ಪತಂಜಲಿಯಿಂದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ರಿಯಲ್ ಎಸ್ಟೇಟ್ ದಂಧೆ; ಬೇನಾಮಿ ಕಂಪೆನಿ ಮೂಲಕ ವ್ಯವಹಾರ

Source: Vb | By I.G. Bhatkali | Published on 24th November 2023, 11:27 AM | National News |

ಹೊಸದಿಲ್ಲಿ: ತಪ್ಪು ಮಾಹಿತಿಯುಳ್ಳ ಮತ್ತು ಜನರ ದಾರಿ ತಪ್ಪಿಸುವ ಪತಂಜಲಿ ಉತ್ಪನ್ನಗಳ ಜಾಹೀರಾತುಗಳಿಗಾಗಿ ಬಾಬಾ ರಾಮ್‌ದೇವ್ ಸುಪ್ರೀಂ ಕೋರ್ಟ್ ತರಾಟೆಗೆ ಒಳಗಾಗಿರುವ ಹೊತ್ತಲ್ಲೇ, ಮತ್ತೂ ಒಂದು ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಅವರು ಶೆಲ್ ಕಂಪೆನಿಗಳ ಮೂಲಕ ದಿಲ್ಲಿಗೆ ಸಮೀಪದ, ಹರ್ಯಾಣದ ಮಂಗರ್ ಗ್ರಾಮದಲ್ಲಿ ಕೋಟ್ಯಂತರ ರೂ. ಮೌಲ್ಯದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ವಿಚಾರವನ್ನು reporters-collective.in ತನಿಖಾ ವರದಿ ಬಯಲು ಮಾಡಿದೆ.

ಹಲವಾರು ಕಂಪೆನಿಗಳು ಇಲ್ಲಿ ಭೂಮಿ ಖರೀದಿಸಿದ್ದು, ಅವೆಲ್ಲವೂ ಬಾಬಾ ರಾಮ್‌ದೇವ್ ಅವರ ಪತಂಜಲಿ ಕಂಪೆನಿಗೆ ಸೇರಿದವಾಗಿವೆ ಎಂದು ಸ್ಥಳೀಯ ಡೀಲರ್‌ಗಳು ಹೇಳುವುದನ್ನು ರಿಪೋರ್ಟಸ್ ಕಲೆಕ್ಟಿವ್ ವರದಿ ಉಲ್ಲೇಖಿಸಿದೆ. ಆ ಮಾತುಗಳ ಸತ್ಯಾಸತ್ಯತೆಯನ್ನೂ ಹಲವು ವರ್ಷಗಳ ಭೂ ದಾಖಲೆಗಳನ್ನು ಹಾಗೂ ಕಾರ್ಪೊರೇಟ್ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡಿದೆ ಎಂದು ಅದು ಹೇಳಿದೆ.

ಶ್ರೀಗಿರೀಶ್ ಜಾಲಿಹಾಳ್ ಮತ್ತು ತಪಸ್ಯಾ ಅವರ ಈ ತನಿಖಾ ವರದಿ ನವೆಂಬರ್ 22 ರಂದು ಪ್ರಕಟವಾಗಿದೆ. ಪತಂಜಲಿ ಸಮೂಹದೊಂದಿಗೆ ಸಂಬಂಧ ಹೊಂದಿರುವ ಶೆಲ್ ಕ೦ಪೆನಿಗಳ ಜಾಲವನ್ನು ರಿಪೂರ್ಟಸ್್ರ ಕಲೆಕ್ಟಿವ್ ಪತ್ತೆ ಮಾಡಿದ್ದು, ಅವೆಲ್ಲವೂ ಮೂಲತಃ ಬಾಬಾ ರಾಮ್‌ದೇವ್ ಕಿರಿಯ ಸಹೋದರ ಮತ್ತು ನಿಕಟ ಉದ್ಯಮ ಸಹವರ್ತಿಗಳ ನಿಯಂತ್ರಣದಲ್ಲಿರುವುದು ಕ೦ಡುಬ೦ದಿದೆ. ಕಳೆದೊಂದು ದಶಕದಿಂದಲೂ ಈ ಕಂಪೆನಿಗಳು ಹರ್ಯಾಣದ ಫರೀದಾಬಾದ್‌ನ ಮಂಗರ್‌ನಲ್ಲಿ ಭೂಮಿ ಖರೀದಿ ಮತ್ತು ಮಾರಾಟದಲ್ಲಿ ಸಕ್ರಿಯವಾಗಿರುವುದು ಬಹಿರಂಗವಾಗಿದೆ.

