ಮಾಜಾಳಿಯಿಂದ ಭಟ್ಕಳದವರೆಗೂ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸದೇ ಟೋಲ್ ಸಂಗ್ರಹ; ಐಆರ್‌ಬಿ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

Source: S O News | By I.G. Bhatkali | Published on 3rd November 2023, 5:53 PM | Coastal News |

ಕಾರವಾರ: ಐ.ಅರ್.ಬಿ.ಯ ಅವೈಜ್ಞಾನಿಕ ಕಾಮಗಾರಿಗಳಿಂದ ಸಾವು- ನೋವುಗಳು ನಿಲ್ಲುತ್ತಿಲ್ಲ. ಹೀಗಾಗಿ ಸಾರ್ವಜನಿಕರೆಲ್ಲ ಸೇರಿ ಐಆರ್‌ಬಿ ವಿರುದ್ಧ ಶೀಘ್ರದಲ್ಲೇ ಬೃಹತ್‌ ಪ್ರತಿಭಟನೆ ನಡೆಸುತ್ತೇವೆ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಎಚ್ಚರಿಕೆ ನೀಡಿದ್ದಾರೆ.

ಅವರು ಗುರುವಾರದಂದು ನಗರದ 'ಜಿಲ್ಲಾ ಪತ್ರಿಕಾ ಭವನ'ದಲ್ಲಿ ಅವರ್ಸಾ, ಹಟ್ಟಿಗೇರಿ ಭಾಗದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸೇರಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದರು.

ನೆರೆಯ ಗೋವಾ  ರಾಜ್ಯದಲ್ಲಿ ವ್ಯವಸ್ಥಿತವಾಗಿ ರಾಷ್ಟ್ರೀಯ ಹೆದ್ದಾರಿಯ ಆಗಲೀಕರಣವಾಗಿದ್ದು, ಒಂದೇ ಒಂದು ಟೋಲ್‌ಗೇಟ್ ಇಲ್ಲ. ಆದರೆ ನಮ್ಮ ಜಿಲ್ಲೆಯಲ್ಲಿ ಮಾಜಾಳಿಯಿಂದ ಭಟ್ಕಳದವರೆಗೆ ಆವೈಜ್ಞಾನಿಕವಾಗಿ ಕಳಪೆ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಅನೇಕ ಅವಘಡಗಳಿಗೆ ಕಾರಣವಾದರೂ ಟೋಲ್ ಆಕರಣೆಯ ಹೆಸರಿನಲ್ಲಿ ಅನೇಕ 'ವಸೂಲಿ ಕೇಂದ್ರ'ಗಳು ತಲೆ ಎತ್ತಿವೆ. ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಅಂಕೋಲಾ ತಾಲೂಕಿನ ಅವರ್ಸಾ, ಹಟ್ಟಿಗೇರಿ ಮುಂತಾದ ಭಾಗಗಳ ಅವ್ಯವಸ್ಥೆಯನ್ನು ಶೀಘ್ರದಲ್ಲಿ ಗುತ್ತಿಗೆ ಕಂಪನಿ ಐ.ಆರ್.ಬಿ ಸರಿಪಡಿಸದಿದ್ದರೆ ಸ್ಥಳೀಯ ಜನರೊಂದಿಗೆ ಸೇರಿ ಉಗ್ರ ಹೋರಾಟ ಅನಿವಾರ್ಯ" ಎಂದು ಮಾಧವ ನಾಯಕ ತಿಳಿಸಿದರು.

ಕಳೆದ 7-8 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣದ ಕಾಮಗಾರಿಯನ್ನು ಐ.ಆ‌ರ್.ಬಿ ನಡೆಸುತ್ತಿದ್ದು, ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ನಡೆಯುತ್ತಿರುವದರಿಂದ ಅನೇಕ ಅವಘಡ, ಅಪಘಾತಗಳಿಗೆ ಕಾರಣವಾಗಿ, ಜೀವಹಾನಿಗೂ ಕಾರಣವಾಗಿದೆ. ಕಾಮಗಾರಿಯಲ್ಲಿ ಅತ್ಯಂತ ವಿಳಂಬಕಾರಿ ನೀತಿ ಅನುಸರಿಸುತ್ತಿದ್ದರೂ, ಸುಳ್ಳು ಹೇಳಿ ಟೋಲ್ ಸಂಗ್ರಹ ಸಹ ಪ್ರಾರಂಭಿಸಲಾಗಿದೆ. ಕಾಮಗಾರಿಯಲ್ಲಿ ಶೇ. 75 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿ ಬಹಳ ಹಿಂದೆಯೆ ಕಂಪನಿ ಸಾರ್ವಜನಿಕರಿಂದ ಟೋಲ್ ಸಂಗ್ರಹಿಸಿ ಅನ್ಯಾಯ ಮಾಡುತ್ತಿದೆ. ಜನರಿಗಾಗುವ ತೊಂದರೆಯನ್ನು ಬಗೆಹರಿಸಲು

