ಖರ್ಗೆ ಆತಂಕ; 'ಮೋದಿ ಮತ್ತೆ ಗೆದ್ದಲ್ಲಿ ಚುನಾವಣೆ ರದ್ದು; ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

Source: Vb | By I.G. Bhatkali | Published on 18th February 2024, 8:52 AM | Coastal News | State News |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ಚುನಾವಣೆಯೇ ನಡೆಯದು ಎಂದು ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಲಾದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕೆ ಪಕ್ಷದ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಈಗಾಗಲೇ ನ್ಯಾಯಾಂಗ, ಈ.ಡಿ., ಐಟಿ ಸೇರಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನೂ ನಿಯಂತ್ರಣ ಮಾಡಲಾಗಿದೆ. ನಮ್ಮನ್ನು ಪೂರ್ತಿ ಮುಗಿಸಲು ಪಕ್ಷದ ಎಲ್ಲ ಬ್ಯಾಂಕ್ ಅಕೌಂಟ್‌ಗಳನ್ನು ಸೀಝ್ ಮಾಡಿದರು. ಆದರೆ ಬಿಜೆಪಿ 6 ಸಾವಿರ ಕೋಟಿ ರೂ. ಚುನಾವಣಾ ಬಾಂಡ್‌ಗಳನ್ನು ಕಾಳಧನಿಕರಿಂದ ಪಡೆದಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಕೇಂದ್ರ ಸರಕಾರದಿಂದ ಆಗಿದ್ದು, ರಾಜ್ಯದ ಮುಖ್ಯಮಂತ್ರಿ ದಿಲ್ಲಿಯಲ್ಲಿ ಸತ್ಯಾಗ್ರಹ ಮಾಡಬೇಕಾಯಿತು. ಬರಗಾಲ, ಪ್ರವಾಹದಿಂದ ಉತ್ತಾದ ರಾಜ್ಯಕ್ಕೆ ತೊಂದರೆ ನೀಡುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು. ದಲಿತರನ್ನು ತುಳಿಯುವ ಗುರಿಯನ್ನು ಹೊಂದಿದವರು. ದೇಶಕ್ಕೆ ಸ್ವಾತಂತ್ರ್ಯ ತಂದವರು ನಾವು. ನರೇಗಾ, ಅನ್ನಭಾಗ್ಯ, ಆಹಾರ ಭದ್ರತೆ, ಶಿಕ್ಷಣ ಯೋಜನೆಗಳು ನಮ್ಮದು. ನಾವು ನುಡಿದಂತೆ ನಡೆದಿದ್ದೇವೆ.

ಕೇಂದ್ರದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಹಿಂದೆಯೂ ಅಭಿವೃದ್ಧಿ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಈಗಲೂ ಕಾಂಗ್ರೆಸ್ ರಾಜ್ಯಗಳಲ್ಲಿ ಆ ಕಾರ್ಯ ಮಾಡುತ್ತಿದೆ. ಮುಂದೆಯೂ ಮಾಡಲಿದೆ ಎಂದು ಖರ್ಗೆ ಹೇಳಿದರು.

ದ.ಕ. ಜಿಲ್ಲೆಯಲ್ಲಿ ಲಕ್ಷಾಂತರ ಜನ ಕಾಂಗ್ರೆಸ್ ನಿಂದ ಭೂ ಮಾಲಕರಾಗಿದ್ದಾರೆ. ಆದರೆ ಪ್ರಸಕ್ತ ಕಾಂಗ್ರೆಸ್‌ನಿಂದ ಫಲ ಪಡೆದವರೇ ಮರೆತಿದ್ದಾರೆ. ಆದರೆ ಈಗ ನೀಡಿದ ಗ್ಯಾರಂಟಿಯನ್ನಾದರೂ ನೆನಪಿಟ್ಟುಕೊಳ್ಳಿ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರು ಬಡವರು, ದಲಿತರನ್ನು ತುಳಿಯುವ ಗುರಿ ಇಟ್ಟುಕೊಂಡವರು.

ಇದಕ್ಕೆ ಜನರು ತಕ್ಕ ಉತ್ತರ ನೀಡಬೇಕು. ಕಾರ್ಯಕರ್ತರು ಕಾಂಗ್ರೆಸ್ ನೀಡಿದ, ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಮಂಗಳೂರು, ಉಡುಪಿ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿ ಸೀಟು ಗೆಲ್ಲಬೇಕು ಎಂದು ನೆರೆದಿದ್ದ ನಾಯಕರಿಗೆ, ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್ ಕಾಲದಲ್ಲಿ ಡಾ. ಅಂಬೇಡ್ಕರ್ ಸಂವಿಧಾನ ಬರೆದ ಮೇಲೆ ಹೆಣ್ಣು ಮಕ್ಕಳಿಗೆ, ಬಡವರು, ದಲಿತರಿಗೆ ಅಧಿಕಾರ ಸಿಕ್ಕಿದೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಿದ್ದರೆ ಮನುಸ್ಥಿತಿ ಇರುತ್ತಿತ್ತು. ಹಾಗಾಗಿ ಹಿಂದಿನ ದಿನಗಳನ್ನು ನೆನಪುಮಾಡಿ. ತಂದೆ ತಾಯಂದಿರು ಯಾವ ಸ್ಥಿತಿಯಲ್ಲಿದ್ದರು ಎಂಬುದನ್ನು ನೆನಪಿನಲ್ಲಿ ಇಡದಿದ್ದರೆ ದೇಶಕ್ಕೆ ಭವಿಷ್ಯ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ, ಮಾಜಿ ಸಿಎಂ ಡಾ.ವೀರಪ್ಪ ಮೊಯ್ಲಿ ಮೊದಲಾದವರು ಮಾತನಾಡಿದರು.

ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್, ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸಚಿವರಾದ ದಿನೇಶ್ ಗುಂಡೂರಾವ್, ಮಂಕಾಳ ವೈದ್ಯ, ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಳರ್, ಕೆ.ಜೆ. ಜಾರ್ಜ್, ಮಧು ಬಂಗಾರಪ್ಪ, ಕೆ.ವೆಂಕಟೇಶ್, ಶಾಸಕ ಆರ್.ವಿ. ದೇಶಪಾಂಡೆ, ಮಾಜಿ ಸಚಿವರಾದ ಮೋಟಮ್ಮ, ಟಿ.ಬಿ. ಜಯಚಂದ್ರ, ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಆಂಜನೇಯ, ಮಾಜಿ ಎಂ.ಪಿ.ಉಗ್ರಪ್ಪ, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾಅಮರನಾಥ್, ಶಾಸಕ ಅಶೋಕ್ ರೈ, ಮುಖಂಡರಾದ ಶಕುಂತಳಾ ಶೆಟ್ಟಿ, ಎಂ.ಎ.ಗಫೂರ್, ಐವನ್ ಡಿಸೋಜ, ಮಿಥುನ್ ರೈ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಹಮ್ಮದ್ ನಲಪಾಡ್, ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು, ಜಿಲ್ಲೆ, ರಾಜ್ಯದ ನಾಯಕರು ಉಪಸ್ಥಿತರಿದ್ದರು.

ಉಪಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ಡಾ.ಮಂಜುನಾಥ ಭಂಡಾರಿ ಮತ್ತು ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...