ಅಂಥ ಒಂದು ಕಂಪೆನಿ ಪತಂಜಲಿ ಕುಪ್ಯಾಕ್ ಪ್ರೈವೇಟ್ ಲಿಮಿಟೆಡ್ 2009ರಲ್ಲಿ ಬಾಬಾ ರಾಮ್‌ದೇವ್ ಸಹೋದರ ರಾಮ್ ಭರತ್ ಮತ್ತು ಅವರ ನಿಕಟ ವ್ಯಾಪಾರ ಸಹವರ್ತಿ ಆಚಾರ್ಯ ಬಾಲಕೃಷ್ಣ ಅವರಿಂದ ಸ್ಥಾಪನೆಯಾಯಿತು. ಇದು ರಾಮದೇವ್ ತವರು ನೆಲವಾದ ಉತ್ತರಾಖಂಡದ ಹರಿದ್ವಾರದಲ್ಲಿ ನೋಂದಾಯಿತವಾಗಿದೆ. ಇತ್ತೀಚಿನ ಕಾರ್ಪೊರೇಟ್ ಫೈಲಿಂಗ್‌ಗಳ ಪ್ರಕಾರ, ಬಾಲಕೃಷ್ಣ ಈ ಕಂಪೆನಿಯಲ್ಲಿ ಶೇ.92ರಷ್ಟು ಒಡೆತನದ ಪಾಲನ್ನು ಹೊಂದಿದ್ದು, ಉಳಿದ ಭಾಗವನ್ನು ಭರತ್ ಹೊಂದಿದ್ದಾರೆ.

ಈ ಕಂಪೆನಿಯೂ ಸೇರಿದಂತೆ ಪತಂಜಲಿ ಸಮೂಹಕ್ಕೆ ಸಂಬಂಧಿಸಿದ ಕೆಲವು ಕಂಪೆನಿಗಳು ಸರಕಾರದ ಪರಿಶೀಲನೆಯಿಂದ ತಪ್ಪಿಸಿಕೊಂಡಿರುವುದನ್ನೂ ರಿಪೋರ್ಟಸ್್ರ ಕಲೆಕ್ಟಿವ್ ತನಿಖೆ ಬಯಲು ಮಾಡಿದೆ. ಮೂಲತಃ ಸರಕುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರಬೇಕಿದ್ದ ಆ ಕಂಪೆನಿಗಳು, ಅದರ ಬದಲಾಗಿ ಅರಾವಳಿ ಪರ್ವತ ಶ್ರೇಣಿಯ ಪ್ರಮುಖ ಅರಣ್ಯ ಗ್ರಾಮ ಮಂಗರ್‌ನಲ್ಲಿ ವ್ಯಾಪಕವಾದ ಭೂಮಿ ಖರೀದಿ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿವೆ. ಮಂಗರ್‌ನಲ್ಲಿನ ಜಮೀನುಗಳ ಮಾರಾಟದಿಂದ ಬಂದ ಹಣ ಈ ಶೆಲ್ ಘಟಕಗಳ ಮೂಲಕ ಪತಂಜಲಿ ಸಾಮ್ರಾಜ್ಯದೊಳಗಿನ ಇತರ ಸಂಸ್ಥೆಗಳಿಗೆ ಹರಿದುಹೋಗುತ್ತಿದೆ. ಮಾತ್ರವಲ್ಲ, ಇದರ ಮೂಲಕ ಈ ವ್ಯವ ಹಾರವನ್ನು ವಿಸ್ತರಿಸುವುದಕ್ಕೂ ಈ ಆರ್ಥಿಕ ಹರಿವಿನಿಂದ ಸಾಧ್ಯವಾಗಿದೆ ಎಂದು ವರದಿ ಹೇಳಿದೆ.

ಕಳೆದ 12 ವರ್ಷಗಳಲ್ಲಿ ಪತಂಜಲಿ ಕರುಪ್ಯಾಕ್ ಪ್ರೈವೇಟ್ ಲಿಮಿಟೆಡ್ ಕೂಡ ಉದ್ದೇಶಿತ ಪ್ಯಾಕೇಜಿಂಗ್ ವಸ್ತುಗಳ ತಯಾರಿಕೆ ಮತ್ತು ಮಾರಾಟದಲ್ಲಿ ವ್ಯವಹಾರ ನಡೆಸದೆ, ಮಂಗರ್‌ನಲ್ಲಿನ ಜಮೀನುಗಳ ಸ್ವಾಧೀನ ಮತ್ತು ಮಾರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಹಣವನ್ನು ರಿಯಲ್ ಎಸ್ಟೇಟ್ ಉದ್ಯಮಗಳಲ್ಲೇ ತೊಡಗಿಸುತ್ತಿದೆ.

