ಸಹಕಾರ ಇಲಾಖೆಯ ಕಲಬುರಗಿ ಪ್ರಾಂತ್ಯದ ಪ್ರಗತಿ ಪರಿಶೀಲನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಕಾರಿ ವ್ಯವಸ್ಥೆ ಆಂದೋಲನ ರೂಪಗೊಳ್ಳಲಿ : ಸಚಿವ ಕೆ.ಎನ್.ರಾಜಣ್ಣ

Source: SO News | By Laxmi Tanaya | Published on 26th July 2023, 9:50 PM | State News | Don't Miss |

ಕಲಬುರಗಿ :  ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಕಾರಿ ವ್ಯವಸ್ಥೆ ಬಗ್ಗೆ ಸ್ಥಳೀಯರಿಗೆ ಹೆಚ್ಚಿನ ಆಸಕ್ತಿ ಇಲ್ಲ. ಅದು ಗೌಡರು-ಪಟೇಲರ ಆಸ್ತಿ‌ ಎಂದು ನಂಬಿದ್ದು, ಈ ಮನಸ್ಥಿತಿಯನ್ನು ಹೋಗಲಾಡಿಸಿ ಇಲ್ಲಿನ ಜನರಲ್ಲಿ ಆರ್ಥಿಕ ಸದೃಢತೆ ತರಲು ಸಹಕಾರಿ ವ್ಯವಸ್ಥೆಯನ್ನು ಇಲ್ಲಿ ಆಂದೋಲನ ರೂಪದಲ್ಲಿ ಜಾರಿಗೆ ತರಬೇಕು ಎಂದು ರಾಜ್ಯದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ಕರೆ ನೀಡಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ  ಸಭಾಂಗಣದಲ್ಲಿ ಸಹಕಾರ ಇಲಾಖೆಯ ಕಲಬುರಗಿ ಪ್ರಾಂತ್ಯದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳ ಅಸ್ತಿಗಳ ಮೇಲೆ ಪ್ರತಿ ಟ್ರಸ್ಟಿ ಸಮಾನ ಹಕ್ಕು ಹೊಂದಿದವನಾಗುತ್ತಾನೆ. ಇದುವೇ ಸಹಕಾರಿ ತತ್ವ ಎಂದ ಸಚಿವರು, ಸಹಕಾರಿ ಆಸ್ತಿಯನ್ನು ಖಾಸಗಿಯವರ ಪಾಲಾಗಲು ಅಧಿಕಾರಿಗಳು ಬಿಡಬಾರದೆಂದು ಖಡಕ್ ಸೂಚನೆ ನೀಡಿದರು.

ಡಿ.ಸಿ.ಸಿ. ಬ್ಯಾಂಕ್ ಗಳ ಬಗ್ಗೆ ಜನಸಾಮಾನ್ಯರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದ್ದು, ಇದನ್ನು ಹೋಗಲಾಡಿಸಲು ಡಿ.ಸಿ.ಸಿ. ಬ್ಯಾಂಕ್ ಗಳು ಮುಂದಾಗಬೇಕು. ಕೇವಲ ಸಾಲ ನೀಡಲು ಮತ್ತು ವಸೂಲಿ ಮಾಡುವುದಷ್ಟೆ ಬ್ಯಾಂಕ್ ಕೆಲಸ‌ ಅಲ್ಲ‌ ಎಂದ ಸಚಿವರು, ಬ್ಯಾಂಕ್ ಬಲವರ್ಧನೆಗೂ ಶ್ರಮಿಸಬೇಕು. ಇನ್ನು ಸಾಲ ನೀಡುವ ವಿಚಾರದಲ್ಲಿ  ತಾರತಮ್ಯ ಸಲ್ಲ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶೇ.50-50 ಅನುಪಾತದಲ್ಲಿ ಕೃಷಿ ಹಾಗೂ ಕೃಷಿಯೇತರ ವಲಯಕ್ಕೆ ಸಾಲ ನೀಡಬೇಕು. ಕೃಷಿ‌ ವಲಯಕ್ಕೆ‌ ನೀಡುವ ಸಾಲದಿಂದ ಲಾಭ ನಿರೀಕ್ಷಿಸುವಂತಿಲ್ಲ. ಹೀಗಾಗಿ ಲಾಭಕ್ಕೆ ಕೃಷಿಯೇತರ ವಲಯವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳಬೇಕು. ವಿಶೇಷವಾಗಿ ಸಾರ್ವಜನಿಕರ ಬಳಿಗೆ ಬ್ಯಾಂಕ್  ಸಿಬ್ಬಂದಿ ಹೋಗಿ ಸಹಕಾರಿ ಬ್ಯಾಂಕಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಹೊಸ‌ ಸದಸ್ಯರ ನೋಂದಣಿ, ಸಹಕಾರಿ ಸಂಘ ಸ್ಥಾಪನೆ ನಂತರ ಸಿಗುವ ಸವಲತ್ತುಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಒಟ್ಟಿನಲ್ಲಿ ಬ್ಯಾಂಕಿನತ್ತ ಸಾರ್ವಜನಿಕರ ಆಕರ್ಷಣೆಗೆ ಗ್ರಾಹಕರ ದಿನಾಚರಣೆ, ಗ್ರಾಹಕರ ಬೀಟ್ ನಂತಹ ವಿನೂತನ  ಕಾರ್ಯಕ್ರಮ ಆಯೋಜಿಸಬೇಕು ಎಂದು  ಡಿ.ಸಿ.ಸಿ ಬ್ಯಾಂಕ್  ಎಂ.ಡಿ. ಗಳಿಗೆ ಸಚಿವರು ಸೂಚಿಸಿದರು.