ಜನಪ್ರತಿನಿಧಿಗಳ, ಸಾರ್ವಜನಿಕರ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ದೊಡ್ಡ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರಸ್ತೆ ಪೂರ್ಣಗೊಳ್ಳುವ ಪೂರ್ವ 75% ಆಗಿದೆ ಎಂದು ಟೋಲ್ ಪ್ರಾರಂಭಿಸಿದರು. ಆದರೀಗ ಜಿಲ್ಲಾಡಳಿತ' ಮೌನವಾಗಿದೆ. ರಾಜಕೀಯ ಒತ್ತಡದಿಂದ ಸುಮ್ಮನಿದ್ದಿರಬೇಕು. ಧರೆಗಳು ಕುಸಿಯುತ್ತವೆಂದು 2012- 13ರಲ್ಲೇ ಹೇಳಿದ್ದೆವು. ತಂಡಕುಳಿಯಲ್ಲಿ ಈಗಲೂ ಧರೆ ಕುಸಿಯುತ್ತಿದೆ. ಮುಂದೆ ಉತ್ತರ ಕನ್ನಡ ಉತ್ತರಾಖಂಡ ಆಗುವ ಪರಿಸ್ಥಿತಿ ಇದೆ. ಟನಲ್ ಮೇಲೆ ಬಿಲ್ಡಿಂಗ್ ಇದೆ. ಮಣ್ಣು- ಕಲ್ಲುಗಳ ಗುಡ್ಡವಿದೆ. ಟನಲ್ ಮಾಡಲು ಸೂಕ್ತವಲ್ಲ ಎಂದು ಅಂದೇ ವರದಿ ಇತ್ತು. ಟನಲ್‌ಗೆ ಮಾಡಿದ ಸೇತುವೆಯ ಅಲೈನ್ವೆಂಟ್ ತಪ್ಪಿದೆ. ಅದು ಕೂಡ ಅವೈಜ್ಞಾನಿಕ ಕಾಮಗಾರಿ, ಸಾರ್ವಜನಿಕರು ಒಟ್ಟಾಗಿ ಐಆರ್‌ಬಿಯವರಿಗೆ ಪಾಠ ಕಲಿಸಬೇಕಿದೆ ಎಂದರು.

ಹಟ್ಟಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ ನಾಯ್ಕ ಮಾತನಾಡಿ, ಹೆದ್ದಾರಿಯ ಅಪೂರ್ಣ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ನೂರಾರು ವಿದ್ಯಾರ್ಥಿಗಳು ಸರಿಯಾದ ಬಸ್ ತಂಗುದಾಣವಿಲ್ಲದೇ ಬಿಸಿಲಿನಲ್ಲಿ ನಿಲ್ಲುವಂತಾಗಿದೆ. ಸರ್ವಿಸ್ ರಸ್ತೆ ಇಲ್ಲದೇ ರಸ್ತೆ ದಾಟುವಾಗ ಅನೇಕ ಅಪಘಾತಗಳು ಕೂಡ ಸಂಭವಿಸಿವೆ ಎಂದು ದೂರಿದರು.

ಹಟ್ಟಿಕೇರಿ ಗ್ರಾ.ಪಂ ಅಧ್ಯಕ್ಷೆ ನಿಶಾ ನಾಯ್ಕ, ಸ್ಥಳೀಯ ಗ್ರಾ.ಪಂ ಸಭೆಗಳಲ್ಲಿ ಚರ್ಚೆಸಿ ಅಗತ್ಯ ಕ್ರಮ ವಹಿಸುವಂತೆ ಠರಾವು ಕಳಿಸಲಾಗಿದೆ. ಆದರೂ ಐಆರ್‌ಬಿ ಗಮನ ನೀಡುತ್ತಿಲ್ಲ. ಡಿವೈಡರ್‌ಗಳು ಕೂಡಾ ಅವೈಜ್ಞಾನಿಕವಾಗಿದ್ದು ಕೆಲವೊಮ್ಮೆ ಅವುಗಳಿಂದಲೂ ಅಪಘಾತಗಳಾಗಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಾರವಾಡ ಗ್ರಾ.ಪಂ. ಮಾಜಿ ಅಧ್ಯಕ್ಷ ಉಮೇಶ ಕಾಂಚನಾ, ಮಧು ಗೌಡ, ವಸಂತಿ ಗೌಡ, ಅನುರಾಧಾ ನಾಯ್ಕ ಮುಂತಾದವರಿದ್ದರು.

Read These Next