ಕಳೆದ 15 ವರ್ಷಗಳಿಗೂ ಹೆಚ್ಚಿನ ಕಾರ್ಪೊರೇಟ್ ಮತ್ತು ಭೂದಾಖಲೆಗಳನ್ನು ರಿಪೋರ್ಟಸ್ ಕಲೆಕ್ಟಿವ್ ಪರಿಶೀಲಿಸಿದ್ದು, ಇದು ಸಂಶಯಾಸ್ಪದ ಶೆಲ್ ಕಂಪೆನಿಗಳ ಜಾಲವನ್ನು ಬಹಿರಂಗಕ್ಕೆ ತಂದಿದೆ. ಈ ಶೆಲ್ ಕಂಪೆನಿಗಳು ಹಾಗೂ ಭೂಮಿಯ ಅಂತಿಮ ಖರೀದಿದಾರ ಕಂಪೆನಿಯಾಗಿರುವ ಪತಂಜಲಿ ನಡುವಿನ ಸ್ಪಷ್ಟ ಸಂಪರ್ಕವನ್ನು ವರದಿ ಬಯಲಾಗಿಸಿದೆ.

ಹರ್ಯಾಣದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲಿಂದಲೂ ಪತಂಜಲಿಯು ಮಂಗ‌ರ್ನಲ್ಲಿ ಭೂಮಿ ಖರೀದಿಯಲ್ಲಿ ತೊಡಗಿತ್ತು ಎಂಬುದನ್ನೂ, 2014ರ ನಂತರದ ಅವಧಿಯಲ್ಲಿ ಆಯಾ ಸರಕಾರಗಳ ಅಡಿಯಲ್ಲಿ ಪತಂಜಲಿ ಸಮೂಹಕ್ಕೆ ಹೆಚ್ಚು ಅನುಕೂಲಕರ ವಾತಾವರಣ ನಿರ್ಮಾಣವಾಯಿತು ಎಂಬುದನ್ನೂ ತಾನು ಪರಿಶೀಲಿಸಿದ ದಾಖಲೆಗಳ ಮೂಲಕ ರಿಪೋರ್ಟಸ್್ರ ಕಲೆಕ್ಟಿವ್ ಕಂಡುಕೊಂಡಿದೆ.

ಪತಂಜಲಿ ಸಮೂಹವು ವಿವಿಧ ಶೆಲ್ ಕಂಪೆನಿಗಳ ಮೂಲಕ ಮಂಗರ್ ಗ್ರಾಮದಲ್ಲಿ 123 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿರುವುದನ್ನು ಹರಿಯಾಣದ ಇತ್ತೀಚಿನ ಡಿಜಿಟಲ್ ಭೂ ದಾಖಲೆಗಳು ಮತ್ತು ಕಾರ್ಪೊರೇಟ್ ದಾಖಲೆಗಳು ಬಹಿರಂಗಪಡಿಸುವುದಾಗಿ ವರದಿ ಹೇಳಿದೆ.

ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಬಳಿಕ ಬಾಬಾ ರಾಮ್‌ದೇವ್ ಪಾಲಿಗೆ ಇನ್ನಷ್ಟು ಅನುಕೂಲವಾಗಿದೆ ಎಂಬುದರ ಕಡೆ ವರದಿ ಗಮನ ಸೆಳೆದಿದೆ. ಮಂಗರ್ ಮತ್ತು ಅರಾವಳಿಯ ಇತರ ಭಾಗಗಳನ್ನು ಒಳಗೊಂಡಂತೆ ಅರಣ್ಯ ಭೂಮಿಗೆ ಕಾನೂನು ರಕ್ಷಣೆಗಳನ್ನು ತೆಗೆದುಹಾಕಿರುವ ಈ ತಿದ್ದುಪಡಿ, ಅರಾವಳಿಗಳ ಕಾಡುಗಳಲ್ಲಿ ಭೂಮಿ ಹೊಂದಿರುವವರೂ ಸೇರಿದಂತೆ ಹಲವಾರು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ವರವಾಗಿದೆ ಎಂಬುದನ್ನು ವರದಿ ಪ್ರಸ್ತಾಪಿಸಿದೆ.