ಸಾಲ ವಸೂಲಾತಿ ಸರಿಯಾಗಿಲ್ಲದೆ‌ ಹೋದಲ್ಲಿ ಬ್ಯಾಂಕ್‌ ದಿವಾಳಿಯಾಗುತ್ತವೆ ಎಂದು ಎಚ್ಚರಿಕೆ‌ ನೀಡಿದ ಸಚಿವರು, ಸಾಲ‌ ನೀಡಿದ ಮೇಲೆ ವಸೂಲು ಮಾಡುವ ಜವಾಬ್ದಾರಿ ನಿಮ್ಮದಲ್ಲವೆ ಎಂದು ಬ್ಯಾಂಕ್ ವ್ಯವಸ್ಥಾಪಕರನ್ನು ಪ್ರಶ್ನಿಸಿದ ಸಚಿವ ಕೆ.ಎನ್.ರಾಜಣ್ಣ ಅವರು, ಶಾಖಾ ವ್ಯವಸ್ಥಾಪಕರಿಗೆ 2 ಲಕ್ಷ‌ ರೂ. ಸಾಲ ನೀಡುವ ಅಧಿಕಾರ ನೀಡಿದ್ದು, ಈ ಬಗ್ಗೆ ಮರು ಪರಿಶೀಲಿಸಿಬೇಕು. ರೋಜಗಾರ್ ಯೋಜನೆಯಡಿ ಶಾಖಾ ವ್ಯವಸ್ಥಾಪಕರಿಗೆ 50 ಸಾವಿರ ರೂ. ಮಿತಿ ಇದೆ. ಇಲ್ಲೇಕೆ ಹೆಚ್ಚಳ ಎಂದು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಶಾಖಾ ವ್ಯವಸ್ಥಾಪಕರು ತಮ್ಮ ವಿವೇವಚನಾ ಅಡಿಯಲ್ಲಿ ನೀಡಿದ 2 ಲಕ್ಷ‌ ರೂ. ಸಾಲಕ್ಕೆ ಮರುಪಾವತಿ ಸಹ  ಸರಿಯಾಗಿ ಆಗುತ್ತಿಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಸಹಕಾರ ಇಲಾಖೆಯ ಬಹುತೇಕ ಕಚೇರಿಗಳು  ಬಾಡಿಗೆ ಕಟ್ಟಡದಲ್ಲಿ ಕೆಲಸ‌ ನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ ಚಿಂತನೆ‌ ನಡೆದಿದೆ. ಪ್ರಸ್ತಾವನೆ‌ ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದು. ಅಲ್ಲದೆ ಇಲಾಖೆಯಲ್ಲಿನ ಗ್ರೂಪ್-ಎ ಮತ್ತು ಗ್ರೂಪ್-ಬಿ ಅಧಿಕಾರಿಗಳ ಭರ್ತಿಗೂ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳಿಗೆ ಸಚಿವರು ತಿಳಿಸಿದರು. 

ಚಿಟ್ ಫಂಡ್ ಕುರಿತ ದೂರು ಗಂಭೀರವಾಗಿ ಪರಿಗಣಿಸಿ: ಚಿಟ್ ಫಂಡ್ ನಲ್ಲಿ ಸಾರ್ವಜನಿಕರು ಮೋಸ ಹೋದ ಕುರಿತು ಅನೇಕ‌ ದೂರುಗಳು ತಮ್ಮ‌ ಗಮನಕ್ಕೆ ಬರುತ್ತಿವೆ. ತಮ್ಮ ಜಿಲ್ಲೆಯಲ್ಲಿ ಇಂತಹ ಯಾವುದೇ ದೂರು ಬಂದಲ್ಲಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಮೂಲಕ ಶಿಕ್ಷಿಸಿ ಸಾರ್ವಜನಿಕರನ್ನು ರಕ್ಷಿಸುವ ಕೆಲಸ ಸಹಕಾರ ಇಲಾಖೆ ಮಾಡಬೇಕು ಎಂದರು.

