆಕೆ ಯೋಚಿಸಿದ್ದಾರೆಯೇ ? ಎಂದು ನ್ಯಾಯಾಲಯ 20 ನಿಮಿಷಗಳ ವಿಚಾರಣೆಯ ವೇಳೆ ಕಟುವಾಗಿ ಹೇಳಿತು.

ನೂಪುರ್ ಪರವಾಗಿ ಉತ್ತರಿಸಿದ ಆಕೆಯ ನ್ಯಾಯವಾದಿ, ಟಿವಿ ಚರ್ಚಾಗೋಷ್ಠಿಯೊಂದರಲ್ಲಿ ನಿರೂಪಕರು ಕೇಳಿದ ಪ್ರಶ್ನೆಯೊಂದಕ್ಕೆ ಆಕೆ ಉತ್ತರಿಸಿದ್ದಾರಷ್ಟೇ. ಪೌರರ ವಾಕ್‌ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ನ್ಯಾಯವಾದಿ ಪ್ರಸ್ತಾವಿಸಿದಾಗ, ಅದಕ್ಕೆ ಉತ್ತರಿಸಿದ ನ್ಯಾಯಾಧೀಶರು “ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ್ಯದ ಹಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಹುಲ್ಲಿಗೆ ಬೆಳೆಯುವ ಹಕ್ಕಿದೆ. ಹಾಗೆಯೇ ಕತ್ತೆಗೆ ಅದನ್ನು ತಿನ್ನುವ ಹಕ್ಕಿದೆ' ಎಂದು ಹೇಳಿದರು.

ಮಾಧ್ಯಮಸ್ವಾತಂತ್ರ್ಯದ ಹಕ್ಕಿನ ರಕ್ಷಣೆಯ ಕುರಿತು ನ್ಯಾಯಾಲಯದ ಆದೇಶವನ್ನು ನೂಪುರ್ ಶರ್ಮಾ ಅವರ ವಕೀಲರು ಉಲ್ಲೇಖಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್ ಆಕೆಯನ್ನು ಪತ್ರಕರ್ತರ ಪೀಠದಲ್ಲಿ ಕೂರಿಸಲು ಸಾಧ್ಯವಿಲ್ಲ. ಆಕೆ ಟಿವಿ ಚರ್ಚಾಗೋಷ್ಠಿಯಲ್ಲಿ ಭಾಗವವಹಿಸಿ, ಸಾಮಾಜಿಕ ಸಂರಚನೆಯ ಮೇಲೆ ಉಂಟಾಗುವ ಪರಿಣಾಮಗಳನ್ನು ಮುಂಬರುವ ಪರಿಣಾಮಗಳನ್ನು ಊಹಿಸದೆ ಮನಬಂದಂತೆ ಬೇಜವಾಬ್ದಾರಿ ಹೇಳಿಕೆಗಳನ್ನು ಆಕೆ ನೀಡಿದ್ದಾರೆಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು. ಆ ಬಳಿಕ ನೂಪುರ್ ಶರ್ಮಾ ಅವರು ತನ್ನ ಅರ್ಜಿಯನ್ನು ಹಿಂಪಡೆದುಕೊಂಡರು.

ಪ್ರವಾದಿ ಮುಹಮ್ಮದ್ ಅವರ ಕುರಿತಾಗಿ ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದಕ್ಕಾಗಿ ನೂಪುರ್ ಶರ್ಮಾ ಈಗಾಗಲೇ ಕ್ಷಮೆಯಾಚಿಸಿದ್ದಾರೆಂದು ಆಕೆಯ ಪರ ವಕೀಲ ಮಣೀಂದರ್ ಸಿಂಗ್ ತಿಳಿಸಿದಾಗ, ಅದಕ್ಕೆ ಕಟುವಾಗಿ ಉತ್ತರಿಸಿದ ನ್ಯಾಯಾಲಯವು, ಆಕೆ ಟಿವಿ ವಾಹಿನಿಯ ಮುಂದೆ ಹೋಗಿ ಇಡೀ ದೇಶದೆದುರು ಕ್ಷಮೆ ಯಾಚಿಸಬೇಕಾಗಿತ್ತು. ಈಗ ಆಕೆ ತನ್ನ ಹೇಳಿಕೆಯನ್ನು ಹಿಂಪಡೆಯುವುದು ತುಂಬಾ ತಡವಾಗಿದೆ'' ಎಂದು ಸುಪ್ರೀಂಕೋರ್ಟ್ ಹೇಳಿತು.