ಭೂ ವಹಿವಾಟಿನ ಕುರಿತು ಖಚಿತಪಡಿಸಿಕೊಳ್ಳಲು ರಿಪೋರ್ಟಸ್ ಕಲೆಕ್ಟಿವ್ ಈ ಕಂಪೆನಿಗಳಿಗೆ ಇಮೇಲ್ ಮೂಲಕ ಕಳಿಸಿದ ಪ್ರಶ್ನಾವಳಿಗಳಿಗೆ ಕೆಲವೇ ಕಂಪೆನಿಗಳು ಒಂದೇ ಬಗೆಯ ನಕಲು ಮತ್ತು ಲಗತ್ತಿಸಿದ ಪ್ರತಿಕ್ರಿಯೆಗಳನ್ನು ಕಳಿಸಿರುವುದಾಗಿ ವರದಿ ಹೇಳಿದೆ. ಯಾವುದೇ ತಪ್ಪು ನಡೆದಿಲ್ಲ ಎಂದಿವೆ. ಈ ಉತ್ತರಗಳನ್ನು ಅವು ಪತಂಜಲಿ ಆಯುರ್ವೇದ ಸಿಒಒಗೂ ಕಳಿಸಿದ್ದು, ಪತಂಜಲಿ ಸಮೂಹದ ಜೊತೆಗಿನ ಅವುಗಳ ಸಂಬಂಧವನ್ನು ಬಹಿರಂಗಪಡಿಸಿದೆ ಮತ್ತು ಅವು ಕೇವಲ ರಾಮ್‌ ದೇವ್ ಅವರ ಸ್ನೇಹಿತರು ಮತ್ತು ಕುಟುಂಬದಿಂದ ನಡೆಸಲ್ಪಡುವ ಸ್ವತಂತ್ರ ಘಟಕಗಳಲ್ಲ ಎಂಬುದೂ ಖಚಿತವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪತಂಜಲಿ ಕರುಪ್ಯಾಕ್ ನೀಡಿರುವ ಪ್ರತಿಕ್ರಿಯೆಯಲ್ಲಿಯೂ, ಎಲ್ಲ ವ್ಯವಹಾರವೂ ಕಾನೂನು ಬದ್ದವಾಗಿಯೇ ನಡೆದಿರುವುದಾಗಿ ಹೇಳಲಾಗಿದೆ ಎಂಬುದನ್ನು ರಿಪೋರ್ಟಸ್ ಕಲೆಕ್ಟಿವ್ ವರದಿ ಉಲ್ಲೇಖಿಸಿದೆ.

ಕಪ್ಪುಹಣ ನಿರ್ಮೂಲನೆ ಮಾಡುವುದಾಗಿ ಪ್ರತಿಪಾದಿಸಿದ್ದ ನರೇಂದ್ರ ಮೋದಿಯವರಿಗೆ ಬೆಂಬಲಿಸುತ್ತಲೇ ತಮ್ಮ ಉದ್ಯಮವನ್ನು ರಾಮ್‌ದೇವ್ ಬೆಳೆಸಿದ್ದನ್ನು ವರದಿ ಪ್ರಸ್ತಾಪಿಸಿದೆ. 2011ರಿಂದ 2014ರ ಅವಧಿಯಲ್ಲಿ ಅವರು ಮೋದಿ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದನ್ನೂ, ಅಣ್ಣಾ ಹಝಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಬೆಂಬಲಿಸಿದ್ದನ್ನೂ ವರದಿ ಉಲ್ಲೇಖಿಸಿದೆ.

ಕೆಲ ತಿಂಗಳುಗಳ ಹಿಂದಷ್ಟೇ ಕೇಂದ್ರ ಸರಕಾರ ಶೆಲ್ ಕಂಪೆನಿಗಳ ಸಂಭಾವ್ಯ ದುರುಪಯೋಗವನ್ನು ಒಪ್ಪಿಕೊಂಡಿತ್ತಲ್ಲದೆ, ಅಂಥ 12 ಲಕ್ಷಕ್ಕೂ ಹೆಚ್ಚು ಕಂಪೆನಿಗಳು ತಮ್ಮ ವ್ಯವಹಾರದ ವಾರ್ಷಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿಲ್ಲ ಎಂದು ಸಂಸತ್ತಿನಲ್ಲಿ ಹೇಳಿದ್ದುದನ್ನೂ ವರದಿ ಪ್ರಸ್ತಾಪಿಸಿದೆ.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...