ಬೆಂಗಳೂರು: ಪೊಲೀಸರ ಅತಿರೇಕಕ್ಕೆ ಆಕ್ರೋಶ

Source: VB | By S O News | Published on 11th May 2021, 4:59 PM | State News |

ಬೆಂಗಳೂರು: ರಾಜ್ಯ ಸರಕಾರ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸಿರುವ ಮೊದಲನೇ ದಿನವಾದ ಸೋಮವಾರವೇ ರಾಜ್ಯದೆಲ್ಲೆಡೆ ಪೊಲೀಸರ ವರ್ತನೆ ಅತಿರೇಕವಾಗಿ ಕಂಡು ಬಂದಿದ್ದು, ಲಾಠಿ ಏಟಿನ ನಡೆಗೆ ಸಾರ್ವಜನಿಕರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಸರಕಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿತ್ತು. ಆದರೆ, 10 ಗಂಟೆಯ ಮೇಲೆ ರಸ್ತೆಗೆ ಬರುವವರೆಲ್ಲರೂ  ಅನವಶ್ಯಕವಾಗಿ ಓಡಾಟ ನಡೆಸುತ್ತಿದ್ದಾರೆಂದು ಭಾವಿಸಿ ಅನೇಕ ಭಾಗಗಳಲ್ಲಿ ಪೊಲೀಸರು ಸಾರ್ವಜನಿಕರನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆಗಳು ವರದಿಯಾಗಿವೆ.

ರಾಜಧಾನಿ ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ, ಬೀದರ್‌ ಸೇರಿದಂತೆ

ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸರು ಸುಖಾಸುಮ್ಮನೆ ಲಾಠಿ ಬೀಸಿ, ವಾಹನಗಳನ್ನು ಜಪ್ತಿ ಮಾಡಿರುವ ಆರೋಪಗಳು ಕೇಳಿಬಂದಿವೆ. ಜತೆಗೆ ಕೋವಿಡ್ ಕಠಿಣ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನ ಸಾಮಾನ್ಯರನ್ನು ಅಪರಾಧಿಗಳಂತೆ ನಡೆಸಿಕೊಂಡು ಶಿಕ್ಷೆ ಕೊಡಲು ಪೊಲೀಸರಿಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇಲ್ಲಿನ ಬೆಳಗಾವಿಯ ಗಣಪತಿ ಬೀದಿ, ಶನಿವಾರ ಪೇಟೆ, ತರಕಾರಿ ಮಾರುಕಟ್ಟೆ ಹಾಗೂ ಮುಖ್ಯ ಮಾರ್ಕೆಟ್ ನಲ್ಲಿ ವ್ಯಾಪಾರ ವಹಿವಾಟಿಗೆ ಮುಂದಾಗುತ್ತಿದ್ದವರ ಅಂಗಡಿ ಮುಂಗಟ್ಟು ಗಳನ್ನು ಪೊಲೀಸರು ಬಂದ್ ಮಾಡಿಸಿದರು. ಆನಂತರ ಮನೆಗೆ ತೆರಳುತ್ತಿರುವ ಕೆಲ ವ್ಯಾಪಾರಿಗಳ ಮೇಲೆ ಪೊಲೀಸರು ಲಾಠಿಬೀಸಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ. ವ್ಯಾಪಾರ ಮುಗಿಸಿ ಮನೆಗೆ ತಲುಪುವುದಕ್ಕೆ 11ರಿಂದ 12 ಗಂಟೆ ಆಗುತ್ತದೆ. ಆದರೆ, ಆಗ ನಮ್ಮನ್ನು ಅಡ್ಡಗಟ್ಟಿ ಪೊಲೀಸರು ಪ್ರಶ್ನಿಸಿದರು, ವ್ಯಾಪಾರ ಮುಗಿಸಿ ಬರುತ್ತಿದ್ದೇವೆ ಎಂದರೂ ಕೇಳದೆ, ಲಾಠಿ ಏಟು ನೀಡಿದರು ಎಂದು ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತೊಂದರೆಗೆ ಸಿಲುಕಿದ ಡಿ ದರ್ಜೆ ನೌಕರರು, ಪೌರಕಾರ್ಮಿಕರು: ರಾಜಧಾನಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿರುವ ಪೊಲೀಸರು, ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಗುರುತಿನ ಚೀಟಿ ಇಲ್ಲದೆ ಡಿ ದರ್ಜೆ ನೌಕರರು, ಪೌರ ಕಾರ್ಮಿಕರು ತೊಂದರೆಗೆ ಸಿಲುಕಿದರು.

