ಸಂಸತ್‌ನಲ್ಲಿ ಭಾರೀ ಭದ್ರತಾ ವೈಫಲ್ಯ ಖಂಡಿಸಿ ಪ್ರತಿಭಟನೆ; ಸದನದಲ್ಲಿ ಕೋಲಾಹಲ 15 ವಿಪಕ್ಷ ಸಂಸದರ ಅಮಾನತು

Source: Vb | By I.G. Bhatkali | Published on 16th December 2023, 1:43 AM | National News |

ಹೊಸದಿಲ್ಲಿ: ಬುಧವಾರ ಅಪರಾಹ್ನ ಸಂಸತ್ತಿನಲ್ಲಿ ಸಂಭವಿಸಿದ್ದ ಭಾರೀ ಭದ್ರತಾ ಲೋಪವನ್ನು ಪ್ರತಿಭಟಿಸಿ ಗುರುವಾರ ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದು, ಸದನ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಲೋಕಸಭೆಯ 14 ಮತ್ತು ರಾಜ್ಯ ಸಭೆಯ ಓರ್ವ ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಲೋಕಸಭಾ ಸಂಸದರಲ್ಲಿ ಕಾಂಗ್ರೆಸ್‌ನ ಒಂಭತ್ತು, ಸಿಪಿಎಂನ ಇಬ್ಬರು, ಸಿಪಿಐನ ಒಬ್ಬರು ಮತ್ತು ಡಿಎಂಕೆಯ ಇಬ್ಬರು ಸದಸ್ಯರು ಸೇರಿದ್ದಾರೆ.

ಲೋಕಸಭೆಯು ಮೊದಲು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಐವರು ಸಂಸದರಾದ ಟಿ.ಎನ್.ಪ್ರತಾಪನ್, ಹಿಬಿ ಎಡೆನ್, ಡೀನ್ ಕುರಿಯಾಕೋಸ್, ಜ್ಯೋತಿ ಮಣಿ ಮತ್ತು ರಮ್ಯಾ ಹರಿದಾಸ ಅವರನ್ನು 'ಪೀಠದ ನಿರ್ದೇಶನಗಳಿಗೆ ತೀರ ಅಗೌರವವನ್ನು' ತೋರಿಸಿದ್ದಕ್ಕಾಗಿ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು.

ಈ ಐವರು ಸಂಸದರನ್ನು ಅಮಾನತುಗೊಳಿಸುವ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಮಂಡಿಸಿದರು.

ನಂತರ ಪ್ರತಿಪಕ್ಷಗಳ ಇನ್ನೂ ಒಂಭತ್ತು ಸಂಸದರನ್ನು ಅಮಾನತುಗೊಳಿಸಲಾಯಿತು. ಕಾಂಗ್ರೆಸ್‌ನ ಮಾಣಿಕಂ ಟಾಗೋರ್, ಮುಹಮ್ಮದ್ ಜಾವೇದ್, ವಿ.ಕೆ.ಶ್ರೀಕಂದನ್ ಮತ್ತು ಬೆನ್ನಿ ಬೆಹನನ್, ಡಿಎಂಕೆಯ ಕೆ.ಕನಿಮೋಳಿ ಮತ್ತು ಎಸ್.ಆರ್.ಪಾರ್ಥಿಬನ್, ಸಿಪಿಎಮ್‌ ನ ಪಿ.ಆ‌ರ್. ನಟರಾಜನ್ ಮತ್ತು ಎಸ್.ವೆಂಕಟೇಶನ್ ಹಾಗೂ ಸಿಪಿಐನ ಕೆ.ಸುಬ್ಬರಾಯರಿ ಅಮಾನತುಗೊಂಡಿರುವ ಸಂಸದರಾಗಿದ್ದಾರೆ.

ಇದಕ್ಕೂ ಮುನ್ನ, ಅತ್ತ ರಾಜ್ಯಸಭೆಯಲ್ಲಿ ಸದನದಲ್ಲಿ 'ಅಶಿಸ್ತಿನ ವರ್ತನೆ'ಗಾಗಿ ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯಾನ್ ಅವರನ್ನು ಅಮಾನತುಗೊಳಿಸಲಾಗಿತ್ತು.

ಈ ಸಂಬಂಧ ಸದನ ನಾಯಕ ಪಿಯೂಷ್ ಗೋಯಲ್ ಅವರು ಸೂಚನೆಯನ್ನು ಮಂಡಿಸಿದ ಬಳಿಕ ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ನರ್ ಅವರು ಒಬ್ರಿಯಾನ್ ಅವರನ್ನು ಚಳಿಗಾಲದ ಉಳಿದ ಅವಧಿಗೆ ಅಮಾನತುಗೊಳಿಸಿದರು.

