ಮಣಿಪುರ ಕುರಿತ ಮೋದಿ ಭಾಷಣವನ್ನು ಟೀಕಿಸಿದ ರಾಹುಲ್; ಪ್ರಧಾನಿ ನಾಚಿಕೆಯಿಲ್ಲದೆ ನಗುತ್ತಿದ್ದರು,ಹಾಸ್ಯ ಮಾಡುತ್ತಿದ್ದರು

Source: Vb | By I.G. Bhatkali | Published on 12th August 2023, 9:22 AM | National News |

ಹೊಸದಿಲ್ಲಿ: ಲೋಕಸಭೆಯು ಮಣಿಪುರ ಜನಾಂಗೀಯ ಹಿಂಸಾಚಾರದ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾಗ, ಪ್ರಧಾನಿ ಹಾಸ್ಯ ಮತ್ತು ತಮಾಷೆಯಲ್ಲಿ ತೊಡಗಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.

“ನಿನ್ನೆ, ಪ್ರಧಾನಿ ಸಂಸತ್‌ನಲ್ಲಿ ಸುಮಾರು 2 ಗಂಟೆ ಮತ್ತು 13 ನಿಮಿಷ ಮಾತನಾಡಿದರು. ಕೊನೆಯಲ್ಲಿ, ಅವರು ಮಣಿಪುರದ ಬಗ್ಗೆ 2 ನಿಮಿಷ ಮಾತನಾಡಿದರು. ಮಣಿಪುರವು ತಿಂಗಳುಗಳಿಂದ ಉರಿಯುತ್ತಿದೆ, ಜನರನ್ನು ಕೊಲ್ಲಲಾಗುತ್ತಿದೆ, ಅತ್ಯಾಚಾರಗಳು ನಡೆಯುತ್ತಿವೆ. ಆದರೆ ಪ್ರಧಾನಿ ನಗುತ್ತಿದ್ದರು, ಹಾಸ್ಯ ಚಟಾಕಿಗಳನ್ನು ಹಾರಿಸುತ್ತಿದ್ದರು. ಇದು ಅವರಿಗೆ ಒಪ್ಪುವುದಿಲ್ಲ' ಎಂದು ರಾಹುಲ್ ಗಾಂಧಿ ಹೇಳಿದರು.

“ಭಾರತೀಯ ಸೇನೆಯು ಈ ಹಿಂಸಾಚಾರವನ್ನು ಎರಡು ದಿನಗಳಲ್ಲಿ ನಿಲ್ಲಿಸಬಹುದು, ಆದರೆ ಪ್ರಧಾನಿ ಮಣಿಪುರವನ್ನು ಉರಿಸಲು ಬಯಸಿದ್ದಾರೆಯೇ ಹೊರತು, ಅಲ್ಲಿನ ಬೆಂಕಿ ಆರುವುದು ಅವರಿಗೆ ಬೇಕಿಲ್ಲ' ಎಂದು ರಾಹುಲ್ ಆರೋಪಿಸಿದರು.

“2028ರ ಅವಿಶ್ವಾಸ ನಿರ್ಣಯ'ದ ಬಗ್ಗೆ ಮೋದಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ರಾಹುಲ್, “2024ರಲ್ಲಿ ಮೋದಿ ಪ್ರಧಾನಿಯಾಗುತ್ತಾರೆಯೇ ಎನ್ನುವುದು ವಿಷಯವಲ್ಲ, ಮಣಿಪುರದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಜನರನ್ನು ಕೊಲ್ಲಲಾಗುತ್ತಿದೆ ಎನ್ನುವುದೇ ಪ್ರಮುಖ ವಿಷಯ” ಎಂದರು.

“ಪ್ರಧಾನಿಯವರು ಮಣಿಪುರಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು, ಅಲ್ಲಿನ ಜನರೊಂದಿಗೆ ಮಾತನಾಡಬೇಕು, ನಾನು ನಿಮ್ಮ ಪ್ರಧಾನಿ, ನಾವು ಮಾತನಾಡುವ ಎಂದು ಅವರಿಗೆ ಹೇಳಬೇಕು. ಆದರೆ, ಪ್ರಧಾನಿಯಲ್ಲಿ ಈ ಉದ್ದೇಶ ಇರುವುದು ನನಗೆ ಕಾಣುತ್ತಿಲ್ಲ” ಎಂದು ವಯನಾಡ್‌ನ ಕಾಂಗ್ರೆಸ್ ಸಂಸದ ಹೇಳಿದರು.

ಸಂಸತ್‌ ನಿಂದ ಸಂಸದರನ್ನು ಅಮಾನತುಗೊಳಿಸಲಾಗುತ್ತಿರುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಅವರು (ಸರಕಾರ) ಸಂಸದರನ್ನು ಅಮಾನುತುಗೊಳಿಸಿದರೂ ನಮ್ಮ ಕೆಲಸದಲ್ಲಿ ಬದಲಾವಣೆಯಾಗುವುದಿಲ್ಲ. ಮಣಿಪುರದಲ್ಲಿ ಹಿಂಸೆಯನ್ನು ನಿಲ್ಲಿಸುವುದೇ ನಮ್ಮ ಕೆಲಸ' ಎಂದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...