ಕೋರ್ಟ್‌ ನಿಯಮಿತವಾಗಿ ನಡೆಯಲಿ:
ಸಹಕಾರಿ ಸಂಘಗಳಲ್ಲಿನ ಹಣ ದುರಪಯೋಗ ಪ್ರಕರಣಗಳ ಕುರಿತಂತೆ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು, ಉಪ ನಿಬಂಧಕರು ಹಾಗೂ ಜಂಡಿ ನಿಬಂಧಕರ ನೇತೃತ್ವದಲ್ಲಿ ನಡೆಯುವ ಕೋರ್ಟ್ ಮಾದರಿ ವಿಚಾರಣೆಗಳು ಪ್ರತಿ ಸೋಮವಾರ, ಗುರುವಾರ ನಿಯಮಿತವಾಗಿ ನಡೆಸಬೇಕು. ಅನಗತ್ಯ ವಿಚಾರಣೆ ಮುಂದೂಡಬಾರದು. ಅಲ್ಲದೆ ಪ್ರಕರಣ ಶೀಘ್ರ ವಿಲೇವಾರಿ ಮಾಡಬೇಕು‌ ಎಂದು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಹೈಕೋರ್ಟ್, ಸುಪ್ರೀಂ ಕೋರ್ಟ್, ಮೇಲ್ಮನವಿ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ನಿಗಾ ವಹಿಸುವಂತೆ ಕೇಂದ್ರ ಕಚೇರಿಯ ಅಪರ ನಿಬಂಧಕ ಕಲ್ಲಪ್ಪ ಅವರಿಗೆ ಸೂಚನೆ ನೀಡಿದರು.

ಹಣ ದುರಪಯೋಗ ಪ್ರಕರಣಗಳಿಗೆ ಅಂತ್ಯ ಹಾಡಿ :  ವಿವಿಧ ಸಹಕಾರಿ ಸಂಘಗಳಲ್ಲಿನ ಹಣ ದುರಪಯೋಗ ಪ್ರಕರಣಗಳು ಬಹಳಷ್ಟು ವರ್ಷದಿಂದ‌‌ ವಿಚಾರಣೆ ನಡೆಯುತ್ತಿದ್ದು, ಅದೆಲ್ಲವನ್ನು ಅಂತ್ಯ ಹಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸಹಕಾರ ನಿಬಂಧಕ ಡಾ. ಕ್ಯಾಪ್ಟನ್ ಕೆ.ರಾಜೇಂದ್ರ ಅವರಿಗೆ ಸೂಚನೆ ನೀಡಿದರು.

ಸಹಕಾರ ಸಂಘಗಳ ನಿಬಂಧಕ ಡಾ. ಕ್ಯಾಪ್ಟನ್ ಕೆ. ರಾಜೇಂದ್ರ ಮಾತನಾಡಿ, 6 ತಿಂಗಳ ಮೀರಿದ ಸಹಕಾರಿ ಹಣ ದುರಪಯೋಗ ಪ್ರಕರಣ ಸೇರಿದಂತೆ ಇನ್ನಿತರ ಸೇವಾ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ತನ್ನ ಆಯವ್ಯಯದಲ್ಲಿ 10 ಸಾವಿರ ಕೋಟಿ ರೂ. ಮೀಸಲಿರಿಸದ್ದು, ರಾಜ್ಯ ಸರ್ಕಾರ‌ ಮುತುವರ್ಜಿ ವಹಿಸಿದಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಬಹುದಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ಯಾಕ್ಸ್ ಸಂಸ್ಥೆಗಳು ಸ್ಥಾಪನೆಗೆ ನಿರ್ಧರಿಸಿದ್ದು, ಇದೇ ಡಿಸೆಂಬರ್ ಅಂತ್ಯದೊಳಗೆ ಗ್ರಾ.ಪಂ. ವ್ಯಾಪ್ತಿಯ ಗಡಿ ಗುರುತಿಸಿ ಮಾಹಿತಿ ನೀಡಬೇಕೆಂದರು.
ಸಹಕಾರ ಸಂಘಗಳ ಅಪರ ನಿಬಂಧಕ ಕೆ.ಆಶಾ, ಪ್ರಕಾಶ ರಾವ್ ಹೆಚ್., ಬಾಲಶೇಖರ, ಲಿಂಗರಾಜು, ಜಂಟಿ ನಿಬಂಧಕರುಗಳಾದ ಎಸ್.ಮಹೇಶ, ಕಲ್ಲಪ್ಪ ಓಬಣ್ಣಗೋಳ, ಜಯಪ್ರಕಾಶ, ಕಲಬುರಗಿ ಪ್ರಾಂತ್ಯದ ಜಂಟಿ ನಿರ್ದೇಶಕ ವಿಶ್ವನಾಥ ಮಲಕೂಡ ಕಲಬುರಗಿ ವಿಭಾಗದ ಸಹಕಾರ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...