ಒಬ್ರಿಯಾನ್ ಅಮಾನತು ಕ್ರಮವನ್ನು ಟೀಕಿಸಿದ ಟಿಎಂಸಿ ಸಂಸದೆ ಡೋಲಾ ಸೇನ್ ಅವರು, ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು, ವಿಷಯವನ್ನು ಪ್ರಸ್ತಾಪಿಸುವುದು ಪ್ರತಿಪಕ್ಷವಾಗಿ ನಮ್ಮ ಕರ್ತವ್ಯವಾಗಿದೆ. ಗೃಹಸಚಿವರು ಸದನದಲ್ಲಿ ಹೇಳಿಕೆಯನ್ನು ನೀಡಿದ್ದರೆ ಈ ಸ್ಥಿತಿಯು ಉದ್ಭವಿಸುತ್ತಿರಲಿಲ್ಲ. ವಿಷಯವನ್ನೆತ್ತುವುದು ಪ್ರತಿಪಕ್ಷವಾಗಿ ನಮ್ಮ ಹಕ್ಕು ಆಗಿದೆ, ಹೀಗಾಗಿ ನಾವು ಸದನದ ಬಾವಿಗೆ ತೆರಳಿ ಘೋಷಣೆಗಳನ್ನು ಕೂಗಿದ್ದೆವು. ಅದಕ್ಕಾಗಿ ನಮ್ಮನ್ನು ಅಮಾನತುಗೊಳಿಸಲು ಅವರು ಬಯಸಿದರೆ ಹಾಗೆ ಮಾಡಬಹುದು' ಎಂದು ಹೇಳಿದರು.

ಸಭಾಪತಿಗಳು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೇಳಿದ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿಯವರು, ಸಂಸದರು ಧ್ವನಿ ಎತ್ತದಿದ್ದರೆ ಏನು ಅರ್ಥವಿದೆ? ಬಿಜೆಪಿ ಸಂಸದರೋರ್ವರ ಮೂಲಕ ಬಂದಿದ್ದ ಇಬ್ಬರು ಪ್ರಜಾಪ್ರಭುತ್ವದ ದೇಗುಲದ ಭದ್ರತೆಯನ್ನು ಉಲ್ಲಂಘಿಸಿದ್ದಾರೆ. ಅದು ಹೊಗೆ ಬಾಂಬ್ ಅಥವಾ ಬಣ್ಣದ ಬಾಂಬ್ ಆಗಿರಲಿ,ಬಾಂಬ್ ಸದನವನ್ನು ತಲುಪಿತ್ತು ಎಂದು ಹೇಳಿದರು.

ಭದ್ರತಾ ವೈಫಲ್ಯಕ್ಕಾಗಿ ಸರಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷಗಳ ಸದಸ್ಯರು ಗೃಹಸಚಿವ ಅಮಿತ್ ಶಾ ಅವರಿಂದ ಹೇಳಿಕೆಗಾಗಿ ಆಗ್ರಹಿಸುತ್ತಿದ್ದಾರೆ. ದುಷ್ಕರ್ಮಿಗಳಿಗೆ ಲೋಕಸಭೆಯ ಪಾಸ್ ಒದಗಿ ಸಿದ್ದ ಬಿಜೆಪಿ ಸಂಸದ ಪ್ರತಾಪ ಸಿಂಹ ವಿರುದ್ದ ಕ್ರಮಕ್ಕೂ ಅವರು ಪಟ್ಟು ಹಿಡಿದಿದ್ದಾರೆ.

ಬುಧವಾರ ಗಂಭೀರ ಭದ್ರತಾ ವೈಫಲ್ಯದ ಹಿನ್ನೆಲೆಯಲ್ಲಿ ಉದ್ವಿಗ್ನತೆಯ ನಡುವೆಯೇ ಸಂಸತ್ತು ಗುರುವಾರ ಮರು ಸಮಾವೇಶಗೊಂಡಿತ್ತು. ಬುಧವಾರ ಶೂನ್ಯವೇಳೆಯಲ್ಲಿ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ನುಗ್ಗಿದ್ದ ಇಬ್ಬರು ದುಷ್ಕರ್ಮಿಗಳು ಸ್ಟೋಕ್ ಕ್ಯಾನಿಸ್ಟರ್‌ಗಳನ್ನು ಸಿಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರಿಂದ ಸದನದಲ್ಲಿ ಉಪಸ್ಥಿತರಿರಲಿಲ್ಲ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...