ನಗರವೊಂದರಲ್ಲಿಯೇ 2 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರೆ, ಇನ್ನು ಕೆಲವರಿಗೆ ಲಾಠಿ ಏಟು ಬಿದ್ದವು. ಈ ಸಂದರ್ಭದಲ್ಲಿ ಬೆಸ್ಕಾಂ ಕಾರು ಚಾಲಕನೋರ್ವ ಆಕ್ರೋಶ ಹೊರಹಾಕಿ, ಸಣ್ಣಪುಟ್ಟ ಕೆಲಸ ಮಾಡುವವರಿಗೆ ಯಾವುದೇ ಗುರುತಿನ ಚೀಟಿ ಇರುವುದಿಲ್ಲ. ಅಂತಹವರನ್ನೇ ಪೊಲೀಸರು ಗುರಿಯಾಗಿ ಸಿಕೊಂಡಿದ್ದಾರೆ ಎಂದು ದೂರಿದರು.

ಪ್ರಮಾಣ ವಚನ ಬೋಧನೆ: ಇಲ್ಲಿನ ಕೃಪಾನಿಧಿ ಸರ್ಕಲ್‌ನಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ಅಗ್ನೀಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಇನ್ನು ಮುಂದೆ ಕೋಡ್ ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ವಚನ ಬೋಧಿಸಿದ ಘಟನೆ ನಡೆಯಿತು. ಅದೇ ರೀತಿ, ಅನಗತ್ಯವಾಗಿ ಓಡಾಡುತ್ತಿದ್ದ ಆಟೊ ಚಾಲಕರಿಗೆ ಇಲ್ಲಿನ ಕೆ.ಆರ್. ಮಾರ್ಕೆಟ್ ಠಾಣಾ ಪೊಲೀಸರು ಬಸ್ಕಿ ಹೊಡಿಸಿದರು.

ಸಾರ್ವಜನಿಕರ ಮೇಲೆ ಲಾಠಿ ಪ್ರಹಾರ, ಪೊಲೀಸರ ವಿರುದ್ಧ ದೂರು ಸಲ್ಲಿಕೆ

ಬೆಂಗಳೂರು: ಕೋವಿಡ್ ಮಾರ್ಗಸೂಚಿ ಗಳನ್ನು ಜಾರಿಗೆ ತರುವ ನೆಪದಲ್ಲಿ ಪೊಲೀಸರು ಸಾರ್ವಜನಿಕರ ಮೇಲೆ ಲಾಠಿ ಪ್ರಹಾರ ನಡೆಸುತ್ತಿದ್ದು, ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ನ್ಯಾಯವಾದಿಗಳಾದ ಎಸ್.ಉಮಾಪತಿ ಹಾಗೂ ಸುಧಾ ಕಾಟವಾ, ಸರಕಾರ ಹಾಗೂ ಪೊಲೀಸ್ ಮುಖ್ಯಸ್ಥರಿಗೆ ಪ್ರತ್ಯೇಕವಾಗಿ ದೂರು ನೀಡಿದ್ದಾರೆ.

ಸರಕಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿಲ್ಲ. ಅಗತ್ಯ ಸೇವೆ ಮತ್ತು ಚಿಕಿತ್ಸೆಗಳಿಗೆ ಸಂಚರಿಸಲು ಅವಕಾಶ ಕೊಟ್ಟಿದೆ. ಹಾಗಿದ್ದೂ ಪೊಲೀಸರು, ಜನರು ಯಾವ ಕಾರಣಕ್ಕೆ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಪಡೆಯುವ ಮುನ್ನವೇ ದಾಳಿ ಮಾಡುತ್ತಿದ್ದಾರೆ. ನಾಗರಿಕರ ವಯಸ್ಸು, ಲಿಂಗ, ಸ್ಥಿತಿ ಯಾವುದನ್ನೂ ಲೆಕ್ಕಿಸದೇ ಹಲ್ಲೆ ಮಾಡುತ್ತಿದ್ದಾರೆ ಎಂದು ನ್ಯಾಯವಾದಿ ಉಮಾಪತಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಪೊಲೀಸರು ಸಾರ್ವಜನಿಕರ ಮೇಲೆ ದರ್ಪ ತೋರುತ್ತಿರುವ ಘಟನೆಗಳು ವರದಿಯಾಗಿದ್ದು,

ಜನ ಹೊರಗೆ ಬಂದರೆ ದಿನಕ್ಕೆ ಬಡಿದಂತೆ ಬಡಿಯುವ ಲಾಕ್‌ಡನ್ ಜಾರಿಗೆ ಬಂದಿದೆ. ಜನಸಂಚಾರ ತಡೆಯು ವುದೇ ಲಾಕ್‌ಡೌನ್ ಎಂದು ಭಾವಿಸಿರುವ ಸರಕಾರ ಸಂಕಷ್ಟದಲ್ಲಿರುವ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್‌ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್‌ಡೌನ್ ಆಗಿತ್ತು.

ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ಕೊರೋನ 2ನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ನಿಯಮ ಮೀರಿ ಹೊರಗೆ ಓಡಾಡುವ ಸಂದರ್ಭದಲ್ಲಿ ಕರ್ನಾಟಕದ ಪೊಲೀಸರು ಅವರನ್ನು ಸೌಜನ್ಯದಿಂದ ವಿಚಾರಿಸಿ, ಅವರು ನಿಯಮ ಮೀರಿದ್ದ ಪಕ್ಷದಲ್ಲಿ ದಂಡ ವಿಧಿಸಬೇಕು ಅಥವಾ ಪ್ರಕರಣ ದಾಖಲಿಸಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಆದರೆ, ಪೊಲೀಸರಿಗೆ ಶಿಕ್ಷಿಸುವ ಅಧಿಕಾರವಿಲ್ಲ.

ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

ಈ ಸಂಬಂಧ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ, ಜನರೊಂದಿಗೆ ಸೌಮ್ಯವಾಗಿ ವರ್ತಿಸಲು ತಾಕೀತು ಮಾಡುವಂತೆ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಕೀಲೆ ಸುಧಾ ಕಾಟವಾ ದೂರು ಸಲ್ಲಿಕೆ ಮಾಡಿದ್ದಾರೆ.

ವಾಹನ ಬಳಕೆಗೆ ಅವಕಾಶ: ಡಿಜಿಪಿ

ಬೆಂಗಳೂರು: ರಾಜ್ಯ ಸರಕಾರ ಜಾರಿಗೊಳಿಸಿ ರುವ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಮನೆಯ ಹತ್ತಿರ ಸಂಚಾರ ನಡೆಸಲು ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಸೋಮವಾರ ಈ ಕುರಿತು ಟ್ವೀಟ್ ಮಾಡಲಾಗಿದ್ದು, ಮನೆಯ ಸುತ್ತಮುತ್ತಲೂ ತರಕಾರಿ, ದಿನಸಿ ತರಲು ವಾಹನ ಬಳಸಬಹುದು. ಅಗತ್ಯವಿದ್ದಾಗ ಮಾತ್ರ ಇದನ್ನು ಬಳಕೆ ಮಾಡಿ, ಎಲ್ಲೆಂದರಲ್ಲಿ ತಿರುಗಾಡಲು ಇದು ಪರವಾನಿಗೆ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಅಂಗಡಿಗಳು ಇರುವ ಪ್ರದೇಶಕ್ಕೆ ವಾಹನದಲ್ಲಿ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಬಹುದು ಎಂದೂ ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ನಾನು ಅಸ್ತಮಾ ರೋಗಿಯಾಗಿದ್ದು ಔಷಧಿಗಳನ್ನು ಖರೀದಿಸಬೇಕಾಗಿದೆ. ಪ್ರಸಕ್ತ ನಾನು ಸ್ವಗ್ರಾಮದಲ್ಲಿದ್ದೇನೆ. ಸಮೀಪದ ಪಟ್ಟಣ 15 ಕಿ.ಮೀ. ದೂರದಲ್ಲಿದೆ. ಕಾರನ್ನು ಬಳಸಬಾರದು ಎಂದು ಪೊಲೀಸರು ಹೇಳುತ್ತಾರೆ. ಜೀವ ಉಳಿಸುವ ಔಷಧ ಖರೀದಿಸಿ ಬರಲು 30 ಕಿ.ಮೀ. ದೂರ ನಾನು ಹೇಗೆ ನಡೆಯಲಿ? ಸರಕಾರಕ್ಕೆ ಪ್ರಜ್ಞೆ ಇಲ್ಲವೇ?” ಎಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ 62 ವರ್ಷದ ರೈತ ಶ್ರೀಧರ್ ಪ್ರಶ್ನಿಸಿದ್ದಾರೆ.

ಜನತೆ ದಂಗೆ ಏಳುವ ಸಂಭವ: ಕಾಂಗ್ರೆಸ್

ಪೊಲೀಸರ ಲಾಠಿ ಏಟು ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪೊಲೀಸರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೇ ಹೊರತು ದೌರ್ಜನ್ಯಕ್ಕೆ ಇಳಿಯಬಾರದು. ಕಳೆದ ವರ್ಷದ ಲಾಕ್‌ಡನ್ ನಿಂದಾದ ಹಾನಿಯಿಂದ ಜನರು ಇನ್ನೂ ಸುಧಾರಿಸಿಕೊಂಡಿಲ್ಲ. ಈ ಹೊತ್ತಿನಲ್ಲಿ ಪೊಲೀಸರು ಸಂಯಮದಿಂದ ವರ್ತಿಸದೆ ಹೋದರೆ ಜನತೆ ದಂಗೆ ಏಳುವ ಸಂಭವವಿದೆ ಎಂದು ತಿಳಿಸಿದೆ.

 

 

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...