ನೂಪುರ್ ತನ್ನ ವಿವಾದಾತ್ಮಕ ಹೇಳಿಕೆಯನ್ನು ಹಿಂದೆಗೆದುಕೊಂಡಿರುವುದು ಕೂಡಾ ಶರ್ತಬದ್ಧವಾಗಿತ್ತು ಎಂದು ಗಮನಸೆಳೆದ ನ್ಯಾಯಾಲಯವು ಆಕೆ, ಒಂದು ವೇಳೆ ಯಾರೊಬ್ಬರ ಭಾವನೆಗಳಿಗೆ ನೋವುಂಟಾಗಿದ್ದಲ್ಲಿ ಮಾತ್ರವೇ ತಾನು ತನ್ನ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿಕೊಂಡಿದ್ದರು ಎಂದು ತಿಳಿಸಿತು.

ಟಿವಿ ಪತ್ರಕರ್ತ ಹಾಗೂ ಸಂಪಾದಕ ಆರ್ನಬ್ ಗೋಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ತೀರ್ಪಿನಂತೆ ನೂಪುರ್ ಶರ್ಮಾ ಕೂಡಾ ಕಾನೂನುಕ್ರಮಕ್ಕೆ ಒಳಗಾಗದೆ ಇರುವ ಹಕ್ಕನ್ನು ಹೊಂದಿದ್ದಾರೆಂಬ ನೂಪುರ್ ಅವರ ವಕೀಲ ಮಣೀಂದ‌ ಸಿಂಗ್ ಅವರ ವಾದವನ್ನು ಅಲ್ಲಗಳೆಯಿತು.

ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿ ಪತ್ರಕರ್ತನೊಬ್ಬ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೂ, ಪಕ್ಷವೊಂದರ ವಕ್ತಾರರು ಟಿವಿ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ತನ್ನ ಹೇಳಿಕೆಯಿಂದಾಗಬಹುದಾದ ಪರಿಣಾಮಗಳ ಬಗ್ಗೆ ಯೋಚಿಸದೆ ಮನಬಂದಂತೆ ಮಾತನಾಡುವುದಕ್ಕೂ ವ್ಯತ್ಯಾಸವಿದೆ ಎಂದಿತು.

ಜೂನ್ ತಿಂಗಳ ಆರಂಭದಲ್ಲಿ ಟಿವಿ ಚರ್ಚಾಕೂಟವೊಂದರಲ್ಲಿ ಭಾಗವಹಿಸಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನೀಡಿದ ನಿಂದನಾತ್ಮಕ ಹೇಳಿಕೆಗಳನ್ನು ಖಂಡಿಸಿ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಹಲವೆಡೆ ಅವು ಹಿಂಸಾತ್ಮಕರೂಪವನ್ನು ಪಡೆದಿದ್ದವು. ಹಲವಾರು ಗಲ್ಫ್ ರಾಷ್ಟ್ರಗಳು ಭಾರತೀಯ ರಾಜತಾಂತ್ರಿಕರಿಗೆ ಸಮನ್ಸ್ ನೀಡಿ, ನೂಪುರ್ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ನೂಪುರ್ ಶರ್ಮಾರನ್ನು ಬೆಂಬಲಿಸಿದ್ದ ಉದಯಪುರದ ಟೈಲರ್ ಕನ್ನಯ ಲಾಲ್ ಎಂಬಾತನನ್ನು ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು, ಘಟನೆಯನ್ನು ಮೊಬೈಲ್‌ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದರು. ಇಸ್ಲಾಮ್‌ಗೆ ಆಗಿರುವ ಅಪಮಾನಕ್ಕಾಗಿ ತಾವು ಆತನನ್ನು ಹತ್ಯೆಗೈದಿರುವುದಾಗಿ ಆರೋಪಿಗಳು ವೀಡಿಯೊದಲ್ಲಿ ಹೇಳಿಕೊಂಡಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...